More

    ಎಎಸ್​ಐ ಬಲಿ ಪಡೆದ ಕೋವಿಡ್-19: ಪೊಲೀಸರಲ್ಲೂ ಮಡುಗಟ್ಟಿದೆ ಆತಂಕ

    ಬೆಂಗಳೂರು: ನಗರದಲ್ಲಿ ಕರೊನಾಗೆ ಮತ್ತೊಬ್ಬ ಪೊಲೀಸ್ ಬಲಿಯಾಗಿದ್ದು ಈವರೆಗೆ ನಗರದಲ್ಲಿ ನಾಲ್ವರು ಪೊಲೀಸರು ಸಾವನ್ನಪ್ಪಿದ್ದಾರೆ. ಪೂರ್ವ ವಿಭಾಗದ ಮಹಿಳಾ ಪೇದೆ, ಗುಪ್ತದಳದ ಎಸ್​ಐ, ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಯ ಪೇದೆಗೂ ಕರೊನಾ ಸೋಂಕಿರುವುದು ದೃಢಪಟ್ಟಿದ್ದು, ಪೊಲೀಸ್ ಸಮುದಾಯದಲ್ಲೇ ಕರೊನಾ ಭಯ ಮತ್ತಷ್ಟು ಹೆಚ್ಚಾಗಿದೆ. ಜೆ.ಜೆ. ನಗರ ಕಾಪೋರೇಟರ್ ಹಾಗೂ ಇಎಸ್​ಐ ಆಸ್ಪತ್ರೆಯ ಸ್ಟಾಫ್ ನರ್ಸ್​ಗೂ ಸೋಂಕು ತಗುಲಿದೆ.

    ಕಗ್ಗದಾಸನಪುರದ ಮಲ್ಲೇಶ ಪಾಳ್ಯ ನಿವಾಸಿ ವೈಟ್​ಫೀಲ್ಡ್ ಠಾಣೆಯ 57 ವರ್ಷದ ಎಎಸ್​ಐ ಮೃತರು. ಇಲಾಖೆಯ ಸೂಚನೆ ಮೇರೆಗೆ ಜೂ.10ರಂದು ರಜೆ ಮೇಲೆ ಕಳುಹಿಸಲಾಗಿತ್ತು. ಶುಕ್ರವಾರ (ಜೂ. 26) ರಾತ್ರಿ ಮನೆಯ ಶೌಚಗೃಹದಲ್ಲಿ ಕುಸಿದುಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸಲಿಲ್ಲ. ಅವರ ಗಂಟಲು ದ್ರವವನ್ನು ಕರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಸೋಂಕು ತಗುಲಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ವೈಟ್​ಫೀಲ್ಡ್ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.‘

    ಎಡಿಜಿಪಿ ಅಲೋಕ್​ಗೆ ಪಾಸಿಟಿವ್ ವದಂತಿ

    ಕೆಎಸ್​ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಕರೊನಾ ಸೋಂಕು ತಗುಲಿದೆ ಎಂದು ಜಾಲತಾಣದಲ್ಲಿ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ. 20ಕ್ಕೂ ಹೆಚ್ಚು ಕರ್ತವ್ಯನಿರತ ಕೆಎಸ್​ಆರ್​ಪಿ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಶನಿವಾರ ಕರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ನೆಗೆಟಿವ್ ವರದಿ ಬಂದಿದೆ. ವದಂತಿಗೆ ಪ್ರತಿಕ್ರಿಯಿಸಿರುವ ಅಲೋಕ್, ‘ನನಗೆ ಸೋಂಕು ತಗುಲಿಲ್ಲ. ಆರೋಗ್ಯ ವಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.

    ಪಶ್ಚಿಮ ವಿಭಾಗ ಡಿಸಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗೆ ಸೋಂಕು ತಗುಲಿದೆ. ಎರಡು ದಿನದ ಹಿಂದೆ ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡಿತ್ತು. ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಭಾನುವಾರ ವರದಿ ಬಂದಿದ್ದು ಸೋಂಕು ತಗುಲಿರುವುದು ದೃಢಪಟ್ಟಿದೆ. ಬಿಬಿಎಂಪಿ ಸಿಬ್ಬಂದಿ, ಕಚೇರಿಯನ್ನು ಸ್ವಚ್ಛಗೊಳಿಸಿ ಸೀಲ್​ಡೌನ್ ಮಾಡಿದ್ದಾರೆ. ಪೇದೆ ಜತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.

    ಮಹಿಳಾ ಪೇದೆಗೆ ತಗುಲಿದ ಸೋಂಕು: ಬೆಳ್ಳಂದೂರು ಠಾಣೆಯಲ್ಲಿ ಟಪಾಲ್ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಗೆ ಸೋಂಕು ದೃಢಪಟ್ಟಿದೆ. ರಜೆ ಮೇಲಿದ್ದ ಪೇದೆ ಜತೆ ಯಾರೂ ಸಂಪರ್ಕದಲ್ಲಿರಲಿಲ್ಲ. ಹೀಗಾಗಿ ಠಾಣೆಯನ್ನು ಸೀಲ್ ಮಾಡಿಲ್ಲ ಎಂದು ವೈಟ್​ಫೀಲ್ಡ್ ವಿಭಾಗದ ಡಿಸಿಪಿ ತಿಳಿಸಿದ್ದಾರೆ.

    ಇದನ್ನೂ ಓದಿ: ಅಶೋಕ್ ಕರೊನಾ ಉಸ್ತುವಾರಿ ತಾತ್ಕಾಲಿಕ?

    ಮಹಿಳಾ ಠಾಣೆ ಸೀಲ್​ಡೌನ್: ಪೂರ್ವ ವಿಭಾಗ ಮಹಿಳಾ ಠಾಣೆಯ ಮುಖ್ಯ ಪೇದೆಗೆ ಸೋಂಕು ದೃಢಪಟ್ಟಿದೆ. ಶನಿವಾರ ಕರ್ತವ್ಯಕ್ಕೆ ಹಾಜರಾಗಿದ್ದ ಸೋಂಕಿತೆ ಜತೆ ಸಂಪರ್ಕ ಹೊಂದಿದ್ದ ಶಿವಾಜಿನಗರದಲ್ಲಿರುವ ಮಹಿಳಾ ಠಾಣೆಯ ಇನ್​ಸ್ಪೆಕ್ಟರ್ ಸೇರಿ 19 ಮಂದಿ ಪೊಲೀಸರನ್ನು ಕ್ವಾರಂಟೈನ್​ಗೆ ಒಳಪಡಿಸಿ, ಠಾಣೆ ಸೀಲ್​ಡೌನ್ ಮಾಡಲಾಗಿದೆ.

    ಶೇ.81 ಸಕ್ರಿಯ ಪ್ರಕರಣ

    ರಾಜಧಾನಿಯಲ್ಲಿ ಇಲ್ಲಿಯವರೆಗೆ ಸೋಂಕು ದೃಢಪಟ್ಟ 3,314 ಪ್ರಕರಣದಲ್ಲಿ ಕೇವಲ 533 ಮಂದಿ ಗುಣಮುಖರಾಗಿದ್ದಾರೆ. 88 ಸೋಂಕಿತರು ಮೃತಪಟ್ಟರೆ ಇನ್ನೂ 2,692 ಅಂದರೆ ಶೇ.81 ಸೋಂಕಿತರು ಇನ್ನೂ ಸಕ್ರಿಯವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಎಸ್​ಐ ಆಸ್ಪತ್ರೆಗೆ ಕರೊನಾ ಕಂಟಕ: ಕರೊನಾ ವಾರಿಯರ್ಸ್​ಗಳಿಗೂ ಕರೊನಾ ಸೋಂಕು ತಗುಲುತ್ತಿದ್ದು, ರಾಜಾಜಿನಗರದ ಇಎಸ್​ಐ ಆಸ್ಪತ್ರೆಗೆ ಕಂಟಕ ಎದುರಾಗಿದೆ. ಭಾನುವಾರ ಸ್ಟಾಫ್ ನರ್ಸ್​ಗೂ ಸೋಂಕು ದೃಢಪಟ್ಟಿದ್ದು, ಇವರ ಸಂಪರ್ಕದಲ್ಲಿದ್ದ 20 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಈವರೆಗೆ ಆಸ್ಪತ್ರೆಯ 10 ಸಿಬ್ಬಂದಿಗೆ ಪಾಸಿಟಿವ್ ವರದಿ ಬಂದಿದೆ. ಇನ್ನೂ 18 ಮಂದಿಯ ವರದಿ ಬರಬೇಕಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

    ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಸ್ವಯಂ ಕ್ವಾರಂಟೈನ್

    ಪಾಲಿಕೆ ಸದಸ್ಯೆಗೆ ಸೋಂಕು: ಭಾನುವಾರ ಜೆ.ಜೆ.ನಗರ ಹಾಗೂ ಪಾದರಾಯನಪುರ ವಾರ್ಡ್​ನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಪಾಲಿಕೆ ಸದಸ್ಯೆ ಸೀಮಾ ಅಲ್ತಾಫ್ ಖಾನ್ ಹಾಗೂ ಅವರ ಪತಿ ಅಲ್ತಾಫ್ ಖಾನ್​ಗೂ ಸೋಂಕು ಇರುವುದು ದೃಢಪಟ್ಟಿದೆ. ಸದಸ್ಯೆ ಜತೆ ಸಂಪರ್ಕದಲ್ಲಿದ್ದ 14 ಮಂದಿಗೂ ಸೋಂಕು ತಗುಲಿದೆ. 11 ಸೋಂಕಿತರಿಗೆ ವಿಕ್ಟೋರಿಯಾ ಆಸ್ಪತ್ರೆಗೆ, 3 ಸೋಂಕಿತರನ್ನು ಹಜ್ ಭವನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ದಿನ ಕೇವಲ 2 ವಾರ್ಡ್​ಗಳಲ್ಲಿ ಹೆಚ್ಚು ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಸಮುದಾಯಕ್ಕೆ ಹರಡಿದೆಯೇ ಎಂಬ ಆತಂಕ ಮೂಡಿದೆ. ಈವರೆಗೂ ನಾಲ್ವರು ಪಾಲಿಕೆ ಸದಸ್ಯ ರಲ್ಲಿ ಸೋಂಕು ತಗುಲಿದೆ.

    ಇದನ್ನೂ ಓದಿ: ಕರೊನಿಲ್​ ತಡೆಗೆ ಆಯುಷ್​ ಇಲಾಖೆ ತಜ್ಞರ ಸಮಿತಿಯಲ್ಲಿರುವ ಮುಸ್ಲಿಮರು ಕಾರಣ? ಇಲ್ಲಿದೆ ನೋಡಿ ವಾಸ್ತವ !

    ಗುಪ್ತದಳ ವಿಭಾಗದ ಎಸ್​ಐಗೂ ಸೋಂಕು: ಡಿಜಿಪಿ ಕಚೇರಿಯಲ್ಲಿರುವ ಗುಪ್ತದಳ ಎಸ್​ಐಗೂ ಕರೊನಾ ಸೋಂಕು ತಗುಲಿದೆ. ಸಂಪರ್ಕದಲ್ಲಿದ್ದ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ. ಕಚೇರಿಯಲ್ಲಿ ಸ್ಯಾನಿಟೈಸರ್ ಸಿಂಪಡಿಸಿದ್ದು, ಸೀಲ್​ಡೌನ್ ಮಾಡುವ ಸಾಧ್ಯತೆ ಇದೆ.

    ಕೋವಿಡ್ ಪರೀಕ್ಷೆಗೆ ಮತ್ತಷ್ಟು ಬಲ: ವಿಕ್ಟೋರಿಯಾ ಲ್ಯಾಬ್ ಆರಂಭ, ಇಂದಿನಿಂದ ನಿಮ್ಹಾನ್ಸ್ ಲ್ಯಾಬ್ ಕಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts