More

    ಮಾಸ್ಕ್ ಎಂಬುದು ನೆಪ ಮಾತ್ರಕ್ಕೆ

    ಕಾರವಾರ: ಜಿಲ್ಲೆಯ ಮೀನು ಮಾರುಕಟ್ಟೆಗಳಲ್ಲಿ ಹಾಗೂ ಬಂದರುಗಳಲ್ಲಿ ಕೋವಿಡ್-19 ಸುರಕ್ಷಾ ನಿಯಮಗಳು ಪಾಲನೆಯಾಗುತ್ತಿಲ್ಲ. ದಂಡಕ್ಕೆ ಹೆದರಿ ಹಲವರು ಮಾಸ್ಕ್ ಧರಿಸುತ್ತಿದ್ದರೂ ಅದು ಬಾಯಿ, ಮೂಗನ್ನು ಮುಚ್ಚದೆ ಕುತ್ತಿಗೆಯ ಸಮೀಪ ಇಳಿಬಿಟ್ಟಿರುವುದು ‘ವಿಜಯವಾಣಿ’ ರಿಯಾಲಿಟಿ ಚೆಕ್​ನಲ್ಲಿ ಕಂಡುಬಂದಿದೆ.

    ಕಾರವಾರ, ಬೇಲೆಕೇರಿ, ತದಡಿ, ಕಾಸರಕೋಡು, ಭಟ್ಕಳ ಸೇರಿ ವಿವಿಧ ಬಂದರುಗಳಲ್ಲಿ ಮೀನು ಇಳಿಸುವ ಸಮಯದಲ್ಲಿ ಹಾಗೂ ಜಿಲ್ಲೆಯ ಎಲ್ಲೆಡೆ ಮೀನು ಮಾರುಕಟ್ಟೆಗಳಲ್ಲಿ ಸದಾ ಜನಸಂದಣಿ ಸಾಮಾನ್ಯವಾಗಿಬಿಟ್ಟಿದೆ. ವಾರದ ಸಂತೆಗಳಿಗೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ. ಅಲ್ಲಿಯೂ ಸುರಕ್ಷತಾ ಕ್ರಮಗಳು ಕಂಡುಬರುತ್ತಿಲ್ಲ.

    ಭಟ್ಕಳ ಮಾರುಕಟ್ಟೆಯಲ್ಲಿ ಹಲವರು ಮಾಸ್ಕ್ ಧರಿಸಿ ಓಡಾಟ ನಡೆಸಿದ್ದರೂ ಮದುವೆಯಂತಹ ವೈಯಕ್ತಿಕ ಸಮಾರಂಭಗಳಲ್ಲಿ ಕರೊನಾ ಸುರಕ್ಷತೆಯ ನಿಯಮಾವಳಿಗಳು ಪಾಲನೆಯಾಗುತ್ತಿಲ್ಲ. ಇದರಿಂದ ಪುರಸಭೆ ಈಗ ವಿವಿಧ ಹಾಲ್​ಗಳಿಗೆ ನೋಟಿಸ್ ಜಾರಿ ಮಾಡಿದ್ದು, ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ಅದಕ್ಕೆ ಮಾಲೀಕರನ್ನೇ ಜವಾಬ್ದಾರಿ ಮಾಡುವುದಾಗಿ ಎಚ್ಚರಿಸಿದೆ.

    ಶಿರಸಿ, ಹಳಿಯಾಳ, ಮುಂಡಗೋಡ, ಯಲ್ಲಾಪುರ, ಸಿದ್ದಾಪುರ ತಾಲೂಕುಗಳಲ್ಲಿ ಮಾಸ್ಕ್ ಎಂಬುದು ನೆಪ ಮಾತ್ರಕ್ಕೆ ಆಗಿದೆ. ಪೊಲೀಸರು ಕಂಡಾಗ ಮಾತ್ರ ಮಾಸ್ಕ್ ಕಿಸೆಯಿಂದ ಹೊರಬರುತ್ತದೆ. ಕರೊನಾ ಎನ್ನುವುದು ‘ಚೀನಾ ಸಾಮಗ್ರಿ’ಯಂತೆ ಚೀನಾ ರೋಗ ಎಂಬ ಭಾವನೆ ಅನೇಕರಲ್ಲಿ ಮೂಡಿದೆ. ಕೋವಿಡ್ ಭಯವೇ ಎಲ್ಲರಿಂದ ಹೊರಟು ಹೋದಂತೆ ಭಾಸವಾಗುತ್ತಿದೆ. ಬಸ್​ಗಳಲ್ಲೂ ಯಾವ ಅಂತರ ಕಾಪಾಡಿಕೊಳ್ಳದೆ ಪ್ರಯಾಣ ಮಾಡುತ್ತಿದ್ದಾರೆ.

    ಈ ನಡುವೆ ಮಾಸ್ಕ್ ಧರಿಸದೆ ಪರಸ್ಪರ ಅಂತರ ಕಾಯ್ದುಕೊಳ್ಳದೇ ಇದ್ದರೆ ದಂಡ ವಿಧಿಸುವ ಕ್ರಮವನ್ನು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂಗಳು ಕೈಗೊಂಡಿವೆ. ಇದುವರೆಗೆ 4 ಲಕ್ಷ ರೂ.ಗೂ ಅಧಿಕ ದಂಡ ಆಕರಿಸಲಾಗಿದೆ.

    ಎರಡು, ಮೂರನೇ ಬಾರಿ ಮಾಸ್ಕ್ ಧರಿಸದೇ ಸಿಕ್ಕಿಬಿದ್ದರೆ ಅವರ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡುವಂತೆ ಎಲ್ಲ ತಹಸೀಲ್ದಾರರಿಗೆ ಸೂಚನೆ ನೀಡಿದ್ದೇನೆ.
    | ಡಾ.ಹರೀಶ ಕುಮಾರ ಕೆ., ಜಿಲ್ಲಾಧಿಕಾರಿ

    ಕೋವಿಡ್ ನಿಯಮಾವಳಿ ಪಾಲನೆ ಬಗ್ಗೆ ಎಲ್ಲೆಡೆ ತಿಳಿಸಲಾಗಿದೆ. ಅಲ್ಲಲ್ಲಿ ಕ್ಯಾಂಪ್ ಮಾಡಲಾಗುತ್ತಿದೆ. ಜನ ಕೋವಿಡ್ ಪರೀಕ್ಷೆಗೆ ಸಹಕಾರ ನೀಡುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ.
    ಡಾ. ಶರದ್ ನಾಯಕ, ಡಿಎಚ್​ಒ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts