More

    ಪಾಲಿಕೆ ಎದುರು ಹಾರಿದ ನಾಡಧ್ವಜ!

    ಬೆಳಗಾವಿ: ಮರಾಠ ಪ್ರಾಧಿಕಾರ ಸ್ಥಾಪನೆ ಬಳಿಕ ವಿವಾದದ ಕಿಚ್ಚೆಬ್ಬಿಸಿ ನಂತರ ತಣ್ಣಗಾಗಿದ್ದ ಬೆಳಗಾವಿಯಲ್ಲಿ ಮತ್ತೆ ಕನ್ನಡ ಹೋರಾಟದ ಕಾವು ಏರುತ್ತಿದ್ದು, ಸೋಮವಾರ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡ ಹೋರಾಟಗಾರರು ನಾಡಧ್ವಜ ಹಾರಿಸಿದ್ದಾರೆ.

    ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಏಕಾಏಕಿ ಪಾಲಿಕೆ ಮುಂಭಾಗದಲ್ಲಿ ಧ್ವಜಸ್ತಂಭ ನೆಟ್ಟು ನಾಡಧ್ವಜ ಹಾರಿಸಿರುವುದ್ದು, ಈಗ ವಿವಾದಕ್ಕೀಡಾಗಿದೆ. ಧ್ವಜಸ್ತಂಭ ತೆರವುಗೊಳಿಸಲು ಆಗಮಿಸಿದ ಪೊಲೀಸರು ಹಾಗೂ ಹೋರಾಟಗಾರರ ಮಧ್ಯೆ ವಾಗ್ವಾದ ನಡೆದಿದೆ.

    ಮಹಾನಗರ ಪಾಲಿಕೆ ಕಟ್ಟಡದ ಮೇಲೆ ಮತ್ತು ಆವರಣದಲ್ಲಿ ಕನ್ನಡ ಧ್ವಜ ಹಾರಿಸಬೇಕು ಎಂದು 1998 ರಿಂದ ಕನ್ನಡ ಸಂಘಟನೆಗಳ ಕಾರ್ಯಕರ್ತರು ಹೋರಾಟ ನಡೆಸುತ್ತಿದ್ದಾರೆ. ಆದರೆ, ಪಾಲಿಕೆ ಚುಕ್ಕಾಣಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಹಿಡಿತದಲ್ಲಿದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ. 2018 ರಿಂದ ಪಾಲಿಕೆಯು ಆಡಳಿತಾಧಿಕಾರಿ ಹಿಡಿತದಲ್ಲಿ ಮುನ್ನಡೆಯುತ್ತಿದೆ. ಇದೇ ಸಂದರ್ಭ ಬಳಸಿಕೊಂಡ ಹೋರಾಟಗಾರರು ಸೋಮವಾರ ಧ್ವಜಸ್ತಂಭ ನೆಟ್ಟು, ನಾಡಧ್ವಜ ಹಾರಿಸಿದ್ದಾರೆ.

    ಮರಾಠಿಗರ ಓಲೈಕೆ?: ಈಗಾಗಲೇ ಸುವರ್ಣ ಸೌಧಮುಂಭಾಗ, ನಗರದ ಪ್ರಮುಖ ವೃತ್ತಗಳಲ್ಲಿ ನಾಡಧ್ವಜ ಅಳವಡಿಸಲಾಗಿದೆ. ಅದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಮಹಾನಗರ ಪಾಲಿಕೆ ಮುಂಭಾಗದಲ್ಲಿ ಧ್ವಜ ಅಳವಡಿಸಲು ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳೇ ಅಡ್ಡಿಪಡಿಸುತ್ತಿದ್ದಾರೆ. ಕೆಲ ಹಾಲಿ ಮತ್ತು ಮಾಜಿ ಶಾಸಕರು ತಮ್ಮ ರಾಜಕೀಯ ಲಾಭಕ್ಕಾಗಿ ಮರಾಠಿಗರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ನಾಡಧ್ವಜ ತೆರವುಗೊಳಿಸಲು ಪರೋಕ್ಷವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಹೋರಾಟಗಾರರು ದೂರಿದ್ದಾರೆ. ಕನ್ನಡ ನಾಡಿನ ಮಹಾನಗರ ಪಾಲಿಕೆ ಆವರಣದಲ್ಲಿ ನಾಡಧ್ವಜ ಹಾರಿಸಲು ಯಾರ ಅಪ್ಪಣೆ ಬೇಕಿಲ್ಲ. ಧ್ವಜ ತೆರವುಗೊಳಿಸಲು ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು. ನಾವು ಪ್ರಾಣ ಕೊಡಲು ಕೂಡ ಸಿದ್ಧ ಎಂದು ಹೋರಾಟಗಾರ ಶ್ರೀನಿವಾಸ ತಾಳೂರಕರ್, ಕಸ್ತೂರಿ ಬಾವಿ ಎಚ್ಚರಿಕೆ ನೀಡಿದರು.

    ದಶಕಗಳ ಬಳಿಕ ಕಾಲಿಗೆ ಚಪ್ಪಲಿ

    ಬೆಳಗಾವಿ ಪ್ರಾದೇಶಿಕ ಆಯುಕ್ತ ಕಚೇರಿ ಮತ್ತು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ನಾಡಧ್ವಜ ಹಾರುವವರೆಗೂ ಚಪ್ಪಲಿ ಮೆಟ್ಟುವುದಿಲ್ಲ ಎಂದು 15 ವರ್ಷದ ಹಿಂದೆ ಕನ್ನಡ ಹೋರಾಟಗಾರ್ತಿ ಕಸ್ತೂರಿ ಬಾವಿ ಪ್ರತಿಜ್ಞೆ ತೊಟ್ಟಿದ್ದರು. ಈಗಾಗಲೇ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ನಾಡಧ್ವಜ ಹಾರಿಸಲಾಗಿದೆ. ಸೋಮವಾರ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಧ್ವಜ ಹಾರಿಸಿದ ಬಳಿಕ ಕಸ್ತೂರಿ ಬಾವಿ ಚಪ್ಪಲಿ ಧರಿಸಿದರು.

    ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಮುಂಭಾದಲ್ಲಿ ನಾಡಧ್ವಜ ವಿಷಯವಾಗಿ ಕನ್ನಡ ಸಂಘಟನೆಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಈಗಾಗಲೇ ಈ ಕುರಿತು ಪಾಲಿಕೆ, ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ.
    | ಎಂ.ಜಿ.ಹಿರೇಮಠ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts