More

  ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿಸಿದ ಕುಡಿಯುವ ನೀರಿನ ಸಮಸ್ಯೆ

  ದಾವಣಗೆರೆ : ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವ ಕುರಿತು, ಬುಧವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
   ಮಾಜಿ ಮೇಯರ್ ಬಿಜೆಪಿಯ ಎಸ್.ಟಿ. ವೀರೇಶ್ ವಿಷಯ ಪ್ರಸ್ತಾಪಿಸಿ, ಈಗಾಗಲೇ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಟ್ಯಾಂಕರ್‌ಗಳಿಗೆ ಬೇಡಿಕೆಯಿದೆ. 12 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕುಂದುವಾಡ ಮತ್ತು ಟಿವಿ ಸ್ಟೇಷನ್ ಕೆರೆಗಳನ್ನು ತುಂಬಿಸುವುದು ಸೇರಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
   ಪಾಲಿಕೆಯ ಟ್ಯಾಂಕರ್ ಸೇವೆ ಸಕಾಲಕ್ಕೆ ದೊರೆಯುತ್ತಿಲ್ಲ. ನನ್ನ ವಾರ್ಡ್‌ಗೆ ಟ್ಯಾಂಕರ್ ಕಳಿಸುವಂತೆ 50 ಬಾರಿ ಕರೆ ಮಾಡಿ ಹೇಳಿದ್ದೇನೆ. ಬೆಳಗ್ಗೆ ತಿಳಿಸಿದರೆ ಸಂಜೆ ಹೊತ್ತಿಗೆ ಕಳಿಸಿದ್ದಾರೆ. ಹೀಗೆ ವಿಳಂಬವಾದರೆ ಜನರಿಗೆ ಸ್ಪಂದಿಸುವುದು ಹೇಗೆ ಎಂದು ಪ್ರಶ್ನಿಸಿದರು.
   ಕಾಂಗ್ರೆಸ್‌ನ ಹಿರಿಯ ಸದಸ್ಯ ಎ. ನಾಗರಾಜ್ ಧ್ವನಿಗೂಡಿಸಿ, ಟ್ಯಾಂಕರ್ ನೀರು ಕಳಿಸಿಕೊಡುವಂತೆ ಇಂಜಿನಿಯರ್‌ಗೆ ಕಾರ್ಪೊರೇಟರ್‌ಗಳು ಮನವಿ ಮಾಡುವ ಸ್ಥಿತಿಯಿದೆ. ಇದನ್ನು ಸರಿದಾರಿಗೆ ತರಬೇಕು ಎಂದು ಆಗ್ರಹಿಸಿದರು. ಮೀನಾಕ್ಷಿ ಜಗದೀಶ್, ಶಿವಾನಂದ್ ಅವರೂ ಅದೇ ಅಭಿಪ್ರಾಯ ವ್ಯಕ್ತಪಡಿಸಿದರು. ಕೆ.ಎಂ. ವೀರೇಶ್, ಉಮಾ ಪ್ರಕಾಶ್ ಮಾತನಾಡಿದರು.
   ಆಯುಕ್ತೆ ರೇಣುಕಾ ಉತ್ತರಿಸಿ, ಏಪ್ರಿಲ್ ವರೆಗೂ ನೀರಿನ ಸಮಸ್ಯೆಯಾಗದಂತೆ ನಿರ್ವಹಿಸಬಹುದು. ಪ್ರಸ್ತುತ 2 ಟ್ಯಾಂಕರ್‌ಗಳಿವೆ, ಇನ್ನೂ ಎರಡಕ್ಕೆ ಕಾರ್ಯಾದೇಶ ನೀಡಲಾಗಿದೆ. 1023 ಕೊಳವೆ ಬಾವಿಗಳ ಪೈಕಿ 11 ರಲ್ಲಿ ಅಂತರ್ಜಲ ಕುಸಿತವಾಗಿದೆ. 13 ಬೋರ್‌ಗಳು ದುರಸ್ತಿಯಾಗಬೇಕಿದೆ ಎಂದರು.
   ಮೋಟಾರ್, ಪೈಪ್‌ಲೈನ್ ಇನ್ನಿತರ ಸಾಮಗ್ರಿಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೈಟ್ ಇಂಜಿನಿಯರ್‌ಗಳ ಕೊರತೆಯಿದ್ದು ಬೇರೆ ವಿಭಾಗಗಳ ಇಂಜಿನಿಯರ್‌ಗಳನ್ನು ಬಳಸಿಕೊಳ್ಳುವ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.
   ಇಂಜಿನಿಯರ್ ಸಚಿನ್ ಸಭೆಗೆ ಮಾಹಿತಿ ನೀಡಿ, ಕುಂದುವಾಡ ಕೆರೆಯಲ್ಲಿ ಸದ್ಯ 4 ಮೀಟರ್ ನೀರಿದ್ದು 90 ದಿನಗಳಿಗೆ ಸಾಕಾಗುತ್ತದೆ. ಟಿವಿ ಸ್ಟೇಷನ್ ಕೆರೆಯಲ್ಲಿ 60 ದಿನಗಳಿಗೆ ಆಗುವಷ್ಟು ನೀರಿದೆ ಎಂದು ಹೇಳಿದರು.
   ನೀರು ಸಿಗದಿದ್ದರೆ ಜನರೊಂದಿಗೆ ಬಂದು ಪಾಲಿಕೆ ಮುಂದೆ ಪ್ರತಿಭಟನೆ ಮಾಡಲಾಗುವುದು. ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಸ್.ಟಿ. ವೀರೇಶ್ ಎಚ್ಚರಿಕೆ ನೀಡಿದರು.
   ಬಿಜೆಪಿ ಸದಸ್ಯ ಎಲ್.ಡಿ. ಗೋಣೆಪ್ಪ ಮಾತನಾಡಿ, ದುರ್ಗಾಂಬಿಕಾ ದೇವಿಯ ಜಾತ್ರೆ ಸಮೀಪಿಸಿದ್ದು ಹಳೆಯ ನಗರದಲ್ಲಿ ಕುಡಿಯುವ ನೀರು, ವಿದ್ಯುದ್ದೀಪಗಳ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
   ಮೇಯರ್ ಬಿ.ಎಚ್. ವಿನಾಯಕ, ಉಪ ಮೇಯರ್ ಯಶೋದಾ ಇದ್ದರು.
   …
   
   (((ಬಾಕ್ಸ್)))
   ಅಕ್ರಮ ತಡೆಗಟ್ಟಿ
   ಇ-ಆಸ್ತಿ ನೀಡುವುದರಲ್ಲೂ ಅಕ್ರಮ ನಡೆಯುತ್ತಿದೆ. ಯಾರದೋ ಮಾಲೀಕತ್ವದ ಆಸ್ತಿಯನ್ನು ಬೇರೆ ಯಾರದೋ ಹೆಸರಿಗೆ ಮಾಡಿದ್ದಾರೆ. ಈ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಒತ್ತಾಯಿಸಿದರು.
   ವಾರ್ಡ್ ಹಂತದಲ್ಲೇ ನಡೆಯುತ್ತಿರುವ ಇ-ಆಸ್ತಿ ಆಂದೋಲನದಲ್ಲೂ ಸಾರ್ವಜನಿಕರಿಂದ ಹಣ ಕೇಳಲಾಗುತ್ತಿದೆ ಎನ್ನುವ ದೂರುಗಳಿವೆ. ಅರ್ಜಿಗಳ ವಿಲೇವಾರಿಯನ್ನು ಚುರುಕುಗೊಳಿಸಿ. ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಎಂದು ಹೇಳಿದರು.
   …
   
   (((ಬಾಕ್ಸ್)))
   ಖಂಡನಾ ನಿರ್ಣಯಕ್ಕೆ ಆಗ್ರಹ
   ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಘಟನೆಯನ್ನು ಖಂಡಿಸಿ ಬಿಜೆಪಿ ಸದಸ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ಸಭೆಗೆ ಹಾಜರಾದರು.
   ಪಾಕ್ ಪರ ಜೈಕಾರ ಕೂಗಿದ ಘಟನೆ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳುವಂತೆ ಪ್ರತಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯರಾದ ಎ. ನಾಗರಾಜ್ ಮತ್ತು ಕೆ. ಚಮನ್ ಸಾಬ್, ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಖಂಡನಾ ನಿರ್ಣಯ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಹೇಳಿದರು.
   ಆಗ ‘ದೇಶದ್ರೋಹಿಗಳನ್ನು ರಕ್ಷಣೆ ಮಾಡುತ್ತಿದ್ದೀರಿ’ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಸಭೆಯಲ್ಲಿ ನಾಡಗೀತೆ, ರಾಷ್ಟ್ರಗೀತೆ ಹಾಡುವಾಗ ನೀವು ಕಪ್ಪು ಪಟ್ಟಿ ಧರಿಸಿದ್ದು ರಾಷ್ಟ್ರಕ್ಕೆ ಮಾಡಿದ ಅವಮಾನ. ಅವರನ್ನು ಸಭೆಯಿಂದ ಹೊರ ಹಾಕಿ ಎಂದು ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡಿದರು. ಜಟಾಪಟಿ ಹೀಗೇ ಮುಂದುವರಿಯುತ್ತಿದ್ದಂತೆ ಸಭೆಯನ್ನು ಸ್ವಲ್ಪ ಹೊತ್ತು ಮುಂದೂಡಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts