More

    ಕರೊನಾ ಹತ್ತಿಕ್ಕಲು ಕನ್ನಡಿಗರಿಂದಲೇ ತಯಾರಾಯ್ತು ಆರು ಉಪಕರಣ- ಇಲ್ಲಿದೆ ಸಂಪೂರ್ಣ ಮಾಹಿತಿ

    ಬೆಂಗಳೂರು: ಸ್ವದೇಶಿ ಉತ್ಪನ್ನಗಳ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಕರೆ ಇದೀಗ ಭಾರಿ ವೇಗ ಪಡೆದುಕೊಳ್ಳುತ್ತಿದೆ. ಅದರಲ್ಲಿಯೂ ಕರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ, ವಿದೇಶಿ ಅವಲಂಬನೆ ಸಂಪೂರ್ಣ ನಿಂತು ಆತ್ಮನಿರ್ಭರ್ ಭಾರತ್‌ ಅಡಿ ಇಲ್ಲಿಯೇ ಕರೊನಾ ವೈರಸ್‌ಗೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಹಲವಾರು ಯುವಕರು ಕಾರ್ಯಪ್ರವೃತ್ತರಾಗಿದ್ದಾರೆ.

    ಅಂಥದ್ದೇ ಆರು ಉತ್ಪನ್ನಗಳು ಸ್ವದೇಶದಲ್ಲಿಯೇ ತಯಾರಾಗಿದೆ. ಈ ಆರೂ ಉತ್ಪನ್ನಗಳನ್ನು ತಯಾರು ಮಾಡಿರುವುದು ಕನ್ನಡಿಗರು ಎನ್ನುವ ಹೆಮ್ಮೆ ನಮಗೆ.
    ರಾಜ್ಯದ ಐಟಿ- ಬಿಟಿ ಇಲಾಖೆ ವ್ಯಾಪ್ತಿಯ ಬೆಂಗಳೂರು ಬಯೋ ಇನ್ನೋವೇಷನ್‌ ಕೇಂದ್ರದ ಅಡಿಯಲ್ಲಿ ಸಂಶೋಧನೆಯಲ್ಲಿ ನಿರತವಾಗಿರುವ ವಿವಿಧ ಸ್ಟಾರ್ಟ್‌ಅಪ್‌ಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ. ಇವುಗಳನ್ನು ಇಂದು ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ ಪರಿಕಲ್ಪನೆಯ ಸ್ಫೂರ್ತಿಯಿಂದ ಇವೆಲ್ಲ ಸಿದ್ಧವಾಗಿವೆ ಎಂದು ಅವರು ಹೇಳಿದರು.

    ಈ ಎಲ್ಲಾ ಉತ್ಪನ್ನಗಳಿಗೆ ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾನ್ಯತೆ ಸಿಕ್ಕಿರುವ ಕಾರಣ ಇದರ ಬಳಕೆ ಹಾಗೂ ಮಾರಾಟ ಎಲ್ಲವೂ ಸಾಧ್ಯವಾಗಿದೆ ಎಂದು ತಿಳಿಸಿದರು.

    ಏನಿದು ಉತ್ಪನ್ನಗಳು, ಇಲ್ಲಿದೆ ನೋಡಿ ಒಂದು ನೋಟ:
    * ಎಕ್ಸ್‌-ರೇ ಮೂಲಕ ವೈರಸ್‌ ಪತ್ತೆ
    ಅಯಿಂದ್ರ ಕಂಪನಿಯ ಆದರ್ಶ್ ನಟರಾಜನ್ ಸಂಶೋಧಿಸಿ ಅಭಿವೃದ್ಧಿಪಡಿಸಿರುವ ಉತ್ಪನ್ನವಿದು. ಇದೇನೆಂದರೆ, ಇದುವರೆಗೆ ಗಂಟಲು ದ್ರವ ಮತ್ತಿತರ ಮಾದರಿಗಳನ್ನು ಪಡೆದು ಕೋವಿಡ್ ಪತ್ತೆ ಮಾಡುತ್ತಿದ್ದೆವು. ಆದರೆ ಈಗ ಕೋವ್ – ಅಸ್ತ್ರದ ಮೂಲಕ ರೋಗಿಯ ಎದೆಯ ಭಾಗದ ಎಕ್ಸ್ ರೇ ತೆಗೆದು ಸೋಂಕು ಇದೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದಾಗಿದೆ. ಸುಮಾರು 4 ರಿಂದ 5 ಸಾವಿರ ರೂಪಾಯಿ ವೆಚ್ಚವನ್ನು ಕಡಿಮೆ ಮಾಡಿ ಕೇವಲ 150ರಿಂದ 200 ರೂಪಾಯಿ ಎಕ್ಸ್ ರೇ ಯಿಂದ ಸೋಂಕನ್ನು ಪತ್ತೆ ಮಾಡಬಹುದು.

    * ಗರ್ಭಿಣಿಯರಿಗೆ ಫೀಟಲ್ ಮಾನಿಟರಿಂಗ್ ಡಿವೈಸ್
    ಜೆನಿತ್ರೀ ಕಂಪನಿಯ ಡಾ. ಅರುಣ್ ಅಗರವಾಲ್ ಅಭಿವೃದ್ಧಿಪಡಿಸಿರುವ ಉಪಕರಣವಿದು. ಕರೊನಾ ವೈರಸ್‌ ತಗುಲಿರುವ ಗರ್ಭಿಣಿಯರಿಗಾಗಿ ಫೀಟಲ್ ಮಾನಿಟರಿಂಗ್ ಡಿವೈಸ್ (ಭ್ರೂಣ ನಿಗಾ ಯಂತ್ರ)ಅಭಿವೃದ್ಧಿಪಡಿಸಲಾಗಿದೆ. ಪಟ್ಟಿಯಾಕಾರಾದ ಈ ಉಪಕರಣದ ಮೂಲಕ ಭ್ರೂಣದ ಹೃದಯ ಬಡಿತವನ್ನೂ ವೈದ್ಯರು ತಿಳಿಯಬಹುದು. ಗರ್ಭಿಣಿ ಈ ಉಪಕರಣವನ್ನು ತಮ್ಮ ಹೊಟ್ಟೆ ಮೇಲಿಟ್ಟುಕೊಂಡರೆ ಮಗುವಿನ ಕುರಿತು ವೈದ್ಯರಿಗೆ ಎಲ್ಲ ಮಾಹಿತಿಯೂ ತಿಳಿಯುತ್ತದೆ. ಗರ್ಭಿಣಿ ವೈದ್ಯರಿಗೆ ಮುಖಾಮುಖಿ ಎದುರಾಗುವ ಅನಿವಾರ್ಯತೆಯನ್ನು ಇದು ತಪ್ಪಿಸುತ್ತದೆ.

    * ವೈರಸ್‌ ಕೊಲ್ಲುವ ಸಾಧನ
    ಬಯೋ ಫೀ ಕಂಪನಿಯ ರವಿಕುಮಾರ್ ಅವರು ಸಂಶೋಧಿಸಿರುವ ಸಾಧನ ಶೀಲೆಡೆಕ್ಸ್ 24. ಕರೊನಾ ವೈರಸ್ಸನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡುವ ಸಾಧನವಿದು. ‌ಇದು ಮೈಕ್ರೋವೇವ್ ಬಾಕ್ಸ್ ರೀತಿಯಲ್ಲಿ ವಿವಿಧ ಗಾತ್ರಗಳಲ್ಲಿ ಇರುತ್ತದೆ. (ಒಂದು ಫ್ರಿಜ್ ಗಾತ್ರದಲ್ಲೂ ಇದೆ) ಇದರಲ್ಲಿ ಅಲ್ಟ್ರಾವೈಲೇಟ್ ರೇಸ್ ಇರುತ್ತದೆ, ಈ ರೇಸ್ ಬಿದ್ದಾಗ ವೈರಸ್ ಕೇವಲ 15 ಸೆಕೆಂಡುಗಳಲ್ಲಿ ಸಾಯುತ್ತದೆ. ಈ ಉತ್ಪನ್ನವನ್ನು ಬಯೋ ಫೀ ಕಂಪನಿಯ ರವಿಕುಮಾರ್ ಅವರು ಸಂಶೋಧಿಸಿ ತಯಾರಿಸಿದ್ದಾರೆ.

    * ವೈರಸ್‌ ಕೊಲ್ಲುವ ಫೇಸ್ ವಾಷ್‌
    ಆಟ್ರಿಮ್ಡ್ ಕಂಪನಿಯ ಡಾ. ಲತಾ ಡ್ಯಾಮಲ್ ಅವರು ಅಭಿವೃದ್ಧಿಪಡಿಸಿರುವ ಸಾಧನವಿದು. ಮುಖದ ಮೇಲೆ ಕೂರುವ ಕರೊನಾ ವೈರಸ್ ಜತೆಗೆ ಬೇರೆ ಯಾವುದೇ ವೈರಾಣುವನ್ನು ಸೆಕೆಂಡುಗಳಲ್ಲಿ ನಾಶ ಮಾಡುವ ಫೇಸ್ ವಾಷ್‌ ಇದಾಗಿದೆ. ಇದನ್ನು ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ.

    * ಫ್ಲೋರೋಸೆನ್ಸ್ ಪ್ರೋಬ್ಸ್
    ವಿಎನ್ ಐಆರ್ ಸಂಸ್ಥೆಯ ಡಾ. ಗೋವಿಂದರಾಜು ಮತ್ತು ಡಾ. ಮೆಹರ್ ಪ್ರಕಾಶ್ ಅಭಿವೃದ್ಧಿಪಡಿಸಿರುವ ಸಾಧನ ಫ್ಲೋರೋಸೆನ್ಸ್ ಪ್ರೋಬ್ಸ್. ಇದು ಕರೊನಾ ವೈರಸ್‌ ಕಿಟ್‌ನಲ್ಲಿ ಇರಬಹುದಾದ ಪ್ರಮುಖ ಅಂಗ. ಇದು ಇಲ್ಲದಿದ್ದರೆ ವೈರಸ್ ಅನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಫ್ಲೋರೋಸೆನ್ಸ್ ಪ್ರೋಬ್ಸ್ ಅನ್ನು ಬಳಸಲಾಗುತ್ತದೆ.

    * ವೈರಸ್‌ ಸಾಗಿಸುವ ವೈರಲ್ ಟ್ರಾನ್ಸ್‌ಪೋರ್ಟ್ ಮೀಡಿಯಾ
    ‘ಡೇಕೊಂತೋ’ ಎಂಬ ಹೆಸರಿನ ಈ ಉತ್ಪನ್ನವನ್ನು ಡಿನೋವೋ ಬಯೋಲ್ಯಾಬ್ಸ್ ನ ಐಬಿಎಬಿಯ ಮಂಜುನಾಥ್ ಹಾಗೂ ದಿನೇಶ್ ಅಭಿವೃದ್ಧಿ ಪಡಿಸಿದ್ದಾರೆ. ಇದು ಸದ್ಯದ ಸ್ಥಿತಿಯಲ್ಲಿ ಅತ್ಯಂತ ಮಹತ್ವದ ಸಂಶೋಧನೆಯಾಗಿದೆ. ಸೋಂಕಿತರಿಂದ ಗಂಟಲು ದ್ರವ ಮತ್ತಿತರ ಸ್ಯಾಂಪಲ್‌ ಗಳನ್ನು ಪಡೆದು ಟಿಸ್ಟಿಂಗ್ ಲ್ಯಾಬಿಗೆ ಕಳಿಸುವ ಪ್ರಕ್ರಿಯೆಯಲ್ಲಿ ಈ ಉಪಕರಣ ಅತ್ಯಗತ್ಯವಾಗಿ ಬೇಕಿತ್ತು. ಏಕೆಂದರೆ, ಇದು ಜೀವಂತ ವೈರಸ್ಸನ್ನು ಸಾಗಿಸುತ್ತದೆ. ಈ ವೈರಸ್ ಅನ್ನು ಒಂದು ಕಡೆಯಿಂದ ಇನ್ನೊಂದಡೆಗೆ ಸಾಗಿಸುವುದು ಅತ್ಯಂತ ಸವಾಲಿನದ್ದು, ಅಪಾಯಕಾರಿ ಕೂಡ. ಈ ಉಪಕರಣವನ್ನು ವಿದೇಶಗಳಿಂದ ದುಬಾರಿ ಬೆಲೆ ತೆತ್ತು ಆಮದು ಮಾಡಿಕೊಳ್ಳಬೇಕಾಗಿತ್ತು.

    ಒಂದೇ ಇಲಾಖೆಯ 872 ಉದ್ಯೋಗಿಗಳಿಗೆ ಕರೊನಾ- 86 ಕುಟುಂಬಸ್ಥರ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts