ನವದೆಹಲಿ: ಕರೊನಾ ಯುಗ ಮುಗಿಯಿತು ಎಂಬಂತೆ ಮಾಸ್ಕ್ ಹಾಕಿಕೊಳ್ಳದೆ, ಮದುವೆ ಮುಂಜಿ ಚಳುವಳಿ ಎಂದೆಲ್ಲಾ ಜನರು ಓಡಾಡುತ್ತಿರುವುದನ್ನು ನಮ್ಮ ಸುತ್ತಲೂ ಕಾಣಬಹುದು. ಆದರೆ, ಈ ಮಹಾಮಾರಿ ತನ್ನನ್ನು ತಾನೇ ಅಪ್ಡೇಟ್ ಮಾಡಿಕೊಳ್ಳುತ್ತಾ ಹೆಚ್ಚಾಗಿ ಸೋಂಕು ಹರಡಲು ಸನ್ನದ್ಧವಾಗುತ್ತಿದೆ. ಅದಕ್ಕೆ ಸಾಕ್ಷಿಯೇ ಮಹಾರಾಷ್ಟ್ರದಲ್ಲಿ ಮೂಡಿಬಂದಿರುವ ಹೊಸ ರೂಪಾಂತರಿ ವೈರಸ್ ಎಂದು ತಜ್ಞರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕಂಡುಬಂದಿರುವ ವೈರಸ್ನ ಹೊಸ ರೂಪಾಂತರ – ಇ484ಕೆ – ಹೆಚ್ಚು ಹರಡುವ ಗುಣ ಹೊಂದಿದ್ದು, ಲಸಿಕೆ ತೆಗೆದುಕೊಂಡವರು ಮತ್ತು ಈ ಮುನ್ನ ಕರೊನಾ ಸೋಂಕಿನಿಂದ ಗುಣಮುಖರಾದವರೂ ಒಳಗೊಂಡಂತೆ ಎಲ್ಲರಿಗೂ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಏಮ್ಸ್ ನಿರ್ದೇಶಕರಾದ ಡಾ.ರಣದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಹಬ್ಬುತ್ತಿದೆ ಕರೊನಾ… ಮತ್ತೊಬ್ಬ ಸಚಿವರಲ್ಲಿ ಕರೊನಾ ಸೋಂಕು ಪತ್ತೆ !
“ಹೊಸ ಬಗೆಯ ರೂಪಾಂತರಿ ವೈರಸ್ಗಳು ‘ಇಮ್ಯೂನ್ ಎಸ್ಕೇಪ್ ಮೆಕಾನಿಸಂ’ಅನ್ನು ಬೆಳೆಸಿಕೊಂಡಿರುತ್ತವೆ. ಅಂದರೆ ಮನುಷ್ಯರ ದೇಹದಲ್ಲಿ ಈ ಮುನ್ನ ತಗುಲಿದ ಸೋಂಕಿನಿಂದಾಗಿ ಅಥವಾ ಲಸಿಕೆಯಿಂದಾಗಿ ಹುಟ್ಟಿರುವ ರೋಗನಿರೋಧಕ ಆ್ಯಂಟಿಬಾಡಿಗಳನ್ನು ಮೀರಿ ಅವು ಬದುಕಿರುವ ಸಾಮರ್ಥ್ಯ ಹೊಂದಿರುತ್ತವೆ. ಆದ್ದರಿಂದಾಗಿ ಈ ಸಮಯದಲ್ಲಿ ಕರೊನಾ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ” ಎಂದಿದ್ದಾರೆ.
ಭಾರತದಲ್ಲಿ ಸ್ವಲ್ಪ ಸಮಯದ ಮುಂಚೆ ಮಾಡಲಾಗುತ್ತಿದ್ದ ತೀವ್ರ ಪ್ರಮಾಣದ ಟೆಸ್ಟಿಂಗ್, ಕಾಂಟಾಕ್ಟ್ ಟ್ರೇಸಿಂಗ್ ಮತ್ತು ಐಸೋಲೇಷನ್ನಂಥ ಕ್ರಮಗಳನ್ನು ಮತ್ತೆ ಕೈಗೊಳ್ಳುವುದು ಅವಶ್ಯಕವಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಎಲ್ಲ ಕರೊನಾ ಸುರಕ್ಷತಾ ಕ್ರಮಗಳನ್ನು ಹೆಚ್ಚಿನ ಮುತುವರ್ಜಿಯಿಂದ ಪಾಲಿಸಬೇಕು ಎಂದು ಡಾ.ಗುಲೇರಿಯ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: 5 ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕರೊನಾ ಸೋಂಕು : ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎಂದ ಕೇಂದ್ರ ಸರ್ಕಾರ
ಮಹಾರಾಷ್ಟ್ರದಲ್ಲಿ ಕಳೆದ ವಾರ ಸೋಂಕು ಹೆಚ್ಚಿರುವುದಕ್ಕೆ ಕರೊನಾ ವೈರಸ್ನ ಹೊಸ ರೂಪಾಂತರಗಳೇ ಕಾರಣವಾಗಿವೆ. ದೇಶದಾದ್ಯಂತ 240 ಹೊಸ ವೈರಸ್ ಪ್ರಭೇದಗಳು ಕಾಣಿಸಿಕೊಂಡಿವೆ ಎಂದು ಮಹಾರಾಷ್ಟ್ರ ಕೋವಿಡ್ ಟ್ಯಾಸ್ಕ್ ಫೋರ್ಸ್ ಸದಸ್ಯ ಡಾ.ಶಶಾಂಕ್ ಜೋಶಿ ಹೇಳಿದ್ದಾರೆ.
ಮಹಾರಾಷ್ಟ್ರ ಅಲ್ಲದೇ, ಇನ್ನೂ ನಾಲ್ಕು ರಾಜ್ಯಗಳಲ್ಲಿ ಕರೊನಾ ಸೋಂಕಿನಲ್ಲಿ ದಿಢೀರ್ ಏರಿಕೆ ಕಂಡುಬಂದಿರುವುದಾಗಿ ಶನಿವಾರ ಕೇಂದ್ರ ಸರ್ಕಾರ ತಿಳಿಸಿತ್ತು. ಕೇರಳ, ಮಧ್ಯಪ್ರದೇಶ, ಛತ್ತೀಸಗಢ ಮತ್ತು ಪಂಜಾಬ್ಗಳಲ್ಲಿ ನಿತ್ಯ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಆದ್ದರಿಂದ ಎಲ್ಲಾ ರಾಜ್ಯಗಳು ಕರೊನಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿತ್ತು.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಮಾಸ್ಕ್ ಮರೆತಿದ್ದಕ್ಕೆ ಗಾಬರಿ ಬಿದ್ದ ಜರ್ಮನಿ ಚಾನ್ಸಲರ್ ವಿಡಿಯೋ ವೈರಲ್
ಎರಡನೆಯ ಬಾರಿ ಅಪ್ಪ- ಅಮ್ಮನಾದ ಸೈಫ್ ಅಲಿ ಖಾನ್- ಕರೀನಾ ಕಪೂರ್: ಅಣ್ಣನಾದ ಖುಷಿಯಲ್ಲಿ ತೈಮೂರ್
ಮತ್ತೆ ಕರೊನಾ ಕಟ್ಟೆಚ್ಚರ; 2ನೇ ಅಲೆ ತಡೆಗೆ ರಾಜ್ಯದಲ್ಲಿ ಕಠಿಣ ನಿಯಮ ಜಾರಿ