More

    ದ.ಕ. 13ನೇ ವ್ಯಕ್ತಿಗೆ ಕರೊನಾ, ಮತ್ತೆ ಮೂವರು ಬಿಡುಗಡೆ

    ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಕರೊನಾ ಪಾಸಿಟಿವ್ 13ನೇ ಪ್ರಕರಣ ಪತ್ತೆಯಾಗಿ ಜನರನ್ನು ಆತಂಕಕ್ಕೀಡು ಮಾಡಿದರೂ, ಮತ್ತೆ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ನಿಟ್ಟುಸಿರು ಬಿಡುವಂತಾಯಿತು.

    13 ದಿನಗಳ ಬಳಿಕ ಕರೊನಾ ಪಾಟಿಸಿವ್ ಪ್ರಕರಣ ವರದಿಯಾಗಿರುವುದು ಸುರಕ್ಷಿತ ವಲಯದತ್ತ ಸಾಗುತ್ತಿದ್ದ ದ.ಕ. ಜಿಲ್ಲೆಗೆ ಆಘಾತ. ಉಪ್ಪಿನಂಗಡಿ ನಿವಾಸಿಯಾಗಿರುವ 39 ವರ್ಷ ವಯಸ್ಸಿನ ರೋಗಿ ನಂ.13 ಮಾರ್ಚ್ 21ರಂದು ದೆಹಲಿಯಿಂದ ವಾಪಸ್ಸಾಗಿದ್ದರು. ಅವರನ್ನು ಪತ್ತೆ ಮಾಡಿ ಜಿಲ್ಲಾಡಳಿತ ಏ.1ರಂದು ಖಾಸಗಿ ಆಸ್ಪತ್ರೆಯಲ್ಲಿ 14 ದಿನಗಳ ವೈದ್ಯಕೀಯ ನಿಗಾ ಘಟಕ (ಕ್ವಾರಂಟೈನ್‌ನಲ್ಲಿ)ದಲ್ಲಿ ಇರಿಸಿತ್ತು.

    ಏ.2ರಂದು ಮೊದಲ ಬಾರಿಗೆ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿತ್ತು. ಏ.13ರಂದು ಮತ್ತೆ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ. ಸದ್ಯ ಅವರನ್ನು ವೆನ್ಲಾಕ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿರಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

    ದೆಹಲಿ ರಿಟರ್ನ್ಸ್ 3ನೇ ಪಾಸಿಟಿವ್: ದೆಹಲಿಯಿಂದ ಜಿಲ್ಲೆಗೆ ಹಿಂತಿರುಗಿ ಬಂದವರ ಪೈಕಿ ಪತ್ತೆಯಾದ 3ನೇ ಪಾಸಿಟಿವ್ ಪ್ರಕರಣ ಇದಾಗಿದೆ. ನಿಜಾಮುದ್ದೀನ್ ತಬ್ಲಿಘಿಯಲ್ಲಿ ಜಿಲ್ಲೆಯಿಂದ ಭಾಗಹಿಸಿದ್ದ 40 ಮಂದಿಯನ್ನು ಗುರುತಿಸಲಾಗಿದೆ. ಈ ಪೈಕಿ ಇಬ್ಬರಿಗೆ ಕರೊನಾ ಪಾಸಿಟಿವ್ ದೃಢಪಟ್ಟು ಗುಣಮುಖರಾಗಿದ್ದಾರೆ. ಶುಕ್ರವಾರ ಪಾಸಿಟಿವ್ ಆದ ವ್ಯಕ್ತಿಯೂ ದೆಹಲಿಗೆ ಹೋಗಿ ವಾಪಾಸಾಗಿದ್ದು, ಆದರೆ ವ್ಯಕ್ತಿ ತಬ್ಲಿಘಿಯಲ್ಲಿ ಭಾಗವಹಿಸಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಹಿಂದೆ ತಬ್ಲಿಘಿಯಲ್ಲಿ ಭಾಗವಹಿಸಿ ಜಿಲ್ಲೆಗೆ ವಾಪಸ್ಸಾಗಿದ್ದ ತುಂಬೆ ನಿವಾಸಿ (ರೋಗಿ ನಂ.11)ಯೊಂದಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.

    ಮೂವರು ಮನೆಗೆ: ಜಿಲ್ಲೆಯಲ್ಲಿ ಈ ಹಿಂದೆ ಪತ್ತೆಯಾಗಿದ್ದ 12 ಪ್ರಕರಣಗಳ ಪೈಕಿ ಬಾಕಿ ಉಳಿದಿದ್ದ ಮೂವರು ಶುಕ್ರವಾರ ಬಿಡುಗಡೆಯಾಗಿದ್ದಾರೆ. 13ನೇ ಪ್ರಕರಣ ಪತ್ತೆಯಾಗದೆ ಇರುತ್ತಿದ್ದರೆ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಸಂಖ್ಯೆ ಶೂನ್ಯವಾಗುತ್ತಿತ್ತು.

    ಜಿಲ್ಲೆಯ 10ನೇ ರೋಗಿ (ರಾಜ್ಯ ಲೆಕ್ಕದಲ್ಲಿ 142) ಕಾರ್ಕಳ ಮೂಲದ 63 ವರ್ಷದ ಮಹಿಳೆ ಮಾ.21ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಮಧುಮೇಹ ಇದ್ದ ಕಾರಣ ಇಎಸ್‌ಐ ಆಸ್ಪತ್ರೆ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿತ್ತು. ಏ.4ರಂದು ಸೋಂಕು ದೃಢಪಟ್ಟಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
    11ನೇ ರೋಗಿ (ರಾಜ್ಯ ಲೆಕ್ಕದಲ್ಲಿ 143) 43 ವರ್ಷದ ಬಂಟ್ವಾಳ ತುಂಬೆ ನಿವಾಸಿ ಹಾಗೂ 12ನೇ ರೋಗಿ (ರಾಜ್ಯ ಲೆಕ್ಕದಲ್ಲಿ 144) 52 ವರ್ಷದ ತೊಕ್ಕೊಟ್ಟು ಮೂಲದ 52 ವರ್ಷದ ವ್ಯಕ್ತಿ ಸೇರಿ ಇಬ್ಬರೂ ದೆಹಲಿ ನಿಜಾಮುದ್ದೀನ್‌ನಿಂದ ಮಂಗಳೂರಿಗೆ ಮಾ.22ರಂದು ಬಂದಿದ್ದರು. ಏ.1ರಂದು ವೈದ್ಯಕೀಯ ನಿಗಾದಲ್ಲಿ ಇಡಲಾಗಿದ್ದು, 2ರಂದು ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದ್ದು, 4ರಂದು ಸೋಂಕು ದೃಢಪಟ್ಟ ಬಳಿಕ ವೆನ್ಲಾಕ್‌ಗೆ ದಾಖಲಿಸಲಾಗಿತ್ತು.

    ಈ ಮೂವರೂ ಸೋಂಕಿತರ ಗಂಟಲು ದ್ರವ ಮಾದರಿಯನ್ನು ಏ.15 ಮತ್ತು 16ರಂದು ಪರೀಕ್ಷೆಗೆ ಕಳುಹಿಸಿದ್ದು, ನೆಗೆಟಿವ್ ವರದಿ ಬಂದಿದೆ.

    ದ.ಕ 39,080 ಮಂದಿ ಸ್ಕ್ರೀನಿಂಗ್: ದ.ಕ ಜಿಲ್ಲೆಯಲ್ಲಿ ಇಲ್ಲಿಯವರೆಗೆ 39080 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಶುಕ್ರವಾರ 48 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ. ಪ್ರಸ್ತುತ ಮನೆಯಲ್ಲಿ ಕ್ವಾರಂಟೈನ್ ಆಗಿರುವವರ ಸಂಖ್ಯೆ 588ಕ್ಕೆ ಇಳಿಕೆಯಾಗಿದೆ. ಇಲ್ಲಿಯವರಗೆ 5485 ಮಂದಿ 28 ದಿನ ಕ್ವಾರಂಟೈನ್ ಅವಧಿ ಮುಗಿಸಿದ್ದು, ಯಾರಲ್ಲೂ ಕರೊನಾ ಲಕ್ಷಣ ಪತ್ತೆಯಾಗಿಲ್ಲ. ಸದ್ಯ ಇಎಸ್‌ಐ ಆಸ್ಪತ್ರೆಯಲ್ಲಿ 10 ಮಂದಿ ಕ್ವಾರಂಟೈನ್‌ನಲ್ಲಿದ್ದು, 15 ಮಂದಿ ಬಿಡುಗಡೆಯಾಗಿದ್ದಾರೆ. 714 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, 713 ವರದಿ ಲಭ್ಯವಾಗಿದೆ. ಇದರಲ್ಲಿ 700 ನೆಗೆಟಿವ್ ಹಾಗೂ 13 ಪಾಸಿಟಿವ್. 1 ಮಾದರಿಯ ವರದಿ ಬರಲು ಬಾಕಿ ಇದೆ. 28 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ 82 ಮಂದಿಯನ್ನು ಫೀವರ್ ಕ್ಲಿನಿಕ್‌ಗಳಲ್ಲಿ ತಪಾಸಣೆ ನಡೆಸಲಾಗಿದೆ.

    ಹಾಟ್‌ಸ್ಪಾಟ್ ತೆರವು ಕಷ್ಟ: 12 ಕರೊನಾ ಪಾಸಿಟಿವ್‌ನಿಂದಾಗಿ ಜಿಲ್ಲೆ ರೆಡ್‌ರೆನ್‌ನಲ್ಲಿದ್ದು, ಹಾಟ್‌ಸ್ಪಾಟ್ ಕ್ಲಸ್ಟರ್ ಎಂದು ಗುರುತಿಸಲ್ಪಟ್ಟಿದೆ. 12 ದಿನಗಳಿಂದ ಯಾವುದೇ ಪಾಸಿಟಿವ್ ಪತ್ತೆಯಾಗದ ಕಾರಣ, ಜಿಲ್ಲೆಯ ಆರೆಂಜ್ ರೆನ್ ಹೋಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಒಂದು ಪ್ರಕರಣ ಪತ್ತೆಯಾಗಿರುವುದರಿಂದ ರೆಡ್‌ರೆನ್ ಮುಂದುವರಿಯುವ ಸಾಧ್ಯತೆಯಿದೆ. ಇದರಿಂದ ಜಿಲ್ಲೆಗೆ ಸಿಗಬಹುದಾಗಿದ್ದ ಕೆಲವೊಂದು ನಿಯಮಗಳ ಸಡಿಲಿಕೆ ಸಿಗುವುದು ಸದ್ಯದ ಮಟ್ಟಿಗೆ ಕಷ್ಟ ಎನ್ನಬಹುದು.

    ಉಪ್ಪಿನಂಗಡಿ 10 ಕಿ.ಮೀ. ನಿಗಾ:

    ಉಪ್ಪಿನಂಗಡಿ: ದಿಲ್ಲಿಯಿಂದ ಆಗಮಿಸಿದ್ದ ಉಪ್ಪಿನಂಗಡಿಯ ಲಕ್ಷ್ಮೀನಗರದ ನಿವಾಸಿ, 39ರ ಹರೆಯದ ವಕೀಲರೊಬ್ಬರಿಗೆ ಕರೊನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಕೇಂದ್ರಿತ 10 ಕಿ.ಮೀ. ವ್ಯಾಪ್ತಿಯ ಜನರ ಮೇಲೆ ನಿಗಾ ಇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಡಾ.ನವೀನ್ ನೇತೃತ್ವದ ಜಿಲ್ಲಾ ಆರೋಗ್ಯ ಇಲಾಖಾ ಜಾಗೃತದಳ ಉಪ್ಪಿನಂಗಡಿಗೆ ಭೇಟಿ ಹೆದರುವ ಅಗತ್ಯವೇನಿಲ್ಲ. ಸೋಂಕಿತ ವ್ಯಕ್ತಿಯು ಉಪ್ಪಿನಂಗಡಿ ಪರಿಸರದಲ್ಲಿ ಸುತ್ತಾಡಿಕೊಂಡಿದ್ದ ಕಾರಣಕ್ಕೆ ಉಪ್ಪಿನಂಗಡಿ ಕೇಂದ್ರಿತ 10 ಕಿ.ಮೀ ವ್ಯಾಪ್ತಿಯಲ್ಲಿನ ಜನರ ಮೇಲೆ ನಿಗಾ ಇರಿಸಲಾಗುವುದು. ಶೀತ, ಕೆಮ್ಮು, ನೆಗಡಿ ಇದ್ದವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು. ಪುತ್ತೂರು ತಹಸೀಲ್ದಾರ್ ನೇತೃತ್ವದ ತಂಡ ವಕೀಲ ಮನೆಗೆ ಭೇಟಿ ನೀಡಿ ಕುಟುಂಬಸ್ಥರ, ಸಂಪರ್ಕದ ವ್ಯಕ್ತಿಗಳ ಮಾಹಿತಿ ಪಡೆದರು.

    ಕೊಕ್ಕಡ, ಶಿಶಿಲದ ಇಬ್ಬರಿಗೆ ಕ್ವಾರಂಟೈನ್
    ಉಪ್ಪಿನಂಗಡಿ: ಹೈದರಾಬಾದ್ ಮತ್ತು ಬೆಂಗಳೂರಿನಿಂದ ಹುಟ್ಟೂರಿಗೆ ಆಗಮಿಸಿದ ಇಬ್ಬರಿಗೆ ಹೋಮ್ ಕ್ವಾರಂಟೈನ್ ವಿಧಿಸಲಾಗಿದೆ.
    ಹೈದರಾಬಾದ್‌ನ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಕೊಕ್ಕಡ ಮುಂಡೂರುಪಳ್ಕೆ ಮೂಲದ ಓರ್ವ ವ್ಯಕ್ತಿ ಎರಡು ದಿನಗಳ ಹಿಂದೆ ಮನೆಗೆ ಮರಳಿದ್ದರು. ಬೆಂಗಳೂರಿನಲ್ಲಿ ವಾಸವಿದ್ದ ಓರ್ವ ವ್ಯಕ್ತಿ ಶಿಶಿಲಕ್ಕೆ ಶುಕ್ರವಾರ ಬಂದಿದ್ದು ಇಬ್ಬರೂ ವ್ಯಕ್ತಿಗಳ ಮಾಹಿತಿ ಪತ್ತೆ ಹಚ್ಚಿದ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಗ್ರಾಪಂ ಕಾರ್ಯಪಡೆ ಇಬ್ಬರ ಮನೆಗೂ ತೆರಳಿ ಸೀಲ್ ಹಾಕಿ ಹೋಮ್ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದೆ.

    ಚೆಂಬುಗುಡ್ಡೆಯಲ್ಲಿ ಕರೊನಾ ಇಲ್ಲ
    ಉಳ್ಳಾಲ: ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ನಡೆಸಿದ ಸ್ಥಳೀಯರ ಕರೊನಾ ಪರೀಕ್ಷೆಯ ವರದಿ ದೊರೆತಿದ್ದು, ಎಲ್ಲವೂ ನೆಗೆಟಿವ್ ಆಗಿದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ. ನಿಜಾಮುದ್ದೀನ್ ಸಮ್ಮೇಳನದಿಂದ ಬಂದಿದ್ದ ತೊಕ್ಕೊಟ್ಟಿನ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವ್ಯಕ್ತಿ ಸಂಚರಿಸಿದ ಪ್ರದೇಶದ ಜನರಿಗೆ ಇತ್ತೀಚೆಗೆ ಚೆಂಬುಗುಡ್ಡೆ ಮಸೀದಿ ಆವರಣದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಶಾಸಕ ಯು.ಟಿ. ಖಾದರ್ ಭಾಗವಹಿಸಿ ಜನರಿಗೆ ಧೈರ್ಯ ತುಂಬಿದ್ದರು. 107 ಜನರ ತಪಾಸಣೆ ನಡೆಸಲಾಗಿದ್ದು, ಅದರಲ್ಲಿ 76 ಜನರ ವರದಿ ನೆಗಟಿವ್ ಬಂದಿದೆ. ಉಳಿದ ಜನರ ವರದಿ ಶನಿವಾರ ಬರಲಿದೆ.

    ಕರೊನಾ ಟೆಸ್ಟ್ ರಾಜ್ಯದಲ್ಲೇ ಉಡುಪಿ ಪ್ರಥಮ
    ಉಡುಪಿ: ಜಿಲ್ಲೆಯಲ್ಲಿ 11,77,361 ಜನಸಂಖ್ಯೆ ಇದ್ದು, 409 ಮಂದಿಯ ಗಂಟಲಿನ ಸ್ರಾವ ಮಾದರಿ ಪಡೆದು ಪರೀಕ್ಷೆಗೊಳಪಡಿಸಲಾಗಿದೆ. ಸರಾಸರಿ ಆಧಾರದಲ್ಲಿ 1 ಲಕ್ಷ ಜನರಲ್ಲಿ 65 ಮಂದಿಯನ್ನು ಪರೀಕ್ಷೆ ನಡೆಸುವ ಮೂಲಕ ರಾಜ್ಯದಲ್ಲೇ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    409 ಮಂದಿಯಲ್ಲಿ 394 ವರದಿಗಳು ನೆಗೆಟಿವ್ ಬಂದಿದೆ, 15 ವರದಿ ಬಾಕಿ ಇದೆ. ಕರೊನಾ ಪಾಸಿಟಿವ್ ನಿಕಟ ಸಂಪರ್ಕ ಹೊಂದಿದವರು, 2ನೇ ಹಂತದ ಸಂಪರ್ಕ ಹೊಂದಿದವರು, ತೀವ್ರ ಶ್ವಾಸಕೋಶ ಸೋಂಕಿಗೆ ಒಳಗಾದವರನ್ನು ಹುಡುಕಿ ತಪಾಸಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ 19 ದಿನಗಳಿಂದ ಕರೊನಾ ಪಾಸಿಟಿವ್ ಕಂಡು ಬಂದಿಲ್ಲ. 28 ದಿನಗಳಾದರೆ ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಗೆ ಬರಲಿದೆ. ಜಿಲ್ಲೆಯ ಒಳಗೆ ಕರೊನಾ ಕಂಡು ಬರುವ ಸಾಧ್ಯತೆಗಳು ಕಡಿಮೆ ಇದೆ. ಹೊರಗಿನಿಂದ ಮಾತ್ರ ಬರುವ ಸಾಧ್ಯತೆಗಳಿರುವುದರಿಂದ ಜಿಲ್ಲೆಯ ಗಡಿಗಳನ್ನು ಅತ್ಯಂತ ಬಿಗಿಗೊಳಿಸಲಾಗಿದೆ. ಜಿಲ್ಲೆಯೊಳಗೆ ಪ್ರವೇಶಿಸಲು ಯತ್ನಿಸುತ್ತಿರುವವರ ಯಾವುದೇ ಒತ್ತಡಗಳಿಗೆ, ಜಿಲ್ಲೆಯ ನಾಗರಿಕರ ಆರೋಗ್ಯ ದೃಷ್ಟಿಯಿಂದ ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

    ಗರ್ಭಿಣಿ ಆರೋಗ್ಯ ಸುಧಾರಣೆ: ಜಿಲ್ಲೆಯಲ್ಲಿ 3 ಪಾಸಿಟಿವ್ ಪ್ರಕರಣಗಳಲ್ಲಿ ಇಬ್ಬರು ಬಿಡುಗಡೆಯಾಗಿದ್ದು, ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ 2ನೇ ಮಾದರಿ ನೆಗೆಟಿವ್ ಬಂದಿದೆ. ಇನ್ನೊಂದು ವರದಿ ನೆಗೆಟಿವ್ ಬಂದರೆ ಕೂಡಲೇ ಡಿಸ್ಚಾರ್ಜ್ ಮಾಡುತ್ತೇವೆ. ಭಟ್ಕಳದಿಂದ ಹೆಚ್ಚಿನ ಚಿಕಿತ್ಸೆಗೆ ಇಲ್ಲಿಗೆ ಆಗಮಿಸಿದ ಗರ್ಭಿಣೆ ಮಹಿಳೆ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ. ಈಕೆಯ ಗಂಟಲು ದ್ರವ ಮಾದರಿ ಗುರುವಾರ ಕಳುಹಿಸಲಾಗಿದೆ. ಇನ್ನೊಂದು ವರದಿ ನೋಡಿ 2-3 ದಿನದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಡಿಸಿ ತಿಳಿಸಿದರು.
    225 ವರದಿ ನೆಗೆಟಿವ್: ಜಿಲ್ಲಾಡಳಿತ ಶುಕ್ರವಾರ ಸ್ವೀಕರಿಸಿದ ಎಲ್ಲ 225 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ.

    ಕೊವಿಡ್ -19 ಸೋಂಕಿತರ ಸಂಪರ್ಕವಾದ ಒಬ್ಬರು, ಇಲ್‌ನೆಸ್‌ಗೆ ಸಂಬಂಧಿಸಿ ನಾಲ್ವರು, ಇತರೆ ಹಾಟ್‌ಸ್ಪಾಟ್‌ಗಳಿಂದ ಬಂದವರು 12 ಮಂದಿ ಸೇರಿದಂತೆ ಒಟ್ಟು 18 ಮಂದಿಯ ಮಾದರಿಯನ್ನು ಶುಕ್ರವಾರ ಸಂಗ್ರಹಿಸಲಾಗಿದ್ದು, 13 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 202 ಮಂದಿಯ ವರದಿ ಬರಲು ಬಾಕಿ ಇದೆ. ಶುಕ್ರವಾರಕ್ಕೆ 167 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 8 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಿಂದ 7 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಕಾಸರಗೋಡು ಹೊಸ ಪ್ರಕರಣ ಇಲ್ಲ
    ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಒಬ್ಬರಲ್ಲಿ ಮಾತ್ರ ಕೊವಿಡ್-19 ವೈರಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 395 ಮಂದಿಗೆ ಕರೊನಾ ಖಚಿತಗೊಂಡಿದ್ದು, 225 ಮಂದಿ ಗುಣಮುಖರಾಗಿದ್ದಾರೆ, 138 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 77901 ಮಂದಿ ನಿಗಾದಲ್ಲಿದ್ದು, 7789 ಮಂದಿ ಮನೆಗಳಲ್ಲಿ ಹಾಗೂ 112 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ವೈರಸ್ ಖಚಿತಗೊಂಡವರಲ್ಲಿ 113 ಮಂದಿ ಗುಣಮುಖರಾಗಿದ್ದು, 51 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಶುಕ್ರವಾರ 6 ಮಂದಿ ಬಿಡುಗಡೆಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts