More

    ದ.ಕ.ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ -ಡಾ.ಎಚ್.ಆರ್.ತಿಮ್ಮಯ್ಯ


    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ತಾಪಮಾನದಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿದ್ದು, ಆರೋಗ್ಯದ ಸಮಸ್ಯೆಗೆ
    ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಂದು ಬೆಡ್, ಸಮುದಾಯ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 2 ಬೆಡ್ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 6 ಬೆಡ್‌ಗಳನ್ನು ಬಿಸಿಲಿಗೆ ಸಂಬಂಧಿಸಿದ ಸಮಸ್ಯೆಯಾದವರಿಗೆ
    ಮೀಸಲಿಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದರು.
    ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ ಸಂವಾದ
    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ ಸಾಮಾನ್ಯವಾಗಿ 32-35 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿದ್ದ ತಾಪಮಾನ ಈ ಬಾರಿ 40 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿದೆ. ಅಧಿಕ ತಾಪಮಾನದಿಂದ ಸುಸ್ತು, ನಿಶ್ಯಕ್ತಿ,ಚರ್ಮ ತುರಿಕೆ, ಜ್ವರ ಸಹಿತ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಬಿಸಿಲಿನಾಘಾತ ಸಂಭವಿಸುವ ಸಾಧ್ಯತೆ ಇದ್ದು ಸಾರ್ವಜನಿಕರು ಸಾಕಷ್ಟು ಮುಂಜಾಗ್ರತೆ ವಹಿಸುವುದು ಅಗತ್ಯ ಎಂದರು.
    ಜಿಲ್ಲೆಯಲ್ಲಿ ಹೀಟ್ ಸ್ಟ್ರೋಕ್ ಪ್ರಕರಣಗಳು ವರದಿಯಾಗಿಲ್ಲ. ಬೆವರುಸಾಲೆ, ಕೈಗಳಲ್ಲಿ ಬಾವು, ಸುಸ್ತು ಮೊದಲಾದ ಸಮಸ್ಯೆಗಳಿಗೆ ಕೆಲವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜನರು ಯಥೇಚ್ಛವಾಗಿ ನೀರು ಸೇವಿಸಬೇಕು. ಪಾನಕ, ಮಜ್ಜಿಗೆ, ಎಳನೀರು ಸೇವನೆ ಉತ್ತಮ. ಮಸಾಲೆ ಪದಾರ್ಥಗಳನ್ನು ಮಿತವಾಗಿ ಸೇವಿಸಬೇಕು. ಬೆಳಗ್ಗೆ 11.30ರಿಂದ ಮಧ್ಯಾಹ್ನ 3ರವರೆಗೆ ಹೊರಗೆ ಓಡಾಟ ತಪ್ಪಿಸಬೇಕು. ತುರ್ತು ಇದೆ ಸಂದರ್ಭ ಕೊಡೆ, ಟೋಪಿ, ಕಣ್ಣಿಗೆ ಕಪ್ಪು ಕನ್ನಡಕ, ಹತ್ತಿಯ ಸಡಿಲವಾದ ಬಟ್ಟೆಯನ್ನು ಧರಿಸಬೇಕು.
    ಮಕ್ಕಳು ಮತ್ತು ವೃದ್ಧರು ಬಿಸಿಲಿಗೆ ಹೊರಗೆ ಹೋಗದಿರುವುದು ಉತ್ತಮ ಎಂದರು.
    ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ಅವರು ಮಾತನಾಡಿ ಬೇಸಿಗೆಯಲ್ಲಿ ನೀರು ಸಂಗ್ರಹಿಸಿ ಇಡುವದರಿಂದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಬಹುದು. ಜಿಲ್ಲೆಯಲ್ಲಿ 16 ಮಲೇರಿಯಾ ಮತ್ತು 108 ಡೆಂೆ ಪ್ರಕರಣ ವರದಿಯಾಗಿದೆ ಎಂದರು.
    ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ರಕ್ತದ ಕೊರತೆ ಇದೆ. ಚುನಾವಣೆ, ಪರೀಕ್ಷಾ ಸಮಯವಾಗಿರುವುದರಿಂದ ರಕ್ತದಾನ ಶಿಬಿರಗಳು
    ಕಡಿಮೆಯಾಗಿದ್ದು ಇದಕ್ಕೆ ಕಾರಣ.ಬೇಡಿಕೆಗೆ ತಕ್ಕಂತೆ ರಕ್ತ ಸಿಗುತ್ತಿಲ್ಲ. ಆದ್ದರಿಂದ ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಆಯೋಜಿಗೆ ರಕ್ತದ ಕೊರತೆ ನೀಗಿಸಲು ನೆರವಾಗಬೇಕು ಎಂದು ಅವರು ಮನವಿ ಮಾಡಿದರು.
    ಇದೇ ಸಂದರ್ಭ ತಾಪಮಾನ ಹೆಚ್ಚಳ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.
    ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್.ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts