More

    ನಾಲ್ವರು ಪೊಲೀಸರಿಗೆ ಕರೊನಾಘಾತ, ಉಡುಪಿ 3 ಜಿಲ್ಲೆ ಸಿಬ್ಬಂದಿಗೆ ಕೋವಿಡ್, 4 ಠಾಣೆಗಳು ಸೀಲ್‌ಡೌನ್

    ಮಂಗಳೂರು/ಉಡುಪಿ: ಕರಾವಳಿಯಲ್ಲಿ ಭಾನುವಾರ ಒಂದೇ ದಿನ ಕರೊನಾ ವೈರಸ್ ನಾಲ್ವರು ಪೊಲೀಸರಿಗೆ ಆಘಾತ ನೀಡಿದೆ. ಉಡುಪಿ ಜಿಲ್ಲೆಯಲ್ಲಿ 3, ವಿಟ್ಲದಲ್ಲಿ ಓರ್ವ ಸಿಬ್ಬಂದಿಯಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ.

    ಕೆಲ ದಿನಗಳ ಹಿಂದೆ ಹಸಿರು ವಲಯವಾಗಿ ಗುರುತಿಸಿಕೊಂಡಿದ್ದ ಉಡುಪಿಗೆ ಭಾನುವಾರ ಕೋವಿಡ್-19 ಬಲು ದೊಡ್ಡ ಅಘಾತವನ್ನೇ ನೀಡಿದೆ. ಜಿಲ್ಲೆಯ ಮೂವರು ಪೊಲೀಸರಿಗೆ ಸೋಂಕು ತಗಲುವ ಮೂಲಕ ಆತಂಕ ಹೆಚ್ಚಾಗುವಂತೆ ಮಾಡಿದೆ. 4 ಪೊಲೀಸ್ ಠಾಣೆಗಳನ್ನು, ಪೊಲೀಸ್ ಬಡಾವಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 4 ಮಕ್ಕಳು ಸಹಿತ 23 ಮಂದಿಗೆ ಕರೊನಾ ಪಾಸಿಟಿವ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.

    ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್, ಅಜೆಕಾರು ಪೊಲೀಸ್ ಠಾಣೆಯ ಎಎಸ್‌ಐ, ಬ್ರಹ್ಮಾವರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗೆ ಸೋಂಕು ದೃಢಪಟ್ಟಿದೆ. ಈ ಮೂವರು ಚೆಕ್‌ಪೋಸ್ಟ್, ಹೈವೆ ಪ್ಯಾಟ್ರೋಲ್, ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಸಿಬ್ಬಂದಿ, ಅಧಿಕಾರಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಎಲ್ಲರ ಗಂಟಲ ದ್ರವ ತೆಗೆದು ಪರೀಕ್ಷೆ ಒಳಪಡಿಸಲಾಗುವುದು ಎಂದು ಡಿಸಿ ಜಿ.ಜಗದೀಶ್ ತಿಳಿಸಿದ್ದಾರೆ.

    4 ಮಕ್ಕಳು ಸಹಿತ 19 ಮಂದಿಗೆ ಸೋಂಕು: ಹೊರ ರಾಜ್ಯದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ ಹೊರ ರಾಜ್ಯದ 19 ಮಂದಿಗೆ ಕರೊನಾ ಪಾಸಿಟಿವ್‌ಬಂದಿದೆ. 11 ಪುರುಷರು, 8 ಮಹಿಳೆಯರಿಗೆ ಸೋಂಕು ತಗುಲಿದೆ. ಇದರಲ್ಲಿ 17 ಮಂದಿ ಮಹಾರಾಷ್ಟ್ರದಿಂದ ಬಂದಿದ್ದು, ಈ ಪೈಕಿ 2,1 ವರ್ಷದ ಗಂಡು ಮಗು, 4 ವರ್ಷದ ತಲಾ ಇಬ್ಬರು ಗಂಡು ಮಕ್ಕಳಿಗೆ ಸೋಂಕು ತಗುಲಿರುವುದು ಆತಂಕಕಾರಿ ವಿಚಾರವಾಗಿದೆ. ಒಬ್ಬರು ತೆಲಂಗಾಣದಿಂದ ಬಂದಿದ್ದು, ಒಬ್ಬರು ದುಬೈನಿಂದ ಬಂದಿದ್ದಾರೆ.

    48 ಗಂಟೆಕಾಲ 4 ಠಾಣೆಗಳು ಸೀಲ್‌ಡೌನ್: ಉಡುಪಿ ಜಿಲ್ಲೆಯ ಅಜೆಕಾರು, ಬ್ರಹ್ಮಾವರ ಠಾಣೆ, ಕಾರ್ಕಳದಲ್ಲಿ ಒಂದೇ ಕಟ್ಟಡದಲ್ಲಿರುವ ನಗರ, ಗ್ರಾಮಾಂತರ ಠಾಣೆ ಹಾಗು ವೃತ್ತ ನೀರಿಕ್ಷಕರ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಸಂಬಂಧಪಟ್ಟ ಠಾಣೆಗಳ ಸಿಬ್ಬಂದಿ ವಾಸವಾಗಿದ್ದ ಪೊಲೀಸ್ ಕ್ವಾರ್ಟ್ರರ್ಸ್‌ಗಳನ್ನು ಸೀಲ್ ಮಾಡಲಾಗಿದ್ದು, 48 ಗಂಟೆಗಳ ನಿಗಾ ಇರಿಸಿ, ಸ್ಯಾನಿಟೈಸ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಸೋಂಕು ಕಂಡ ಬಂದ ಪೊಲೀಸರ ಪ್ರಾಥಮಿಕ ಮತ್ತು ದ್ವೀತಿಯ ಹಂತದ ಸಂಪರ್ಕದ ಮಾಹಿತಿಯನ್ನು ಆರೋಗ್ಯ ಇಲಾಖೆ ಕಲೆಹಾಕುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗರ್ಭಿಣಿ ಸೋಂಕಿನ ಮೂಲ ನಿಗೂಢ: ಇನ್ನೂ ಹತ್ತು-ಹದಿನೈದು ದಿನದಲ್ಲಿ ಹೆರಿಗೆಯಾಗಲಿದ್ದ ಕಾರ್ಕಳ ತಾಲೂಕು ವ್ಯಾಪ್ತಿಯ ಗರ್ಭಿಣಿಗೆ ಸೋಂಕು ತಗುಲಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಅಚ್ಚರಿಯ ಸಂಗತಿ ಎಂದರೆ ಅವರು ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಜಿಲ್ಲೆಯಲ್ಲೇ ಇದ್ದರು. ಆದರೂ, ಅವರಿಗೆ ಸೋಂಕು ದೃಢಪಟ್ಟಿದೆ. ಸೋಂಕು ಮೂಲ ಇನ್ನೂ ಪತ್ತೆಯಾಗಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಭಾನುವಾರ 439 ಮಂದಿಯ ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 8, ಇಲ್‌ನೆಸ್‌ಗೆ ಸಂಬಂಧಿಸಿ 19, ಕೋವಿಡ್-19 ಸಂಪರ್ಕ 28, ಹಾಟ್‌ಸ್ಪಾಟ್‌ನಿಂದ ಬಂದವರು 1246 ಮಂದಿ ಸೇರಿದಂತೆ ಒಟ್ಟು 1301 ಮಂದಿಯ ಮಾದರಿಯನ್ನು ಭಾನುವಾರ ಸಂಗ್ರಹಿಸಲಾಗಿದೆ. ಇನ್ನೂ 3762 ಮಂದಿಯ ವರದಿ ಬರಲು ಬಾಕಿ ಇದೆ. ಐಸೋಲೇಷನ್ ವಾರ್ಡ್‌ನಿಂದ 4 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
    – ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ದ್ವಿತೀಯ ಸಂಪರ್ಕದಿಂದ ಕರೊನಾ
    ಮಂಗಳೂರು: ಮಹಾರಾಷ್ಟ್ರದ ಪುಣೆಯಿಂದ ಬಂದು ಕ್ವಾರಂಟೈನ್‌ಗಾಗಿ ತಿರುಗಾಡಿದ್ದ ಸೋಂಕಿತನಿಂದ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಕರೊನಾ ಸೋಂಕಿಗೊಳಗಾಗಿದ್ದಾರೆ.
    42 ವರ್ಷ ಪ್ರಾಯದ ಇವರು ಪಿ-1233 ಯುವಕ ಕ್ವಾರಂಟೈನ್‌ಗೆ ಮೊದಲು ವಿಟ್ಲ ಠಾಣೆಗೆ ಭೇಟಿ ನೀಡಿದ ವೇಳೆ ಅವರ ದ್ವಿತೀಯ ಸಂಪರ್ಕಕ್ಕೆ ಬಂದಿದ್ದರು. ಸಂಶಯದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ.
    ವಿಟ್ಲ ಪೊಲೀಸ್ ಠಾಣೆಯನ್ನು ಪೂರ್ಣವಾಗಿ ವಿಟ್ಲ ಪಟ್ಟಣ ಪಂಚಾಯಿತಿ ವತಿಯಿಂದ ಸ್ಯಾನಿಟೈಸ್ ಮಾಡಲಾಗಿದ್ದು 48 ಗಂಟೆ ಕಾಲ ಮುಚ್ಚಲಾಗಿದೆ ಎಂದು ದ.ಕ ಎಸ್ಪಿ ಮಾಹಿತಿ ನೀಡಿದ್ದಾರೆ.
    ಹೊಸ ಪ್ರಕರಣಗಳು ಮರುಕಳಿಸದ ಹಿನ್ನೆಲೆಯಲ್ಲಿ ಈ ಮೊದಲು ಕಂಟೇನ್ಮೆಂಟ್ ವಲಯವಾಗಿದ್ದ ಮಂಗಳೂರು ಪದವು ಗ್ರಾಮದ ಕಕ್ಕೆಬೆಟ್ಟು ಮತ್ತು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಿರ್ದಿಷ್ಟ ಪ್ರದೇಶಗಳನ್ನು ನಿರ್ಬಂಧ ರಹಿತಗೊಳಿಸಲಾಗಿದೆ.
    ಭಾನುವಾರ 67 ಮಂದಿಯನ್ನು ತಪಾಸಣೆ ಮಾಡಲಾಗಿದ್ದು ಎನ್‌ಐಟಿಕೆಯಲ್ಲಿ 8 ಹೊಸ ದಾಖಲು ಸೇರಿದಂತೆ 48 ಮಂದಿ, ಇಎಸ್‌ಐ ಆಸ್ಪತ್ರೆಯಲ್ಲಿ 18 ಮಂದಿ ನಿಗಾವಣೆಯಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 60 ತಲಪಿದ್ದು 34 ಪ್ರಕರಣಗಳು ಚಾಲ್ತಿಯಲ್ಲಿವೆ. 26 ಮಂದಿ ಇದುವರೆಗೆ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಭಾನುವಾರ 384 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಬಂದಿರುವ 329ರಲ್ಲಿ ಒಂದು ಮಾತ್ರ ಪಾಸಿಟಿವ್ ಆಗಿರುತ್ತದೆ. ಫೀವರ್ ಕ್ಲಿನಿಕ್‌ಗಳಲ್ಲಿ ಇದುವರೆಗೆ 4001 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.

    ಮೊಬೈಲ್‌ನಿಂದ ಹರಡಿತೇ?
    ಮುಂಬೈನಿಂದ ಸೋಂಕಿತ ಯುವಕ ಮೇ 14ರಂದು ವಿಟ್ಲಕ್ಕೆ ಬಂದಿದ್ದರು. ಕ್ವಾರಂಟೈನ್‌ಗೆ ಮೊದಲು ಪರಿಶೀಲನೆಗೆ ವಿಟ್ಲ ಪೊಲೀಸ್ ಠಾಣೆಗೆ ಈತ ಬಂದಿದ್ದು ಹೆಡ್‌ಕಾನ್‌ಸ್ಟೆಬಲ್ ಒಬ್ಬರು ಆತನ ಆಧಾರ್ ಕಾರ್ಡ್ ಕೈನಲ್ಲಿ ಪಡೆದಿದ್ದರು. ಆ ಬಳಿಕ ಸದ್ಯ ಸೋಂಕಿಗೆ ಒಳಗಾಗಿರುವ ಕಾನ್‌ಸ್ಟೆಬಲ್ನಿಂದ ಹೆಡ್ ಕಾನ್‌ಸ್ಟೆಬಲ್ ಮೊಬೈಲ್ ಪಡೆದುಕೊಂಡಿದ್ದು, ಆಧಾರ್ ಮುಟ್ಟಿದ ಕೈನಲ್ಲೇ ಅದನ್ನೂ ಮುಟ್ಟಿದ್ದರು. ಆ ಬಳಿಕ ತಮ್ಮ ಮೊಬೈಲ್ ಬಳಕೆ ಮಾಡಿದ್ದ ಕಾನ್‌ಸ್ಟೆಬಲ್ ಸೋಂಕಿಗೊಳಗಾದರು. ಅಚ್ಚರಿ ಎಂದರೆ ಆಧಾರ್ ಮುಟ್ಟಿದ, ನೇರ ಸಂಪರ್ಕ ಹೊಂದಿದ್ದ ಸಿಬ್ಬಂದಿಯ ಪರೀಕ್ಷಾ ವರದಿ ನೆಗೆಟಿವ್ ಆಗಿದೆ.

    ಕಾಸರಗೋಡಿನ ಐವರಲ್ಲಿ ಸೋಂಕು ದೃಢ
    ಕಾಸರಗೋಡು: ಜಿಲ್ಲೆಯ ಐವರಲ್ಲಿ ಭಾನುವಾರ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.
    ಸೋಂಕು ಖಚಿತಗೊಂಡವರೆಲ್ಲ ಮಹಾರಾಷ್ಟ್ರದಿಂದ ಆಗಮಿಸಿದವರು. 41 ವರ್ಷ ಪ್ರಾಯದ ಕುಂಬಳೆ ನಿವಾಸಿ, 32 ವರ್ಷದ ಮಂಗಲ್ಪಾಡಿ ನಿವಾಸಿ, 44 ಮತ್ತು 47 ವರ್ಷ ಪ್ರಾಯದ ಪೈವಳಿಕೆ ನಿವಾಸಿಗಳು ಹಾಗೂ 60 ವರ್ಷದ ವರ್ಕಾಡಿ ನಿವಾಸಿ ಸೋಂಕಿತರು. ಎಲ್ಲರೂ ಪುರುಷರು. ಜಿಲ್ಲೆಯಲ್ಲಿ ಭಾನುವಾರ ಕಾಸರಗೋಡು ಜನರಲ್ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆ ಮತ್ತು ಕುಂಬಳೆ ನಿವಾಸಿ 41 ವರ್ಷದ ವ್ಯಕ್ತಿ ಗುಣಮುಖರಾದವರು.

    ಪಾಸಿಟಿವ್ ಬಂದ ಬಾಲಕಿಗೆ ನೆಗೆಟಿವ್!
    ಉಡುಪಿ: ಚಿಕಿತ್ಸೆಗಾಗಿ ಮಣಿಪಾಲಕ್ಕೆ ಬಂದಿದ್ದ ಚಿತ್ರದುರ್ಗ ಮೂಲದ 17ರ ಹರೆಯದ ಬಾಲಕಿಗೆ ಎರಡನೇ ಬಾರಿ ಕೋವಿಡ್ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದೆ. ಕ್ಯಾನ್ಸರ್ ಚಿಕಿತ್ಸೆಗೆಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮೇ 16ರಂದು ದಾಖಲಾಗಿದ್ದ ಬಾಲಕಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದಾಗ ಕೋವಿಡ್-19 ಪಾಸಿಟಿವ್ ಬಂದಿತ್ತು. ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ನೆಗೆಟಿವ್ ಫಲಿತಾಂಶ ಬಂದಿದೆ. ಮಣಿಪಾಲ ಆಸ್ಪತ್ರೆಯ ನೂತನ ಲ್ಯಾಬ್‌ನಲ್ಲಿ 24 ಗಂಟೆ ಒಳಗೆ ಎರಡು ಸಲ ಯುವತಿಯ ಗಂಟಲು ಮಾದರಿ ಪರೀಕ್ಷೆ ಒಳಪಡಿಸಲಾಗಿದ್ದು, ಎರಡು ವರದಿಯೂ ನೆಗೆಟಿವ್ ಬಂದಿದೆ. ಈ ಗೊಂದಲದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ವರದಿ ವ್ಯತ್ಯಾಸ ಇರುವ ಹಿನ್ನೆಲೆಯಲ್ಲಿ ಸರ್ಕಾರದ ನಿಯಮದಂತೆ ಬೆಂಗಳೂರಿನಲ್ಲಿರುವ ಲ್ಯಾಬ್‌ಗೆ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

    ವಡ್ಡರ್ಸೆ ಯಾಳಹಕ್ಲು ಸೀಲ್‌ಡೌನ್
    ಕೋಟ: ಬ್ರಹ್ಮಾವರ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ಕರೊನಾ ಸೋಂಕು ಕಾಣಿಸಿಕೊಂಡಿರುವ ಬೆನ್ನಲ್ಲೇ ಉಡುಪಿ ಜಿಲ್ಲೆಯ ವಡ್ಡರ್ಸೆ ಗ್ರಾಮದ ಯಾಳಹಕ್ಲು ಪ್ರದೇಶವನ್ನು ಜಿಲ್ಲಾಡಳಿತ ಸೀಲ್ಡೌನ್ ಮಾಡಿದೆ. ಕಾನ್‌ಸ್ಟೆಬಲ್ ಪತ್ನಿಯ ಮನೆ ಯಾಳಹಕ್ಲು ಪ್ರದೇಶದಲ್ಲಿದ್ದು, ಆತ ಯಾಳಹಕ್ಲುವಿಗೆ ಮನೆಗೆ ಬಂದು ಹೋಗಿರುವ ಹಿನ್ನೆಲೆಯಲ್ಲಿ ಈ ಕ್ರಮ. ಯಾಳಹಕ್ಲುವಿನಲ್ಲಿರುವ 50ಕ್ಕೂ ಅಧಿಕ ಮನೆಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಕಾನ್‌ಸ್ಟೆಬಲ್ ಪತ್ನಿಯ ಮನೆಯವರನ್ನೂ ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಯಾಳಹಕ್ಲು ಸಂಪರ್ಕ ಕಲ್ಪಿಸುವ ಎಂ.ಜಿ ರಸ್ತೆ ಯಾಳಹಕ್ಲು ರಸ್ತೆ ಹಾಗೂ ದೇಲಟ್ಟು ಯಾಳಹಕ್ಲು ರಸ್ತೆಯನ್ನು ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಸಂಪೂರ್ಣ ಸೀಲ್ಡೌನ್ ಮಾಡಿದ್ದಾರೆ.

    ಗುಡ್ಡೆಕೊಪ್ಲ ಸೀಲ್‌ಡೌನ್ 4 ಮನೆಗೆ ಸೀಮಿತ
    ಸುರತ್ಕಲ್: ಮಹಿಳೆಗೆ ಕರೊನಾ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಗುಡ್ಡೆಕೊಪ್ಲದ 100 ಮೀ. ಪ್ರದೇಶದಲ್ಲಿ 122 ಮನೆಗಳ ವ್ಯಾಪ್ತಿಯಲ್ಲಿ ಮೇ 14ರಿಂದ ಘೋಷಿಸಿದ್ದ ಸೀಲ್‌ಡೌನನ್ನು ಭಾನುವಾರ ಅವರ ಮನೆಸುತ್ತಲಿನ 4 ಮನೆಗಳಿಗೆ ಮಾತ್ರ ಸೀಮಿತಗೊಳಿಸಿ ಹಾಗೂ ಸುತ್ತಲಿನ ಕೆಲ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಪ್ರಕಟಿಸಿ ಜಿಲ್ಲಾಧಿಕಾರಿ ಭಾನುವಾರ ಆದೇಶ ನೀಡಿದ್ದಾರೆ. ಇದಕ್ಕೆ ಈ ಮಹಿಳೆಯ ಸಂಪರ್ಕಕ್ಕೆ ಬಂದಿದ್ದ ಎಲ್ಲ 12 ಮಂದಿಯ ವರದಿ ನೆಗೆಟಿವ್ ಬಂದಿರುವುದು ಕಾರಣ ಎಂದು ಮೂಲಗಳು ತಿಳಿಸಿವೆ. ಕೇವಲ 4 ಮನೆಗಳ ಪ್ರದೇಶವನ್ನು ಸೀಲ್ ಡೌನ್‌ನಲ್ಲಿ ಉಳಿಸಿಕೊಂಡಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು ತೆಗೆಯುವುದಾದಲ್ಲಿ ಇಡೀ ಪ್ರದೇಶದ ಸೀಲ್‌ಡೌನ್ ತೆಗೆಯಬೇಕು ಎಂದು ಅಧಿಕಾರಿಗಳಲ್ಲಿ ಆಗ್ರಹ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಟ್ರಾವೆಲ್ ಹಿಸ್ಟರಿಯೇ ಇಲ್ಲದೆ ಹಲವಾರು ವರ್ಷದಿಂದ ಮನೆಯಲ್ಲಿಯೇ ಇದ್ದ ಈ ಮಹಿಳೆಗೆ ಸೋಂಕು ಹೇಗೆ ಹರಡಿದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಇದು ಸ್ಥಳೀಯರಲ್ಲಿ ಸಂದೇಹಕ್ಕೂ ಕಾರಣವಾಗಿದೆ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts