More

    ಪರಸ್ಪರ ಅಂತರ ಮರೆತು ಅಗತ್ಯವಸ್ತುಗಳ ಖರೀದಿಗೆ ಮುಗಿಬಿದ್ದ ರಾಯಚೂರು ಜನ

    ರಾಯಚೂರು: ಅಗತ್ಯವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10ರವರೆಗೆ ಅವಕಾಶ ನೀಡಿ ಜನರು ಗುಂಪಾಗಿ ಸೇರದಂತೆ ಸೂಚನೆ ನೀಡಿದ್ದರೂ ಜನರು ಕರೊನಾ ಭೀತಿ ಮರೆತು ಖರೀದಿಗೆ ಮುಗಿಬಿದ್ದಿದ್ದು, ಗುರುವಾರ ಬೆಳಗ್ಗೆ ನಗರದ ಕಿರಾಣಿ ಬಜಾರ್, ಬಟ್ಟೆ ಬಜಾರ್‌ನಲ್ಲಿ ಹೆಚ್ಚಿನ ಜನಸಂದಣಿ ಕಂಡು ಬರುತ್ತಿತ್ತು.

    ಜನರು ತಮ್ಮ ಬಡಾವಣೆಯಲ್ಲೇ ಖರೀದಿ ನಡೆಸುವಂತೆ ತಿಳಿಸಲಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಗರದ ಮಧ್ಯಭಾಗದಲ್ಲಿರುವ ಮಾರುಕಟ್ಟೆಗೆ ಆಗಮಿಸಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಜನರ ಸಂಖ್ಯೆ ಹೆಚ್ಚಾಗಿತ್ತು. ಹಲವರು ಮಾಸ್ಕ್ ಧರಿಸದೆ ಓಡಾಡಿದರು. ಕೇವಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿದ್ದರೂ ತಳ್ಳು ಬಂಡಿಯಲ್ಲಿ ಬಟ್ಟೆ, ಚಪ್ಪಲಿ, ಬಳೆ ಮುಂತಾದ ವಸ್ತುಗಳ ಮಾರಾಟ ನಡೆಯುತ್ತಿತ್ತು. ಯಾರೊಬ್ಬರು ಪರಸ್ಪರ ಅಂತರ ಕಾಪಾಡದೆ ಮುಗಿಬಿದ್ದು ಖರೀದಿ ನಡೆಸುತ್ತಿದ್ದರು. ಹಬ್ಬದ ಖರೀದಿಗೆ ಬಂದ ಜನರನ್ನು ನಿಯಂತ್ರಿಸಲಾಗದೆ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸುವಂತಾಗಿತ್ತು.

    ಬಟ್ಟೆ ಅಂಗಡಿ, ಚಪ್ಪಲಿ ಸೇರಿದಂತೆ ಹಲವು ಅಂಗಡಿಗಳ ಶಟರ್ ಮುಚ್ಚಿದ್ದರೂ ಒಳಗಡೆ 50ಕ್ಕೂ ಹೆಚ್ಚು ಜನರನ್ನು ಸೇರಿಸಿ ವ್ಯಾಪಾರ ನಡೆಸಲಾಗುತ್ತಿತ್ತು. ನಗರಸಭೆ, ಪೊಲೀಸ್‌ರು ದಂಡ ವಿಧಿಸಿದರೂ ಅಂಗಡಿಗಳಲ್ಲಿ ಕದ್ದುಮುಚ್ಚಿ ವ್ಯಾಪಾರ ನಡೆಸಲಾಗುತ್ತಿತ್ತು. ಪ್ರಮುಖ ವೃತ್ತಗಳಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಿ ಹಲವು ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದರೂ ವಾಹನಗಳ ಓಡಾಟ ಹೆಚ್ಚಾಗುತ್ತಿದೆ. ಪೊಲೀಸರು ಅನಗತ್ಯವಾಗಿ ಓಡಾಡುವ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದರೂ ಜನರು ಮೈಮರೆತು ಹೊರಗೆ ಬರುತ್ತಿರುವುದು ಕಂಡು ಬರುತ್ತಿದೆ.

    ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಬಲಿ
    ಮಸ್ಕಿ: ಪಟ್ಟಣದಲ್ಲಿ ಗುರುವಾರ 20 ಜನರಿಗೆ ಕರೊನಾ ಸೋಂಕು ದೃಢ ಪಟ್ಟಿದೆ. ತಾಲೂಕಿನ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಹೆಡ್ ಕಾನ್‌ಸ್ಟೇಬಲ್ ಕರೊನಾ ಸೋಂಕಿನಿಂದ ರಾಯಚೂರಿನ ರಿಮ್ಸ್ನಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ 20 ಜನರಿಗೆ ಕರೊನಾ ಸೋಂಕು ಕಂಡು ಬಂದಿದ್ದು ಅವರನ್ನು ಹೋಂ ಐಸೋಲೇಷನ್ ಮಾಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ಡಾ.ಮೌನೇಶ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts