More

    ಸಮುದಾಯಕ್ಕೂ ಬಂದ ಕರೊನಾ ; ರೋಗ ಲಕ್ಷಣ ಕಾಣಿಸಿದರೆ ಪರೀಕ್ಷೆ ಮಾಡಿಸಲು ಜಿಲ್ಲಾಡಳಿತ ಮನವಿ

    ತುಮಕೂರು: ಕರೊನಾ ಮಹಾಮಾರಿ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರುವ ಅನುಮಾನ ದಟ್ಟವಾಗಿದ್ದು, ರೋಗ ಲಕ್ಷಣ ಕಾಣಿಸಿದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

    ಈವರೆಗೆ ಜಿಲ್ಲೆಯಲ್ಲಿ 94 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಸೋಮವಾರ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬುದು ಸಮಾಧಾನ ತಂದಿದ್ದರೂ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದ, ಪರೀಕ್ಷೆ ನಡೆಸಿರುವ ಬರೋಬ್ಬರಿ 2075 ಜನರ ಪರೀಕ್ಷಾ ವರದಿ ಬರಬೇಕಿದೆ.

    ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ನೀಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಶಿರಾ, ತುಮಕೂರು ಹಾಗೂ ಪಾವಗಡದಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುವ ಅನುಮಾನ ವ್ಯಕ್ತಪಡಿಸಿದ್ದು, ಜನರು ಪರಸ್ಪರ ಅಂತರ, ಮಾಸ್ಕ್ ಧರಿಸಿ ಜಾಗೃತರಾಗುವಂತೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಸಂಭವಿಸಿರುವ 5 ಸಾವಿನ ಪ್ರಕರಣಕ್ಕೆ ತಡವಾಗಿ ಆಸ್ಪತ್ರೆಗೆ ಬಂದಿದ್ದು ಕಾರಣ. ಹಾಗಾಗಿ, ಜನರು ಲಕ್ಷಣಗಳು ಕಾಣಿಸಿದರೇ ಕೂಡಲೇ ಆಸ್ಪತ್ರೆಗೆ ಬರಬೇಕು, ಉಚಿತವಾಗಿ ಪರೀಕ್ಷೆಗೆ ಅವಕಾಶವಿದ್ದು ಬಳಸಿಕೊಳ್ಳಬೇಕು ಎಂದು ಕೋರಿದ್ದಾರೆ.

    ಜಿಲ್ಲೆಯಲ್ಲಿ 20 ಪರೀಕ್ಷಾ ಕೇಂದ್ರ!: ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 20 ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಗುಬ್ಬಿ ತಾಲೂಕು ಎಂಎನ್ ಕೋಟೆ, ಪಾವಗಡ ತಾಲೂಕು ತಿರುಮಣಿ, ವೈ.ಎನ್.ಹೊಸಕೋಟೆ, ಕುಣಿಗಲ್ ತಾಲೂಕು ಅಮೃತೂರು, ಎಡೆಯೂರು, ಹುಲಿಯೂರುದುರ್ಗ, ಕೊರಟಗೆರೆ ತಾಲೂಕು ಎಲೆರಾಂಪುರ, ಅಕ್ಕಿರಾಂಪುರ ಹಾಗೂ ತುಮಕೂರಿನ ಟಿಬಿ ಸೆಂಟರ್, ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಪರೀಕ್ಷಾ ಕೇಂದ್ರಗಳು ಮಂಗಳವಾರದಿಂದ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

    ಜಿಲ್ಲಾ ನ್ಯಾಯಾಲಯ ಸೀಲ್‌ಡೌನ್: ಜಿಲ್ಲಾ ನ್ಯಾಯಾಲಯದ ಮಹಿಳಾ ಸಿಬ್ಬಂದಿಗೆ ಭಾನುವಾರ ಕರೊನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯದ ಕಾರ್ಯಕಲಾಪಗಳು ನಡೆಯಲಿಲ್ಲ. ನ್ಯಾಯಾಲಯ ಸಂಕಿರ್ಣವನ್ನು ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಯಿತು, ಸಾಕಷ್ಟು ಸುರಕ್ಷತಾ ಕ್ರಮಗಳ ಮೂಲಕ ಸೀಮಿತ ಪ್ರಕರಣಗಳ ಕಾರ್ಯಕಲಾಪಗಳು ನ್ಯಾಯಾಲಯದಲ್ಲಿ ನಡೆಯುತ್ತಿದ್ದವು. ಸೀಲ್‌ಡೌನ್ ಹಿನ್ನೆಲೆಯಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

    ವರನ ನೋಡಲು ಬಂದವರಿಗೆ ಪಾಸಿಟಿವ್!: ತುಮಕೂರು ಹೊರವಲಯದ ಬೆಳಗುಂಬದಲ್ಲಿ ವರನನ್ನು ನೋಡಲು ವಾರದ ಹಿಂದೆ ಬಂದಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕುಟುಂಬಕ್ಕೆ ಕರೊನಾ ಪಾಸಿಟಿವ್ ಬಂದಿದ್ದು ಗ್ರಾಮದಲ್ಲಿ ಆತಂಕ ಮೂಡಿಸಿದೆ. ಬೆಳಗುಂಬ ಬಸ್ ನಿಲ್ದಾಣದಲ್ಲಿ ಅಂಗಡಿ ಇಟ್ಟುಕೊಂಡಿರುವ ಕುಟುಂಬಕ್ಕೆ ಭೇಟಿ ನೀಡಿರುವ ಬಗ್ಗೆ ಸೋಂಕಿತ ವ್ಯಕ್ತಿ ಭದ್ರಾವತಿಯಲ್ಲಿ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts