More

    ನಫೆಡ್‌ನಿಂದಲೇ ಕೊಬ್ಬರಿ ಖರೀದಿಸಿ

    ತುಮಕೂರು: ಸತತವಾಗಿ ಕೊಬ್ಬರಿ ಬೆಲೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಕನಿಷ್ಠ 10300ರೂ.ಗೆ
    ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ( ನಫೆಡ್ ) ಮೂಲಕ ಸರ್ಕಾರವೇ ಖರೀದಿ ಮಾಡಬೇಕು ಎಂಬ ಕೂಗು ಎದ್ದಿದೆ.

    ತಿಪಟೂರು ಎಪಿಎಂಸಿ ಆನ್‌ಲೈನ್ ಮಾರುಕಟ್ಟೆಯಲ್ಲಿ ಬುಧವಾರ ಕೊಬ್ಬರಿ ಧಾರಣೆ ಗರಿಷ್ಠ 9515ರೂ. ಕನಿಷ್ಠ 8700ರೂ. ಮಾರಾಟವಾಗಿದೆ. ಕಳೆದೊಂದು ತಿಂಗಳಿನಿಂದ ಸರ್ಕಾರದ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ಹರಾಜು ನಡೆಯುತ್ತಿದ್ದರೂ ಸರ್ಕಾರ ಗಮನ ಹರಿಸದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

    ಸರ್ಕಾರ ಸಹಕಾರ ಇಲಾಖೆ ನಫೆಡ್ ಮೂಲಕ ಕೊಬ್ಬರಿ ಖರೀದಿಸಲು ಅವಕಾಶವಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೆಲೆ 10300ರೂ. ಜತೆಗೆ ರಾಜ್ಯ ಸರ್ಕಾರ ಕೂಡ ಕನಿಷ್ಠ ಪ್ರೋತ್ಸಾಹಧನ ನೀಡಿ ಕೊಬ್ಬರಿ ಖರೀದಿಸಿದರಷ್ಟೇ ರೈತರ ಉಳಿವು. ತೆಂಗು ಬೆಳೆಗಾರರ ಆಕ್ರೋಶದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸ್ಥಳೀಯ ಶಾಸಕ ಬಿ.ಸಿ.ನಾಗೇಶ್ ಕೂಡ ತೋಟಗಾರಿಕೆ ಹಾಗೂ ಸಹಕಾರ ಸಚಿವರಿಗೆ ಪತ್ರ ಬರೆದು ಕೂಡಲೇ ಖರೀದಿ ಕೇಂದ್ರ ಆರಂಭಿಸುವಂತೆ ಮನವಿ ಮಾಡಿದ್ದಾರೆ.

    ಗುರುವಾರ ನಡೆದಿದ್ದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿಯೇ ಸಚಿವ ಮಾಧುಸ್ವಾಮಿ ಈ ಬಗ್ಗೆ ಧ್ವನಿ ಎತ್ತಿ ಮುಖ್ಯ ಕಾರ್ಯದರ್ಶಿ ಮೂಲಕ ಕೇಂದ್ರ ಕೃಷಿ ಸಚಿವಾಲಯಕ್ಕೆ ನಫೆಡ್ ಆರಂಭಕ್ಕೆ ಅನುಮತಿ ಕೋರಿ ಜೂ.1ರಂದು ಕೇಂದ್ರಕ್ಕೆ ಪತ್ರ ಬರೆಸಿದ್ದಾರೆ. ತೋಟಗಾರಿಕೆ ಸಚಿವ ನಾರಾಯಣಗೌಡ ಕೂಡ ಸಹಕಾರ ಸಚಿವರಿಗೆ ಜೂ.2ರಂದು ಪತ್ರ ಬರೆದು ಖರೀದಿ ಕೇಂದ್ರ ಆರಂಭಿಸಲು ಮನವಿ ಮಾಡಿದ್ದು, ನಫೆಡ್ ಮೂಲಕ ಕೊಬ್ಬರಿ ಖರೀದಿಸುವಂತೆ ಹಲವು ರೈತ ಸಂಘಟನೆಗಳು, ರಾಜಕೀಯ ಮುಖಂಡರು, ಪಕ್ಷಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದವು. ಕೊಬ್ಬರಿ ಖರೀದಿ ಕೇಂದ್ರ ಆರಂಭಿಸಲು ಅನುಮತಿ ನೀಡುವಂತೆ ಸಹಕಾರ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

    ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ಅನುಮತಿ ಕೋರಿ ಎಪಿಎಂಸಿ ಸರ್ಕಾರಕ್ಕೆ ಮನವಿ ಮಾಡಿದೆ. ನಫೆಡ್ ಕೂಡ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದು ರೈತರ ಹಿತದೃಷ್ಟಿಯಿಂದ ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿ ಬರಲಿದೆ.
    ನ್ಯಾಮಗೌಡ ಕಾರ್ಯದರ್ಶಿ, ತಿಪಟೂರು ಎಪಿಎಂಸಿ

    ಕಳೆದ ಕ್ಯಾಬಿನೆಟ್‌ನಲ್ಲಿಯೇ ಈ ಬಗ್ಗೆ ಚರ್ಚಿಸಿ ನಫೆಡ್ ಆರಂಭಿಸಲು ಸೂಚಿಸಿದ್ದೇವೆ. ಕೃಷಿ ಸಚಿವಾಲಯಕ್ಕೆ ಪತ್ರ ಬರೆದು ಅನುಮತಿ ಕೋರಲಾಗಿದೆ.
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts