More

    ಕುಮಾರವ್ಯಾಸರ ಹಸ್ತಪ್ರತಿಗೆ ಸಂರಕ್ಷಣೆ ಭಾಗ್ಯ

    ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

    ‘‘ಕುಮಾರವ್ಯಾಸ ಹಾಡಿದನೆಂದರೆ

    ಕಲಿಯುಗ ದ್ವಾಪರವಾಗುವುದು

    ಭಾರತ ಕಣ್ಣಲಿ ಕುಣಿಯುವುದು ! ಮೈಯಲಿ

    ಮಿಂಚಿನ ಹೊಳೆ ತುಳುಕಾಡುವುದು!’

    ಹೀಗೆ ಕವಿ ಸಾರ್ವಭೌಮ, ಮಹಾಕವಿ ಕುಮಾರವ್ಯಾಸರ ಬಗ್ಗೆ ರಾಷ್ಟ್ರಕವಿ ಕುವೆಂಪು ಹಾಡಿ ಹೊಗಳಿದ್ದಾರೆ. ಅಂತಹ ಮಹಾಕವಿ ಕುಮಾರವ್ಯಾಸ 500 ವರ್ಷಗಳ ಹಿಂದೆ ರಚಿಸಿದ್ದ ‘ಕರ್ಣಾಟ ಭಾರತ ಕಥಾಮಂಜರಿ’ ಪ್ರಸಿದ್ಧ ಕೃತಿಯ ಹಸ್ತಪ್ರತಿ ಹಾಳಾಗಿದ್ದು, ಅದರ ಸಂರಕ್ಷಣೆ ಕಾರ್ಯಕ್ಕೆ ಚಾಲನೆ ದೊರೆತಿದೆ.

    ಕೇಂದ್ರ ಸರ್ಕಾರದ ಸಾಂಸ್ಕೃತಿಕ ಇಲಾಖೆಯ ರಾಷ್ಟ್ರೀಯ ಹಸ್ತಪ್ರತಿ ಸಂರಕ್ಷಣಾ ಅಭಿಯಾನದಡಿ ಇಂಡಿಯನ್ ನ್ಯಾಶನಲ್ ಟ್ರಸ್ಟ್ ಆಫ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ (ಇಂಟ್ಯಾಕ್) ಸಂಸ್ಥೆ ವತಿಯಿಂದ ಮಹಾಕೃತಿಯ 100ಕ್ಕೂ ಹೆಚ್ಚು ತಾಳೆಗರಿಗಳ ಸಂರಕ್ಷಣೆ ಕಾರ್ಯ ಆರಂಭಗೊಂಡಿದೆ. ಕುಮಾರವ್ಯಾಸರ ಜನ್ಮಸ್ಥಳ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಈಗಲೂ ಅವರ ವಂಶಸ್ಥರು ವಾಸವಾಗಿದ್ದಾರೆ. ಕುಮಾರವ್ಯಾಸರು ಹದಿನಾಲ್ಕನೇ ಶತಮಾನದಲ್ಲಿ ರಚಿಸಿದ್ದ ‘ಕರ್ಣಾಟ ಭಾರತ ಕಥಾಮಂಜರಿ’ ಕೃತಿಯ ಹಸ್ತಪ್ರತಿಯನ್ನು ಕಾಯ್ದುಕೊಂಡು ಬಂದಿದ್ದಾರಾದರೂ, ತಾಳೆಗರಿಗಳು ಅವಸಾನದಂಚಿನಲ್ಲಿವೆ. ಹಲವು ತಾಳೆಗರಿಗಳು ತುಂಡಾಗಿದ್ದು, ಅಕ್ಷರಗಳು ಕಾಣದಂತಾಗಿವೆ. ತಾಳೆಗರಿಗಳನ್ನು ಸಂಗ್ರಹಿಸಿರುವ ಇಂಟ್ಯಾಕ್ ಸಂಸ್ಥೆಯವರು ಡಿಸೆಂಬರ್ ಒಳಗೆ ಸಂರಕ್ಷಣೆ ಕಾರ್ಯ ಪೂರ್ಣಗೊಳಿಸಿ ವಾಪಸ್ ಕೊಡಲಿದ್ದಾರೆ.

    ಹಸ್ತಪ್ರತಿಯಲ್ಲಿ ಏನೇನಿದೆ?: ‘ಕರ್ಣಾಟ ಭಾರತ ಕಥಾಮಂಜರಿ’ ಕೃತಿಗೆ ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂತಲೂ ಕರೆಯುತ್ತಾರೆ. ಈ ಕೃತಿ ಅರಣ್ಯ ಪರ್ವ, ಸಭಾ ಪರ್ವ, ಉದ್ಯೋಗ ಪರ್ವ ಸೇರಿ ಹತ್ತು ಪರ್ವಗಳನ್ನು ಒಳಗೊಂಡಿದೆ. ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂಬ ಬಿರುದು ಪಡೆದಿರುವ ಕುಮಾರವ್ಯಾಸರ ಅದ್ಭುತ ರೂಪಕಗಳು ಇದರಲ್ಲಿವೆ.

    ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದ ಜತನದಿಂದ ಕಾಪಾಡಿಕೊಂಡು ಬಂದಿರುವ ಕುಮಾರವ್ಯಾಸ ಅವರ ತಾಳೆಗರಿ ಹಸ್ತಪ್ರತಿಗಳು ಹಾಳಾಗುತ್ತಿದೆ. ಅವುಗಳ ಸಂರಕ್ಷಣೆ ಕಾರ್ಯಕ್ಕೆ ಇಂಟ್ಯಾಕ್ ಸಂಸ್ಥೆಯವರು ಮುಂದಾಗಿರುವುದು ಸಂತಸದ ವಿಷಯ.

    | ದತ್ತಾತ್ರೇಯ ಪಾಟೀಲ ಕುಮಾರವ್ಯಾಸರ ವಂಶಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts