More

    ಕೌಡ್ಲೆಯಲ್ಲಿ ಗ್ರಾಮದೇವತೆ ಹಬ್ಬದ ಸಂಭ್ರಮ: ವಿಜಯನಗರ ಸಾಮ್ರಾಜ್ಯದಿಂದ ಗ್ರಾಮಕ್ಕೆ ಬಂದ ದೇವಿಯ ಇತಿಹಾಸವೇ ರೋಚಕ…!

    ಮದ್ದೂರು: ಕೌಂಡಿನ್ಯ ಮಹಾಋಷಿಗಳು ತಪಸ್ಸು ಮಾಡಿದ ಸ್ಥಳವೆಂದು ಐತಿಹ್ಯ ಹೊಂದಿರುವ ಮಂಡ್ಯ ಹಾಗೂ ತುಮಕೂರು ಜಿಲ್ಲೆಯನ್ನು ಒಗ್ಗೂಡಿಸುವ ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಮಾ.29ರಿಂದ 31ರವರೆಗೆ ಶಕ್ತಿದೇವತೆ ಪಟ್ಟಲದಮ್ಮ ಹಾಗೂ ತೊರೆಹಳ್ಳದಮ್ಮನ ಹಬ್ಬ ನಡೆಯಲಿದೆ.
    29ರಂದು ಬಾಯಿಬೀಗ ಮತ್ತು 30ರಂದು ಮುಂಜಾನೆ ಕೊಂಡೋತ್ಸವ, ಸಂಜೆ 4ಗಂಟೆಗೆ ಪೂಜಾ ಕುಣಿತ, ಆರತಿ, ಪಲ್ಲಕ್ಕಿ, ವೀರಗಾಸೆ, ಕೀಲು ಕುದುರೆ, ಗೊಂಬೆಗಳ ನೃತ್ಯ ಮತ್ತು ಜಾತ್ರಾ ಮಹೋತ್ಸವ ಇರಲಿದೆ. 31ರಂದು ದೇವಿಗೆ ಬೆಳ್ಳಿ ಅಲಂಕಾರ ಮತ್ತು ವಿಶೇಷ ಪೂಜೆ ಆಯೋಜಿಸಲಾಗಿದೆ. ಹಬ್ಬದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
    ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಅನುಕೂಲವಾಗಲೆಂದು 29ರಂದು ರಾತ್ರಿ 8ಗಂಟೆಗೆ ಪಟ್ಟಲದಮ್ಮ ಸೇವಾ ಸಮಿತಿ ಹಾಗೂ 30ರಂದು ರಾತ್ರಿ 7ಗಂಟೆಗೆ ಗಟ್ಟಹಳ್ಳಿ ಗ್ರಾಮಸ್ಥರಿಂದ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಇನ್ನು ಏ.14ರಂದು ಬೋರೇದೇವರ ಕೊಂಡೋತ್ಸವ ಮತ್ತು ಹಬ್ಬ ನಡೆಯಲಿದೆ.
    ಪವಿತ್ರ ಸ್ಥಳವಾದ ಗೊಂಡಾರಣ್ಯ: ಸುಮಾರು 300 ವರ್ಷದ ಹಿಂದೆ ಗೊಂಡಾರಣ್ಯವಾಗಿದ್ದ ಈ ಸ್ಥಳದಲ್ಲಿ ಪಟ್ಟಲ್ಲದಮ್ಮ ದೇವಿ ನೆಲೆಸಿದ್ದು, ವರ್ಷಗಳು ಕಳೆದಂತೆ ಪುರಾಣ ಪ್ರಸಿದ್ಧ ಸ್ಥಳವಾಗಿ ಬದಲಾಗಿದೆ. ವಿಜಯನಗರ ಸಾಮ್ರಾಜ್ಯದ ವಿರೂಪಾಕ್ಷ ದೇವಾಯಲದಲ್ಲಿ ಪಾರ್ವತಿ ಅಥವಾ ಪಟ್ಟಲದಮ್ಮ ದೇವಿಗೆ ಮೊದಲ ಪೂಜೆ ನಡೆಯುತ್ತಿತ್ತು. ಆದರೆ 1565ನೇ ಇಸವಿಯಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡಿತ್ತು. ಇದರಿಂದ ಬೇಸತ್ತ ಪಟ್ಟಲದಮ್ಮ ದೇವಿ ತುಂಗಾಭದ್ರ ನದಿಗೆ ಹಾರಿ ನೀರಿನಲ್ಲಿದ್ದ ಬಿಂದಿಗೆಗೆ ಸೇರಿಕೊಂಡಿದ್ದರು. ಅದು ತೇಲುತ್ತಾ ಕಲುಬುರಗಿಯ ನದಿಯಲ್ಲಿ ಬರುತ್ತಿದ್ದ ವೇಳೆ ಬಿಂದಿಗೆ ಹೊಂಬಾಳೆ ಮನೆತನಕ್ಕೆ ಸಿಕ್ಕಿದೆ.
    ಇನ್ನು ಹೊಂಬಾಳೆ ಮನೆತನದವರು ಅಡಿಕೆ ಮಾರಾಟ ಮಾಡಲು ಮೈಸೂರು ಕಡೆಗೆ ತೆರಳಿದ್ದಾರೆ. ಈ ವೇಳೆ ಬಿಂದಿಗೆಯೂ ಜತೆಗಿತ್ತು. ವ್ಯಾಪಾರ ಮಾಡುತ್ತಾ ಬರುತ್ತಿದ್ದ ಇವರು ಕೌಡ್ಲೆ ಗ್ರಾಮಕ್ಕೆ ಬರುವಷ್ಟರಲ್ಲಿ ಸಂಜೆಯಾಗಿದ್ದ ಹಿನ್ನೆಲೆಯಲ್ಲಿ ಅಲ್ಲಿಯೇ ತಂಗುವ ನಿರ್ಧಾರ ಮಾಡಿದ್ದರು. ಅಂತೆಯೇ ಊಟಕ್ಕೆಂದು ಅಡುಗೆ ಮಾಡಲು ಪ್ರಾರಂಭಿಸಿದರು. ಆದರೆ ರಾತ್ರಿ ಪೂರ್ತಿ ಅಕ್ಕಿ ಬೇಯಿಸಿದರೂ ಅನ್ನವಾಗಲೇ ಇಲ್ಲ. ಕೊನೆಗೆ ಎಲ್ಲರೂ ಮಲಗಿದ್ದಾರೆ. ಈ ಸಂದರ್ಭದಲ್ಲಿಯೇ ವ್ಯಾಪಾರಿಗಳಲ್ಲೊಬ್ಬರಿಗೆ ದೇವಿಯ ಪ್ರೇರಣೆಯಾಗಿ ತಾನು ಕೌಡ್ಲೆಯಲ್ಲಿಯೇ ನೆಲೆಸುವುದಾಗಿ ಮತ್ತು ಗುಡಿಕಟ್ಟಲು ಆಜ್ಞೆ ಮಾಡಿದಳು ಎಂಬ ಐತಿಹ್ಯವಿದೆ.
    ಅಂದಿನಿಂದ ಪ್ರತಿ ಶುಕ್ರವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ, ವರ್ಷಕ್ಕೆ ಎರಡು ಬಾರಿ ಅಂದರೆ ವಿಜಯದಶಮಿ ನಂತರ ಮತ್ತು ಯುಗಾದಿ ಹಬ್ಬದ ವಾರಕ್ಕೆ ಮುನ್ನ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತಾ ಬಂದಿದೆ. ಇತ್ತೀಚಿನ ವರ್ಷದಲ್ಲಿ ಪ್ರತಿದಿನವೂ ದೇವಿಗೆ ಪೂಜೆ ನೆರವೇರಲಿದ್ದು, ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಇನ್ನು ಕೌಟುಂಬಿಕ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ದೇವಿಯ ಬಳಿ ಕೇಳಿಕೊಳ್ಳುವ ಸಂಪ್ರದಾಯ ಚಾಲ್ತಿಯಲ್ಲಿದೆ. ತಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆಯೇ ಅಥವಾ ಸಿಗುವುದಿಲ್ಲವೋ ಎಂಬುದನ್ನು ಕೇಳಿದಾಗ ಉತ್ತರ ಸ್ಥಳದಲ್ಲಿಯೇ ಸಿಗಲಿದೆ. ಇದಲ್ಲದೆ ಕವಡೆಗಳ ಮೂಲಕ ಪ್ರಶ್ನೆ ಕೇಳುವ ಹಾಗೂ ತಾಂಬೂಲ ಶಾಸ್ತ್ರವನ್ನು ಕೇಳಬಹುದು. ಹರಕೆ ಹೊತ್ತು ನಿಷ್ಠೆಯಿಂದ ಪಾಲಿಸಿದರೆ ಕಷ್ಟ ದೂರಾಗಿ ನೆಮ್ಮದಿ ಕಾಣಬಹುದೆನ್ನುವ ಅಚಲ ನಂಬಿಕೆ ಇಂದಿಗೂ ಇದೆ.

    ಕೌಡ್ಲೆಯಲ್ಲಿ ಗ್ರಾಮದೇವತೆ ಹಬ್ಬದ ಸಂಭ್ರಮ: ವಿಜಯನಗರ ಸಾಮ್ರಾಜ್ಯದಿಂದ ಗ್ರಾಮಕ್ಕೆ ಬಂದ ದೇವಿಯ ಇತಿಹಾಸವೇ ರೋಚಕ...!

    ದೇವಸ್ಥಾನ ಸುತ್ತುವರೆದಿದ್ದ ಮರ
    ಕುತೂಹಲದ ವಿಷಯವೆಂದರೆ ಹಲವು ವರ್ಷಗಳಿಂದ ದೇವಸ್ಥಾನವನ್ನು ಬೃಹದಾಕಾರದ ಮರ ಸುತ್ತಿಕೊಂಡಿತ್ತು. ಮಾತ್ರಲ್ಲದೆ ಕಟ್ಟಡ ಒಳಗೆ ಹಾಗೂ ಹೊರಗೆ ಬೇರು ಬಿಟ್ಟಿತ್ತು. ಇವುಗಳ ನಡುವೆಯೇ ದೇವಿಯ ವಿಗ್ರಹವಿತ್ತು. ಕಟ್ಟಡ ಶಿಥಿಲಗೊಂಡಿದ್ದ ಹಿನ್ನೆಲೆ ಹೊಸ ಕಟ್ಟಡ ನಿರ್ಮಿಸಲು ಗ್ರಾಮಸ್ಥರು ಮುಂದಾದರೂ ಸಾಧ್ಯವಾಗುತ್ತಿರಲಿಲ್ಲ. ಕೆಲ ವರ್ಷದ ಹಿಂದೆ ಚಿಕ್ಕರಸಿನಕೆರೆಯಿಂದ ಬಸವವನ್ನು ಕರೆಸಿ, ಅದರ ಮೂಲಕ ಪೂಜೆ ಸಲ್ಲಿಸಿ ದೇವಸ್ಥಾನ ಕಟ್ಟುವಂತೆ ಪ್ರೇರಣೆ ನೀಡಲಾಯಿತು. ಸುಮಾರು ಒಂದೂವರೆ ಕೋಟಿ ರೂ ವೆಚ್ಚದಲ್ಲಿ ದ್ರಾವಿಡ ಶೈಲಿಯಲ್ಲಿ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಲಾಗಿದೆ. ಇತ್ತೀಚಿನ ವರ್ಷದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಕಾಮಗಾರಿ ನಡೆಯುತ್ತಿದ್ದು, ಅದು ಪೂರ್ಣಗೊಂಡರೆ ತಾಯಿಯ ಸನ್ನಿದಿಯಲ್ಲಿಯೇ ಶುಭ ಕಾರ್ಯಕ್ರಮಗಳು ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts