More

    ಪುತ್ರನಿಗೆ ಟಿಕೆಟ್ ತಪ್ಪಿಸಿದ್ದು, ಬಿಎಸ್‌ವೈ

    ಚಿತ್ರದುರ್ಗ: ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡದಿದ್ದರೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕ್ಯಾಂಪೇನ್ ಮಾಡೋಲ್ಲ ಎಂಬುದಾಗಿ ವರಿಷ್ಠರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದರಿಂದಲೇ ನನ್ನ ಪುತ್ರ ರಘುಚಂದನ್‌ಗೆ ಟಿಕೆಟ್ ಕೈ ತಪ್ಪಿದ್ದು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ದೂರಿದರು.

    ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ವೆಯಲ್ಲಿ ರಘುಚಂದನ್‌ಗೆ ಶೇ 60ರಷ್ಟು ಬೆಂಬಲ ಸಿಕ್ಕಿತ್ತು. ಹೀಗಾಗಿಯೇ ಸಕ್ರಿಯವಾಗಿ ಕಾರ್ಯಪ್ರವೃತ್ತನಾಗಿದ್ದ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಇರುವ ಸಿಇಸಿ ಕಮಿಟಿಯಲ್ಲೂ ಪುತ್ರನ ಹೆಸರು ಕೇಳಿ ಬಂದಿದ್ದರಿಂದ ಮಾ. 27ಕ್ಕೆ ಫೈನಲ್ ಆಗಿತ್ತು. ಕೊನೆ ಗಳಿಗೆಯಲ್ಲಿ ಬಿಎಸ್‌ವೈ ಅವರಿಂದಾಗಿ ಕೈತಪ್ಪಿದೆ ಎಂದು ಬೇಸರಿಸಿದರು.

    2019ರಲ್ಲೇ ಪುತ್ರನಿಗೆ ಟಿಕೆಟ್ ಕೇಳಿದ್ದೆ. 2024ರಲ್ಲಿ ಕೊಡಿಸುವ ಭರವಸೆ ಬಿಎಸ್‌ವೈ, ಸಂತೋಷ್ ಅವರು ನೀಡಿದ್ದರು. ಹೀಗಾಗಿ ಎ.ನಾರಾಯಣಸ್ವಾಮಿ ಪರ ಕಳೆದ ಬಾರಿ ಹೊಳಲ್ಕೆರೆ ಕ್ಷೇತ್ರದಿಂದ 40 ಸಾವಿರ ಲೀಡ್ ಕೊಟ್ಟಿದ್ದೆ. ಈ ಬಾರಿ ಗೋವಿಂದ ಕಾರಜೋಳ ಕೂಡ ನನ್ನ ಮಗನಿಗೆ ಕ್ಷೇತ್ರದಲ್ಲಿ ಓಡಾಡಲು ಹೇಳಿದ್ದರು. ಸ್ಥಳೀಯರ ಪೈಕಿ ಯಾರಿಗಾದರೂ ನೀಡುವಂತೆ ಸಭೆಯಲ್ಲೂ ಧ್ವನಿ ಎತ್ತಿದ್ದೆ. ಸರ್ವೆಯಲ್ಲಿ ಬಂದವರಿಗೆ ಟಿಕೆಟ್ ನೀಡುವ ಬದಲು ತಪ್ಪಿಸಿದ್ದು, ಸರಿಯೇ ಎಂದು ಪ್ರಶ್ನಿಸಿದರು.

    ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದ ವೇಳೆ ಅವರ ಸಮಾಜದ ನಾಯಕರು ಮುಂದೆ ಬರಲಿಲ್ಲ. ಪುತ್ರ ಬಿ.ವೈ.ರಾಘವೇಂದ್ರ ಬಿಜೆಪಿಯಲ್ಲೇ ಉಳಿದರು. ನಾನು 6 ತಿಂಗಳ ಮುಂಚೆಯೇ ರಾಜೀನಾಮೆ ನೀಡಿದ್ದೆ. 2008ರಲ್ಲಿ 110 ಸ್ಥಾನ ಬಿಜೆಪಿ ಗೆದ್ದಾಗ ನಮ್ಮ ಭೋವಿ ಸಮುದಾಯದ ಮುಖಂಡರಾದ ಶಿವರಾಜ್ ತಂಗಡಗಿ, ವೆಂಕಟರಮಣಪ್ಪ, ಗೂಳಿಹಟ್ಟಿ ಡಿ.ಶೇಖರ್ ತ್ಯಾಗ ಮಾಡಿದ್ದರು. ವಡ್ಡರ ಬೆಂಬಲದಿಂದಲೂ ಸಿಎಂ ಆದ ಅವರು ಮೂರು ಮಂದಿಯನ್ನು ಸಂಪುಟದಿಂದ ತೆಗೆದು ಅನ್ಯಾಯ ಮಾಡಿದ್ದರು. ಆದರೂ ಅವರ ಆಪ್ತ ಬೆಂಬಲಿಗನಾಗಿಯೇ ದುಡಿದಿದ್ದೇನೆ. ಈಗ ನನಗೆ ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ ಎಂದು ಅಸಮಧಾನ ಹೊರಹಾಕಿದರು.

    ದೇಶಕ್ಕೆ ಮೋದಿ, ರಾಜ್ಯಕ್ಕೆ ಬಿಎಸ್‌ವೈ ಅಗತ್ಯವೆಂದೇ ಈಗಲೂ ಭಾವಿಸಿದ್ದೇನೆ. ಬಸವರಾಜ ಬೊಮ್ಮಾಯಿ ಸಂಪುಟದಲ್ಲೂ ನನಗೆ ಅನ್ಯಾಯವಾಗಲು ಕಾರಣರಾದರು. ಹಗಲಿರುಳು ಶ್ರಮಿಸಿದ್ದಕ್ಕೆ ಮರೆಯದ ಕಾಣಿಕೆ ನೀಡಿದ್ದಾರೆ ಎಂದು ಬೇಸರಿಸಿದರು.

    ದುರ್ಗದಲ್ಲೊಬ್ಬ ಮಹಾನ್ ನಾಯಕ ಇದ್ದು, ಆತನದು ಜಾಸ್ತಿಯಾಗಿದೆ. ಸೋತವನನ್ನು ಬಿಜೆಪಿಗೆ ಕರೆತಂದು ಈ ಹಿಂದೆ ಎಂಎಲ್ಸಿ ಮಾಡಿಸಲು ಶ್ರಮಿಸಿದ್ದೇವೆ. ನಾನೂ ನಂಬಿದವರಿಗೆ ಎಂದಿಗೂ ಮೋಸ ಮಾಡಿಲ್ಲ. ಈಗಾಗಲೇ ಜನರೇ ತಕ್ಕ ಶಾಸ್ತಿ ಮಾಡಿದ್ದಾರೆ. ಮುಂದೆಯೂ ಆಗಲಿದ್ದು, ಕಾದು ನೋಡಿ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೆಸರು ಪ್ರಸ್ತಾಪಿಸದೆ ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts