ನವದೆಹಲಿ: ಮುಂದಿನ ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಮಂಗಳವಾರ 43 ಅಭ್ಯರ್ಥಿಗಳಿರುವ ಎರಡನೇ ಪಟ್ಟಿಯನ್ನು ರಿಲೀಸ್ ಮಾಡಿದೆ. ಆದರೆ, ಎರಡನೇ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನದ ಕಟ್ಟೆ ಹೊಡೆದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಭರತ್‌ಸಿನ್ಹಾ ಸೋಲಂಕಿ ಲೋಕಸಭೆ ಚುನಾವಣೆಯಿಂದ ದೂರು ಉಳಿಯುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಭರತ್‌ಸಿನ್ಹಾ ಸೋಲಂಕಿ, ನನಗೆ ಮತ್ತು ನನ್ನ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷವು ಸಾಕಷ್ಟು ನೀಡಿದೆ. ಪ್ರಸ್ತುತ ಜಮ್ಮು-ಕಾಶ್ಮೀರದ ಎಐಸಿಸಿ ಉಸ್ತುವಾರಿ ಹಾಗೂ ಗುಜರಾತ್‌ನಲ್ಲಿ ಪಕ್ಷದ ಪರವಾಗಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಸಾಧ್ಯವಾಗುವಂತೆ, ಈ ಭಾರಿಯ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಕೇಂದ್ರ ನಾಯಕತ್ವದ ಯಾವುದೇ ನಿರ್ಧಾರವನ್ನು ನಾನು ಸ್ವೀಕರಿಸುತ್ತೇನೆ ಮತ್ತು ಪಾಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ವ್ಯಕ್ತಿಯೋರ್ವನ ಹುಚ್ಚಾಟ; ಪರದಾಡಿದ ಪ್ರಯಾಣಿಕರು
2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಗುಜರಾತ್ನ ಆನಂದ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭರತ್‌ಸಿನ್ಹಾ ಸೋಲಂಕಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸೋತಿದ್ದರು. ಕಳೆದ ಕೆಲ ದಿನಗಳ ಹಿಂದೆ ಗುಜರಾತ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಜಗದೀಶ್ ಠಾಕೋರ್ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದ ಬಳಿಕ ಮತ್ತೋರ್ವ ನಾಯಕ ಭರತ್‌ಸಿನ್ಹಾ ಸೋಲಂಕಿ ತಮ್ಮ ನಿರ್ಧಾರ ಪ್ರಕಟಿಸಿರುವುದು ಕಾಂಗ್ರೆಸ್ ಹೈಕಮಾಂಡ್ಗೆ ನುಂಗಲಾರದ ತುತ್ತಾಗಿದೆ.
ಕಳೆದ ಕೆಲ ದಿನಗಳಿಂದ ಗುಜರಾತ್‌ನಲ್ಲಿ ಕಾಂಗ್ರೆಸ್ನ ಹಾಲಿ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವ ನಡುವೆಯೇ ಈ ಬೆಳವಣಿಗೆ ಕೈ ಪಾಳಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರ ನಡುವೆಯೇ ಭರತ್‌ಸಿನ್ಹಾ ಸೋಲಂಕಿ ಅವರ ನಡೆ ಕಾಂಗ್ರೆಸ್ ಪಕ್ಷವನ್ನು ಚಿಂತೆಗೆ ದೂಡಿದ್ದು, ಇದನ್ನು ನಾಯಕರು ಹೇಗೆ ಸಂಭಾಲಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.