More

    ಕೈ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಗೆಲುವು ನಿಶ್ಚಿತ

    ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ನೀಡಿದ್ದ ೫ ಗ್ಯಾರಂಟಿಗಳು ಪ್ರತಿ ಮನೆಗಳನ್ನು ತಲುಪಿವೆ. ಈ ಬಾರಿ ಕಾಂಗ್ರೆಸ್ ಪರವಾಗಿ ಮತದಾರರು ಮತದಾನ ಮಾಡಲಿದ್ದು, ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್ ವಿಶ್ವಾಸ ವ್ಯಕ್ತಪಡಿಸಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಯಪ್ರಕಾಶ್ ಹೆಗ್ಡೆಯವರು ಈ ಹಿಂದೆ ೨೦ ತಿಂಗಳು ಸಂಸದರಾಗಿದ್ದಾಗ ಕಡೂರು, ಮೂಡಿಗೆರೆ, ಬಿಸಿ ರೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಮಂಜೂರಾತಿಗೆ ಕಾರಣರಾಗಿದ್ದಾರೆ. ಅಡಕೆ ಆಮದು ಶುಲ್ಕ ಹೆಚ್ಚಿಸಿ ಬೆಳೆಗಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಜಯಪ್ರಕಾಶ್ ಹೆಗ್ಡೆ ಮಂಜೂರು ಮಾಡಿದ್ದ ರಸ್ತೆ ಕಾಮಗಾರಿಗಳು ಶೋಭಾಕರಂದ್ಲಾಜೆ ಕಾಲದಲ್ಲಿ ಅಪೂರ್ಣವಾಗಿವೆ. ಅವು ಪೂರ್ಣಗೊಳ್ಳಲು ಮತ್ತೊಮ್ಮೆ ಜಯಪ್ರಕಾಶ್ ಹೆಗ್ಡೆ ಸಂಸದರಾಗಿ ಆಯ್ಕೆಯಾಗಬೇಕು ಎಂದು ಹೇಳಿದರು.
    ಕಾಂಗ್ರೆಸ್ ಭರವಸೆ ನೀಡಿದ್ದ ೫ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಸಂಪೂರ್ಣ ಜಾರಿ ಮಾಡಿದೆ. ಎಐಸಿಸಿಯಿಂದ ಲೋಕಸಭಾ ಚುನಾವಣೆ ಭರವಸೆಯಾಗಿ ಪಂಚನ್ಯಾಯ ಯೋಜನೆ ಘೋಷಿಸಲಾಗಿದೆ. ಯುವ ನ್ಯಾಯ, ಮಹಿಳಾ ನ್ಯಾಯ ಯೊಜನೆಯಲ್ಲಿ ಪ್ರತಿ ವರ್ಷ ೧ ಲಕ್ಷ ರೂ. ನೀಡಲಾಗುವುದು. ರೈತ ನ್ಯಾಯದಲ್ಲಿ ರೈತ ಸಮುದಾಯದ ಸಾಲಮನ್ನಾ, ಶ್ರಮಿಕ ನ್ಯಾಯದಲ್ಲಿ ದಿನಕ್ಕೆ ಕೂಲಿ ೪೦೦ ರೂ. ನಿಗದಿ ಮಾಡಲಾಗುವುದು. ಜಾತಿಗಣತಿ ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ ಎಂದು ತಿಳಿಸಿದರು.
    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಚುನಾವಣೆಯಲ್ಲಿ ಜಾತಿ, ಧರ್ಮದ ನಡುವೆ ವಿಷಬೀಜ ಬಿತ್ತುತ್ತಿದೆ. ಸರ್ಕಾರದ ಸ್ವಾಯುತ್ತ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡು ಅಧಿಕಾರ ಹಿಡಿಯಲು ಹೊರಟಿದೆ ಎಂದು ಆರೋಪಿಸಿದರು.
    ಲೋಕಸಭೆ ಚುನಾವಣೆ ಸಂವಿಧಾನದ ಅಳಿವು ಉಳಿವಿನ ಮಧ್ಯೆ ನಡೆಯುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತೇವೆ ಎನ್ನುವವರ ವಿರುದ್ಧ ಪ್ರಬುದ್ಧ ಮತದಾರರು ಈ ಬಾರಿ ಮತ ಚಲಾಯಿಸಲಿದ್ದಾರೆ. ಬಿಜೆಪಿ ಆಂತರಿಕ ಸರ್ವೆ ೨೦೦ ಸ್ಥಾನ ಗೆಲ್ಲಲಿದೆ ಎಂದು ಹೇಳುತ್ತಿದ್ದರೂ ೪೦೦ ಸ್ಥಾನ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಈ ಹಿಂದೆ ಬಿಜೆಪಿ ನೀಡಿದ್ದ ೨ ಕೋಟಿ ಉದ್ಯೋಗ, ಪ್ರತಿ ಖಾತೆಗೆ ೧೫ ಲಕ್ಷ ರೂ.ಹಣ, ಕಪ್ಪು ಹಣ ವಾಪಸ್ಸು ತರುವುದು ಈ ಎಲ್ಲ ಭರವಸೆಗಳು ಹುಸಿಯಾಗಿವೆ. ಈ ಹಿನ್ನೆಲೆಯಲ್ಲಿ ಮತದಾರರು ಈ ಬಾರಿ ಬಿಜೆಪಿಯನ್ನು ಕೇಂದ್ರದಿಂದ ಕಿತ್ತೊಗೆಯಲಿದ್ದಾರೆ ಎಂದರು.
    ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಸತೀಶ್, ಗಂಗಾಧರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts