More

    ಕಾಲೇಜು ವಿದ್ಯಾರ್ಥಿಗಳಿಗೆ ಬೇಕು ಬಿಸಿಎಂ ಹಾಸ್ಟೆಲ್

    ಭಾರತಿ ಓ.ಚಿತ್ತಯ್ಯ ಪರಶುರಾಮಪುರ: ಹೋಬಳಿ ಕೇಂದ್ರದಲ್ಲಿರುವ ಹತ್ತಾರು ಶಾಲಾ, ಕಾಲೇಜುಗಳಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಅನುಕೂಲಕ್ಕೆ ಬಿಸಿಎಂ ಇಲಾಖೆ ಕಾಲೇಜು ಹಂತದ ಹಾಸ್ಟೆಲ್ ತೆರೆಯಬೇಕೆಂಬ ಕೂಗು ಬಲವಾಗಿ ಕೇಳಿಬಂದಿದೆ.

    ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್‌ಸ್ಕೂಲ್‌ನ ಪಿಯು ವಿಭಾಗ, ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ವೇದಾವತಿ ಬಿಇಡಿ ಕಾಲೇಜು, ಶಾರದಾ-ನಂದಗೋಕುಲ ಐಟಿಐ ಕಾಲೇಜು, ಸರ್ವೋದಯ ಪಿಯು ಕಾಲೇಜು ಹೀಗೆ ಹತ್ತು ಹಲವು ಶಾಲಾ-ಕಾಲೇಜುಗಳಿವೆ.

    ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 40-50 ಸೀಟುಗಳಿಗೆ ಸೀಮಿತವಾಗಿ ಒಂದು ಮೆಟ್ರಿಕ್‌ಪೂರ್ವ, ಒಂದು ಕಾಲೇಜು ಹಾಸ್ಟೆಲ್ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅದು ಬಿಟ್ಟರೆ ಬಿಸಿಎಂ ಹಾಸ್ಟೆಲ್‌ಗಳು ಇಲ್ಲ.

    ಹೋಬಳಿ ಕೇಂದ್ರದಲ್ಲಿ ಕಾಲೇಜು ಹಂತದ ವಿದ್ಯಾರ್ಥಿಗಳ ಸಂಖ್ಯೆ 700ಕ್ಕೂ ಹೆಚ್ಚಿದೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈವರೆಗೂ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಬಿಸಿಎಂ ಹಾಸ್ಟೆಲ್ ಮಂಜೂರಾಗಿಲ್ಲ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶಗಳ ಕಡೆಗೆ ತೆರಳಬೇಕಾದ ಸ್ಥಿತಿ ಇದೆ.

    ಗ್ರಾಮದ ಚಳ್ಳಕೆರೆ ರಸ್ತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿದ್ದು, ಊರಿಂದ 2 ಕಿ.ಮೀ. ದೂರವಿದೆ. ವಿದ್ಯಾರ್ಥಿಗಳ ಸಂಖ್ಯೆ 168 ಇದೆ. ಪದವಿ ಕಾಲೇಜಿಗೆ ದಾಖಲಾಗುವವರ ಸಂಖ್ಯೆ ಕಡಿಮೆ. ಗ್ರಾಮದಲ್ಲಿ ಬಿಸಿಎಂ ಹಾಸ್ಟೆಲ್ ವ್ಯವಸ್ಥೆ ಇಲ್ಲದಿರುವುದೆ ಇದಕ್ಕೆ ಕಾರಣ. ಹೀಗಾಗಿ ನಗರ ಪ್ರದೇಶಗಳಿಗೆ ಮುಖ ಮಾಡುತ್ತಿದ್ದಾರೆ.

    ಗ್ರಾಮದ ಸರ್ಕಾರಿ ಐಟಿಐ ಕಾಲೇಜಿನಲ್ಲಿ 50, ಶಾರದಾ -ನಂದಗೋಕುಲ ಐಟಿಐ ಕಾಲೇಜಿನಲ್ಲಿ 100, ವೇದಾವತಿ ಬಿಇಡಿ ಕಾಲೇಜಿನಲ್ಲಿ 40, ಪದವಿ ಕಾಲೇಜಿನಲ್ಲಿ 200, ಸರ್ಕಾರಿ ಮತ್ತು ಖಾಸಗಿ ಪಿಯು ಸೇರಿ 300, ಹೋಬಳಿ ವ್ಯಾಪ್ತಿಯ ಎಸ್.ದುರ್ಗ, ಟಿ.ಎನ್.ಕೋಟೆ ಗ್ರಾಮಗಳ ಪಿಯು ಕಾಲೇಜಿನಲ್ಲಿ 100 ವಿದ್ಯಾರ್ಥಿಗಳಿದ್ದಾರೆ.

    ಅವರಿಗಾಗಿ ಒಂದು ಬಿಸಿಎಂ ಹಾಸ್ಟೆಲ್ ಮಂಜೂರು ಮಾಡದೆ ಸರ್ಕಾರ ಗಡಿವಾಡ ಕನ್ನಡಿಗರ ಬಗ್ಗೆ ತಾರತಮ್ಯ ಅನುಸರಿಸುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.

    ಹೋಬಳಿಯ 52 ಹಳ್ಳಿಗಳು ಆಂಧ್ರ ಗಡಿಯಂಚಿನಲ್ಲಿವೆ. ಆ ಗ್ರಾಮಗಳ ಕನ್ನಡಿಗರ ಮಕ್ಕಳು ಉನ್ನತ ವ್ಯಾಸಂಗಕ್ಕೆ ನಗರಗಳಿಗೆ ತೆರಳಲು ಆರ್ಥಿಕ ಹೊರೆ ಎನ್ನುವ ಕಾರಣಕ್ಕೆ ಪಿಯು ವರೆಗೆ ಓದಿ ಶಿಕ್ಷಣ ಮೊಟುಕುಗೊಳಿಸುವ ದುಸ್ಥಿತಿಯಿದೆ.

    ಹೋಬಳಿ ಕೇಂದ್ರದಲ್ಲಿ ಬಾಲಕ, ಬಾಲಕಿಯರಿಗೆ ಬಿಸಿಎಂ ಹಾಸ್ಟೆಲ್‌ಗಳನ್ನು ತೆರೆಯಬೇಕು ಎಂಬುದು ಗ್ರಾಮದ ವಿವಿಧ ಸಂಘಟನೆಗಳ ಮುಖಂಡರಾದ ಹೊರಕೇರಿ ಕೇಶವ, ತಿಪ್ಪೇರುದ್ರಪ್ಪ, ಬೊಮ್ಮಯ್ಯ, ಮುತ್ತಯ್ಯ, ಶಿವಲಿಂಗಪ್ಪ, ರಂಗನಾಥ, ಸಾಕಮ್ಮ, ಚಿತ್ರಲಿಂಗಪ್ಪ, ಭಾರತಿ, ದೇವಿಕಾ, ಭೂಮಿಕಾ, ತಿಮ್ಮಯ್ಯ, ರಾಜು, ನಾಗರಾಜು, ರಾಮಣ್ಣ, ರಾಜಣ್ಣ, ವೆಂಕಟೇಶ, ಅನ್ವರ್ ಬಾಷಾ ಒತ್ತಾಯ.

    ಪರಶುರಾಮಪುರ ಹೋಬಳಿ ವ್ಯಾಪ್ತಿಯಲ್ಲಿ ಅಹಿಂದ ಸಮುದಾಯಗಳೇ ಹೆಚ್ಚು. ಈ ವರ್ಗದ ವಿದ್ಯಾರ್ಥಿಗಳ ಅನುಕೂಲಕ್ಕೆ ಬಿಸಿಎಂ ಕಾಲೇಜು ಹಾಸ್ಟಲ್ ಮಂಜೂರು ಮಾಡಬೇಕು. ಹಾಸ್ಟೆಲ್ ವ್ಯವಸ್ಥೆ ಇಲ್ಲದೆ ಕಳೆದ ಮೂರು ವರ್ಷಗಳಿಂದ ಪದವಿ ಕೋರ್ಸ್‌ಗಳಿಗೆ ದಾಖಲಾತಿ ಇಳಿಕೆಯಾಗಿದೆ. ಕಾಲೇಜು ಹಾಸ್ಟೆಲ್ ಮಂಜೂರು ಮಾಡಿದರೆ ಅನುಕೂಲ.
    ಎಂ.ಬಿ.ಧನಂಜಯ, ಪ್ರಾಚಾರ್ಯರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪರಶುರಾಮಪುರ

    ಪರಶುರಾಮಪುರ ಹೋಬಳಿ ಕೇಂದ್ರದಲ್ಲಿ ಕಾಲೇಜು ಹಂತದ ಬಿಸಿಎಂ ಹಾಸ್ಟೆಲ್‌ಗಳಿಲ್ಲ. ಗ್ರಾಮಸ್ಥರ ಮನವಿಯಂತೆ ಅಲ್ಲಿ ವಿವಿಧ ಕಾಲೆಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಿಸಿಎಂ ವಿದ್ಯಾರ್ಥಿಗಳ ಮಾಹಿತಿ ಪಡೆದು ಹಾಸ್ಟೆಲ್ ಮಂಜೂರಾತಿಗೆ ಬಿಸಿಎಂ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಾರ್ವಜನಿಕರ ಮನವಿ ಪತ್ರದ ಜತೆ ವರದಿ ಕಳುಹಿಸಿಕೊಡಲಾಗುವುದು.
    ನಸ್ರತ್ ಪರ್ವೀನ್, ಬಿಸಿಎಂ ಅಧಿಕಾರಿ, ಚಳ್ಳಕೆರೆ ತಾಲೂಕು

    ಹಿಂದುಳಿದ ವರ್ಗದವರ ಮಕ್ಕಳಿಗೆ ಪಿಯುಸಿ, ಪದವಿ ಹಂತದ ಶಿಕ್ಷಣ ಪಡೆಯಲು ಹೋಬಳಿ ಕೇಂದ್ರದಲ್ಲಿ ಒಂದು ಬಿಸಿಎಂ ಹಾಸ್ಟೆಲ್ ಅಗತ್ಯವಿದೆ. ಸರ್ಕಾರ ಕೂಡಲೇ ಆರಂಭಿಸಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
    ವೆಂಕಟೇಶ್, ಜಾಜೂರು ಗ್ರಾಮಸ್ಥ

    ಹೋಬಳಿ ವ್ಯಾಪ್ತಿಯ 52 ಹಳ್ಳಿಗಳ ಹಿಂದುಳಿದ ವರ್ಗಗಳ ಮಕ್ಕಳು ದೂರದ ಚಳ್ಳಕೆರೆ, ಚಿತ್ರದುರ್ಗ ನಗರಗಳಿಗೆ ತೆರಳಿ ಶಿಕ್ಷಣ ಪಡೆಯಲು ಕಷ್ಟ ಸಾಧ್ಯ. ಆದ್ದರಿಂದ ಸರ್ಕಾರ ಕೂಡಲೇ ಪರಶುರಾಮಪುರದಲ್ಲಿ ಬಿಸಿಎಂ ಹಾಸ್ಟೆಲ್ ಆರಂಭಿಸಬೇಕು.
    ಜಿ.ಯು.ಉದಯಕುಮಾರ, ಎಪಿಎಂಸಿ ಮಾಜಿ ಅಧ್ಯಕ್ಷ, ಕ್ಯಾದಿಗುಂಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts