More

    ತುಕ್ಕು ಹಿಡಿದ ಕೋಲ್ಡ್‌ ಸ್ಟೋರೇಜ್‌-ಲಕ್ಷಾಂತರ ರೂ. ಪೋಲು

    ಕಾರವಾರ:ಮೀನುಗಾರರ ಅನುಕೂಲಕ್ಕಾಗಿ ಕೆಎಫ್‌ಡಿಸಿ ಇಲ್ಲಿನ ಮೀನು ಮಾರುಕಟ್ಟೆಯಲ್ಲಿ ನಿರ್ಮಿಸಿದ ಶೀಥಲೀಕರಣ ಘಟಕ(ಕೋಲ್ಡ್ ಸ್ಟೋರೇಜ್) ಬಳಕೆಯಿಲ್ಲದೇ ಹಾಳಾಗುತ್ತಿದೆ. ಸರ್ಕಾರ ಮಾಡಿದ ಲಕ್ಷಾಂತರ ರೂ. ಖರ್ಚು ವ್ಯರ್ಥವಾಗಿದೆ.
    2018 ಸಾಲಿನ ಬಜೆಟ್‌ನಲ್ಲಿ ಮತ್ಸ್ಯ ಜೋಪಾಸನೆ ಎಂಬ ಯೋಜನೆ ಜಾರಿಗೆ ತರಲಾಯಿತು. ರಾಜ್ಯದ 10 ಮೀನು ಮಾರುಕಟ್ಟೆಗಳಲ್ಲಿ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲು 1 ಕೋಟಿ ರೂ. ಮೀಸಲಿಡಲಾಗಿತ್ತು.

    ಈ ಯೋಜನೆ ಜಾರಿಗೆ ಮೀನುಗಾರಿಕೆ ಇಲಾಖೆಯು 2018 ರ ಸೆಪ್ಟೆಂಬರ್‌ನಲ್ಲಿ ತಾತ್ವಿಕ ಅನುಮೋದನೆ ನೀಡಿ,ರೂಪುರೇಷೆಗಳನ್ನು ಹೊರಡಿಸಿತ್ತು. ಅದರನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿಯನ್ನು ಮಂಗಳೂರಿನ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ(ಕೆಎಫ್‌ಡಿಸಿ)ಕ್ಕೆ ನೀಡಿತ್ತು.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕಾರವಾರಕ್ಕೆ ತಲಾ 2 ಟನ್ ಸಾಮರ್ಥ್ಯದ 2 ರಿಂದ 5 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶದ ಶೀಥಲೀಕರಣ ಘಟಕವನ್ನು ಮಂಜೂರು ಮಾಡಲಾಗಿತ್ತು. ಆದರೆ, ಶಿರಸಿ ಮೀನು ಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಜಾಗ ಸಿಗದ ಕಾರಣ ಅದನ್ನೂ ಕಾರವಾರಕ್ಕೇ ಸ್ಥಳಾಂತರಿಸಲಾಯಿತು.

    ಇದನ್ನೂ ಓದಿ:ಬರೋಬ್ಬರಿ 10 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ


    2020-21 ರಲ್ಲಿ ಕಾರವಾರದಲ್ಲಿ ಒಟ್ಟು 20 ಲಕ್ಷ ರೂ. ವೆಚ್ಚದಲ್ಲಿ 4 ಟನ್ ಸಾಮರ್ಥ್ಯದ ಎರಡು ಶೀಥಲೀಕರಣ ಘಟಕಗಳನ್ನು ಕೆಎಫ್‌ಡಿಸಿ ಅಳವಡಿಸಿದೆ. ಮೀನು ಮಾರುಕಟ್ಟೆ ಕಾರವಾರ ನಗರಸಭೆಯಲ್ಲಿರುವುದರಿಂದ ಶೀಥಲೀಕರಣ ಘಟಕದ ನಿರ್ವಹಣೆಯನ್ನು ನಗರಸಭೆಗೆ ಕೆಎಫ್‌ಡಿಸಿ ಹಸ್ತಾಂತರಿಸಿದೆ.

    ಮಾರಾಟವಾಗದೇ ಉಳಿದ ಮೀನನ್ನು ಮೀನುಗಾರ ಮಹಿಳೆಯರು ಈ ಘಟಕದಲ್ಲಿ ಇಟ್ಟು ತೆರಳಬಹುದಾದ ವ್ಯವಸ್ಥೆ ಇದೆ. ಆದರೆ, ಇದುವರೆಗೂ ಕೋಲ್ಡ್ ಸ್ಟೋರೇಜ್ ಬಳಕೆಯಾಗುತ್ತಿಲ್ಲ.

    20 ಲಕ್ಷ ರೂ. ಘಟಕ ಒಂದು ದಿನವೂ ತೆರೆಯದೇ ತುಕ್ಕು ಹಿಡಿಯಲಾರಂಭಿಸಿದೆ. ಮೀನುಗಾರ ಮಹಿಳೆಯರು ಐಸ್ ಖರೀದಿ ಮಾಡಿ ಅದನ್ನೇ ಹಾಕಿಡುತ್ತಾರೆ. ಖಾಲಿಯಾಗದೇ ಉಳಿದ ಮೀನು ಇಡಲು ಇದುವರೆಗೂ ಹರಸಾಹಸಪಡುತ್ತಿದ್ದಾರೆ.
    ವಿದ್ಯುತ್ ಬಿಲ್ ಜಾಸ್ತಿ:
    ಕೋಲ್ಡ್ ಸ್ಟೋರೇಜ್‌ನಲ್ಲಿ ಇಡುವಷ್ಟು ಮೀನು ಕಾರವಾರ ಮೀನು ಮಾರುಕಟ್ಟೆಯಲ್ಲಿ ಇರುವುದಿಲ್ಲ. ಅಲ್ಲದೆ, ಕೋಲ್ಡ್ ಸ್ಟೋರೇಜ್‌ನಿಂದ ವಿದ್ಯುತ್ ಬಿಲ್ ಅಧಿಕ ಬರುತ್ತದೆ. ಅದರಿಂದ ಆದಾಯ ಇರುವುದಿಲ್ಲ.

    ಇದರಿಂದ ಅದರ ನಿರ್ವಹಣೆ ನಗರಸಭೆಯಿಂದ ಸಾಧ್ಯವಿಲ್ಲ. ಕೆಎಫ್‌ಡಿಸಿಗೇ ವಹಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೀನುಗಾರರ ಮುಖಂಡ ಹಾಗೂ ಎಂಎಲ್‌ಸಿ ಗಣಪತಿ ಉಳ್ವೇಕರ್ `ವಿಜಯವಾಣಿ’ಗೆ ತಿಳಿಸಿದ್ದಾರೆ.



    ಮೀನು ಮಾರುಕಟ್ಟೆಯ ಕೋಲ್ಡ್ ಸ್ಟೋರೇಜ್ ಬಳಕೆಯಾಗದೇ ಇರುವ ಬಗ್ಗೆ ಮಾಹಿತಿ ಇಲ್ಲ. ಪರಿಶೀಲಿಸಿ ಕ್ರಮ ವಹಿಸಲಾಗುವುದು.
    ಉದಯಕುಮಾರ ಶೆಟ್ಟಿ
    ನಗರಸಭೆ ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts