More

    ಶೀತ, ನೆಗಡಿ, ಜ್ವರ ಹೆಚ್ಚಳ: ನಿರಂತರ ಮಳೆಯಿಂದ ಸೋಂಕು ರೋಗಗಳ ಏರಿಕೆ

    ಬೆಂಗಳೂರು: ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಶೀತ, ನೆಗಡಿ, ಜ್ವರ ಸೇರಿ ಸೋಂಕು ರೋಗ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ರಾಜ್ಯದ ಆಸ್ಪತ್ರೆಗಳು ಹಾಗೂ ಕ್ಲಿನಿಕ್​ಗಳು ರೋಗಿಗಳಿಂದ ತುಂಬಿತುಳುಕುತ್ತಿವೆ. ಕಳೆದ ಒಂದು ತಿಂಗಳಲ್ಲಿ 1,589 ಡೆಂಘ, 311 ಚಿಕೂನ್ ಗುನ್ಯಾ, 58 ಎಚ್1ಎನ್1 ಪ್ರಕರಣಗಳು ವರದಿಯಾಗಿವೆ. ಇದರ ಜತೆಗೆ ಮಲೇರಿಯಾ, ಟೈಫಾಯಿಡ್, ವೈರಲ್ ಹೆಪಟೈಟಿಸ್, ಗಂಟಲು ಬೇನೆ ಸೇರಿ ಸಾವಿರಾರು ಶೀತಜ್ವರ ಪ್ರಕರಣಗಳು ವರದಿಯಾಗುತ್ತಿವೆ. ನೆಗಡಿ, ಕೆಮ್ಮು, ತಲೆನೋವು, ವಾಂತಿ, ತೀವ್ರ ಜ್ವರ, ವಿಪರೀತ ಮೈ-ಕೈ ನೋವು, ಉಸಿರಾಟದ ತೊಂದರೆ ಸೇರಿ ನಾನಾ ಸಮಸ್ಯೆಗಳಿಂದ ಜನರು ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.

    ಡೆಂಘ ಹೆಚ್ಚಳ: ಕಳೆದ ಎರಡು ವರ್ಷಗಳು ಕೋವಿಡ್ ಆತಂಕದಲ್ಲಿ ದಿನ ಕಳೆದರೆ, ಇದೀಗ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ಬಾರಿ ಮಳೆಗಾಲ ಆರಂಭ ವಾಗುತ್ತಲೇ ಪ್ರಕರಣಗಳು ತೀವ್ರಗೊಳ್ಳುತ್ತಿವೆ. ಅದರಲ್ಲೂ ಸೊಳ್ಳೆಗಳಿಂದ ಹರಡುವ ಡೆಂಘ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚಿವೆ. ಜನವರಿಯಿಂದ ಆ. 1ರವರೆಗೆ 4,131 ಡೆಂಘ ಹಾಗೂ 926 ಚಿಕೂನ್ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಈ ವರ್ಷ 78 ಸಾವಿರಕ್ಕೂ ಅಧಿಕ ಡೆಂಘ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 33 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 31,070 ಮಂದಿಯಲ್ಲಿ ಡೆಂಘ ಶಂಕೆ ವ್ಯಕ್ತವಾಗಿದ್ದು, 835 ಮಂದಿಯಲ್ಲಿ ಜ್ವರ ದೃಢಪಟ್ಟಿದೆ.

    ಇಲಾಖೆಯಿಂದ ಕ್ರಮ: ಮಳೆಯಿಂದ ಜ್ವರದ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಸ್ಥಳ ಸೇರಿದಂತೆ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಲಾರ್ವ ನಾಶಪಡಿಸುವ ಕಾರ್ಯ ಮಾಡಲಾಗುತ್ತಿದೆ. ಮುಂಜಾಗ್ರತೆಯಿಂದಷ್ಟೆ ಡೆಂಘ, ಚಿಕೂನ್ ಗುನ್ಯಾ ಸೇರಿದಂತೆ ಯಾವುದೇ ರೋಗಗಳನ್ನು ತಡೆಯಲು ಸಾಧ್ಯ. ಜನರು ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

    926 ಚಿಕೂನ್​ಗುನ್ಯಾ ಪ್ರಕರಣ: ರಾಜ್ಯದಲ್ಲಿ ಈವರೆಗೆ 25 ಸಾವಿರಕ್ಕೂ ಅಧಿಕ ಚಿಕೂನ್​ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾ ಗಿದೆ. 15 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 926 ಪ್ರಕರಣಗಳು ದೃಢಪಟ್ಟಿವೆ. ವಿಜಯಪುರದಲ್ಲಿ 147, ಕೋಲಾರ 127, ಹಾಸನ 81, ಬೆಂಗಳೂರು ಗ್ರಾಮಾಂತರ 57, ಚಿತ್ರದುರ್ಗ 56, ಶಿವಮೊಗ್ಗ 52, ತುಮಕೂರಿನಲ್ಲಿ 51 ಪ್ರಕರಣಗಳು ವರದಿಯಾಗಿವೆ. ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ.

    ರಾಜ್ಯದಲ್ಲಿ ಡೆಂಘ ಪ್ರಕರಣಗಳ ವಿವರ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಘ ಪ್ರಕರಣಗಳು ಪತ್ತೆಯಾಗಿವೆ. ಮೈಸೂರಿನಲ್ಲಿ 388, ಉಡುಪಿ 386, ದಕ್ಷಿಣ ಕನ್ನಡ 203, ಶಿವಮೊಗ್ಗ 182, ಚಿತ್ರದುರ್ಗ 178, ಹಾಸನ 141, ವಿಜಯಪುರ 133, ದಾವಣಗೆರೆ 127, ಬೆಳಗಾವಿ 116, ಚಿಕ್ಕಬಳ್ಳಾಪುರ 109, ಕೊಪ್ಪಳ 108, ಕಲಬುರ್ಗಿ 105, ಚಾಮರಾಜನಗರ 103 ಹಾಗೂ ಕೋಲಾರದಲ್ಲಿ 100 ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ಕ್ಕಿಂತ ಕಡಿಮೆ ಇವೆ. ಕಳೆದ ವರ್ಷ 7,189 ಮಂದಿ ಡೆಂಘ ಬಾಧಿತರಾಗಿದ್ದು, ಅವರಲ್ಲಿ ಐವರು ಮೃತಪಟ್ಟಿದ್ದರು.

    ಸಿದ್ದರಾಮೋತ್ಸವಕ್ಕೆ ಹೊರಟ ವಾಹನ ಅಪಘಾತ; ಒಂದು ಸಾವು, ನಾಲ್ವರಿಗೆ ಗಂಭೀರ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts