More

    ಕಾಫಿ ಬೆಳೆಗಾರರ ಸಂಘದಿಂದ ವಿಶೇಷ ಪ್ಯಾಕೇಜ್​ಗೆ ಸಿಎಂ, ಪಿಎಂಗೆ ಮನವಿ

    ಮೂಡಿಗೆರೆ: ಮುಂದಿನ ವಾರ ರಾಜ್ಯ ಕಾಫಿ ಬೆಳೆಗಾರರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರ್ಚಚಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿಶೇಷ ಪ್ಯಾಕೇಜ್ ಘೊಷಣೆಗೆ ಒತ್ತಾಯಿಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.

    ತಾಪಂ ಸಭಾಂಗಣದಲ್ಲಿ ತಾಲೂಕು ಬೆಳೆಗಾರರ ಸಂಘ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಫಿ ಉದ್ಯಮ ನಂಬಿಕೊಂಡು ರಾಜ್ಯದಲ್ಲಿ 10 ಲಕ್ಷ ಬೆಳೆಗಾರರು, 25 ಲಕ್ಷ ಕೂಲಿ ಕಾರ್ವಿುಕರು ಜೀವನ ನಡೆಸುತ್ತಿದ್ದಾರೆ. ವಿದೇಶಿ ವಿನಿಮಯದ ಮೂಲಕ ಸುಮಾರು 6 ಸಾವಿರ ಕೋಟಿ ರೂ.ಗಳನ್ನು ದೇಶದ ಆರ್ಥಿಕ ಭದ್ರತೆಗೆ ನೀಡುವ ಕಾಫಿ ಉದ್ಯಮವನ್ನು ಕಡೆಗಣಿಸಲಾಗಿದೆ ಎಂದು ದೂರಿದರು.

    ಬೆಳೆಗಾರರು ಕಾಫಿ ಜತೆಗೆ ಅರಣ್ಯವನ್ನೂ ಬೆಳೆಸುತ್ತಾರೆ. ವಾಣಿಜ್ಯ ವಿಭಾಗದಲ್ಲಿ ವಿದೇಶಕ್ಕೆ ಕಾಫಿ ರಫ್ತು ಮಾಡಿ ದೇಶದ ಆರ್ಥಿಕ ಪರಿಸ್ಥಿತಿಗೂ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಕಳೆದ ವರ್ಷದ ಅತಿವೃಷ್ಟಿ ಹಾಗೂ ಕರೊನಾ ಲಾಕ್​ಡೌನ್​ನಿಂದ ನಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ಯಾಕೇಜ್ ಘೊಷಿಸದೆ ಕಡೆಗಣಿಸಿವೆ ಎಂದು ಆರೋಪಿಸಿದರು.

    ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಕಾಫಿ ಬೆಳೆಗಾರರು ಪಡೆದ ಸಾಲದ ಮರುಪಾವತಿಗೆ ಆಗಸ್ಟ್ ಅಂತ್ಯದವರೆಗೆ ಸರ್ಕಾರ ಅವಕಾಶ ನೀಡಿದರೂ ಕೆಲ ಬ್ಯಾಂಕ್​ಗಳು ಸಾಲ ಮರುಪಾವತಿಗೆ ಬೆಳೆಗಾರರಿಗೆ ನೋಟಿಸ್ ನೀಡಿ ಬೆದರಿಸುತ್ತಿವೆ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ, ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ತೀರ್ಥಮಲ್ಲೇಶ್, ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ಹಿರಿಯ ಬೆಳೆಗಾರ ಡಿ.ಬಿ.ಸುಬ್ಬೇಗೌಡ, ಬೆಳೆಗಾರ ಸಂಘದ ತಾಲೂಕು ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಮನೋಹರ್, ಮುಖಂಡರಾದ ಮೋಹನ್​ಕುಮಾರ್, ಜಗನ್ನಾಥ್, ರಘು, ಪ್ರದೀಪ್, ಸುಬ್ರಾಯ ಗೌಡ, ಡಿ.ಎಂ.ವಿಜಯ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts