More

    ಗುರು ರಾಘವೇಂದ್ರ ಸಹಕಾರ ಬಬ್ಯಾಂಕ್​ ಅವ್ಯವಹಾರ; ಪ್ರಕರಣವನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರ

    ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್​, ವಸಿಷ್ಠ ಕೋ-ಆಪರೇಟಿವ್ ಸೊಸೈಟಿ, ಗುರು ಸಾರ್ವಭೌಮ ಬ್ಯಾಂಕ್‌ಗಳ ಹಗರಣವನ್ನು ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿದೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ಗಳ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಸಾವಿರಾರು ಮಂದಿ ಠೇವಣಿದಾರರು ತಮ್ಮ ನಿವೃತ್ತಿ ಜೀವನಕ್ಕೆ ಆಧಾರವಾಗಲೆಂದು, ಮಕ್ಕಳ ಮದುವೆ, ಸ್ವಂತ ಮನೆ ಖರೀದಿ ಮುಂತಾದ ಕನಸುಗಳನ್ನು ಇಟ್ಟುಕೊಂಡು ತಮ್ಮ ಜೀವಮಾನದ ಉಳಿತಾಯವನ್ನೆಲ್ಲ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದರು. ಬ್ಯಾಂಕಿನವರ ವಂಚನೆಯಿಂದಾಗಿ ಅವರೆಲ್ಲರೂ ಮುಂದಿನ ತಮ್ಮ ಜೀವನದ ಬಗ್ಗೆ ದಿಕ್ಕು ತೋಚದಂತಾಗಿದ್ದಾರೆ.

    ವಂಚನೆಗೊಳಗಾದ ಠೇವಣಿದಾರರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಈ ಹಿಂದೆ ಪ್ರತಿಪಕ್ಷ ನಾಯಕನಾಗಿದ್ದ ಸಂದರ್ಭದಲ್ಲಿಯೂ ಸದನದ ಒಳಗೆ ಮತ್ತು ಹೊರಗೆ ಧ್ವನಿಯೆತ್ತಿದ್ದೆ, ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದೆ. ಆಗಲೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು. ಠೇವಣಿ ಹಣ ಕಳೆದುಕೊಂಡವರ ಹತಾಶೆ, ಸಂಕಟವನ್ನು ಕಣ್ಣಾರೆ ಕಂಡಿದ್ದೇನೆ. ಈ ಕಾರಣಕ್ಕಾಗಿ ಸೂಕ್ತ ತನಿಖೆ ನಡೆದು, ಎಲ್ಲ ಸಂತ್ರಸ್ತರಿಗೂ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ತಿಳಿಸಿದ್ದಾರೆ.

    ನನ್ನ ಹೋರಾಟಕ್ಕೆ ಸಿಕ್ಕ ಜಯ

    ಈ ಕುರಿತು ಪ್ರತಿಕ್ರಿಯಿಸಿರುವ ಡಾ. ಶಂಕರ್ ಗುಹ ದ್ವಾರಕನಾಥ್, ಗುರು ರಾಘವೇಂದ್ರ ಸಹಕಾರ ಬ್ಯಾಂಕಿನಲ್ಲಿ ನಡೆದ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದೆ. ಲಕ್ಷಾಂತರ ಠೇವಣಿದಾರರಿಗೆ ಮಾಡಿರುವ ವಂಚನೆಯನ್ನು ಹೊರ ತರಲು ನಾನು ಸತತ ಮೂರು ವರ್ಷಗಳಿಂದ ಇದರ ವಿರುದ್ಧ ಹೋರಾಡುತ್ತಿದ್ದೆ. ಇದು ನನ್ನ ಹೋರಾಟಕ್ಕೆ ಸಿಕ್ಕ ಜಯವಾಗಿದೆ.

    ಇದನ್ನೂ ಓದಿ: ಸುಳ್ಳು ಸುದ್ದಿ ಹರಡಿದ ಆರೋಪ; 9 ಯುಟ್ಯೂಬ್​ ಚಾನೆಲ್​ಗಳ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ

    ಬಿಜೆಪಿ ಸರ್ಕಾರವು ಚುನಾವಣೆಯ ನಂತರ ಇದ್ಯಾವುದರ ಬಗ್ಗೆಯೂ ಗಮನಹರಿಸದೆ ಈ ವಿಚಾರವನ್ನು ಅರ್ಧಕ್ಕೆ ಕೈ ಬಿಟ್ಟಿತ್ತು. ಆದರೆ ನಮ್ಮ ಕಾಂಗ್ರೆಸ್ ಸರ್ಕಾರವು ನೊಂದ ಠೇವಣಿದಾರದ ರಕ್ಷಣೆಗಾಗಿ ಹಾಗೂ ಅವರಿಗೆ ನ್ಯಾಯ ಕೊಡಿಸುವುದಕ್ಕಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಇಂದು ಆದೇಶ ಹೊರಡಿಸಿದೆ. ಇದು ಈ ಹೋರಾಟದಲ್ಲಿ ನನ್ನ ಜೊತೆ ಕೈಜೋಡಿಸಿದ ಎಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

    ಗುರು ರಾಘವೇಂದ್ರ ಬ್ಯಾಂಕಿನಲ್ಲಿ 1,500 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, 38,000 ಗ್ರಾಹಕರನ್ನು ಸಂಕಷ್ಟಕ್ಕೆ ತಳ್ಳಿದೆ. ಗುರು ರಾಘವೇಂದ್ರ ಬ್ಯಾಂಕ್ ಒಂದೇ ದಿನದಲ್ಲಿ 90 ಖಾತೆಗಳಿಗೆ 60 ಕೋಟಿ ರೂ. ಮೌಲ್ಯದ ಸಾಲಗಳನ್ನು ಬಿಡುಗಡೆ ಮಾಡಿದೆ ಎಂದು ಲೆಕ್ಕ ಪರಿಶೋಧನೆಯ ವರದಿ ತಿಳಿಸಿತ್ತು.

    ಇದೇ ವರ್ಷ ಜನವರಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸುವ ಬಗ್ಗೆ ಅಂದಿನ ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಅದನ್ನು ಜಾರಿಗೊಳಿಸಿರಲಿಲ್ಲ. ಈಗ ರಾಜ್ಯ ಸರ್ಕಾರ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಾಗೂ ವಸಿಷ್ಠ ಕೋ-ಆಪರೇಟಿವ್ ಸೊಸೈಟಿ ಹಗರಣವನ್ನು ಸಿಬಿಐ ವಹಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts