More

    ಉತ್ತರ ಅಭಿವೃದ್ಧಿಗೆ ಬಂಪರ್ ಕೊಡುಗೆ; ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

    ಬೆಳಗಾವಿ: ರಾಜ್ಯದ ರೈತರ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ, ನಂಜುಂಡಪ್ಪ ವರದಿ ಅನುಷ್ಠಾನದ ಅಧ್ಯಯನಕ್ಕೆ ಸಮಿತಿ ರಚನೆ, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು, ಪ್ರವಾಸೋದ್ಯಮ ಅಭಿವೃದ್ಧಿ… ವಿಧಾನಮಂಡಲದಲ್ಲಿ ಮೂರು ದಿನಗಳ ಕಾಲ ನಡೆದ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯ ಮೇಲೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಘೋಷಣೆಗಳಿವು.

    ಈ ಭಾಗದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಟ್ಟುಕೊಂಡು ಮತ್ತೊಂದು ಉನ್ನತಾಧಿಕಾರ ಸಮಿತಿ ರಚಿಸಿ ವರದಿ ಪಡೆದು ತಾರತಮ್ಯ ತಗ್ಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಹಿಂದೆ ರಚಿಸಿದ್ದ ಡಾ.ನಂಜುಂಡಪ್ಪ ವರದಿ ಯಿಂದ ಸಂಪೂರ್ಣ ತಾರತಮ್ಯ ತಗ್ಗಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೆಸರಾಂತ ಅರ್ಥಶಾಸ್ತ್ರಜ್ಞರೊಬ್ಬರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಿ ಆರು ತಿಂಗಳ ಒಳಗೆ ವರದಿ ಪಡೆದು ಅತ್ಯಂತ ಹಿಂದುಳಿದ, ಅತೀ ಹಿಂದುಳಿದ, ಹಿಂದುಳಿದ ತಾಲೂಕು ಮಾತ್ರವಲ್ಲದೆ, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

    ಬಿಜೆಪಿಗೂ ಟಾಂಗ್: ಕರ್ನಾಟಕ ಏಕೀಕರಣದಿಂದ ಇತ್ತೀಚಿನವರೆಗಿನ ರಾಜ್ಯದ ಅಭಿವೃದ್ಧಿ ಮತ್ತು ರಾಜಕಾರಣವನ್ನು ಸ್ಥೂಲವಾಗಿ ಬಿಚ್ಚಿಡುವ ಮೂಲಕ ಬಿಜೆಪಿಯವರಿಗೆ ಮಧ್ಯಮಧ್ಯ ಟಾಂಗ್ ಕೊಡುತ್ತಲೇ ಸಿಎಂ ಹಲವು ಮಹತ್ವದ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದರು. 2022ರಲ್ಲಿ ಒಂದಷ್ಟು ಚರ್ಚೆಯಾಗಿದ್ದು ಹೊರತು ಪಡಿಸಿದರೆ ಉಳಿದಂತೆ ಉತ್ತರ ಕರ್ನಾಟಕದ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯೇ ಆಗಿಲ್ಲ. ಹಿಂದೆ ನಡೆದ ಚರ್ಚೆಗೆ ಆಗಿನ ಸಚಿವ ಜೆ.ಸಿ. ಮಾಧುಸ್ವಾಮಿ 54 ಪದಗಳಲ್ಲಿ ಮಾತ್ರ ಉತ್ತರ ನೀಡಿದ್ದಾರೆ. ಬೇಕಿದ್ದರೆ ಆ ಉತ್ತರವನ್ನು ಓದುತ್ತೇನೆ ಎಂದು ಬಿಜೆಪಿಯವರ ಕಾಲೆಳೆದರು. ಮಧ್ಯ ಪ್ರವೇಶಿಸಿದ ಬಿಜೆಪಿಯ ಅರವಿಂದ ಬೆಲ್ಲದ್, ಚರ್ಚೆ ಮಾಡಿದ 42 ಮಂದಿಯೂ ರಾಜಕೀಯ ಮಾತನಾಡಿಲ್ಲ ನೀವೇಕೆ ಮಾತನಾಡುತ್ತೀರಿ ಎಂದು ತಿರುಗೇಟು ನೀಡಿದರು.

    ಅದಕ್ಕೆ ಪೂರಕವಾಗಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಬೆಳಗಾವಿಯಲ್ಲಿ 11 ಬಾರಿ ಅಧಿವೇಶನ ನಡೆದಿದೆ. ಮೊದಲ ದಿನವೇ ಚರ್ಚೆಯಾಗಬೇಕಿತ್ತು. ಆಗ ಮಾತ್ರ ಅದು ಫಲಪ್ರದವಾಗುತ್ತದೆ. ಬಾದಾಮಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಋಣ ಅವರ ಮೇಲೆ ಹೆಚ್ಚಿದೆ ಎಂದು ಟಾಂಗ್ ಕೊಟ್ಟರು.

    ಅದಕ್ಕೆ ಸಿದ್ದರಾಮಯ್ಯ, ನಮ್ಮ ಸರ್ಕಾರ ಉತ್ತರ ಕರ್ನಾಟಕ ಭಾಗದ ಅಭಿವೖದ್ಧಿಗೆ ಅವಶ್ಯ ಇರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು. ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ನೀವು 2013ರಿಂದ 2018ರ ನಡುವೆ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಭಾಷಣಗಳನ್ನು ಓದಿ. ಹೆೆಚ್ಚು ಅವಧಿ ಆಡಳಿತ ಮಾಡಿದ್ದು ನಿಮ್ಮ ಪಕ್ಷ. ಈ ಭಾಗ ಹಿಂದುಳಿಯಲು ನೀವೇ ಕಾರಣ ಎಂದು ತಿವಿದರು. ಆಗ ಸಿದ್ದರಾಮಯ್ಯ, ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎರಡು ಗಂಟೆ ಕಾಲ ದೀರ್ಘ ಕಾಲ ಉತ್ತರ ನೀಡಿದ್ದೇನೆ. ಮಾಧುಸ್ವಾಮಿ ಯಾಕೆ ಆ ರೀತಿ ಉತ್ತರ ನೀಡಲಿಲ್ಲ ಎಂದು ಪ್ರಶ್ನಿಸಿದರು.

    ಬಳಿಕ ಮಾತು ಮುಂದುವರಿಸಿದ ಸಿದ್ದರಾಮಯ್ಯ, ರಾಜ್ಯದ ಸರಾಸರಿ ಆದಾಯ 2.66 ಲಕ್ಷ ರೂಪಾಯಿಗಳಾದರೆ, ಉತ್ತರ ಕರ್ನಾಟಕ ಭಾಗದಲ್ಲಿ ಆದಾಯ 1.67 ಲಕ್ಷ ರೂ. ಆಗಿದೆ. ತಾರತಮ್ಯ ಇದೆ ಎಂಬ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಕೂಗು ಪರಿಹಾರವಲ್ಲ. ನಾವು ಎಲ್ಲರೂ ಸೇರಿ ಸಮಗ್ರ ಅಭಿವೖದ್ಧಿ ಮಾಡಬೇಕು ಎಂದು ಸ್ಪಷ್ಟಪಡಿಸಿದರು.

    ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನಮ್ಮ ಬಜೆಟ್ ಭರವಸೆಯಂತೆ ಐದು ಸಾವಿರ ಕೋಟಿ ರೂಪಾಯಿ ನೀಡಲಾಗುವುದು ಎಂದರು. ಕಲ್ಯಾಣ ಕರ್ನಾಟಕ ಭಾಗದ ಪ್ರಮಾಣದಲ್ಲೇ ಕಿತ್ತೂರು ಕರ್ನಾಟಕ ಭಾಗಕ್ಕೂ ಅನುದಾನ ನೀಡಬೇಕು. ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದರು.

    ಮುಖ್ಯಮಂತ್ರಿ ಪ್ರಮುಖ ಘೋಷಣೆಗಳು

    • ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ಹೆಸರಾಂತ ಅರ್ಥಶಾಸ್ತ್ರರೊಬ್ಬರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚನೆ, ಆರು ತಿಂಗಳ ಒಳಗೆ ವರದಿ ಪಡೆದು ಕ್ರಮ
    • ಬರ ಹಿನ್ನೆಲೆಯಲ್ಲಿ ಸಹಕಾರ ಬ್ಯಾಂಕ್​ಗಳಲ್ಲಿನ ರೈತರ ಮಧ್ಯಮಾವಧಿ, ದೀರ್ಘಾ ವಧಿ ಸಾಲದ ಸಂಪೂರ್ಣ ಅಸಲು ಪಾವತಿಸಿದರೆ ಬಡ್ಡಿ ಮನ್ನಾ
    • ಉತ್ತರ ಕರ್ನಾಟಕದಲ್ಲಿ ಬೖಹತ್ ಕೈಗಾರಿಕೆ ಸ್ಥಾಪಿಸಿ ಉದ್ಯೋಗಾವಕಾಶ ಸೖಷ್ಟಿಸಲು ಬೆಳ ಗಾವಿ ಸಮೀಪ 2000 ಎಕರೆಯಲ್ಲಿ ಹೊಸ ಫೌಂಡ್ರಿ ಕ್ಲಸ್ಟರ್ ಸ್ಥಾಪನೆ
    • ಧಾರವಾಡದಲ್ಲಿ ಎಫ್​ಎಂಸಿಜಿ ಕ್ಲಸ್ಟರ್ ಇದ್ದು, ಜಿಲ್ಲಾ ಕೇಂದ್ರ ಸಮೀಪ ಮೂರು ಸಾವಿರ ಎಕರೆ ಕೈಗಾರಿಕಾ ವಸಹಾತು ನಿಮಾಣ
    • ರಾಯಚೂರಿನಲ್ಲಿ ಹತ್ತಿ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ
    • ವಿಜಯಪುರದಲ್ಲಿ -ಠಿ;1,500 ಕೋಟಿ ವೆಚ್ಚದಲ್ಲಿ ಕೈಗಾರಿಕಾ ಕ್ಲಸ್ಟರ್
    • ಉತ್ತರ ಕರ್ನಾಟಕ ಪ್ರದೇಶದ ಪ್ರವಾಸೋದ್ಯಮಗಳ ಅಭಿವೖದ್ಧಿ
    • ಧಾರವಾಡ ವಾಲ್ಮಿ ಸಂಸ್ಥೆ ಉನ್ನತೀಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts