More

    ಮುಂದುವರಿದ ಚಿರತೆ ಶೋಧ ಕಾರ್ಯ; ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

    ಬೆಂಗಳೂರು: ಚಿರತೆ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಮೊದಲು ಕಾಡಂಚಿನ ಭಾಗದಲ್ಲಿ ಚಿರತೆ ದಾಳಿ ಸಮಸ್ಯೆ ಇತ್ತು. ಈಗ ಬೆಂಗಳೂರಿನ ಹೊರವಲಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈಗಾಗಲೇ ಅರಣ್ಯ ಇಲಾಖೆಗೆ ಚಿರತೆಯನ್ನು ಹಿಡಿದು ಕಾಡಿಗೆ ಬಿಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

    ಕೆಂಗೇರಿಯ ಕೋಡಿಪಾಳ್ಯ ಮತ್ತು ದೇವನಹಳ್ಳಿ ತಾಲೂಕಿನ ತರಬನಹಳ್ಳಿ ಸಮೀಪ ಕಾಣಿಸಿಕೊಂಡಿದ್ದ ಚಿರತೆಗಳನ್ನು ಬಂಧಿಸಲು ಶುಕ್ರವಾರ ಕಾರ್ಯಾಚರಣೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸದ್ಯ ಈ ಭಾಗದ ಜನರು ಮನೆಯಿಂದ ಹೊರ ಬರಲೂ ಭಯಪಡುತ್ತಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಚಿರತೆ ದಾಳಿಗಳ ವಿಡಿಯೋಗಳು ವೈರಲ್ ಆಗಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು. ಸುತ್ತಲ ಪ್ರದೇಶಗಳ ಜನರು ಓಡಾಟ ನಡೆಸಲು, ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಚಿರತೆ ಪತ್ತೆಯಾಗದ ಹಿನ್ನೆಲೆ ಸುತ್ತಲ ಪ್ರದೇಶದಲ್ಲಿ ನಿಗಾ ವಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.

    ಮೈಸೂರಿನ ಟಿ.ನರಸೀಪುರ ತಾಲೂಕಿನಲ್ಲಿ ಒಂದೇ ತಿಂಗಳಲ್ಲಿ ಇಬ್ಬರು ಚಿರತೆ ದಾಳಿಗೆ ಮೃತಪಟ್ಟಿದ್ದಾರೆ. ಸದ್ಯ ಕಾಡಂಚಿನ ಭಾಗದ ಜನರು ಚಿರತೆ ದಾಳಿಗೆ ಭಯಗೊಂಡಿದ್ದಾರೆ. ಸದ್ಯ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆಯಿಂದ 10 ವಿಶೇಷ ತಂಡಗಳನ್ನು ರಚನೆ ಮಾಡಿ, ಮೈಸೂರು ವೃತ್ತ ಸಿಸಿಎಫ್​ ಮಾಲತಿ ಪ್ರಿಯಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಅರಣ್ಯ ಪ್ರದೇಶದ ಸುತ್ತ 5-6 ಕಿಮೀ ಕಾಡುಪ್ರಾಣಿಗಳು ಸಂಚಾರ ಸಾಮಾನ್ಯ. ಜನರು ಅರಣ್ಯ ಸಮೀಪ ಒಂಟಿಯಾಗಿ ಒಡಾಟ ನಡೆಸಬಾರದು. ಚಿರತೆ ಸೆರೆಗಾಗಿ ಸ್ಥಳದಲ್ಲಿ ಬೋನುಗಳನ್ನು ಇರಿಸಲಾಗಿದ್ದು, ಕ್ಯಾಮರಾ ಟ್ರ್ಯಾಪ್‌ಗಳನ್ನು ಹಾಕಲಾಗಿದೆ ಎಂದು ಬೆಂಗಳೂರು ನಗರ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಸ್.ಎಸ್. ರವಿಶಂಕ‌ರ್ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts