ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೊಸ ಮುಖಗಳು ರಾಜ್ಯರಾಜಕಾರಣವನ್ನು ಪ್ರವೇಶಿಸುವುದು ಸಾಮಾನ್ಯ. ಆದರೆ ಈ ಬಾರಿ ಮಾಜಿ ರೌಡಿ ಶೀಟರ್ಗಳು, ಕ್ರಿಮಿನಲ್ ಹಿನ್ನೆಲೆ ಇದ್ದವರು ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ಮಾತುಗಳು ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಪೂರಕವಾಗಿ ಕೆಲವು ಜನ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು ಬಿಜೆಪಿ ಪಾಳಯದಲ್ಲಿ ಇತ್ತೀಚೆಗೆ ಹೆಚ್ಚು ಕಾಣಿಸಿಕೊಂಡಿದ್ದರು.
ಇದೀಗ ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಸಂದೇಶವೊಂದನ್ನು ರವಾನಿಸಿದ್ದಾರೆ. ದೇಶದಲ್ಲಿ ಭಯೋತ್ಪಾದನೆ ನಿಯಂತ್ರಣ ಆಗಿದ್ದೇ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ. ಹೀಗಿದ್ದಾಗ ಯಾವುದೇ ಕಾರಣಕ್ಕೂ ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಗೆ ರೌಡಿ ಶೀಟರ್ ಗಳ ಸೇರ್ಪಡೆ ವಿಚಾರವಾಗಿ ಬೆಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ, ದೇಶದಾದ್ಯಂತ ಇಂದು ನಕ್ಸಲ್ ಚಟುವಟಿಕೆಗಳು ನಿಯಂತ್ರಣದಲ್ಲಿವೆ. ಭಯೋತ್ಪಾದನೆ, ಕ್ರಿಮಿನಲ್, ಗೂಂಡಾರಾಧನೆಯನ್ನು ನಮ್ಮ ಪಕ್ಷ ಸಹಿಸುವುದಿಲ್ಲ. ಕ್ರಿಮಿನಲ್ ಚಟುವಟಿಕೆಯನ್ನು ನಿಯಂತ್ರಿಸಲು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಏನು ಕ್ರಮ ಕೈಗೊಂಡಿದೆ ಎಂಬುವುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಮ್ಮ ಪಕ್ಷದ ನಾಯಕರು ಸೈಲೆಂಟ್ ಸುನೀಲನ ಜತೆಗೆ ವೇದಿಕೆ ಹಂಚಿಕೊಂಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮಾಹಿತಿ ಪಡೆದು, ವಿವರಣೆ ಕೇಳಿದ್ದೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ಪಕ್ಷದಿಂದ ಅನೇಕಲ್ ಪುರಸಭೆ ಚುನಾವಣೆಗೆ ರೌಡಿಶೀಟರ್ ಮಂಜುನಾಥ್ ಅಲಿಯಾಸ್ ಉಪ್ಪಿ ನಾಮನಿರ್ದೇಶನ ವಿಚಾರವಾಗಿ ಪ್ರತಿಕ್ರಿಯಿಸಿದ ಕಟೀಲ್, ರಾಜಕೀಯ ವ್ಯವಸ್ಥೆಯಲ್ಲಿ ಕೆಲವು ಸಹಜ ಅಚಾತುರ್ಯಗಳಾಗುತ್ತವೆ. ಎಲ್ಲವನ್ನೂ ಕ್ರಿಮಿನಲ್ ಕೇಸ್ಗಳೆಂದು ಹೇಳಲು ಸಾಧ್ಯವಿಲ್ಲ. ಹಾಗಂತ ನಾನು ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಅವರ ಮೇಲೆ ಯಾವೆಲ್ಲಾ ಕೇಸ್ಗಳು ಇವೆಯೆಂದು ಪರಿಶೀಲಿಸಬೇಕಿವೆ.
ನಮ್ಮ ಸಂಘಟನೆಯ ಕಾರ್ಯಕರ್ತರ ಮೇಲೆ ಹಲವು ಕೇಸ್ಗಳಿವೆ. ಅವೆಲ್ಲವೂ ಹೋರಾಟದ ಕೇಸ್ಗಳು. ಹಿಂದುತ್ವದ ಪರವಾಗಿ ಹೋರಾಟ ಮಾಡುವಾಗ ಅನೇಕ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿವೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಎಲ್ಲರನ್ನೂ ರೌಡಿ ಲೀಸ್ಟ್ಗೆ ಸೇರಿಸಿತ್ತು. ಇದೀಗ ನಾವು ಎಲ್ಲವನ್ನೂ ತುಲನೆ ಮಾಡುತ್ತಿದ್ದೇವೆ. ಅಚಾತುರ್ಯಗಳನ್ನು ಗಮನಿಸಿ, ಎಲ್ಲವನ್ನೂ ಪರಿಶೀಲಿಸಿ ಸರಿಪಡಿಸುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.