More

    ವಯನಾಡು ಕಾಡಾನೆ ದಾಳಿ ಪ್ರಕರಣ; ಕರ್ನಾಟಕ ಸರ್ಕಾರದ ಪರಿಹಾರ ಬೇಡ ಎಂದ ಮೃತನ ಕುಟುಂಬಸ್ಥರು, ಕಾರಣ ಹೀಗಿದೆ?

    ಬೆಂಗಳೂರು: ಫೆಬ್ರವರಿ 10ರಂದು ಕೇರಳದ ವಯನಾಡಿನಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ಸರ್ಕಾರ ವತಿಯಿಂದ ಘೋಷಿಸಲಾಗಿದ್ದ ಪರಿಹಾರ ಮೊತ್ತವನ್ನು ಮೃತನ ಕಡೆಯವರು ಬೇಡ ಎಂದಿದ್ದಾರೆ. ವಯನಾಡಿನ ಮಾನಂತವಾಡಿ ನಿವಾಸಿ ಪ್ರಜೇಶ್​ ಕಾಡಾನೆ ದಾಳಿಗೆ ಬಲಿಯಾಗಿದ್ದರು.

    ವಯನಾಡು ಲೋಕಸಭೆ ಕ್ಷೇತ್ರ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರತಿನಿಧಿಸುವ ಕ್ಷೇತ್ರವಾಗಿದ್ದು, ಈ ಭಾಗದಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ವಿಚಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಭಾರತ್ ಜೋಡೋ ನ್ಯಾಯ್​ ಯಾತ್ರೆಯಲ್ಲಿದ್ದ ರಾಹುಲ್​ ಗಾಂಧಿ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಯನಾಡಿಗೆ ತೆರಳಿ ಮೃತನ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದರು.

    ಮೃತ ಪ್ರಜೇಶ್​ ಮೇಲೆ ದಾಳಿ ಮಾಡಿದ ಆನೆಯು ಕರ್ನಾಟಕದಿಂದ ದಾರಿ ತಪ್ಪಿ ಕೇರಳದ ವಯನಾಡಿನಲ್ಲಿ ಕಾಣಿಸಿಕೊಂಡಿತ್ತು ಎಂದು ಕೇರಳ ಸರ್ಕಾರ ಆರೋಪಿಸಿತ್ತು. ಕಾಡಾನೆ ದಾಳಿ ಹಾಗೂ ಅದರ ಹಿನ್ನೆಲೆಯನ್ನು ವಿಚಾರಣೆ ನಡೆಸಲಾಗಿತ್ತು. ಆನೆಯು ಕೇರಳದ ವಯನಾಡ್ ಜಿಲ್ಲೆಗೆ ದಾರಿ ತಪ್ಪಿ ತೆರಳಿರುವುದು ಗೊತ್ತಾಗಿತ್ತು. ಕರ್ನಾಟಕದಿಂದ ತೆರಳಿದ ಆನೆಯಿಂದ ದುರಂತ ಸಂಭವಿಸಿದ್ದು, ಮೃತ ವ್ಯಕ್ತಿಗೆ ಪರಿಹಾರ ನೀಡಬೇಕು ಎಂಬ ಮನವಿ ಸಲ್ಲಿಕೆಯಾಗಿತ್ತು. 

    ಇದನ್ನೂ ಓದಿ: ಕಾರು-ಬೈಕ್ ನಡುವೆ ಭೀಕರ ರಸ್ತೆ ಅಪಘಾತ; ಖ್ಯಾತ ನಟಿ, ಗಾಯಕ ಸೇರಿದಂತೆ 9 ಮಂದಿ ಸಾವು

    ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಸೂಚನೆ ಮೇರೆಗೆ ಅರಣ್ಯ ಸಚಿವ ಈಶ್ವರ್​ ಖಂಡ್ರೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿ ಮೃತನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದರು. ರಾಜ್ಯ ಸರ್ಕಾರದ ಈ ನಡೆ ವಿಪಕ್ಷ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿತ್ತು ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಆಕ್ಷೇಪ ವ್ಯಕ್ತವಾಗಿತ್ತು.

    ವಯನಾಡು ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರವಾಗಿದೆ. ಹೀಗಾಗಿ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸುವುದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಹತ್ತಾರು ಜನರು ಕಾಡಾನೆ ದಾಳಿಯಿಂದ ಸಾಯುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಬೆಳೆ ಈಗಾಗಲೇ ನಾಶವಾಗಿದೆ.

    ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ನೀಡುವಂತೆ ಚಿಕ್ಕಮಗಳೂರು, ಹಾಸನ ಹಾಗೂ ರಾಮನಗರ ಸೇರಿದಂತೆ ರಾಜ್ಯದ ವಿವಿಧ ಭಾಗದ ಜನರು ತೀವ್ರ ಒತ್ತಾಯಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇರಳ ರಾಜ್ಯದಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಕಾಂಗ್ರೆಸ್‌ ಸರ್ಕಾರ ಹದಿನೈದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ ಎಂದು ವಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಮೃತನ ಕುಟುಂಬಸ್ಥರು ರಾಜ್ಯ ಸರ್ಕಾರದ ಪರಿಹಾರವನ್ನು ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts