More

    ಜಿಲೇಬಿ ಫೈಲ್​ ಬಂದ್ರೆ ಬಿಸಾಕುತ್ತಿದ್ರಿ, ಜಿಲೇಬಿ ಅಂದ್ರೆ ಜನಕ್ಕೆ ಗೊತ್ತಿಲ್ವಾ? ಕಾಂಗ್ರೆಸ್​ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿ

    ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಣ ಸಿದ್ಧವಾಗಿದೆ. ಇದು ಎಲ್ಲರ ಪಾಲಿಗೂ ಮಹತ್ವದ ಚುನಾವಣೆಯಾಗಿದೆ. ಈ ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ಮುಂದಿನ ಐದು ವರ್ಷ ರಾಜ್ಯದ ಭವಿಷ್ಯವನ್ನು ಬರೆಯುವ ಚುನಾವಣೆ ಇದಾಗಿದ್ದು. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವಂತಹ ಪಕ್ಷಕ್ಕೆ ತಾವು ಬೆಂಬಲದ ಮುದ್ರೆಯನ್ನು ಒತ್ತಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಯ ಬಳಿ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದರು.

    ಸಿಎಂ ಬೊಮ್ಮಾಯಿ ಅವರ ವಿಡಿಯೋ ಸಂದೇಶದ ಸಾರಾಂಶ ಈ ಕೆಳಕಂಡಂತಿದೆ
    ನಿಮಗೆಲ್ಲ ಗೊತ್ತಿದೆ 2018ರ ಚುನಾವಣೆಯಲ್ಲಿ ನಮಗೆ 104 ಅತಿ ಹೆಚ್ಚು ಸ್ಥಾನಗಳು ಬಂದರೂ ಕೂಡ ಕಾಂಗ್ರೆಸ್​-ಜೆಡಿಎಸ್​ ಅಪವಿತ್ರ ಮೈತ್ರಿಯನ್ನು ಮಾಡಿಕೊಂಡರು. ಒಬ್ಬರಿಗೊಬ್ಬರು ಹೀನಾಯವಾಗಿ ಬೈದಾಡಿಕೊಳ್ಳುವ ಎರಡು ಪಕ್ಷಗಳು ಅಧಿಕಾರದ ದಾಹದಿಂದ ಒಂದಾದವು. ಅದರ ಪರಿಣಾಮ ಸುಮಾರು ಒಂದು ವರ್ಷ ದುರಾಡಳಿತವನ್ನು ನಾವು ನೋಡಿದೆವು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿನ್ನಡೆಯಾಗಿರುವಂಥದ್ದು ಮತ್ತು ಆಡಳಿತ ಕುಸಿದು ಬಿದ್ದಿದ್ದನ್ನು ನಾವು ನೋಡಿದೆವು.

    ಇದನ್ನೂ ಓದಿ: ಹನುಮಂತನ ಆರತಿ ಮಾಡಲು ಯುವತಿಯರು ಹೋಟೆಲ್ ರೂಮ್​ಗೆ ಹೋಗಲ್ಲ: ಹರಿಯಾಣ ಮಹಿಳಾ ಆಯೋಗದ ಮುಖ್ಯಸ್ಥೆ!​

    ಪರಿಸ್ಥಿತಿ ಇಂದು ಸಂಪೂರ್ಣವಾಗಿ ಸುಧಾರಿಸಿದೆ
    ಬಂಧುಗಳೇ ಭಾರತೀಯ ಜನತಾ ಪಕ್ಷಕ್ಕೆ ಈ 5 ವರ್ಷದಲ್ಲಿ ಸಿಕ್ಕಿದ್ದು ಕೇವಲ 3 ವರ್ಷ. ಸುಮಾರು ಒಂದೂವರೆ ವರ್ಷ ಕೋವಿಡ್​ನಲ್ಲಿ ನಮ್ಮ ಸಮಯ ಹೋಯಿತು. ಕೋವಿಡ್​ ಅನ್ನು ಅತ್ಯಂತ ಸಮರ್ಥವಾಗಿ ನಮ್ಮ ನಾಯಕರಾದ ಬಿ.ಎಸ್​. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾವು ನಿಭಾಯಿಸಿದ್ದೇವೆ. ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ನಮಗೆ ಎಲ್ಲ ರೀತಿಯ ಸಹಕಾರವನ್ನು ಕೊಟ್ಟರು. ಔಷಧಿ ಇರಬಹುದು, ವೈದ್ಯಕೀಯ ಮೂಲ ಸೌಕರ್ಯ ಅಥವಾ ಲಸಿಕೆ ಇರಬಹುದು ನಮಗೆ ಎಲ್ಲವನ್ನು ನೀಡಿದರು. ಕನ್ನಡ ನಾಡಿನ ಜನರ ರಕ್ಷಣೆಯನ್ನು ಮಾಡಿದ್ದಾರೆ. ಇಲ್ಲಿಂದ ಆರಂಭವಾಗಿರುವ ಡಬಲ್​ ಇಂಜಿನ್​ ಸರ್ಕಾರದ ಒಂದು ಪಯಣ ಇಂದು ಆರ್ಥಿಕತೆಯನ್ನು ಸರಿದಾರಿಗೆ ತಂದು, ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿ, ಇಡೀ ರಾಜ್ಯ ಇವತ್ತು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಹಾಗೂ ಆವಿಷ್ಕಾರದಲ್ಲಿ ಮೊದಲ ಸ್ಥಾನದಲ್ಲಿದೆ. ಆರ್ಥಿಕ ಪರಿಸ್ಥಿತಿ ಇಂದು ಸಂಪೂರ್ಣವಾಗಿ ಸುಧಾರಿಸಿದೆ. ನಮ್ಮ ಗುರಿಗಿಂತ ಮೀರಿ ಹೆಚ್ಚಿನ ತೆರಿಗೆಯನ್ನು ನಾವು ಸಂಗ್ರಹಿಸಿದ್ದೇವೆ. ಅಲ್ಲದೆ, ಜನ ಕಲ್ಯಾಣ ಕೆಲಸ ಮಾಡಿದ್ದೇವೆ. ನಾವು ರೈತರ ಮಕ್ಕಳಿಗೆ ವಿದ್ಯಾರ್ಥಿ ನಿಧಿಯನ್ನು ನೀಡಿದ್ದೇವೆ. ಅಂಗವಿಕಲರ ಹಾಗೂ ವಿಧವೆಯರ ಮಾಸಾಶನ ಹೆಚ್ಚಿಸಿದ್ದೇವೆ. ಅಲ್ಲದೆ, ನಮ್ಮ ರಾಜ್ಯ ಇಂದು ಕೃಷಿಯಲ್ಲಿ ದಾಪುಗಾಲು ಹಾಕುತ್ತಿದೆ. ಕೃಷಿಗೆ ಅತಿ ಹೆಚ್ಚು ಒತ್ತನ್ನು ಕೊಟ್ಟಿದ್ದೇವೆ. ಕೃಷಿ ಬೆಳೆ ವಿಮೆಯಿಂದ ರೈತರಿಗೆ ಲಾಭವಾಗಿದೆ. ಬೆಳೆ ನಷ್ಟ ಪರಿಹಾರ ಎರಡು ಪಟ್ಟು ಮಾಡಿದ್ದೇವೆ. ಸೂಕ್ತವಾದ ಬೆಂಬಲ ನೀಡುವ ಮೂಲಕ ರೈತರನ್ನು ಕಷ್ಟ ಕಾಲದಲ್ಲಿ ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದೇವೆ. ಮಹಿಳೆಯರಿಗೆ ಸ್ವಯಂ ಉದ್ಯೋಗ ಕೊಡುವ ಯೋಜನೆಯನ್ನು ಮಾಡಿದ್ದೇವೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಿಂದ ಯುವಕರಿಗೆ ಒಳ್ಳೆಯದಾಗಿದ್ದು, ಯುವಕರಿಗೆ ಕೆಲಸ ನೀಡಿದ್ದೇವೆ. ದೀನ ದಲಿತರಿಗೆ ಸ್ವಯಂ ಉದ್ಯೋಗಕ್ಕೆ ಹೆಚ್ಚು ಮಹತ್ವವನ್ನು ನೀಡಿದ್ದೇವೆ.

    ಇಚ್ಛಾಶಕ್ತಿಯನ್ನು ತೋರಿರಲಿಲ್ಲ
    ಶಿಕ್ಷಣಕ್ಕೆ ವಿಶೇಷ ಮಹತ್ವ ಕೊಟ್ಟಿದ್ದೇವೆ. ಹಿಂದುಳಿದ ವರ್ಗದವರಿಗೆ ಹಾಸ್ಟೆಲ್​ ಮತ್ತು ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲ ಸಣ್ಣ ಸಮಾಜಗಳಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಹೊಸ ನಿಗಮಗಳನ್ನು ಮಾಡಿದ್ದು, ಅದರ ಮೂಲಕ ಹೆಚ್ಚಿನ ಆರ್ಥಿಕ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ಇದರ ಜೊತೆಗೆ ಬಹಳ ದಿನಗಳಿಂದ ನಡೆಯುತ್ತಿದ್ದ ಮೀಸಲಾತಿ ವಿಚಾರದಲ್ಲಿ ಕ್ರಾಂತಿಕಾರಕ ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಹಿಂದಿನ ಯಾವುದೇ ಸರ್ಕಾರ ಈ ರೀತಿ ನಿರ್ಣಯ ಮಾಡಿರಲಿಲ್ಲ ಮತ್ತು ಮಾಡುವ ಇಚ್ಛಾಶಕ್ತಿಯನ್ನು ತೋರಿರಲಿಲ್ಲ. ಜನರಿಗೆ ಕೇವಲ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದರು. ನಾವು ಬಂದು ದಿಟ್ಟ ನಿಲುವನ್ನು ತೆಗೆದುಕೊಂಡು ಎಸ್ಸಿಗೆ 15 ರಿಂದ 17 ಮತ್ತು ಎಸ್​ಟಿಗೆ 3 ರಿಂದ 7ರಷ್ಟು ಹೆಚ್ಚಳ ಮಾಡಿದ್ದೇವೆ. ಆಂತರಿಕ ಮೀಸಲಾತಿ ಹೆಚ್ಚಿಗೆ ಮಾಡಿದ್ದೇವೆ. ಎಲ್ಲ ವರ್ಗಗಳಿಗೆ ನ್ಯಾಯವನ್ನು ಕೊಟ್ಟಿದ್ದೇವೆ. ಹಿಂದುಳಿದ ವರ್ಗಗಳಲ್ಲಿ ಒಕ್ಕಲಿಗ, ಲಿಂಗಾಯಿತರಿಗೆ ತಲಾ ಶೇ. ಎರಡರಷ್ಟು ಹೆಚ್ಚಿಗೆ ಮಾಡುವ ಮೂಲಕ ರೈತಾಪಿ ವರ್ಗ ಮತ್ತು ದುಡಿಯುವ ವರ್ಗಕ್ಕೆ ಬೆಂಬಲ ಕೊಟ್ಟಿದ್ದೇವೆ.

    ಇದನ್ನೂ ಓದಿ: ಕಳೆದ ಹದಿನೈದು ವರ್ಷದಿಂದ ಒಂದು ಮನೆ ಬಿಟ್ಟು ಬೇರೆ ಏನೂ ಖರೀದಿ ಮಾಡಿಲ್ಲ : ಡಿಕೆಶಿ

    ನಮ್ಮ ಬದ್ಧತೆ ಇದೆ
    ಕಾಂಗ್ರೆಸ್​ ಪಕ್ಷ ಐದು ವರ್ಷ ದುರಾಡಳಿತ ಮಾಡಿ ಆರ್ಥಿಕವಾಗಿ ರಾಜ್ಯವನ್ನು ಹಿನ್ನಡೆ ಮಾಡಿತ್ತು ಮತ್ತು ಜನರನ್ನು ಸಂಕಷ್ಟಕ್ಕೆ ದೂಡಿತ್ತು. ಹಲವಾರು ಭಾಗ್ಯಗಳನ್ನು ಕೋಡುತ್ತೇನೆಂದು ಹೇಳಿ ಹಲವಾರು ದೌರ್ಭಾಗ್ಯಗಳನ್ನು ನೀಡಿದ್ದರು. ಕಾಂಗ್ರೆಸ್​ ಪಕ್ಷ ಬರೀ ಸುಳ್ಳನ್ನು ಹೇಳಿ, ಜನರಿಗೆ ಮೋಸ ಮಾಡುವ ಕೆಲಸವನ್ನು ಸುಮಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಇಂಥಾ ಒಂದು ಸಮಯದಲ್ಲಿ ಮೀಸಲಾತಿಯನ್ನು ಮಾಡದೇ ಕಾಂಗ್ರೆಸ್​ ವಿಫಲವಾಗಿತ್ತು. ಆದರೆ, ಅದನ್ನು ನಾವು ಮಾಡಿ ತೋರಿಸಿದ್ದೇವೆ. ಎಸ್ಸಿ, ಎಸ್​​ಟಿ ಮತ್ತು ಒಬಿಸಿ ಜನರ ಪರ ನಮ್ಮ ಬದ್ಧತೆ ಇದೆ.

    ಜನರು ನಿಮ್ಮನ್ನು ಹೇಗೆ ನಂಬುತ್ತಾರೆ?
    ಕಾಂಗ್ರೆಸ್​ ಪಕ್ಷ ಗ್ಯಾರೆಂಟಿಗಳನ್ನು ಕೊಡುತ್ತಿದೆ. ಕಾಂಗ್ರೆಸ್​ ಹೇಳುತ್ತದೆ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ, ನಾನು ಸಿದ್ದರಾಮಯ್ಯ ಅವರನ್ನು ಕೇಳುತ್ತೇನೆ 2013ರಲ್ಲಿ ಒಬ್ಬರಿಗೆ ಅಕ್ಕಿ ಎಷ್ಟಿತ್ತು? ಆಗಲೂ 10 ಕೆಜಿ ಇತ್ತು. 2014ರಲ್ಲಿ ನೀವು 5 ಕೆಜಿ ಮಾಡಿದ್ರಿ. ಅಲ್ಲದೆ, ಚುನಾವಣೆ ಬಂತು ಅಂತ 2 ಕೆಜಿ ಹೆಚ್ಚಿಗೆ ಮಾಡಿದ್ರಿ. 10 ಕೆಜಿ ಇದ್ದಿದ್ದನ್ನು ಯಾಕೆ ನೀವು 5 ಕೆಜಿ ಮಾಡಿದ್ರಿ? ಈ ಪ್ರಶ್ನೆಗೆ ಮೊದಲು ಉತ್ತರ ಕೊಡಿ. ಆಮೇಲೆ ಜನರು ನಿಮ್ಮ ಮೇಲೆ ವಿಶ್ವಾಸ ಇಡುತ್ತಾರೆ. ಜನ ಇಂದು ನಿಮ್ಮನ್ನು ನಂಬುವುದಕ್ಕೆ ತಯಾರಿಲ್ಲ. ಏಕೆಂದರೆ, 10 ಕೆಜಿ ಇದ್ದಿದ್ದನ್ನು 5 ಕೆಜಿ ಮಾಡಿ, ಇದೀಗ ಮತ್ತೊಮ್ಮೆ 10 ಕೆಜಿ ಎಂದು ಹೇಳುತ್ತಿದ್ದೀರಿ, ಆದ್ರೆ ಜನರು ನಿಮ್ಮನ್ನು ಹೇಗೆ ನಂಬುತ್ತಾರೆ?.

    ಗ್ಯಾರೆಂಟಿಗಳಿಗೆ ಗ್ಯಾರೆಂಟಿ ಇಲ್ಲ
    ಅಕ್ಕಿಗೆ 30 ರೂ. ಅನ್ನು ಕೇಂದ್ರ ಸರ್ಕಾರ ಕೊಡುತ್ತಿದೆ. ನೀವು 3 ರೂ. ಖರ್ಚು ಮಾಡಿ ಚೀಲದ ಮೇಲೆ ನಿಮ್ಮ ಫೋಟೋ ಹಾಕಿಸಿಕೊಂಡು ಅನ್ನಭಾಗ್ಯ ಯೋಜನೆ ಎಂದು ಹೇಳಿಕೊಂಡಿರಿ. ನೀವು ಬರುವುದಕ್ಕೂ ಮುನ್ನ ರೇಷನ್​ ಇರಲಿಲ್ವಾ? ಅಕ್ಕಿ ಕೊಡುತ್ತಿರಲಿಲ್ವಾ? ಇದನೆಲ್ಲಾ ಯಾರಿಗೆ ಹೇಳುತ್ತಿದ್ದೀರಿ? ಇಷ್ಟೇ ಅಲ್ಲದೆ, 200 ಯೂನಿಟ್​ ವಿದ್ಯುತ್​ ಅನ್ನು ಪುಕ್ಸಟ್ಟೆ ಕೊಡುತ್ತೀವೆ ಎಂದು ಹೇಳುತ್ತಿದ್ದೀರಿ, ಇದಕ್ಕಾಗಿ ವರ್ಷಕ್ಕೆ 10 ಸಾವಿರ ಕೋಟಿ ರೂ. ಬೇಕಿದೆ. ಜನರು ಬಳಸೋದೆ 75 ಯೂನಿಟ್​, ಆದರೆ, ನೀವು 200 ಯೂನಿಟ್​ ಉಚಿತ ಎಂದು ಹೇಳುತ್ತಿದ್ದೀರಿ, ಈ ಮೂಲಕ ಸುಳ್ಳು ಹೇಳಿ, ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದೀರಿ, ಅಲ್ಲದೆ, ಪ್ರತಿಯೊಂದು ಕುಟುಂಬದ ಹೆಣ್ಣು ಮಕ್ಕಳಿಗೆ 2000 ರೂ. ಕೊಡುತ್ತೇವೆ ಎಂದು ಹೇಳಿದ್ದೀರಿ, ಇದಕ್ಕೆಲ್ಲ ಹಣ ಎಲ್ಲಿಂದ ತರುತ್ತೀರಿ? ಎಲ್ಲಿಂದ ಕೊಡುತ್ತೀರಿ? ಇದೇ ಆಶ್ವಾಸನೆಯನ್ನು ಛತ್ತೀಸ್​ಗಢ ಮತ್ತು ರಾಜಸ್ಥಾನದಲ್ಲಿ ಮಾಡಿದಿರಿ, ಅಲ್ಲೇನಾದ್ರೂ ಕೊಟ್ಟಿದ್ದೀರಾ? ನೀವು ನಡೆದುಬಂದು ಹಾದಿ ಎಲ್ಲರಿಗೂ ಗೊತ್ತಾಗುತ್ತದೆ. 2000 ರೂ. ಹಣ ನೀಡಲು 24 ಸಾವಿರ ಕೋಟಿ ರೂ. ಬೇಕಿದೆ. ಯಾವ ಯೋಜನೆಯನ್ನು ಮೊಟಕುಗೊಳಿಸಿ ಹಣ ನೀಡುತ್ತೀರಿ, ಹೀಗಾಗಿ ನೀವು ನೀಡುವ ಯಾವುದೇ ಗ್ಯಾರೆಂಟಿಗಳಿಗೆ ಗ್ಯಾರೆಂಟಿ ಇಲ್ಲ. ಇದು ಚುನಾವಣೆವರೆಗೆ ಗ್ಯಾರೆಂಟಿ, ಚುನಾವಣೆ ಬಳಿಕ ಘಳಗಂಟಿ ಎಂದು ಹೇಳಲು ಇಷ್ಟಪಡುತ್ತೇನೆ.

    ಇದನ್ನೂ ಓದಿ: ದ್ವಿತೀಯ ಪಿಯು ಫಲಿತಾಂಶ: ವಿಷಯವಾರು ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಹೀಗಿದೆ..

    ನಿಮ್ಮ ನಿಲುವು ಸ್ಪಷ್ಟವಾಗಿರಲಿ
    ಇದ್ಯಾವುದೂ ಕೂಡ ನಡೆಯುವುದಿಲ್ಲ ಎಂದು ಗೊತ್ತಾದ ಬಳಿಕ ಲಿಂಗಾಯಿತರಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದೀರಿ, ಅದನ್ನು ಹೇಳುವುದಕ್ಕೆ ನೀವು ಯಾರು? 50 ವರ್ಷದಿಂದ ಒಬ್ಬೇ ಒಬ್ಬ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ನಿಮ್ಮ ಕೈಯಲ್ಲಿ ಆಗಿಲ್ಲ. ಮುಖ್ಯಮಂತ್ರಿಯಾದ 9 ತಿಂಗಳಲ್ಲಿ ವಿರೇಂದ್ರ ಪಾಟೀಲ್​ ಅವರನ್ನು ಹೀನಾಯವಾಗಿ ಹೊರಗಡೆಯಾಕಿದ್ರಿ, ರಾಜಶೇಖರ್​ ಮೂರ್ತಿ ಅವರಿಗೆ ಮೋಸ ಮಾಡಿದ್ರಿ, ಹೇಳೋಕೆ ನೀವು ಯಾರು? ಚುನಾವಣೆ ಲಾಭಕ್ಕಾಗಿ ನಮ್ಮ ಲಿಂಗಾಯತ ಧರ್ಮವನ್ನು ಒಡೆಯುವಂತಹ ಕೆಲಸ ಮಾಡಿದ್ರಿ, ಯಾರಿಗೆ ಹೇಳುತ್ತೀರ ನಮ್ಮ ಲಿಂಗಾಯತ ಧರ್ಮದ ಬಗ್ಗೆ? ಈಗ ಲಿಂಗಾಯಿತರು ಮತ್ತು ಒಕ್ಕಲಿಗರಿಗೆ ಶೇ. 2ರಷ್ಟು ಮೀಸಲಾತಿಯನ್ನು ಹೆಚ್ಚಿಗೆ ನೀಡಿದರೆ, ನಾವು ಅದನ್ನು ನಿಲ್ಲಿಸುತ್ತೇವೆ ಎಂದು ಹೇಳುತ್ತಿದ್ದೀರಿ, ಅವರ ಮೀಸಲಾತಿಯನ್ನು ಕಿತ್ತು ನೀವು ಬೇರೆಯವರಿಗೆ ಕೊಡುತ್ತೀರಾ? ಈ ಬಗ್ಗೆ ಸ್ಪಷ್ಟವಾಗಿ ಹೇಳಿ. ನಿಮ್ಮ ನಿಲುವು ಸ್ಪಷ್ಟವಾಗಿರಲಿ.

    ಜಿಲೇಬಿ ಅಂದರೆ ಜನಕ್ಕೆ ಗೊತ್ತಿಲ್ವಾ?
    ಒಬ್ಬರು ಮಾಜಿ ಸಿಎಂ (ಜಗದೀಶ ಶೆಟ್ಟರ್​) ಹಾಗೂ ಮಾಜಿ ಡಿಸಿಎಂ (ಲಕ್ಷ್ಮಣ ಸವದಿ) ಅನ್ನು ಪಕ್ಷಕ್ಕೆ ಸೇರಿಸಿಕೊಂಡ ಮಾತ್ರಕ್ಕೆ ದೊಡ್ಡ ಶಕ್ತಿ ಬಂದಹಾಗೆ ಆಗಿದೆಯಾ? ಇಂದು ಜನರು ಜಾಗೃತರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಆಚೆ-ಈಚೆ ಹೋಗುವುದು ಸಾಮಾನ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಯಾರು ಕಷ್ಟ ಕಾಲದಲ್ಲಿ ನಿಂತಿದ್ದಾರೆ ಎಂಬುದು ಗೊತ್ತಿದೆ. ಯಾವ ಸಮಾಜಕ್ಕೆ ಗೌರವ ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ನಿಮ್ಮ ಕಾಲದಲ್ಲಿ ಜಿಲೇಬಿ ಎಂದು ಫೈಲ್​ ಮಾಡಿದ್ರಲ್ಲ, ಜಿಲೇಬಿ ಅಂದರೆ ಜನಕ್ಕೆ ಗೊತ್ತಿಲ್ವಾ? ಗೌಡರು, ಲಿಂಗಾಯಿತರು ಮತ್ತು ಬ್ರಾಹ್ಮಣರು ಎಂಬುದು ಗೊತ್ತಿಲ್ವಾ? ಜಿಲೇಬಿ ಫೈಲ್​ ಬಂದ ತಕ್ಷಣ ಆಚೆಗೆ ಬಿಸಾಕುತ್ತಿದ್ರಿ. ಇದು ನಿಮ್ಮ ನೀತಿ-ನಿಯಮನಾ? ಯಾರಿಗೆ ಹೇಳ್ತೀರಾ ನೀವು?

    ಬೆಂಬಲ ನೀಡಿ
    ನಾನು ಮಹಾಜನತೆಯಲ್ಲಿ ಕೇಳುವುದೇನೆಂದರೆ, ಈ ಸುಳ್ಳು-ಪೊಳ್ಳು ಮಾತುಗಳಿಗೆ ಮರುಳಾಗುವ ಅವಶ್ಯಕತೆ ಇಲ್ಲ. ಡಬಲ್​ ಇಂಜಿನ್​ ಸರ್ಕಾರವಿದೆ. ನರೇಂದ್ರ ಮೋದಿ ಅವರ ಸಂಪೂರ್ಣ ಬೆಂಬಲ ಇದೆ. ರಸ್ತೆಗೆ, ರೈಲಿಗೆ, ಕ್ರೀಡೆಗೆ ಹಾಗೂ ಕುಡಿಯುವ ನೀರು ಸೇರಿದಂತೆ ಹಲವಾರು ಯೋಜನೆಗಳಿಗೆ ಸಾವಿರಾರು ಕೋಟಿ ಹಣ ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರ ಸಹ ಅಷ್ಟೇ ಹಣವನ್ನು ವಿನಿಯೋಗಿಸುತ್ತಿದೆ. ಡಬಲ್​ ಇಂಜಿನ್​ ಸರ್ಕಾರದಿಂದ ರೈತರಿಗೆ, ಕೂಲಿಕಾರರಿಗೆ, ದುಡಿಯುವ ವರ್ಗಕ್ಕೆ, ಹೆಣ್ಣು ಮಕ್ಕಳಿಗೆ, ಯುವಕರಿಗೆ, ದೀನ-ದಲಿತ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವುದು ಮಾತ್ರವಲ್ಲ, ಅವಕಾಶಗಳನ್ನು ನೀಡಿದ್ದೇವೆ. ಸ್ವಾವಲಂಬಿಗಳಾಗಿ ಮಾಡಲು ಸರ್ಕಾರ ಮನೆ ಮನೆಗಳನ್ನು ತಲುಪಿದೆ. ಮೀಸಲಾತಿ ಉಳಿಯಬೇಕಾದರೆ, ರಾಜ್ಯದ ಅಭಿವೃದ್ಧಿಯಾಗಬೇಕಾದರೆ ನೀವು ಬಿಜೆಪಿಗೆ ಮನಪೂರ್ವಕವಾದ ಬೆಂಬಲ ನೀಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ದ್ವಿತೀಯ ಪಿಯು ಫಲಿತಾಂಶ: ವಿಷಯವಾರು ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಹೀಗಿದೆ..

    ಪಿಯುಸಿ ಫಲಿತಾಂಶ: ಮೂರು ಪ್ರಥಮ ಸ್ಥಾನಗಳು ಹೆಣ್ಮಕ್ಕಳ ಮುಡಿಗೆ

    ದ್ವಿತೀಯ ಪಿಯು ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಮೇಲುಗೈ, ಯಾದಗಿರಿಗೆ ಕೊನೇ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts