More

    ಕುವೆಂಪು ಸಾಹಿತ್ಯದಲ್ಲಿ ಪೂರ್ಣತ್ವದ ದರ್ಶನ; ನುಡಿದಂತೆ ಬದುಕಿದ ರಸಋಷಿ..

    ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ಆಯೋಜಿಸಿದ್ದ ಕ್ಲಬ್​ಹೌಸ್ ಸಂವಾದದಲ್ಲಿ ಕುವೆಂಪು ಅವರ ಜೀವನ, ಸಾಹಿತ್ಯ, ದರ್ಶನದ ಕುರಿತು ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್.ರವಿಕಾಂತೇಗೌಡ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚೆ ಹಂಚಿಕೊಂಡ ಮಾಹಿತಿ ಇಲ್ಲಿ ನೀಡಲಾಗಿದೆ.

    | ಬಿ.ಆರ್. ರವಿಕಾಂತೇಗೌಡ

    ಕುವೆಂಪು ಅವರನ್ನು ಕವಿಯಾಗಿ, ರಸಋಷಿಯಾಗಿ, ನಾಟಕಗಳ ಮೂಲಕ ನೋಡುವಾಗ ಅವರ ಆಲೋಚನಾಕ್ರಮಕ್ಕೆ ಇರುವ ವೈಚಾರಿಕ ನಿಲುವು ತಿಳಿಯುತ್ತದೆ. ಅವರು ನಮ್ಮ ನಡುವಿನ ದೊಡ್ಡ ವೈಚಾರಿಕ ಶಕ್ತಿ. ‘ನನ್ನನ್ನು ವೈಚಾರಿಕವಾಗಿ ನೋಡದೆ ಕೇವಲ ಕವಿಯಾಗಿ, ದಾರ್ಶನಿಕನಾಗಿ ಯಾರು ಸ್ವೀಕರಿಸುತ್ತಾರೋ ಅವರು ನನ್ನನ್ನು ಪೂರ್ಣ ಅರಿತಂತೆ ಅಗುವುದಿಲ್ಲ’ ಎಂದಿದ್ದಾರೆ ಕುವೆಂಪು.

    ಕುವೆಂಪು ಸಾಹಿತ್ಯದಲ್ಲಿ ಪೂರ್ಣತ್ವದ ದರ್ಶನ; ನುಡಿದಂತೆ ಬದುಕಿದ ರಸಋಷಿ..

    ಅವರ ಸಾಹಿತ್ಯವನ್ನು ಓದುವ ಸಂದರ್ಭದಲ್ಲಿ ಈ ಮಾತುಗಳನ್ನು ಸ್ಮರಿಸಬೇಕು. ಅವರ ವೈಚಾರಿಕತೆಯನ್ನು ತಿಳಿಯುವ ಪ್ರಯತ್ನ ಮಾಡಬೇಕು. ರೈತಗೀತೆ ಮೂಲಕ ಆ ಕಾಲಕ್ಕೆ ರೈತರ ಪರ ದನಿ ಎತ್ತಿದರು. ಅವರ ಜೀವನವೇ ವಿಶ್ವಮಾನವ ತತ್ತ್ವವಾಗಿ ಅರಳಿದೆ. ಕನ್ನಡದ ಮಟ್ಟಿಗೆ ಒಂದು ಸಾಂಸ್ಕೃತಿಕ ವಿದ್ಯಮಾನ ಕುವೆಂಪು. ‘ಬರೀ ಸಾಹಿತ್ಯವನ್ನು ರಚನೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ನನ್ನ ಬರಹದ ಮೂಲಕ ಈ ಜನರಿಗೆ ಏನಾದರೂ ಸಹಾಯವಾದರೆ ಅದರಿಂದ ಒಂದು ಆಧ್ಯಾತ್ಮಿಕ ಸಮಾಧಾನವನ್ನು ಕಂಡುಕೊಳ್ಳುತ್ತೇನೆ, ಅದು ಈ ಸಾಹಿತ್ಯದ ಪಟ್ಟಕ್ಕಿಂತ ಮುಖ್ಯವಾದದ್ದು’ ಎಂದು ಅವರನ್ನು ಒಮ್ಮೆ ರಸಋಷಿ ಎಂದು ಕರೆದಾಗ ಹೇಳಿದ್ದರು. ಕುವೆಂಪು ಹೇಳಿದ್ದೊಂದು ಬದುಕಿದ್ದೊಂದು ಅಲ್ಲ. ಬದುಕು ಹಾಗೂ ಬರಹದಲ್ಲಿ ಭಿನ್ನತೆಯನ್ನು ಕಾಣುವುದಿಲ್ಲ. ಅವರ ವೈಚಾರಿಕ ನಿಲುವು ಎಂದಿಗೂ ಜನವಿರೋಧಿಯಾಗಿರಲಿಲ್ಲ. ಮೈಸೂರು ಭಾಗದ ಅನೇಕರು ವಿಶಾಲ ಕರ್ನಾಟಕಕ್ಕೆ ವಿರುದ್ಧವಾಗಿದ್ದ ಸಂದರ್ಭದಲ್ಲಿ ಅವರು ದಿಟ್ಟವಾಗಿ ಕನ್ನಡ ನಾಡು ಏಕೀಕರಣವಾಗಬೇಕು ಎಂದರು. ಇದನ್ನು ವಿಶಾಲ ಮೈಸೂರು ಎಂದರೆ ಸಾಲದು, ಕರ್ನಾಟಕ ಎನ್ನಬೇಕು ಎಂಬ ದಿಟ್ಟ ನಿಲುವನ್ನು ತಳೆದರು. ಕುವೆಂಪು ಅವರ ಮೇಲೆ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಯೋಗಿ ಅರವಿಂದರ ಪ್ರಭಾವ ಅಪಾರ. ಅವರ ಎರಡು ಮಹಾ ಕಾವ್ಯಗಳೂ ಅನಿಕೇತನ ತತ್ತ್ವವನ್ನು ಪ್ರತಿಪಾದಿಸುತ್ತವೆ. ‘ತೆನೆ ಹಕ್ಕಿ’ ಎಂಬ ಪದ್ಯದಲ್ಲಿ ಅವರ ಜೀವನದೃಷ್ಟಿ ಕಾಣುತ್ತದೆ. ಆ ಕವಿತೆಯಲ್ಲಿ,

    ‘ಹಗಲಿನಲ್ಲಿ ನೆಲಕೆ ಸೇರಿ,

    ಇರುಳಿನಲ್ಲಿ ಬಾನ್ಗೆ ಹಾರಿ

    ಬಿಸಿಲು, ತಂಪುಗಳನು ಮೀರಿ

    ಸಮತೆಯಿಂದ ನಡೆವುದಂ

    ಕಲಿಸು ನನಗೆ ಮೊದಲು; ಕೊನೆಗೆ

    ನೆಲ ಬಾನ್ಗಳ ಪಡೆವುದಂ!’ ಎನುತ್ತಾರೆ. ಅಂದರೆ, ನೆಲದಿಂದ ಬಾನಿನ ಕಡೆಗೆ ಅವರ ಪ್ರಯಾಣ ಇದ್ದರೂ ಅವರು ನೆಲವನ್ನು ಎಂದಿಗೂ ಮರೆಯುವುದಿಲ್ಲ.

    ವಿಶ್ವಮಾನವ ತತ್ತ್ವ: ವಿಶ್ವಮಾನವ ತತ್ತ್ವ ಎನ್ನುವುದು ಅವರು ವಿಕಾಸಗೊಂಡ ರೀತಿ. ‘…ಓ ಬನ್ನಿ ಸೋದರರೇ ವಿಶ್ವಪಥಕೆ’ ಎಂದು ಬೆಂಗಳೂರು ವಿವಿ ಘಟಿಕೋತ್ಸವದಲ್ಲಿ ಮಾಡಿದ ಭಾಷಣದಲ್ಲಿ ಕರೆ ನೀಡಿದರು. ಯುವಕರು ಮಾತ್ರ ಸಮಾಜದಲ್ಲಿ ಪರಿವರ್ತನೆ ತರಬಹುದು ಎಂಬ ನಂಬಿಕೆ ಅವರಿಗಿತ್ತು. ಇಂಜಿನಿಯರಿಂಗ್ ಓದುವಾಗ ಅವರನ್ನು ಭೇಟಿಯಾಗುವ ಸುಸಂದರ್ಭ ಒದಗಿಬಂದಿತ್ತು. ವ್ಯಕ್ತಿ ತನ್ನ ಘನತೆಯಲ್ಲಿ ತಾನು ನಂಬಿಕೆಯಿಟ್ಟು ಮುಂದುವರಿಯಬೇಕು ಎಂದು ಹೇಳಿದ್ದರು. ಕೊನಗೆ ಹೊರಡುವಾಗ ನಮಸ್ಕಾರ ಮಾಡಲು ಮುಂದಾದಾಗ ಕಾಲನ್ನು ಹಿಂದಕ್ಕೆ ತೆಗೆದರು. ‘ಹಿರಿಯರೆಲ್ಲ ಬೆಂದುಹೋದ ಮಡಕೆಗಳು. ನಾವು ಆ ಮಡಕೆಯನ್ನು ಒಡೆಯಬಹುದೇ ಹೊರತು ಅದರಲ್ಲಿ ಕಲ್ಲನ್ನು ಹೊಕ್ಕಿಸಲು ಸಾಧ್ಯವಿಲ್ಲ. ನೀವು ಯುವಕರು ಇನ್ನೂ ಹಸಿಮಡಕೆಗಳು, ನಿಮ್ಮಲ್ಲಿ ಈ ವಿಚಾರಗಳು ಹೊಕ್ಕಬೇಕು. ಮನುಷ್ಯ ಘನತೆಯಿಂದ ಗೌರವದಿಂದ ಬದುಕಬೇಕು ಎಂಬ ತತ್ತ್ವವೇ ವಿಶ್ವಮಾನವ ತತ್ತ್ವ’ ಎಂದಿದ್ದರು.

    ಖಂಡಿಸುವ, ಪ್ರಶ್ನಿಸುವ ಧೈರ್ಯ: ಕುವೆಂಪು ನಿಜವಾದ ಅರ್ಥದಲ್ಲಿ ಕ್ರಾಂತಿಕಾರಿ ಕವಿ. ಏಕೆಂದರೆ ಬಹುಶಃ ವಚನಕಾರರ ನಂತರ ಸಮಸಮಾಜವನ್ನು ನಿರ್ಮಾಣ ಮಾಡಬೇಕು ಎನ್ನುವುದನ್ನು ಇಷ್ಟು ಗಟ್ಟಿಯಾಗಿ ಕಳೆದ ಶತಮಾನದಲ್ಲಿ ಹೇಳಿದವರು ಬೇರೆಯವರಿಲ್ಲ ಎನ್ನಿಸುತ್ತದೆ. ಸತತ ಆರು ದಶಕಗಳ ಕಾಲ ಸಾಹಿತ್ಯ ರಚನೆ ಮಾಡುತ್ತಲೇ ಅವರು ಸಮಸಮಾಜದ ನಿರ್ವಣಕ್ಕೆ ಬೇಕಾದ ದೃಷ್ಟಿಕೋನವನ್ನು ಕಾಣ್ಕೆಯಾಗಿ ನಮ್ಮ ಕನ್ನಡದ ಸಮಾಜಕ್ಕೆ ನೀಡಿದರು. ಇದೇ ಕಾರಣಕ್ಕೆ ಅವರು ಕ್ರಾಂತಿಕಾರಿ ಕವಿ. ‘ಕನ್ನಡ ಜಗತ್ತಿನ ಚಿಂತನಾ ಪರಂಪರೆಯನ್ನು ಇನ್ನೊಂದು ಆಯಾಮಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ ಕವಿ’ ಎಂದು ಜಿಎಸ್​ಎಸ್ ಹೇಳಿದ್ದಾರೆ. ಕನ್ನಡ, ರೈತ, ದಲಿತ, ಸಮಾಜವಾದದ ಸಂದರ್ಭವೇ ಇರಬಹುದು, ಎಲ್ಲದರಲ್ಲೂ ಕ್ರಿಯಾಶೀಲವಾದ ಕವಿಯಾಗಿ ಕಾಣಿಸುತ್ತಾರೆ.

    ಎರಡು ಮಹಾಕಾವ್ಯಗಳು: ‘ಶ್ರೀರಾಮಾಯಣ ದರ್ಶನಂ’ ರಚನೆ ಕಾಲಕ್ಕೆ ಅವರ ಮೇಲೆ ದಟ್ಟ ಪರಿಣಾಮ ಬೀರಿದ್ದು ವೇದ, ಉಪನಿಷತ್ತು. ಅವರು ಮಧ್ಯಭಾಗದಲ್ಲಿ ಅರವಿಂದರ ದರ್ಶನಕ್ಕೆ ತಮ್ಮನ್ನು ತಾವು ತೆರೆದುಕೊಂಡಿದ್ದರು. ಇಡೀ ಕಾವ್ಯದ ರಚನೆಯಲ್ಲಿ ಕುವೆಂಪು ಅವರು ಮಾಡಿರುವ ದೊಡ್ಡ ಜಾದೂ ಎಂದರೆ ಇಡೀ ಜಗತ್ತನ್ನು ಒಂದು ವಿರಾಟ ಮನಸ್ಸು ಆಳುತ್ತಿದೆ, ಆದರೆ ಆ ರೀತಿ ಆಳುತ್ತಿರುವ ಸಂದರ್ಭದಲ್ಲೂ ಇಲ್ಲಿರುವ ಜೀವಿಗಳಿಗೆ ತನ್ನದೇ ಆದ ಸ್ವತಂತ್ರ ಇಚ್ಛೆಯನ್ನು ಅದು ಕೊಟ್ಟಿದೆ. ಹೀಗಾಗಿ ಒಂದನ್ನು ಬಿಟ್ಟು ಒಂದು ಇರಲಾರದು ಎಂಬ ವಿಚಾರ. ಅವರು ಪ್ರತಿಪಾದಿಸಿದ ಸ್ತ್ರೀವಾದದ ತತ್ತ್ವಗಳ ಮೇಲೆ ಬೇರೆ ಬೇರೆ ಟೀಕೆಗಳಿವೆ. ಅದಾಗಿಯೂ ಅವರು ‘ಶ್ರೀರಾಮಾಯಣ ದರ್ಶನಂ’ನಲ್ಲಿ ಮಾಡಿರುವ ದೊಡ್ಡ ಬದಲಾವಣೆ ಎಂದರೆ ಈ ಕಾಲದ ಎಲ್ಲ ಮೌಲ್ಯಗಳನ್ನು ಅನಾವರಣಗೊಳಿಸಿದ್ದಾರೆ. ಮಂಥರೆ ಮೂಲಕ, ಪಾಪಿಗೂ ಉದ್ಧಾರಕ್ಕೆ ಆಸ್ಪದವಿದೆ ಎನ್ನುವುದನ್ನು ತಿಳಿಸಿದ್ದಾರೆ.

    ಕುವೆಂಪು ಸಾಹಿತ್ಯದಲ್ಲಿ ಪೂರ್ಣತ್ವದ ದರ್ಶನ; ನುಡಿದಂತೆ ಬದುಕಿದ ರಸಋಷಿ..

    ಮಂತ್ರಮಾಂಗಲ್ಯ: ಕೇವಲ ತಾತ್ವಿಕ ಕಾರಣಕ್ಕೆ ಕುವೆಂಪು ಅವರು ಮಂತ್ರಮಾಂಗಲ್ಯವನ್ನು ಪ್ರತಿಪಾದಿಸಿದ್ದಲ್ಲ. ರೈತರು, ಜನಸಾಮಾನ್ಯರು ಆಸ್ತಿ ಮಾರಿಕೊಂಡು ಮದುವೆ ಮಾಡುತ್ತಾರೆ. ದುಂದುವೆಚ್ಚದಿಂದ ಸಂಸಾರಗಳೇ ಆರ್ಥಿಕವಾಗಿ ನಲುಗಿ ಹೋಗುತ್ತಿವೆ ಎಂಬ ಕಾರಣಕ್ಕೆ, ವೇದಗಳ ಮಂತ್ರವನ್ನು ಸರಳವಾಗಿ ಕನ್ನಡಕ್ಕಿಳಿಸಿದರು. ಅರ್ಥ ಗೊತ್ತಿಲ್ಲದ ಮಂತ್ರಗಳನ್ನು ಏಕೆ ಕೇಳುತ್ತೀರಿ ಎಂದು ವಿವಾಹ ಸಂಹಿತೆ ಬರೆದರು. ವೈವಾಹಿಕ ಸಂದರ್ಭದಲ್ಲಿ ವೈಚಾರಿಕ ದೃಢನಿರ್ಧಾರ ಕೈಗೊಳ್ಳಬೇಕು ಎಂದು ಮಂತ್ರಮಾಂಗಲ್ಯವನ್ನು ಪ್ರತಿಪಾದಿಸಿದರು.

    ಕವಿಯ ದರ್ಶನ: ದರ್ಶನದ ವಿರಾಟ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ಕವಿಯಾದವನು ಪೂರ್ಣ ದೃಷ್ಟಿ ಹೊಂದಿರಬೇಕು. ಕುವೆಂಪು ಸಾಹಿತ್ಯದ ಮೂಲಕ ಈ ಜಗತ್ತನ್ನು ಇನ್ನಷ್ಟು ಪರಿಪೂರ್ಣವಾಗಿ ನೋಡಲು ಸಾಧ್ಯವಾಗಿದೆ. ‘ನಮ್ಮಮ್ಮ ಜಗದಮ್ಮ’ ಕವಿತೆ ಅವರ ಪೂರ್ಣ ತತ್ತ್ವಕ್ಕೆ ಜಗತ್ತಿನ ಪೂರ್ಣ ದರ್ಶನಕ್ಕೆ ಸಾಕ್ಷಿಯಾಗಿದೆ. ಇದು ಈಶ್ಯಾವಾಸ್ಯಉಪನಿಷತ್ ಕೃಷ್ಣ ಯುಜುರ್ವೆದದ ‘ಪೂರ್ಣಮದಂ ಪೂರ್ಣಮಿದಂ…’ ಶ್ಲೋಕದ ಕನ್ನಡ ಅನುವಾದದ ಹಾಗೆ ಕಾಣಿಸುತ್ತದೆ.

    ‘ಸೂರ್ಯೋದಯ, ಚಂದ್ರೋದಯ ದೇವರ ದಯ ಕಾಣೋ…’ ಎಂಬ ಅವರ ಕಾವ್ಯದ ಮೇಲೆ ಉಪನಿಷತ್ತುಗಳ ದಟ್ಟವಾದ ಪ್ರಭಾವ ಕಾಣಬಹುದು. ಪೂರ್ಣತೆ ಎಂದರೆ ಭಾರತೀಯ ತತ್ತ್ವಶಾಸ್ತ್ರದಲ್ಲಿ ಶೂನ್ಯ ಎಂದರ್ಥ. ಶೂನ್ಯದಿಂದ ಕೂಡಿದರೂ, ಕಳೆದರೂ, ಭಾಗಿಸಿದರೂ ಶೂನ್ಯವೇ ಆಗಿರುತ್ತದೆ. ಶೂನ್ಯ ಎಂದರೆ ಇಲ್ಲವಾದದ್ದಲ್ಲ. ಅದು ಎಲ್ಲವನ್ನೂ ಒಳಗೊಂಡಿರುವುದು ಎಂದರ್ಥ. ಕುವೆಂಪು ಅವರ ತಮ್ಮ ಬರಹದಲ್ಲಿ ಕರಿಸಿದ್ಧನ ಹಾಡು ಕಥನ ಕವನದಲ್ಲಿ ಕರಿಸಿದ್ಧನ ಸಾವು ಹಾಗೂ ಪಾರ್ಲಿಮೆಂಟಿನಲ್ಲಿ ನಡೆದಿತ್ತೊಂದು ಭಾಷಣದ ಜತೆಗೆ ಹೋಲಿಕೆ ಮಾಡುತ್ತ ಜಗತ್ತಿನ ಎಲ್ಲ ಘಟನೆಗಳು ಏಕಕಾಲಕ್ಕೆ ಹೇಗೆ ಸಂಭವಿಸುತ್ತವೆ ಎನ್ನುವುದನ್ನು, ಅದರಲ್ಲಿ ಯಾವ ತರತಮವೂ ಇಲ್ಲ ಎಂಬುದನ್ನು ಸೂಚಿಸಿದ್ದಾರೆ. ಅದುವೇ ಅವರ ಸಾಹಿತ್ಯದ ದರ್ಶನ.

    ಸಾಹಿತ್ಯದಲ್ಲಿ ಮಾಂತ್ರಿಕತೆ: ನೊಬೆಲ್ ಪ್ರಶಸ್ತಿಗಾಗಿ ಭಾರತ ಸಾಹಿತ್ಯದಲ್ಲಿ ಅನನ್ಯ ಕೊಡುಗೆ ನೀಡಿದ ಸಾಹಿತಿ ಕುರಿತು ಚರ್ಚೆ ನಡೆದಾಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಆಗಿನ ಅಧ್ಯಕ್ಷರಾಗಿದ್ದ ಗೋಕಾಕರು ಕುವೆಂಪು ಅವರ ಹೆಸರು ಉಲ್ಲೇಖಿಸುತ್ತಾರೆ. ಆಧುನಿಕ ಭಾರತದಲ್ಲಿರುವ ಎಲ್ಲ ಭಾಷೆಯ ಲೇಖಕರನ್ನು ಪರಿಶೀಲಿಸಿದಾಗ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸಮತೂಕದಲ್ಲಿ ಕೆಲಸ ಮಾಡಿರುವ ಶ್ರೇಷ್ಠ ಬರಹಗಾರ ಕುವೆಂಪು ಎಂದು ವಿವರಿಸಿದಾಗ ಅದನ್ನು ಎಲ್ಲ ಭಾಷೆಯ ಲೇಖಕರು ಒಪ್ಪಿ ಸಮ್ಮತಿ ಸೂಚಿಸಿದರು. ಅದು ಕುವೆಂಪು ಅವರ ಬರಹದ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.

    ಸುಶ್ರಾವ್ಯ ಗಾಯನ: ಕುವೆಂಪು ರಚನೆಗಳನ್ನು ಗಾಯನ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು. ಜನಪದ, ರಂಗಭೂಮಿ ಕಲಾವಿದ ದೇವೇಂದ್ರ ವರಪ್ರಸಾದ ಮತ್ತು ಗಾಯಕಿ ಅಕ್ಷತಾ ಬಣ್ಣದಬಾವಿ ಅವರ ಸುಶ್ರಾವ್ಯ ಗಾಯನ ಗಮನ ಸೆಳೆಯಿತು.

    ಕುವೆಂಪು ಸಾಹಿತ್ಯದಲ್ಲಿ ಪೂರ್ಣತ್ವದ ದರ್ಶನ; ನುಡಿದಂತೆ ಬದುಕಿದ ರಸಋಷಿ..

    | ಎಂ.ಎನ್.ನಂದೀಶ್ ಹಂಚೆ

    ಪ್ರಸಿದ್ಧ ವಿದ್ವಾಂಸರು ಹೇಳುವಂತೆ, ದೇಶಕಾಲ, ಚರಿತ್ರೆಗಳನ್ನು ಪ್ರಭಾವಿಸುವ ಕವಿ ಯುಗದ ಕವಿ ಆಗುತ್ತಾನೆ. ಈ ನಿಟ್ಟಿನಲ್ಲಿ ಕುವೆಂಪು ಅವರ ಸಾಹಿತ್ಯ ದರ್ಶನವನ್ನು ಯುಗದ ಕವಿ, ಜಗದ ಕವಿ, ರಸಋಷಿ ಕವಿ ಎಂದು ಮೂರು ಉಕ್ತಿಗಳ ಮೂಲಕ ನೋಡಬಹುದಾಗಿದೆ. ಕುವೆಂಪು ಅವರು ಕನ್ನಡ ನೆಲದಲ್ಲಿ ನಿಂತು ಬರೆಯುತ್ತಿದ್ದರೂ, ವಿಶ್ವವ್ಯಾಪಿ ಮತ, ತತ್ತ್ವ, ಧರ್ಮಗಳನ್ನು ಒಳಗೊಂಡ ಕಾರಣ ಅವರ ಕಾವ್ಯಗಳು ಪೂರ್ಣ ದೃಷ್ಟಿಯಿಂದ ಕೂಡಿವೆ. ಕುವೆಂಪು ಅವರೇ ಹೇಳುವಂತೆ ದರ್ಶನ ಎಂದರೆ ಅಗೋಚರವಾಣಿ ಕಾಣ್ಕೆ. ಕವಿಯಾದವನು ಋಷಿಯಾಗದಿದ್ದರೆ ಕಾವ್ಯ ರಚಿಸಲು ಸಾಧ್ಯವಿಲ್ಲ. ‘ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ’ ಎಂಬ ಲೇಖನದಲ್ಲಿ ಈ ಕುರಿತು ಅವರು ಸುದೀರ್ಘವಾಗಿ ರ್ಚಚಿಸಿದ್ದಾರೆ. ಕಲೆ, ರಾಜಕೀಯ, ವಿಜ್ಞಾನ ಮತತತ್ತ್ವಗಳ ಒಳಗೆ ಇರಬೇಕಾದ ದರ್ಶನ ಕುರಿತು ಕುವೆಂಪು ಅವರೇ ಮಾತನಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts