ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ “ಕ್ಲೀನ್ ಸ್ವೀಪ್” ಮಾಡಲಿದೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಪ್ರತಿಪಾದಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎಗೆ ಮರಳಿದ ಒಂದು ದಿನದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎಗೆ ಮರಳುತ್ತಿದ್ದಂತೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು “ಕ್ಲೀನ್ ಸ್ವೀಪ್” ಮಾಡಲಿದೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಪ್ರತಿಪಾದಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಅವರು, ಆರ್‌ಜೆಡಿ ಮತ್ತು ಕಾಂಗ್ರೆಸ್‌ಗಳನ್ನು ಒಳಗೊಂಡಿರುವ ಮೈತ್ರಿಕೂಟವನ್ನು ಮೂಲೆಗುಂಪು ಮಾಡಿದ್ದಕ್ಕಾಗಿ ನಿತೀಶ್ ಕುಮಾರ್ ಅವರನ್ನು ಟೀಕಿಸಿದ್ದಾರೆ. ನಿತೀಶ್ ಕುಮಾರ್ ಅವರು “ತಮ್ಮ ಜೀವನದ ಕೊನೆಯ ಇನ್ನಿಂಗ್ಸ್ ಆಡುತ್ತಿದ್ದಾರೆ” ಎಂದೂ ಹೇಳಿದ್ದಾರೆ.
ನಿತೀಶ್ ಕುಮಾರ್ ಅವರನ್ನು “ಕುತಂತ್ರಿ” ಎಂದು ಜರೆದಿರುವ ಪ್ರಶಾಂತ್ ಕಿಶೋರ್, 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು 20 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
“ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಯಾವುದೇ ಮೈತ್ರಿಕೂಟದಲ್ಲಿದ್ದುಕೊಂಡು ಹೋರಾಡಿದರೂ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಅವರು 20 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದರೆ ನಾನು ನನ್ನ ಕೆಲಸವನ್ನು ತ್ಯಜಿಸುತ್ತೇನೆ” ಎಂದು ಅವರು ಸವಾಲು ಹಾಕಿದ್ದಾರೆ.
ಬಿಜೆಪಿಯನ್ನು ಫ್ಲಿಪ್-ಫ್ಲಾಪ್‌ಗಳ ಪಕ್ಷ ಎಂದು ಕರೆದಿರುವ ಪ್ರಶಾಂತ್ ಕಿಶೋರ್, 2025 ರ ವಿಧಾನಸಭೆ ಚುನಾವಣೆಯ ಮೊದಲು ಜೆಡಿಯು-ಬಿಜೆಪಿ ಮೈತ್ರಿ ಅಸ್ತಿತ್ವದಲ್ಲಿರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಜನ ಅವರನ್ನು ತಿರಸ್ಕರಿಸಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಬಹುದು ಎಂದಿದ್ದಾರೆ.
“ಬಿಹಾರದಲ್ಲಿ ನಿತೀಶ್ ಕುಮಾರ್ ಮಾತ್ರವಲ್ಲ, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ‘ಪಲ್ಟು ರಾಮ್’ಗಳಾಗಿವೆ. ಈ ಬೆಳವಣಿಗೆ ಬಿಜೆಪಿಗೆ ಹಾನಿ ಮಾಡುತ್ತದೆ. ಬಿಹಾರದಲ್ಲಿ ಅದು ಸ್ವಂತವಾಗಿ ಸ್ಪರ್ಧಿಸಿದ್ದರೆ, ಅದು ಗೆಲ್ಲುವ ಪ್ರಬಲ ಸ್ಥಿತಿಯಲ್ಲಿರುತ್ತಿತ್ತು,” ಎಂದು ರಾಜಕೀಯ ತಂತ್ರಜ್ಞ ಹೇಳಿದ್ದಾರೆ.