More

    ಸಿಟಿ ಸ್ಮಾರ್ಟ್ ಆದರೂ ಕುಡಿಯಲು ನೀರಿಲ್ಲ..!

    ಬೆಳಗಾವಿ : ಸದ್ಯ ಹಿಡಕಲ್ ಜಲಾಶಯ ಮತ್ತು ರಕ್ಕಸಕೊಪ್ಪ ಜಲಾಶಯಗಳು ಭರ್ತಿಯಾಗಿದ್ದರೂ ಬೆಳಗಾವಿ ಸ್ಮಾರ್ಟ್ ಸಿಟಿಯ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಜೀವಜಲದ ಅಲಭ್ಯತೆಯಿಂದಾಗಿ ಖಾಸಗಿ ಟ್ಯಾಂಕರ್‌ಗಳಿಗೆ ಪ್ರತಿ 4 ದಿನಕ್ಕೊಮ್ಮೆ 500 ರಿಂದ 800 ರೂ. ಖರ್ಚು ಮಾಡುವಂತಾಗಿದೆ.

    ಕಳೆದ ನಾಲ್ಕೈದು ವಾರಗಳಿಂದ ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿ ಕಾಡುತ್ತಿದೆ. ಉಳ್ಳವರು ಮಾರುಕಟ್ಟೆಯಿಂದ ದಿನವೂ ಹಣ ಕೊಟ್ಟು ವಿವಿಧ ಕಂಪನಿಗಳ ನೀರಿನ ಕ್ಯಾನ್ ತಂದು ಕೊಳ್ಳುತ್ತಿದ್ದಾರೆ. ಆದರೆ, ಮಧ್ಯಮ ಹಾಗೂ ಆರ್ಥಿಕವಾಗಿ ಸ್ಥಿತಿವಂತರಲ್ಲದವರು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಸುತ್ತಲಿನ ಪ್ರದೇಶದಲ್ಲಿ ಬೋರ್ವೆಲ್ ಹೊಂದಿರುವ ಮನೆಗಳಿಗೆ ತೆರಳಿ, ‘ಇಂದೂ ನೀರು ಬಂದಿಲ್ಲ. ಕುಡಿಯಲು ಒಂದು ಬಿಂದಿಗೆ ನೀರು ಕೊಡಿ’ ಎಂದು ಬೇಡಿ ತರುವ ಸಂದರ್ಭ ಬಂದೊದಗಿದೆ.

    10 ದಿನಕ್ಕೊಮ್ಮೆ ಪೂರೈಕೆ: ರಾಮತೀರ್ಥ ನಗರ, ಸಮರ್ಥ ನಗರ, ಆಟೋ ನಗರ, ಮಹಾಂತೇಶ ನಗರ, ಅನಗೋಳ, ಶಹಾಪುರ, ವಡಗಾಂವಿ, ಹನುಮಾನ ನಗರ, ನೆಹರು ನಗರ, ಎಪಿಎಂಸಿ ಮಾರುಕಟ್ಟೆ ಪ್ರದೇಶ, ಗಾಂಧಿ ನಗರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಾಗದೆ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ, ದಿನದ 24 ಗಂಟೆಗಳ ನೀರಿನ ಸೌಲಭ್ಯ ಹೊಂದಿರುವ ವಾರ್ಡ್‌ಗಳಲ್ಲಿಯೂ 4ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ. ನಗರದ ಅನೇಕ ವಾರ್ಡ್‌ಗಳಲ್ಲಿ 10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕೇವಲ ಒಂದೆರಡು ತಾಸು ಮಾತ್ರ ನೀರು ಪೂರೈಸುತ್ತಿದ್ದು, ಎಲ್ಲರಿಗೂ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ಇದರಿಂದ ನಗರದ ನಿವಾಸಿಗಳು ಸಮಸ್ಯೆ ಅನುಭವಿಸುವಂತಾಗಿದೆ.

    ನೀರು ಚರಂಡಿ ಪಾಲು: ಬೆಳಗಾವಿ ನಗರದ ದಂಡು ಮಂಡಳಿ ಮತ್ತು 58 ವಾರ್ಡ್‌ಗಳ ವ್ಯಾಪ್ತಿಯ 4.88 ಲಕ್ಷ ಜನರಿಗೆ ನಿತ್ಯ ಕುಡಿಯುವ ನೀರಿಗಾಗಿ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಮತ್ತು ರಕ್ಕಸಕೊಪ್ಪ ಜಲಾಶದಿಂದ 108 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಇದರಲ್ಲಿ 75 ಎಂಎಲ್‌ಡಿಯಷ್ಟು ನೀರು ನಗರಕ್ಕೆ ಸರಬರಾಜು ಆಗುತ್ತಿದೆ. ಆದರೆ, ಕುಡಿಯುವ ನೀರು ಪೂರೈಕೆಯ ಪೈಪ್‌ಲೈನ್ ಮಾರ್ಗಗಳು ಅಲ್ಲಲ್ಲಿ ಒಡೆದು ಹಾಳಾಗಿದೆ. ಇದರಿಂದ ದಿನವೂ ಸಾವಿರಾರು ಎಂಎಲ್‌ಡಿಯಷ್ಟು ನೀರು ಪೋಲಾಗಿ ಚರಂಡಿ ಪಾಲಾಗುತ್ತಿದೆ. ಇದು ನೀರಿನ ಸಮಸ್ಯೆ ಹೆಚ್ಚಾಗಲು ಮೂಲ ಕಾರಣ ಎನ್ನಲಾಗಿದೆ.

    ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಗರವಾಸಿಗರ ಆಕ್ರೋಶ

    ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಹಾಗೂ ಒಳ ಚರಂಡಿ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಸ್ತೆ ಅಗೆಯುವಾಗ ಕುಡಿಯುವ ನೀರಿನ ಪೈಪ್ ಒಡೆದು ನೀರು ಒಳಚರಂಡಿ ಮತ್ತು ರಸ್ತೆಯಲ್ಲಿ ಹರಿಯುತ್ತಿದೆ. ಬಳಿಕ ಕಾಟಾಚಾರಕ್ಕೆ ದುರಸ್ತಿ ಮಾಡುವುದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಪೈಪ್‌ಲೈನ್ ದುರಸ್ತಿ ಮತ್ತು ಪಂಪ್‌ಸೆಟ್ ಅಳವಡಿಕೆ ನೆಪದಲ್ಲಿ ನೀರು ಸರಬರಾಜು ನಿಲ್ಲಿಸುತ್ತಿದ್ದಾರೆ. ಹೀಗಾಗಿ ತಾತ್ಕಾಲಿಕವಾಗಿ ಖಾಸಗಿ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಬೇಕಿದೆ. ಇದೀಗ ನಗರದೆಲ್ಲೆಡೆ ನೀರಿನ ಸಮಸ್ಯೆ ಇರುವುದರಿಂದ 2,500 ರಿಂದ 4,300 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್ ದರ ಸಾವಿರ ರೂ. ಗಡಿ ದಾಟಿದೆ. ಜನಸಾಮಾನ್ಯರಿಗೆ ನೀರು ಖರೀದಿಸಲು ಆಗದ ಪರಿಸ್ಥಿತಿ ಉಂಟಾಗಿದೆ. ಆದರೂ ಪಾಲಿಕೆಯವರು ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿಲ್ಲ ಎಂದು ನಗರವಾಸಿಗಳಾದ ಮಾರುತಿ ನಂದೇಕರ್, ಅನುಸೂಯಾ ಪಾಟೀಲ ದೂರಿದ್ದಾರೆ.

    ಪಂಪ್‌ಸೆಟ್ ಅಳವಡಿಕೆ ಇನ್ನಿತರ ದುರಸ್ತಿಯಿಂದಾಗಿ ನಗರದಲ್ಲಿ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದು ನಿಜ. ಇದೀಗ ಎಲ್ಲ ಸಮಸ್ಯೆಯೂ ನಿವಾರಣೆಯಾಗಿದ್ದು, ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
    | ವಿ.ಎಲ್. ಚಂದ್ರಪ್ಪ ಮುಖ್ಯ ಇಂಜಿನಿಯರ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗ

    ನಗರದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿಲ್ಲ. ಮಾಹಿತಿ ಪಡೆದು ಸಮಸ್ಯೆಯಿದ್ದಲ್ಲಿ ತಕ್ಷಣ ಪರಿಹರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
    | ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts