

ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಸಿಎಎ ಜಾರಿ ಸಂಬಂಧ ಇಂದು (ಮಾರ್ಚ್ 11) ಕೇಂದ್ರ ಗೃಹ ಇಲಾಖೆ ಅಧಿಸೂಚನೆಯನ್ನು ಪ್ರಕಟಿಸಿದೆ.
ಸಿಎಎ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರವಾದ 4 ವರ್ಷಗಳ ಬಳಿಕ ಜಾರಿಗೆ ಬಂದಿದೆ. ಲೋಕಸಭಾ ಚುನಾವಣೆಗೂ ಮುನ್ನವೇ ಸಿಎಎ ಜಾರಿ ಮಾಡಲಾಗುವುದು ಮತ್ತು ಈ ಸಂಬಂಧ ನೀತಿ-ನಿಯಮಗಳನ್ನು ಹೊರಡಿಸಲಾಗುವುದು ಎಂದು ಕಳೆದ ತಿಂಗಳಷ್ಟೇ ಗೃಹ ಸಚಿವ ಅಮಿತ್ ಷಾ ಅವರು ಹಲವು ವೇದಿಕೆಗಳಲ್ಲಿ ಹೇಳಿದ್ದರು. ಭರವಸೆಯಂತೆಯೇ ಕೊನೆಗೂ ಸಿಎಎ ಜಾರಿಯಾಗಿದೆ.
2019, ಡಿಸೆಂಬರ್ 11ರಂದು ಸಂಸತ್ತಿನಲ್ಲಿ ಸಿಎಎ ಕಾಯ್ದೆ ಅಂಗೀಕಾರವಾಗಿತ್ತು. ಈ ಸಂದರ್ಭದಲ್ಲಿ ಸಿಎಎ ಕುರಿತು ರಾಷ್ಟ್ರವ್ಯಾಪಿ ಸಾಕಷ್ಟು ಚರ್ಚೆಯಾಗಿತ್ತು ಮತ್ತು ಪ್ರತಿಭಟನೆಗಳು ಸಹ ನಡೆದಿದ್ದವು. ಸಿಎಎ ವಿಚಾರದಲ್ಲಿ ಅನೇಕರು ವಿವಿಧ ರೀತಿಯ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಸೃಷ್ಟಿಸಿದ್ದರು. ಆದರೆ, ಕೇಂದ್ರ ಸರ್ಕಾರ ಗೊಂದಲ ಪರಿಹರಿಸುವ ಪ್ರಯತ್ನ ಮಾಡುತ್ತಲೇ ಬಂದಿತು. ಸುಮಾರು 4 ವರ್ಷಗಳ ಬಳಿಕ ಕೊನೆಗೂ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ.
ಏನಿದು ಸಿಎಎ?
ಸಿಎಎ, 1955ರ ಪೌರತ್ವ ಕಾಯ್ದೆಯ ತಿದ್ದುಪಡಿಯಾಗಿದೆ. ಧಾರ್ಮಿಕ ಕಿರುಕುಳವನ್ನು ತಾಳಲಾರದೇ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೂ ಮುಂಚೆ ಭಾರತಕ್ಕೆ ಆಗಮಿಸಿರುವ ಸಿಖ್, ಬೌದ್ಧರು, ಕ್ರಿಶ್ಚಿಯನ್, ಜೈನರು ಮತ್ತು ಪಾರ್ಸಿಗಳಿಗೆ ಸಿಎಎ ಅಡಿಯಲ್ಲಿ ಭಾರತದ ಪೌರತ್ವವನ್ನು ನೀಡಲಾಗುತ್ತದೆ. (ಏಜೆನ್ಸೀಸ್)