More

    ಅಡಕತ್ತರಿಯಲ್ಲಿ ಚಿತ್ರರಂಗ; ಯಾವ ಧೈರ್ಯದ ಮೇಲೆ ಸಿನಿಮಾ ಬಿಡುಗಡೆ?

    ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆ ಇದ್ದರೂ, ಸೆಪ್ಟೆಂಬರ್ ಕೊನೆಗೆ ಕರೊನಾ ಮೂರನೆಯ ಅಲೆ ಸ್ಪೋಟಗೊಳ್ಳಬಹುದು ಎಂಬ ಸುದ್ದಿ ಇರುವುದರಿಂದ, ಭಯ ಮತ್ತು ಗೊಂದಲದಿಂದ ಹಲವು ನಿರ್ಮಾಪಕರು ತಮ್ಮ ಚಿತ್ರಗಳನ್ನು ಮುಂದೂಡಿದ್ದಾರೆ. ಇನ್ನೂ ಕೆಲವರು ಒಟಿಟಿ ಮೊರೆ ಹೋಗುತ್ತಿದ್ದಾರೆ.

    ಭಾರತೀಯ ಚಿತ್ರರಂಗದಲ್ಲಿ ಇಷ್ಟೊಂದು ಗೊಂದಲ ಯಾವತ್ತೂ ಇರಲಿಲ್ಲ. ಅಂಥದ್ದೊಂದು ಸನ್ನಿವೇಶ ಇದೀಗ ಸೃಷ್ಟಿಯಾಗಿದೆ. ಎಲ್ಲಾ ಭಾಷೆಗಳಲ್ಲೂ, ನೂರಾರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಚಿತ್ರ ಬಿಡುಗಡೆ ಮಾಡಬೇಕೋ, ಬೇಡವೋ ಎಂಬ ವಿಷಯದಲ್ಲಿ ಸಿಕ್ಕಾಪಟ್ಟೆ ಗೊಂದಲ ಇದೆ. ಅದಕ್ಕೆ ಕಾರಣ, ಚಿತ್ರ ಬಿಡುಗಡೆಗೆ ಇದು ಪೂರಕ ವಾತಾವರಣ ಅಲ್ಲ. ಒಂದು ಕಡೆ ಕರೊನಾ ಕೇಸ್​ಗಳು ಸಂಖ್ಯೆ ದಿನೇದಿನೆ ತಗ್ಗುತ್ತಿದೆ ಎಂಬ ಸುದ್ದಿ ಇದೆ. ಇನ್ನೊಂದು ಕಡೆ ಈ ತಿಂಗಳ ಕೊನೆಯಲ್ಲಿ ಕರೊನಾ ಮೂರನೆಯ ಅಲೆ ಅಪ್ಪಳಿಸಲಿದೆ ಎಂದೂ ಹೇಳಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಚಿತ್ರ ಮಾಡಿಟ್ಟುಕೊಂಡವರು ಏನು ಮಾಡಬೇಕು? ಧೈರ್ಯದಿಂದ ಚಿತ್ರ ಬಿಡುಗಡೆ ಮಾಡಬೇಕಾ? ಅಥವಾ ಮೂರನೆಯ ಅಲೆಗೆ ಹೆದರಿ ಮುಂದಕ್ಕೆ ಹಾಕಬೇಕಾ? ತೀರ್ಮಾನ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಏಪ್ರಿಲ್​ನಲ್ಲಿ ಕರೊನಾ ಎರಡನೆಯ ಅಲೆಯಿಂದ ಚಿತ್ರಮಂದಿರಗಳ ಬಾಗಿಲು ಮುಚ್ಚಿ, ಚಿತ್ರೀಕರಣ ಚಟುವಟಿಕೆಗಳು ಸ್ಥಗಿತಗೊಂಡಾಗ, ಬಹುಶಃ ಜುಲೈ ಅಥವಾ ಆಗಸ್ಟ್ ಹೊತ್ತಿಗೆ ಎಲ್ಲವೂ ಸರಿಹೋಗಬಹುದು ಎಂದು ಭಾವಿಸಲಾಗಿತ್ತು. ಅದಕ್ಕೆ ಸರಿಯಾಗಿ ಜುಲೈನಿಂದಲೇ ಕರ್ನಾಟಕದಲ್ಲಿ ಚಿತ್ರೀಕರಣಕ್ಕೆ ಮತ್ತು ಶೇ. 50ರಷ್ಟು ಹಾಜರಾತಿಗೆ ಚಿತ್ರಪ್ರದರ್ಶನ ಮಾಡುವುದಕ್ಕೆ ಅನುಮತಿ ಸಿಕ್ಕಿದೆ. ಚಿತ್ರೀಕರಣ ಮಾಡುವುದಕ್ಕೆ ಅಥವಾ ಚಿತ್ರಪ್ರದರ್ಶನ ಮಾಡುವುದಕ್ಕೆ ಸದ್ಯ ಯಾವುದೇ ಸಮಸ್ಯೆ ಇಲ್ಲ. ಆದರೆ, ಮೂರನೆಯ ಅಲೆಯ ಭಯದಿಂದಾಗಿ ಎಲ್ಲವೂ ಅತಂತ್ರವಾಗಿದೆ.

    ಮೂರನೆಯ ಅಲೆಯ ಭಯದಿಂದ ಸರ್ಕಾರ ಸಹ ಚಿತ್ರಮಂದಿದಲ್ಲಿ ಶೇ. 100ರಷ್ಟು ಹಾಜರಾತಿಗೆ ಚಿತ್ರಪ್ರದರ್ಶನ ಮಾಡುವುದಕ್ಕೆ ಅನುಮತಿ ಕೊಡುತ್ತಿಲ್ಲ. ಮೇಲಾಗಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್​ಡೌನ್ ಬೇರೆ. ಹೀಗಿದ್ದರೆ ಯಾರು ಬರುತ್ತಾರೆ ಎಂದು ನಿರ್ವಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಿಲ್ಲ. ಕೆಲವರು ಎಷ್ಟಿದೆಯೋ ಅಷ್ಟೇ ಸಾಕು ಎಂದು ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಜನ ಬರುತ್ತಿಲ್ಲ. ಅದಕ್ಕೆ ಲೇಟೆಸ್ಟ್ ಉದಾಹರಣೆಯೆಂದರೆ, ಅಕ್ಷಯ್ ಕುಮಾರ್ ‘ಬೆಲ್ ಬಾಟಂ’. ಸಾಮಾನ್ಯವಾಗಿ ಅಕ್ಷಯ್ ಕುಮಾರ್ ಚಿತ್ರಗಳು ಬಿಡುಗಡೆಯಾದ ಹೊಸದರಲ್ಲಿ ಪ್ರತೀ ದಿನ ದೇಶಾದ್ಯಂತ 20 ಕೋಟಿ ರೂ.ವರೆಗೂ ಕಲೆಕ್ಷನ್ ಆಗುತ್ತಿತ್ತು. ಆದರೆ, ‘ಬೆಲ್ ಬಾಟಂ’ ಚಿತ್ರದ ಕಲೆಕ್ಷನ್ ಪ್ರತಿ ದಿನ ಮೂರು ಲಕ್ಷದಷ್ಟಾಗಿದೆ. ಏಕೆಂದರೆ, ಕೆಲವು ರಾಜ್ಯಗಳಲ್ಲಿ ಶೇ. 50ರಷ್ಟು ಹಾಜರಾತಿಗಾದರೂ ಚಿತ್ರಪ್ರದರ್ಶನಕ್ಕೆ ಅನುಮತಿ ಇದೆ. ಆದರೆ, ಮಹಾರಾಷ್ಟ್ರ, ಕೇರಳ ಮುಂತಾದ ಕಡೆ ಇನ್ನೂ ಲಾಕ್​ಡೌನ್ ತೆರವಾಗದಿರುವುದರಿಂದ, ಚಿತ್ರಪ್ರದರ್ಶನವೇ ಶುರುವಾಗಿಲ್ಲ.

    ಇಂಥ ಸಂದರ್ಭದಲ್ಲಿ ಯಾವ ಧೈರ್ಯದ ಮೇಲೆ ಸಿನಿಮಾ ಬಿಡುಗಡೆ ಮಾಡುವುದು? ಇದು ಎಲ್ಲರ ಪ್ರಶ್ನೆ. ಅದೇ ಕಾರಣಕ್ಕೆ, ಪ್ಯಾನ್ ಇಂಡಿಯಾ ಚಿತ್ರಗಳನ್ನು ಮುಂದೂಡಲಾಗುತ್ತಿದೆ. ಈಗಾಗಲೇ ‘ಕೆಜಿಎಫ್ 2’ ಮುಂದಿನ ವರ್ಷದ ಏಪ್ರಿಲ್​ಗೆ ಹೋಗಿದೆ. ‘ಆರ್​ಆರ್​ಆರ್’ ಸಹ ಮುಂದಕ್ಕೆ ಹೋಗಲಿದೆ ಎಂಬ ಸುದ್ದಿ ಇದೆ. ಇನ್ನು, ಆಗಸ್ಟ್-ಸೆಪ್ಟೆಂಬರ್​ನಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿಕೊಂಡವರ ಪೈಕಿ, ಕೆಲವರು ಇನ್ನಷ್ಟು ಕಾದು ನೋಡುವ ತಂತ್ರ ಅನುಸರಿಸಿದರೆ, ಇನ್ನೂ ಕೆಲವರು ಚಿತ್ರಮಂದಿರಗಳನ್ನು ನಂಬಿಕೊಂಡರೆ ಚಿತ್ರ ಬಿಡುಗಡೆ ಮಾಡುವುದು ಕಷ್ಟ ಎಂದು ಒಟಿಟಿ (ಓವರ್ ದಿ ಟಾಪ್) ಮೊರೆ ಹೋಗುತ್ತಿದ್ದಾರೆ. ಈ ಸಮಸ್ಯೆ ಕೇವಲ ಭಾರತೀಯ ಚಿತ್ರರಂಗಕ್ಕಷ್ಟೇ ಸೀಮಿತವಲ್ಲ. ಹಾಲಿವುಡ್​ನ ಚಿತ್ರಗಳಿಗೂ ತಟ್ಟಿದೆ. ಇದರಿಂದಾಗಿ ಈ ವರ್ಷ ಬಿಡುಗಡೆ ಆಗಬೇಕಿದ್ದ ಟಾಮ್ ಕ್ರೂಸ್ ಅಭಿನಯದ ‘ಟಾಪ್ ಗನ್; ಮ್ಯಾವರಿಕ್’ ಮತ್ತು ‘ಮಿಷನ್ ಇಂಪಾಸಿಬಲ್ 7’ ಸಿನಿಮಾಗಳು ಸಹ 2022ಕ್ಕೆ ಮುಂದೂಡಲ್ಪಟ್ಟಿವೆ.

    ಒಟಿಟಿಯಲ್ಲಿ ಸೇತುಪತಿಯ 4 ಚಿತ್ರಗಳು

    ಅಡಕತ್ತರಿಯಲ್ಲಿ ಚಿತ್ರರಂಗ; ಯಾವ ಧೈರ್ಯದ ಮೇಲೆ ಸಿನಿಮಾ ಬಿಡುಗಡೆ?ಕಳೆದ ಒಂದು ತಿಂಗಳಲ್ಲಿ ಹಿಂದಿಯ ‘ಶೇರ್​ಷಾ’, ‘ಭುಜ್’, ‘ಮಿಮಿ’, ಮಲಯಾಳಂನ ‘ಹೋಮ್, ‘ಕುರುತ್ತಿ’, ತಮಿಳಿನ ‘ನೇತ್ರಿಕನ್’ ಮುಂತಾದ ಚಿತ್ರಗಳು ಬಿಡುಗಡೆ ಯಾಗಿವೆ. ಇನ್ನು, ಮುಂದಿನ ದಿನಗಳಲ್ಲಿ ತೆಲುಗಿನ ‘ಟಕ್ ಜಗದೀಶ್’, ‘ಮೆಸ್ಟ್ರೋ’, ಹಿಂದಿಯ ‘ಭೂತ್ ಪೊಲೀಸ್’ ಚಿತ್ರಗಳು ಚಿತ್ರಮಂದಿರಗಳನ್ನು ಬಿಟ್ಟು ಒಟಿಟಿಗಳಲ್ಲೇ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು, ವಿಜಯ್ ಸೇತುಪತಿ ಅಭಿನಯದ ನಾಲ್ಕು ಚಿತ್ರಗಳು ಮುಂದಿನ ಒಂದು ತಿಂಗಳಲ್ಲಿ ಒಟಿಟಿಯಲ್ಲೇ ಬಿಡುಗಡೆಯಾಗುತ್ತಿರುವುದು ವಿಶೇಷ. ‘ಲಾಭಂ’, ‘ತುಘಲಕ್ ದರ್ಬಾರ್’, ‘ಅನ್ನಾಬೆಲ್ಲೆ ಸೇತುಪತಿ’ ಮತ್ತು ‘ಕಡೈಸಿವವಸೈ’ ಚಿತ್ರಗಳು ಬೇರೆಬೇರೆ ಒಟಿಟಿಗಳಲ್ಲಿ ಸ್ಟ್ರೀಮ್ ಆಗಲಿದೆ.

    ನಾವೇನನ್ನು ತಿನ್ನುತ್ತಿದ್ದೇವೆ? ಅವೆಷ್ಟು ಸರಿ? ಅಷ್ಟಕ್ಕೂ ರೋಗಗಳು ಏಕೆ ಬರುತ್ತವೆ?; ಎಲ್ಲವನ್ನೂ ಇಲ್ಲಿ ವಿವರಿಸಿದ್ದಾರೆ ಡಾ.ಖಾದರ್​

    ಪ್ರೌಢಶಾಲೆಯಲ್ಲೇ ವ್ಯಾಸಂಗ ತೊರೆದಿದ್ದ ಇವರಿಗೆ 20 ಸಾವಿರ ರೂ. ಸಂಬಳ!; ಮಾಡುತ್ತಿದ್ದುದು ಮಾತ್ರ ಮಾಡಬಾರದ ಕೆಲಸ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts