More

    ಚೌಡೇಶ್ವರಿ ದೇವಿ ಜಾತ್ರೆ ನಾಳೆಯಿಂದ

    ರಾಣೆಬೆನ್ನೂರ: ಹೂವಿನ ಹರಕೆ ಹೊತ್ತ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತ ಹೂವಿನ ಚೌಡಮ್ಮ ಎಂದೇ ಪ್ರಸಿದ್ಧಿ ಪಡೆದ ನಗರದ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಜ. 13ರಿಂದ 5 ದಿನಗಳ ಕಾಲ ಸಂಭ್ರಮ-ಸಡಗರದಿಂದ ನಡೆಯಲಿದ್ದು, ಜಾತ್ರೆಯ ಸಿದ್ಧತೆ ಭರದಿಂದ ಸಾಗಿದೆ.

    ಚೌಡೇಶ್ವರಿ ದೇವಿಗೆ ಸುಗಂಧಿ, ಶಾವಂತಿಗೆ ಹಾಗೂ ಮಲ್ಲಿಗೆ ಹೂವಿನ ಮಾಲೆ ಅರ್ಪಿಸುವ ಮೂಲಕ ಹರಕೆ ತೀರಿಸುವುದು ವಿಶೇಷ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶಗಳಿಂದ ಹಾಗೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಭಾಗಗಳಿಂದ ಬರುವ ಭಕ್ತರು 101, 1001, 10,001 ರೂ., ಲಕ್ಷ ರೂ., ವರೆಗಿನ ಮಾಲೆ ಅರ್ಪಿಸುತ್ತಾರೆ.

    ಜಾತ್ರೆ ಹಿನ್ನೆಲೆ: 100 ವರ್ಷಗಳ ಕಾಲ ಇತಿಹಾಸ ಹೊಂದಿದ ಗಂಗಾಜಲ ಚೌಡೇಶ್ವರಿ ದೇವಸ್ಥಾನವಿರುವ ಸ್ಥಳದಲ್ಲಿ ಕಾರಿ ಗಿಡವಿತ್ತು. ಅದರ ಮಡಿಲಲ್ಲಿ ಬೆಳೆದಿದ್ದ ನಾಗದೇವರ ಹುತ್ತದಲ್ಲಿ ಚೌಡಮ್ಮ ದೇವಿಯ ಮೂರು ಅವತಾರದ ಉದ್ಭವ ಮೂರ್ತಿಗಳು ಪತ್ತೆಯಾಗಿದ್ದವು. ಈ ಸಂದರ್ಭದಲ್ಲಿ ಮಕ್ಕಳ ಮೇಲೆ ಆಹ್ವಾನವಾದ ದೇವಿ ‘ನಾನು ಲೋಕ ಕಲ್ಯಾಣಕ್ಕಾಗಿ ನಾಗದೇವರ ಹುತ್ತದಿಂದ ಉದ್ಭವಗೊಂಡಿದ್ದೇನೆ. ನನ್ನ ಮೂರ್ತಿ ಪ್ರತಿಷ್ಠಾಪಿಸಿ ಪುಷ್ಯ ಬಹುಳದಲ್ಲಿ ಬರುವ ಬನದ ಹುಣ್ಣಿಮೆಯಂದು ಜಾತ್ರೆ ನಡೆಸಿ, ಸಂಕಷ್ಟದಲ್ಲಿರುವ ಭಕ್ತರು ನನಗೆ ಹೂವಿನ ಹರಕೆ ಹೊತ್ತುಕೊಳ್ಳಿ, ನಿಮ್ಮ ಸಂಕಷ್ಟಗಳು ನಿವಾರಣೆಯಾಗುವವು’ ಎಂದು ನುಡಿದಿದ್ದಳು ಎಂಬುದು ಪ್ರತೀತಿ.

    ಬನದ ಹುಣ್ಣಿಮೆಯಂದು ಚಿಕ್ಕ ದೇವಸ್ಥಾನ ನಿರ್ವಿುಸಿ ಚೌಡೇಶ್ವರಿ ದೇವಿಯ ಜಾತ್ರೆ ಆರಂಭಿಸಲಾಗಿತ್ತು. ಅಂದಿನಿಂದ ದೇವಸ್ಥಾನ ಹಂತಹಂತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇಂದು ಬೃಹದಾಕಾರದ ದೇವಸ್ಥಾನವಾಗಿ ಮಾರ್ಪಟ್ಟಿದೆ. ಭಕ್ತರು ಪ್ರತಿವರ್ಷ ಸಂಭ್ರಮ ಸಡಗರದಿಂದ ದೇವಿಯ ಜಾತ್ರೆ ಆಚರಿಸುತ್ತ ಬಂದಿದ್ದಾರೆ.

    ದೇವಸ್ಥಾನಕ್ಕೆ ಸುಣ್ಣ ಬಣ್ಣ: ಜ. 13ರಿಂದ ಜಾತ್ರೆ ಆರಂಭಗೊಳ್ಳಲಿದ್ದು, ಚೌಡೇಶ್ವರಿ ನಗರದಲ್ಲಿ ಈಗಾಗಲೇ ಸಂಭ್ರಮ ಮನೆ ಮಾಡಿದೆ. ದೇವಸ್ಥಾನ ಸುಣ್ಣ-ಬಣ್ಣಗಳಿಂದ ಕಂಗೊಳಿಸತೊಡಗಿದೆ. ಮೇಡ್ಲೇರಿ ವೃತ್ತದಿಂದ ಚೌಡೇಶ್ವರಿ ದೇವಸ್ಥಾನದ ವರೆಗೂ ವಿದ್ಯುತ್ ದೀಪಗಳು ಹಾಗೂ ಬೀದಿಗಳಲ್ಲಿ ರಂಗುರಂಗಿನ ವಸ್ತ್ರಾಭರಣಗಳಿಂದ ನಿರ್ವಿುಸಿದ ಮಂಟಪ ಭಕ್ತರನ್ನು ಸ್ವಾಗತಿಸುತ್ತಿದೆ.

    ಅಂಬಾರಿ ಮೆರವಣಿಗೆ, ಡೊಳ್ಳು ಕುಣಿತ: ಜ. 13ರಂದು ಸಂಜೆ 6 ಗಂಟೆಗೆ ಚೌಡೇಶ್ವರಿ ದೇವಿಯ ಮೂರ್ತಿ ಉತ್ಸವವು ವಾಲ್ಮೀಕಿ ಬಡಾವಣೆಯ ಶ್ರೀದೇವಿಯ ಮನೆಯಿಂದ ಅಂಬಾರಿ ಮೆರವಣಿಗೆ ಮೂಲಕ ಹೊರಟು ಡೊಳ್ಳು ಕುಣಿತ ಸೇರಿ ಸಕಲವಾದ್ಯ ಮೇಳಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. 14ರಂದು ಬೆಳಗ್ಗೆ ಗಂಗಾಜಲದಲ್ಲಿ ಶೃಂಗರಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು. ನಂತರ ದೇವಿಯ ಉಡಿ ತುಂಬುವ ಕಾರ್ಯಕ್ರಮ, ಮಹಾಪೂಜೆ, ನೈವೇದ್ಯ, ಹರಕೆ ಸಲ್ಲಿಸುವುದು ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮ ನಡೆಯಲಿವೆ. 16ರಂದು ಬೆಳಗ್ಗೆ ಓಕಳಿ ಉತ್ಸವ, ಮಧ್ಯಾಹ್ನ ಬೆಲ್ಲದ ಬಂಡಿಯ ಮೆರವಣಿಗೆ ನಡೆಯಲಿದೆ. ಜ. 18ರಂದು ರಾತ್ರಿ 8 ಗಂಟೆಗೆ ಗ್ರಾಮದೇವಿತೆ ಶ್ರೀದೇವಿಯ ಸ್ವಗೃಹಕ್ಕೆ ಆಗಮನವಾಗುವುದು ಎಂದು ಜಾತ್ರಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

    ಸೂಕ್ತ ಪೊಲೀಸ್ ಬಂದೋಬಸ್ತ್: 5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಔಟ್ ಫೋಸ್ಟ್ ತೆರೆಯಲಿದ್ದು, ಇದು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. 3 ಕೆಎಸ್​ಆರ್​ಪಿ, 4 ಡಿಆರ್ ತುಕಡಿಗಳು ಸೇರಿ ನೂರಾರು ಪೊಲೀಸರು ಬಂದೋಬಸ್ತ್​ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts