More

    ಪತಿಗೆ ಆರೋಗ್ಯ ಕರುಣಿಸು ಶಿವ..! ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್ ಪ್ರಾರ್ಥನೆ

    ಚಿತ್ರದುರ್ಗ: ನನ್ನ ಪತಿ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರೋಗ್ಯ, ಆಯಸ್ಸು ಕರುಣಿಸು ಶಿವ ಎಂದು ಜಶೋದಾ ಬೆನ್ ನೀಲಕಂಠನಲ್ಲಿ ಪ್ರಾರ್ಥಿಸಿದರು.

    ಶಿವಮೊಗ್ಗ ಜಿಲ್ಲೆ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಂದ ಹೊರಟ್ಟಿದ್ದ ಜಶೋದಾ ಬೆನ್ ಮಾರ್ಗ ಮಧ್ಯೆ ನಗರದ ನೀಲಕಂಠೇಶ್ವರ ದೇಗುಲಕ್ಕೆ ಬುಧವಾರ ಬೆಳಗ್ಗೆ 9.26ಕ್ಕೆ ಭೇಟಿ ನೀಡಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

    ಕುಟುಂಬ ಸದಸ್ಯರು ಹಾಗೂ ಸಮೀಪ ವರ್ತಿಗಳೊಂದಿಗೆ ನೇರ ದೇಗುಲಕ್ಕೆ ಆಗಮಿಸಿದ ಅವರನ್ನು ದೇವಾಲಯ ಆಡಳಿತ ಮಂಡಳಿ ಪ್ರಮುಖರು ಹಾಗೂ ಅರ್ಚಕರು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಂಡರು.

    ಗಣೇಶ ಸೇರಿ ವಿವಿಧ ಮೂರ್ತಿಗಳಿಗೆ ಭಕ್ತಿ ಸಮರ್ಪಿಸಿದ ಬೆನ್ ನೀಲಕಂಠೇಶ್ವರ ಸನ್ನಿಧಿಯಲ್ಲಿ ಮುಕ್ಕಾಲು ತಾಸಿಗೂ ಅಧಿಕ ಕಾಲವಿದ್ದರು.

    ಪತಿ, ಪ್ರಧಾನಿ ನರೇಂದ್ರ ಮೋದಿ ಸಹಿತ ಕುಟುಂಬ ಸದಸ್ಯರೆಲ್ಲರಿಗೂ ಆರೋಗ್ಯ, ಆಯಸ್ಸನ್ನು ಕರುಣಿಸಲಿ ಎಂದು ಸಂಕಲ್ಪ ಮಾಡಿಕೊಂಡರು.

    ಅರ್ಚಕರಾದ ವಿಶ್ವನಾಥ ಶಾಸ್ತ್ರಿ, ರಾಜೇಶ್ ಶಾಸ್ತ್ರಿ, ದೇವರಿಗೆ ಅಭಿಷೇಕ, ಅಷ್ಟೋತ್ತರ, ಮಂತ್ರ ಘೋಷಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಮಹಾ ಮಂಗಳಾರತಿ ಬಳಿಕ ಜಶೋದಾ, ಪ್ರಧಾನಿ ಅಣ್ಣನ ಮಗ ನಾನಾ ರಾಥೋಡ್, ಬೆಂಗಳೂರಿನ ರಾಘವೇಂದ್ರ ಮೊದಲಾದವರನ್ನು ದೇವಾಲಯ ಆಡಳಿತ ಮಂಡಳಿಯವರು ಗೌರವಿಸಿದರು.

    ದೇವಾಲಯದಿಂದ ಪ್ರವಾಸಿ ಮಂದಿರಕ್ಕೆ ತೆರಳಿ ಅಲ್ಲಿ ಉಪಾಹಾರಕ್ಕೂ ಮೊದಲು ಪ್ರದಕ್ಷಿಣೆಗಾಗಿ ಅಶ್ವತ್ಥ ವೃಕ್ಷ ಸಿಗದೆ ಸಮೀಪದಲ್ಲಿದ್ದ ಅತ್ತಿ ಮರಕ್ಕೆ ಕೈ ಮುಗಿದು, ಬಳಿಕ ಉಪಾಹಾರಕ್ಕೆ ಸೇಬು, ಕಿತ್ತಳೆ ಹಣ್ಣು, ಎಳನೀರು ಸೇವಿಸಿ ಶಿವಮೊಗ್ಗದತ್ತ ಸಾಗಿದರು.

    ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ, ಮುಖಂಡರಾದ ಕೆಇಬಿ ಷಣ್ಣುಖಪ್ಪ, ಮಲ್ಲಿಕಾರ್ಜುನ್, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಸದಸ್ಯ ಸುರೇಶ್, ಪಟೇಲ್ ಶಿವಕುಮಾರ್, ಕೊಟ್ರೇಶ್, ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಡಿವೈಎಸ್ಪಿ ಪಾಂಡುರಂಗ, ಸಿಪಿಐಗಳಾದ ನಯೀಂ ಅಹಮದ್, ಬಿ.ವಿ.ಪ್ರಕಾಶ್, ಗಿರೀಶ್ ಇತರರಿದ್ದರು.

    ರಾಜ್ಯ ಸರ್ಕಾರದ ಅತಿಥಿಯಾಗಿ ಆಗಮಿಸಿದ್ದ ಜಶೋದಾ ಬೆನ್‌ರನ್ನು ಜಿಲ್ಲಾಡಳಿತ ಶಿಷ್ಟಾಚಾರದೊಂದಿಗೆ ಬರ ಮಾಡಿಕೊಂಡು, ಬೀಳ್ಕೊಟ್ಟಿತು. ಈ ವೇಳೆ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.

    ಜಶೋದಾ ಬೆನ್ ಕಟ್ಟುನಿಟ್ಟಿನ ವೃತಾಚರಣೆ: ದೇವಾಲಯ ಬಳಿ ಕಾರುಗಳು ಬಂದು ನಿಲ್ಲುತ್ತಿದ್ದಂತೆ ಇದು ಶಿವನ ದೇವಾಲಯವೇ ಎಂದು ನನ್ನನ್ನು ಪ್ರಶ್ನೀಸಿ ದೇವರ ದರ್ಶನ ಪಡೆದರು. ನಿತ್ಯ ಶಿವನ ದರ್ಶನವಾಗದೇ ಒಂದು ಹನಿ ನೀರನ್ನು ಸೇವಿಸುವುದಿಲ್ಲವೆಂದು ಮೋದಿ ಪತ್ನಿಯ ಕಟ್ಟುನಿಟ್ಟಿನ ವೃತಾಚರಣೆ ಮಾಹಿತಿಯನ್ನು ಸಮೀಪವರ್ತಿ ರಾಘವೇಂದ್ರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts