More

    ಎಂಪಿಎಂಸಿ ಆವಕದಲ್ಲಿ ಮೆಕ್ಕೆಜೋಳದ್ದೇ ಮೇಲುಗೈ

    ಚಿತ್ರದುರ್ಗ: ಕರೊನಾ ಸೋಂಕು ಕಾರಣಕ್ಕೆ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಮಾ.24ರಿಂದ ಸ್ಥಗಿತಗೊಂಡಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ವಹಿವಾಟು ಬುಧವಾರ ಪುನಾರಂಭವಾಗುತ್ತಿದ್ದಂತೆ ಮೆಕ್ಕೆಜೋಳದ ಆವಕ ಹೆಚ್ಚಿದ್ದರೆ, ಶೇಂಗಾ ಕಡಿಮೆ ಪ್ರಮಾಣದಲ್ಲಿದೆ.

    1151 ಚೀಲ ಮೆಕ್ಕೆಜೋಳ, 15 ಚೀಲ ಶೇಂಗಾ ಹಾಗೂ 84 ಚೀಲ ಕಡ್ಲೆಕಾಳು ಆವಕವಾಗಿದ್ದು, ಮೆಕ್ಕೆಜೋಳದ ಧಾರಣೆಯಲ್ಲಿ ಕೊಂಚ ಚೇತರಿಕೆ ಕಂಡಿದೆ.

    ಲಾಕ್‌ಡೌನ್‌ನಿಂದಾಗಿ ರೈತರು ಸಂಕಷ್ಟಕ್ಕೆ ಈಡಾಗಿದ್ದರು. ಸಾಮಾನ್ಯವಾಗಿ ಇಲ್ಲಿಯ ಮಾರುಕಟ್ಟೆಯ ಸೀಜನ್ ಬಹುತೇಕ ಜನವರಿ-ಫೆಬ್ರವರಿಯೊಳಗೆ ಪೂರ್ಣವಾಗುತ್ತಿತ್ತು.

    ಹಲವು ವರ್ಷಗಳಿಂದ ಬರದ ನಡುವೆ, 2019 ಅಕ್ಟೋಬರ್-ನವೆಂಬರ್‌ನಲ್ಲಾದ ಉತ್ತಮ ಮಳೆಯಿಂದಾಗಿ ಒಂದಿಷ್ಟು ಬೆಳೆಗಳಿಗೆ ಅನುಕೂಲವಾಗಿತ್ತು. ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ತರೋಣ ಎನ್ನುವುದರಲ್ಲಿ ಕರೊನಾ ಭೀತಿ ಎದುರಾಯಿತು.

    ಈಗ ಮುಂಗಾರು ಕೃಷಿಗೆ ರೈತರು ಸಜ್ಜಾಗಬೇಕಿದೆ. ಜಮೀನು ಹದ, ಬಿತ್ತನೆ ಬೀಜ ಮೊದಲಾದ ಪರಿಕರ ಖರೀದಿಸಿಕೊಂಡು ಬೇಸಾಯಕ್ಕೆ ಸಜ್ಜಾಗಲು ಕೃಷಿ ಉತ್ಪನ್ನಗಳ ಮಾರಾಟ ಅನಿವಾರ್ಯವಾಗಿದೆ.

    ರೈತರಿಗೆ ಮಾರುಕಟ್ಟೆಗೆ ಬರಲು ಕೃಷಿ ಹುಟ್ಟುವಳಿ ಹಾಗೂ ಮರಳಿ ತಮ್ಮೂರಿಗೆ ಹೋಗಲು ವರ್ತಕರು ಕೊಡುವ ಬಿಲ್ಲೇ ಪಾಸ್ ಹಾಗೂ ವರ್ತಕರು, ಕಮಿಷನ್ ಏಜೆಂಟರು ಮತ್ತು ಹಮಾಲರಿಗೆ ಪ್ರತ್ಯೇಕ ಪಾಸ್‌ಗಳನ್ನು ವಿತರಿಸುವುದಾಗಿ ಸಮಿತಿ ತಿಳಿಸಿತ್ತು.

    ಆಯಾ ಮಳಿಗೆಗಳಿಗೆ ಪಾಸ್ ತಲುಪಿಸುತ್ತೇವೆ ಎಂದು ಸಮಿತಿ ಅಧಿಕಾರಿಗಳು ತಿಳಿಸಿದ್ದರಿಂದಾಗಿ ಎಪಿಎಂಸಿ ಕಚೇರಿ ಬಳಿ ಬೆಳಗ್ಗೆ ಪಾಸ್‌ಗೆ ಸೇರಿದ್ದ ಗುಂಪು ನಂತರದಲ್ಲಿ ಚದುರಿತು.

    ಎಪಿಎಂಸಿ ಅಧ್ಯಕ್ಷ ಡಿ.ಎಸ್.ಶಶಿಧರ್ ಹೇಳಿಕೆ: ಲಾಕಡೌನ್‌ನಿಂದಾಗಿ ಹೊಸ ಹಣಕಾಸು ವರ್ಷದಲ್ಲಿ ಸಮಿತಿಯಿಂದ ಅಭಿವೃದ್ಧಿ ಕಾಮಗಾರಿ ಸಾಧ್ಯವಾಗದು. ಮಾರುಕಟ್ಟೆ ಆವರಣದಲ್ಲಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಹಾಗೂ 50 ಲಕ್ಷ ರೂ. ವೆಚ್ಚದಲ್ಲಿ ಚರಂಡಿಗಳ ಅಭಿವೃದ್ಧಿ ಹಾಗೂ ಮಾರುಕಟ್ಟೆ ವ್ಯಾಪ್ತಿಯ ಹಳ್ಳಿಗಳಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಯೋಜಿಸಲಾಗಿತ್ತು.

    ಎಪಿಎಂಸಿ ಜಂಟಿ ನಿರ್ದೇಶಕ ಟಿ.ಎ.ಮಹೇಶ ಹೇಳಿಕೆ: ಕೃಷಿ ಹುಟ್ಟುವಳಿ ಮಾರಾಟಕ್ಕೆ ಅವಕಾಶವಿದೆ ಹೊರತು, ಇನ್ನು ಜಾನುವಾರು ಹಾಗೂ ಕುರಿಗಳ ಸಂತೆಗೆ ಅನುಮತಿ ಕೊಟ್ಟಿಲ್ಲ. ಗುರುವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳ ಆವಕ ನಿರೀಕ್ಷೆ ಇದೆ. ಹಣಕಾಸು ವರ್ಷ ಮುಕ್ತಾಯದ ಒಂದು ವಾರದಲ್ಲಿ ಲಾಕ್ ಡೌನ್ ಆಗಿದ್ದು, ಹಿಂದಿನ ಸಾಲಿಗಿಂತ ಹೊಸ ಹಣಕಾಸು ಸಾಲಿನ ವಹಿವಾಟಿನಲ್ಲಿ ವ್ಯತ್ಯಯ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts