More

    ಚೆಲುವನಾರಾಯಣಸ್ವಾಮಿಗೆ ತೀರ್ಥಸ್ನಾನ

    ಮೇಲುಕೋಟೆ: ಚೆಲುವನಾರಾಯಣಸ್ವಾಮಿಗೆ ಮಂಗಳವಾರ ವೈರಮುಡಿ ಬ್ರಹ್ಮೋತ್ಸವದ ತೀರ್ಥಸ್ನಾನ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

    ಸ್ನಪನ ಶೆಲ್ವರಿಗೆ ಮಂಗಳವಾದ್ಯ ಮತ್ತು ವೇದಮಂತ್ರದೊಂದಿಗೆ ಅಭಿಷೇಕ ನೆರವೇರಿಸಲಾಯಿತು. ಇದೇ ವೇಳೆ ಕಲ್ಯಾಣಿ ತಾಯಿಗೆ ಪೂಜಿಸಿ, ಸ್ನಪರಶೆಲ್ವರನ್ನು ಕಲ್ಯಾಣಿಗೆ ಕೊಂಡೊಯ್ದು ತೀರ್ಥಸ್ನಾನ ನೆರವೇರಿಸಲಾಯಿತು. ಕಲ್ಯಾಣಿಯ ನಾಲ್ಕೂ ಕಡೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಕಲ್ಯಾಣಿಯಲ್ಲಿ ಪವಿತ್ರ ಸ್ನಾನ ಮಾಡಿದರು. ಬೆಳಗ್ಗೆ ತಂಗಳನ್ನದ ಮಂಟಪಕ್ಕೆ ಚೆಲುವನಾರಾಯಣಸ್ವಾಮಿಯ ಉತ್ಸವ ನಡೆದ ನಂತರ ದೇವಾಲಯದ ಅಮ್ಮನವರ ಸನ್ನಿಧಿಯಲ್ಲಿ ಸಂಧಾನ ಸೇವೆ ನೆರವೇರಿತು. ಮಧ್ಯಾಹ್ನ 1 ಗಂಟೆ ವೇಳೆಗೆ ಸ್ವಾಮಿಯ ಉತ್ಸವ ಕಲ್ಯಾಣಿಗೆ ಸಾಗಿದ ನಂತರ ಅಲ್ಲಿ ತೀರ್ಥಸ್ನಾನದ ಪ್ರಕ್ರಿಯೆಗಳು ಆರಂಭವಾಗಿ 2-45ರ ವೇಳೆಗೆ ಮುಕ್ತಾಯವಾದವು.

    ಬೆಳಗ್ಗೆ ಐದು ಗಂಟೆಯಿಂದಲೇ ಇನ್ಸ್‌ಪೆಕ್ಟರ್ ಸಿದ್ದಪ್ಪ ಮತ್ತು ಸುಮಾರಾಣಿ ನೇತೃತ್ವದ ಮೇಲುಕೋಟೆ ಪೊಲೀಸರ ತಂಡ ತೀರ್ಥಸ್ನಾನ ಆಗುವ ತನಕ ದೇವಾಲಯದ ಸಾಂಪ್ರದಾಯಿಕ ಪದ್ಧತಿಯಂತೆ ಕಲ್ಯಾಣಿಯ ಪವಿತ್ರತೀರ್ಥ ಸ್ಪರ್ಶಿಸದಂತೆ ಎಚ್ಚರ ವಹಿಸಿ ಬಂದೋಬಸ್ತ್ ಮಾಡಿದ್ದರು.

    ರಾಜಮುಡಿ ಕಿರೀಟಧಾರಣೆ ಮುಕ್ತಾಯ: ಸಂಜೆ ಪರಕಾಲ ಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವದ ಕೈಂಕರ್ಯಗಳು ನೆರವೇರಿದವು. ಮಾ.21ರ ವೈರಮುಡಿ ಉತ್ಸವದ ರಾತ್ರಿಯಿಂದ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿದ್ದ ಬ್ರಹ್ಮೋತ್ಸವದ ಕೊನೆಯ ಉತ್ಸವವಾದ ಪಟ್ಟಾಭಿಷೇಕ ಉತ್ಸವದಲ್ಲಿ ಕೊನೆಯ ಬಾರಿ ಅಲಂಕರಿಸಿತ್ತು. ರಾಜಮುಡಿ ಮುಡಿ ಅಲಂಕಾರ ಮುಕ್ತಾಯ ಆಗುತ್ತಿದ್ದಂತೆ ಸ್ವಾಮಿಗೆ ಸಮರಭೂಪಾಲ ವಾಹನೋತ್ಸವ ವೈಭವದಿಂದ ನೆರವೇರಿತು.

    ಕಲ್ಯಾಣಿಗೆ ಗರುಡ ಪ್ರದಕ್ಷಿಣೆ ಕಲ್ಯಾಣಿಯಲ್ಲಿ ತೀರ್ಥಸ್ನಾನ ನಡೆಯುತ್ತಿದ್ದ ವೇಳೆ ದಿಢೀರ್ ಕಾಣಿಸಿಕೊಂಡ ಗರುಡ ಸ್ನಪನ ಶೆಲ್ವರಿಗೆ ತೀರ್ಥಸ್ನಾನವಾಗುತ್ತಿದ್ದ ವೇಳೆ ಕಲ್ಯಾಣಿಯಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲುಮುಟ್ಟಿತು. ಬೆಳಗ್ಗೆಯಿಂದಲೂ ಕಲ್ಯಾಣಿಯತ್ತ ಸುಳಿಯದ ಗರುಡ ತೀರ್ಥಸ್ನಾನದ ವೇಳೆ ಆಗಮಿಸಿ ಭಕ್ತರ ಹರ್ಷೋದ್ಘಾರಕ್ಕೆ ಕಾರಣವಾಯಿತು.

    ಸ್ಥಾನೀಕರಿಗೆ ಮಾಲೆಮರ್ಯಾದೆ: ವೈರಮುಡಿ ಬ್ರಹ್ಮೋತ್ಸವದ ಯಶಸ್ಸಿಗೆ ಶ್ರಮಿಸಿದ ನಾಲ್ಕೂ ಮಂದಿ ಸ್ಥಾನೀಕರಿಗೆ ರಾಮಾನುಜಾಚಾರ್ಯರ ಕಾಲದಿಂದಲೂ ನಡೆದು ಬಂದ ಪರಂಪರೆಯಂತೆ ಪಟ್ಟಾಭಿಷೇಕ-ಸಮರಭೂಪಾಲ ವಾಹನ ನಂತರ ದೇವಾಲಯದ ಚಿನ್ನದ ಧ್ವಜಸ್ತಂಭದ ಮುಂಭಾಗ ಚೆಲುವನಾರಾಯಣಸ್ವಾಮಿ ಸಾನ್ನಿಧ್ಯದಲ್ಲಿ ಮಾಲೆಮರ್ಯಾದೆ ಮಾಡಿ ಗೌರವಿಸಲಾಯಿತು. ನಾಲ್ಕನೇ ಸ್ಥಾನೀಕರಾದ ಶ್ರೀನಿವಾಸ ನರಸಿಂಹನ್ ಗುರೂಜಿ, ಪ್ರಥಮ ಸ್ಥಾನೀಕ ಕರಗಂರಾಮಪ್ರಿಯ , ಮೂರನೇ ಸ್ಥಾನೀಕ ಕೋವಿಲ್ ನಂಬಿ ಮುಕುಂದನ್ ಮಾಲೆ ಮರ್ಯಾದೆ ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts