More

    ಯುವ ಸಮೂಹ ಆಮಿಷಗಳಿಗೆ ಬಲಿಯಾಗದಿರಲಿ

    ಮೇಲುಕೋಟೆ: ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಮುಕ್ತ ಮನಸ್ಸಿನಿಂದ ಮತದಾನ ಮಾಡುವ ಮೂಲಕ ಭಾರತದ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದು ಪಾಂಡವಪುರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಲೋಕೇಶ್ ಮೂರ್ತಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಮತದಾನ ಪ್ರಕ್ರಿಯೆ ಕುರಿತು ಇಲ್ಲಿನ ಎಸ್.ಇ.ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವೀಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮತದಾನದ ದಿನದಂದು ಕಾಲೇಜು ಮತ್ತು ಕಚೇರಿಗಳಿಗೆ ರಜೆ ನೀಡಲಾಗುತ್ತದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಆ ಮೂಲಕ ಎಲ್ಲ ಕೇಂದ್ರಗಳಲ್ಲಿ ಶೇ.100ರಷ್ಟು ಮತ ಚಲಾವಣೆಯಾಗಬೇಕು ಎಂಬುದು ಚುನಾವಣಾ ಆಯೋಗದ ಗುರಿಯಾಗಿದೆ ಎಂದರು.

    ಯುವ ಸಮುದಾಯ ದೇಶದ ಶಕ್ತಿಯಾಗಿದ್ದು, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಿದೆ. ಪ್ರಜೆಗಳ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳದ ಸರ್ಕಾರವನ್ನು ಬದಲಿಸುವ ಹಕ್ಕು ಮತದಾರರಿಗಿದೆ. ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಪೂರಕವಾಗಿರುವವರನ್ನು ಆಯ್ಕೆ ಮಾಡುವ ಕೆಲಸ ಆಗಬೇಕು ಎಂದರು.

    ಪ್ರಾಂಶುಪಾಲ ಅರವಿಂದ್ ಮಾತನಾಡಿ, ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ದೇಶವನ್ನು ಸುಭದ್ರವಾಗಿಸುವ ಕೆಲಸ ಮಾಡಬೇಕು. ದೇಶದ ಗೌರವ ಕಾಪಾಡುವ ಜತೆಗೆ ನಿರಂತರವಾಗಿ ಅಭಿವೃದ್ಧಿಯತ್ತ ಗಮನಹರಿಸಬೇಕು. ಭಾರತದ ಪ್ರಜಾಪ್ರಭುತ್ವ ವಿಶ್ವದಲ್ಲೇ ಮಾದರಿಯಾಗಿದ್ದು, ಮತದಾರರು ಆಮಿಷಕ್ಕೊಳಗಾಗಿ ಮತದಾನ ಮಾಡಿದರೆ ಪ್ರಜಾಪ್ರಭುತ್ವದ ಮೌಲ್ಯಕ್ಕೆ ಧಕ್ಕೆಯಾಗುತ್ತದೆ ಎಂದರು.

    ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಎಸ್.ಇ.ಟಿ ಶಿಕ್ಷಣ ಸಂಸ್ಥೆಯ ರಿಜಿಸ್ಟ್ರಾರ್ ನಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಮೇಲುಕೋಟೆ ಗ್ರಾಪಂ ಪಿಡಿಒ ರಾಜೇಶ್ವರ, ಬಾಲಕರ ಶಾಲೆಯ ಮುಖ್ಯಶಿಕ್ಷಕ ಎಸ್.ಎನ್.ಸಂತಾನರಾಮನ್ ಬಾಲಕಿಯರ ಶಾಲೆ ಮುಖ್ಯ ಶಿಕ್ಷಕ ಮಂಜುನಾಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts