More

    2ನೇ ಟೆಸ್ಟ್​ನಲ್ಲೂ ವಿಂಡೀಸ್​ ಆರಂಭಿಕ ಮೇಲುಗೈ, ಇಂಗ್ಲೆಂಡ್​ ಪ್ರತಿರೋಧ

    ಮ್ಯಾಂಚೆಸ್ಟರ್​: ಆತಿಥೇಯ ಇಂಗ್ಲೆಂಡ್​ ತಂಡಕ್ಕೆ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ವೆಸ್ಟ್​ ಇಂಡೀಸ್​ ತಂಡದ ವೇಗಿಗಳು ಕಡಿವಾಣ ಹಾಕಿದ್ದರೆ, ಗುರುವಾರ ಆರಂಭಗೊಂಡ 2ನೇ ಟೆಸ್ಟ್​ ಪಂದ್ಯದಲ್ಲಿ ಸ್ಪಿನ್ನರ್​ ರೋಸ್ಟನ್​ ಚೇಸ್​ ಆರಂಭಿಕ ಆಘಾತ ನೀಡಿದ್ದಾರೆ. ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯದಲ್ಲೂ ಆಂಗ್ಲರು ಉತ್ತಮ ಮೊತ್ತ ಪೇರಿಸಲು ಹೋರಾಟ ಮುಂದುವರಿಸಿದ್ದಾರೆ.

    ಓಲ್ಡ್​ ಟ್ರಾಫೋರ್ಡ್​ ಮೈದಾನದಲ್ಲಿ ನಿಗದಿತ ಸಮಯಕ್ಕಿಂತ 90 ನಿಮಿಷ ತಡವಾಗಿ ಮೊದಲ ದಿನದಾಟ ಆರಂಭಗೊಂಡಿತು. ಮೊದಲ ಪಂದ್ಯದಂತೆ ಈ ಬಾರಿ ಕೂಡ ಮಳೆಯಿಂದಾಗಿ ಟಾಸ್​ ವಿಳಂಬಗೊಂಡಿತು. ಟಾಸ್​ ಜಯಿಸಿದ ವೆಸ್ಟ್​ ಇಂಡೀಸ್​ ನಾಯಕ ಜೇಸನ್​ ಹೋಲ್ಡರ್​ ಫೀಲ್ಡಿಂಗ್​ ಆಯ್ದುಕೊಂಡರು. ಇಂಗ್ಲೆಂಡ್​ ತಂಡ ಮೊದಲ 13 ಓವರ್​ ಎಚ್ಚರಿಕೆಯ ಆಟವಾಡಿದರೂ, ಭೋಜನ ವಿರಾಮಕ್ಕೂ ಮುನ್ನ ಕೊನೆಯ ಎಸೆತದಲ್ಲಿ ಆರಂಭಿಕ ರೋರಿ ಬರ್ನ್ಸ್​ (15) ರೋಸ್ಟನ್​ ಚೇಸ್​ ಎಸೆತದಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. ಇದರಿಂದಾಗಿ ವಿಂಡೀಸ್​ ಭೋಜನ ವಿರಾಮದ ವೇಳೆಗೆ 13.2 ಓವರ್​ಗಳಲ್ಲಿ 1 ವಿಕೆಟ್​ಗೆ 29 ರನ್​ ಗಳಿಸಿತು. ಬರ್ನ್ಸ್​ ಎಲ್​ಬಿ ತೀರ್ಪಿನ ವಿರುದ್ಧ ಡಿಆರ್​ಎಸ್​ ಮೊರೆ ಹೋದರೂ, ರಿಪ್ಲೇಯಲ್ಲೂ ಚೆಂಡು ಮಧ್ಯದ ವಿಕೆಟ್​ಗೆ ಬಡಿಯುತ್ತಿದ್ದುದು ಸ್ಪಷ್ಟವಾಗಿ ಕಾಣಿಸಿತು. ಇದರಿಂದ ಆಂಗ್ಲರ 1 ಡಿಆರ್​ಎಸ್​ ವ್ಯರ್ಥಗೊಂಡಿತು.

    ಇದನ್ನೂ ಓದಿ: ಇಂಗ್ಲೆಂಡ್​-ವಿಂಡೀಸ್​ 2ನೇ ಟೆಸ್ಟ್​ಗೂ ಮಳೆ ಅಡಚಣೆ

    ಭೋಜನ ವಿರಾಮದ ಬಳಿಕ ಮತ್ತೆ ಮೊದಲ ಎಸೆತದಲ್ಲೇ ವನ್​ಡೌನ್​ ಬ್ಯಾಟ್ಸ್​ಮನ್​ ಜಾಕ್​ ಕ್ರೌಲಿ (0) ವಿಕೆಟ್​ ಕೂಡ ರೋಸ್ಟನ್​ ಚೇಸ್​ ಪಾಲಾಯಿತು. ಆಗ ಒಗ್ಗೂಡಿದ ಡೊಮಿನಿಕ್​ ಸಿಬ್ಲೆ ಮತ್ತು ನಾಯಕ ಜೋ ರೂಟ್​ (23) 3ನೇ ವಿಕೆಟ್​ಗೆ 52 ರನ್​ ಕೂಡಿ ತಂಡಕ್ಕೆ ತುಸು ಚೇತರಿಕೆ ಒದಗಿಸಿದರು. ಯುವ ವೇಗಿ ಅಲ್ಜಾರಿ ಜೋಸೆಫ್​ , ರೂಟ್​ ವಿಕೆಟ್​ ಕಬಳಿಸುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು. ನಂತರ ಸಿಬ್ಲೆ (46*) ಮತ್ತು ಕಳೆದ ಪಂದ್ಯದ ನಾಯಕ ಬೆನ್​ ಸ್ಟೋಕ್ಸ್​ (18*) 4ನೇ ವಿಕೆಟ್​ಗೆ ಜತೆಯಾಟದಲ್ಲಿ ವಿಂಡೀಸ್​ಗೆ ಪ್ರತಿರೋಧ ತೋರುವ ಮೂಲಕ ತಂಡವನ್ನು ಸುಸ್ಥಿತಿಗೆ ಕೊಂಡೊಯ್ಯುವ ಹೋರಾಟದಲ್ಲಿದ್ದಾರೆ. ಇಂಗ್ಲೆಂಡ್​ ತಂಡ ಚಹಾ ವಿರಾಮದ ವೇಳೆಗೆ 3 ವಿಕೆಟ್​ಗೆ 112 ರನ್​ ಗಳಿಸಿದೆ.

    ಆಂಗ್ಲರಿಗೆ ಹೊಸ ಬೌಲಿಂಗ್​ ವಿಭಾಗ
    ಮೊದಲ ಟೆಸ್ಟ್​ಗಿಂತ ಸಂಪೂರ್ಣವಾಗಿ ಭಿನ್ನವಾದ ಬೌಲಿಂಗ್​ ವಿಭಾಗದೊಂದಿಗೆ ಆಂಗ್ಲರು ಕಣಕ್ಕಿಳಿದರು. ಜೇಮ್ಸ್​ ಆಂಡರ್​ಸನ್​ ಮತ್ತು ಮಾರ್ಕ್​ ವುಡ್​ಗೆ ಆಂಗ್ಲರು ಪಂದ್ಯಕ್ಕೆ ಮೊದಲೇ ವಿಶ್ರಾಂತಿ ನೀಡಿದ್ದರೆ, ಮತ್ತೋರ್ವ ವೇಗಿ ಜೋಫ್ರಾ ಆರ್ಚರ್​ ಜೈವಿಕ-ಸುರಕ್ಷಾ ವಾತಾವರಣದ ನಿಯಮ ಉಲ್ಲಂಘಿಸಿದ ಕಾರಣದಿಂದಾಗಿ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದರಿಂದಾಗಿ ಇಂಗ್ಲೆಂಡ್​ ಕಳೆದ ಪಂದ್ಯದಲ್ಲಿ ಆಡದ ಸ್ಟುವರ್ಟ್​ ಬ್ರಾಡ್​, ಕ್ರಿಸ್​ ವೋಕ್ಸ್​ ಮತ್ತು ಸ್ಯಾಮ್​ ಕರನ್​ ಅವರಿಗೆ ವೇಗದ ಬೌಲಿಂಗ್​ ವಿಭಾಗದ ಹೊಣೆ ವಹಿಸಿದೆ. ಜತೆಗೆ ನಾಯಕ ಜೋ ರೂಟ್​ ಕೂಡ ಮರಳಿದ್ದು, ಆಂಗ್ಲರಿಗೆ ಬಲ ಹೆಚ್ಚಿಸಿದ್ದಾರೆ. ವೆಸ್ಟ್​ ಇಂಡೀಸ್​ ತಂಡ ಮೊದಲ ಟೆಸ್ಟ್​ ಜಯಿಸಿದ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕಿಳಿದಿದೆ.

    ಇಂಗ್ಲೆಂಡ್​ ಪ್ರಥಮ ಇನಿಂಗ್ಸ್​: 46 ಓವರ್​ಗಳಲ್ಲಿ 3 ವಿಕೆಟ್​ಗೆ 112 (ಬರ್ನ್ಸ್​ 15, ಸಿಬ್ಲೆ 46*, ಕ್ರೌಲಿ 0, ರೂಟ್​ 23, ಸ್ಟೋಕ್ಸ್​ 18*, ಚೇಸ್​ 24ಕ್ಕೆ 2, ಅಲ್ಜಾರಿ 19ಕ್ಕೆ 1).

    ಜೈವಿಕ ಸುರಕ್ಷೆಯಿಂದ ಹೊರಹೋದ ಆರ್ಚರ್​ 2ನೇ ಟೆಸ್ಟ್​ನಿಂದ ಔಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts