More

    ವಿದ್ಯಾರ್ಥಿನಿಯರು ನಾಯಕತ್ವ ಗುಣ ಬೆಳೆಸಿಕೊಳ್ಳಿ

    ಚಾಮರಾಜನಗರ: ವಿದ್ಯಾರ್ಥಿನಿಯರು ಸಂಘಟನೆಯ ಮಹತ್ವ ಅರಿತು, ನಾಯಕತ್ವ ಗುಣ ಬೆಳೆಸಿಕೊಳ್ಳಿ ಎಂದು ಡಯಟ್ ಹಿರಿಯ ಉಪನ್ಯಾಸಕ ಲಿಂಗರಾಜೇಅರಸ್ ಸಲಹೆ ನೀಡಿದರು.

    ನಗರದ ಜೆಎಸ್‌ಎಸ್ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 2023-24ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ಶಾಲಾ ಹಂತದಲ್ಲಿಯೇ ಸಂಘಟನೆಗಳನ್ನು ಮಾಡುವ ಮೂಲಕ ವಿದ್ಯಾರ್ಥಿ ದೆಸೆಯಲ್ಲಿಯೇ ಸಂಘಟನೆಯ ಮೂಲ ಉದ್ದೇಶವನ್ನು ಬೆಳೆಸುವುದು ಅಗತ್ಯವಾಗಿದೆ. ಸಂಘಟನೆ ಎನ್ನುವುದು ಬುದ್ದನ ಕಾಲದಿಂದಲೂ ಇದ್ದು, ನಿಸ್ವಾರ್ಥ ಸೇವೆ, ಪರಸ್ಪರ ಸಹಕಾರ, ಪ್ರೀತಿ ಕರುಣೆಯಿಂದ ಕೂಡಿದ ನಾಯಕತ್ವದ ಗುಣ ಬೆಳೆಸುವುದೇ ಸಂಘಟನೆಯಾಗಿದೆ. ವಿದ್ಯಾರ್ಥಿನಿಯರಿಗೆ ಸಮಾಜಿಕ ಜವಾಬ್ದಾರಿ ಹೆಚ್ಚಾಗಿದ್ದು, ಸಂಘಟನೆಗಳಲ್ಲಿ ಹೆಣ್ಣು ಮಕ್ಕಳು ತೊಡಗಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

    ಶಿಕ್ಷಣ ಎನ್ನುವುದು ಬರೀ ಪುಸ್ತಕವಲ್ಲ, ಅದು ಅಂತಃಕರುಣೆಯಾಗಿದೆ. ಪರಸ್ಪರ ಸಹಕಾರ, ದೀನ ದಲಿತರ ಕರುಣೆ, ಎಲ್ಲರನ್ನೂ ಒಟ್ಟಾಗಿ ಕೊಂಡೋಯ್ಯುವ ಗುಣ ಬೆಳೆಸಬೇಕು. ಗೌರವಿಸುವ ಮನೋಭಾವ ಬೆಳೆಸಬೇಕು, ಆಗ ಅದು ನಿಜವಾದ ಶಿಕ್ಷಣವಾಗುತ್ತದೆ ಎಂದರು. ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳು ಸಂಘಟನೆಯ ಮೂಲಕ ಹೊತ್ತರೆ ಸಾಮಾಜಿಕ ಬದಲಾವಣೆ
    ಕಾಣಬಹುದು ಎಂದರು.

    ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಾಧನೆಯ ದೃಷ್ಟಿಯನ್ನುಟ್ಟುಕೊಂಡು ಶಿಕ್ಷಣ ಪಡೆಯಬೇಕು, ಹೆಣ್ಣು ಪುರಷನಷ್ಟೇ ಸಮಾನಳು ಎಂಬುದನ್ನು ತೋರಿಸುವ ಮನೋಭಾವ ಆತ್ಮಸ್ಥೈರ್ಯ, ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು.
    ಮುಂದಿನ ವರ್ಷದಿಂದ ನಮ್ಮ ತಂದೆ ಸಿ.ಗುರುಸ್ವಾಮಿಯವರ ಹೆಸರಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಈ ಶಾಲೆಯ ವಿದ್ಯಾರ್ಥಿನಿಯರಿಗೆ 10 ಸಾವಿರ ಪ್ರೋತ್ಸಾಹ ಧನವನ್ನು ನೀಡುವುದಾಗಿ ತಿಳಿಸಿದರು.

    ಇದೇ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದ ಸೃಷ್ಠಿ ಮತ್ತು ಮಹೇಶ್ವರಿ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.
    ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸೋಮಣ್ಣೇಗೌಡ, ಜೆಎಸ್‌ಎಸ್ ಅಕ್ಷರ ದಾಸೋಹ ಸಮಿತಿಯ ಅಧ್ಯಕ್ಷ ಆರ್.ಕುಮಾರಸ್ವಾಮಿ, ಮುಖ್ಯಶಿಕ್ಷಕಿ ನಾಗೇಶ್ವರಿ, ಶಿಕ್ಷಕ ನಾಗರಾಜು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts