More

    ಶಾಸಕರ ಮಕ್ಕಳ ಕೈ ಹಿಡಿಯದ ಮತದಾರ

    ಅವಿನಾಶ್ ಜೈನಹಳ್ಳಿ ಮೈಸೂರು
    ನಗರದ ಪ್ರತಿಷ್ಠಿತ ಹಾಗೂ ವಿದ್ಯಾವಂತರು ಹೆಚ್ಚಿರುವ ಚಾಮರಾಜ ವಿಧಾನಸಭಾ ಕ್ಷೇತ್ರ ತನ್ನ ಹಳೆಯ ಸಂಪ್ರದಾಯವನ್ನು ಈ ಬಾರಿಯೂ ಮುಂದುವರಿಸಿದೆ..!

    ‘ಅಪ್ಪಂದಿರಿಗೆ ಒಲಿಯುವ ಈ ಕ್ಷೇತ್ರ ಅದೇಕೋ ಏನೋ ಅವರ ಮಕ್ಕಳಿಗೆ ಮಾತ್ರ ಈವರೆಗೂ ಒಲಿದಿಲ್ಲ’ ಎಂಬ ಮಾತನ್ನು ಚಾಮರಾಜ ಕ್ಷೇತ್ರ ಫಲಿತಾಂಶ ಮತ್ತೆ ಸತ್ಯ ಮಾಡಿದೆ. ತಮ್ಮ ನಾಯಕರ ಮೇಲಿನ ಅಭಿಮಾನದಿಂದ ಅವರ ಪುತ್ರರಿಗೂ ಮತ ಹಾಕಿ ಗೆಲ್ಲಿಸುವ ಸಂಪ್ರದಾಯ ಅನೇಕ ಕ್ಷೇತ್ರಗಳಲ್ಲಿದೆ. ಆದರೆ, ಚಾಮರಾಜ ಕ್ಷೇತ್ರ ಇದಕ್ಕೆ ಹೊರತಾಗಿದೆ ಎನ್ನುವುದನ್ನು ಮತ್ತೆ ನಿರೂಪಿಸಿದೆ.

    ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಕೆಂಗೇಗೌಡರ ಪುತ್ರ ಎಚ್.ಕೆ.ರಮೇಶ್ ಕೇವಲ 4,549 ಮತ ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಜತೆಗೆ ಠೇವಣಿ ಕಳೆದುಕೊಂಡಿದ್ದಾರೆ. ಇಂತಹ ಫಲಿತಾಂಶವನ್ನು ನೀಡಿರುವ ಮತದಾರರು ತಮ್ಮ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.

    ಈ ಕ್ಷೇತ್ರದಿಂದ ಕೆ.ಪುಟ್ಟಸ್ವಾಮಿ, ಕೆಂಗೇಗೌಡ, ಕೆ.ಕೆಂಪೀರೇಗೌಡ ಹಾಗೂ ಎಚ್.ಎಸ್.ಶಂಕರಲಿಂಗೇಗೌಡರು ಆರಿಸಿ ಬಂದಿದ್ದಾರೆ. ಆದರೆ, ಅವರ ಮಕ್ಕಳು ಸ್ಪರ್ಧಿಸಿದ್ದರೂ ಈವರೆಗೂ ಗೆದ್ದು ಬಂದಿಲ್ಲ. ಇನ್ನು ಕೆಲವರು ತಮ್ಮ ಪಕ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರೂ ಸ್ಪರ್ಧಿಸುವ ಅವಕಾಶ ಸಿಕ್ಕಿಲ್ಲ. ಚಾಮರಾಜ ಕ್ಷೇತ್ರ ರಚನೆಯಾದ ಬಳಿಕ 1978ರಲ್ಲಿ ಪ್ರಥಮ ಬಾರಿಗೆ ಕೆ.ಪುಟ್ಟಸ್ವಾಮಿ ಶಾಸಕರಾಗಿದ್ದರು. ಆಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಎನ್.ಕೆಂಗೇಗೌಡ 18,103 ಮತ ಪಡೆದರೆ, ಜನತಾಪಕ್ಷದಿಂದ ಸ್ಪರ್ಧಿಸಿದ್ದ ಕೆ.ಪುಟ್ಟಸ್ವಾಮಿ 24,524 ಮತ ಪಡೆದು, 6,421 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಂತೆಯೇ ಕೆ.ಪುಟ್ಟಸ್ವಾಮಿ ಅವರ ಪುತ್ರ, ಮೈಸೂರಿನ ಪ್ರಥಮ ಮೇಯರ್ ಪಿ.ವಿಶ್ವನಾಥ್ 1994ರ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಆದರೆ ಅವರಿಗೂ ಗೆಲುವು ದೊರೆಯಲಿಲ್ಲ. ಅಂದು ಅವರು ಪಡೆದದ್ದು ಕೇವಲ 1926 ಮತಗಳಷ್ಟೆ. ಅವರ ವಿರುದ್ಧ ಪ್ರಥಮ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಂಕರಲಿಂಗೇಗೌಡ 32,620 ಮತ ಪಡೆದು ಶಾಸಕರಾಗಿ ಆಯ್ಕೆಯಾದರು. 1985ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹರ್ಷಕುಮಾರ್(16,265) ವಿರುದ್ಧ ಜನತಾಪಕ್ಷದ ಅಭ್ಯರ್ಥಿ ಕೆ.ಕೆಂಪೀರೇಗೌಡ 32,077 ಮತ ಗಳಿಸಿ, 15,812 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಅವರ ಮಗ ಉಮಾಶಂಕರ್ 2004ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರಾದರೂ 10,609 ಮತ ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಚುನಾವಣೆಯಲ್ಲಿ ಬಿಜೆಪಿಯಿಂದ 2ನೇ ಬಾರಿಗೆ ಸ್ಪರ್ಧಿಸಿದ್ದ ಎಚ್.ಎಸ್.ಶಂಕರಲಿಂಗೇಗೌಡ 37,906 ಮತ ಪಡೆದು ಗೆಲುವು ಸಾಧಿಸಿದರು. ಹೀಗಾಗಿ ಉಮಾಶಂಕರ್ ಶಾಸಕರಾಗುವ ಕನಸು ಕನಸಾಗಿಯೇ ಉಳಿಯಿತು.

    ಇನ್ನು 1978ರಲ್ಲಿ ಪ್ರಥಮ ಬಾರಿಗೆ ಚಾಮರಾಜದಿಂದ ಆಯ್ಕೆಯಾಗಿದ್ದ ಕೆ.ಪುಟ್ಟಸ್ವಾಮಿ ಅಕಾಲಿಕ ನಿಧನರಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿ.ಎನ್.ಕೆಂಗೇಗೌಡ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು. ಆದರೆ, ಅವರ ಮಗ ಮಾಜಿ ಮೇಯರ್ ಬಿ.ಕೆ.ಪ್ರಕಾಶ್ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದರೂ ಪಕ್ಷ ಸ್ಪರ್ಧಿಸುವ ಅವಕಾಶ ಮಾಡಿಕೊಡಲಿಲ್ಲ.
    1983ರ ಚುನಾವಣೆಯಲ್ಲಿ ಎಚ್.ಕೆಂಪೇಗೌಡ ಜನತಾ ಪಕ್ಷದಿಂದ ಸ್ಪರ್ಧಿಸಿ 23,967 ಮತ ಪಡೆದರೆ, ಎದುರಾಳಿ ಪುಟ್ಟೇಗೌಡ ಬಿಜೆಪಿಯಿಂದ ಸ್ಪರ್ಧಿಸಿ 11,932 ಮತ ಪಡೆದಿದ್ದರು. ಈ ವೇಳೆ 11,765 ಮತಗಳ ಅಂತರದಿಂದ ಎಚ್.ಕೆಂಪೇಗೌಡ ಗೆಲುವು ಸಾಧಿಸಿದ್ದರು. ಆದರೆ ಪ್ರಸಕ್ತ ಚುನಾವಣೆಯಲ್ಲಿ ಅವರ ಪುತ್ರ ಎಚ್.ಕೆ.ರಮೇಶ್ ಸ್ಪರ್ಧೆ ಮಾಡಿ ಠೇವಣಿ ಕಳೆದುಕೊಂಡರು!

    ನಂದೀಶ್ ಪ್ರೀತಂಗೂ ಇಲ್ಲ ಸ್ಪರ್ಧೆಯ ಅವಕಾಶ!


    1994, 1999, 2004 ಹಾಗೂ 2008ರ ಚುನಾವಣೆಗಳಲ್ಲಿ ಸತತ 4 ಬಾರಿಯೂ ಕ್ಷೇತ್ರದ ಶಾಸಕರಾಗಿ ಎಚ್.ಎಸ್. ಶಂಕರಲಿಂಗೇಗೌಡ ಆಯ್ಕೆಯಾಗಿದ್ದರು. ಹಲವು ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಅವರು 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ, ವಾಸು ಅವರ ವಿರುದ್ಧ ಸೋಲು ಕಂಡಿದ್ದರು. ಅಪ್ಪ ಜೆಡಿಎಸ್‌ಗೆ ಸೇರಿದರೂ ಬಿಜೆಪಿಯಲ್ಲಿಯೇ ಇರುವ ಅವರ ಪುತ್ರ ನಂದೀಶ್ ಪ್ರೀತಂ 2013ರ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಕೇಳಿದ್ದರೂ ಸಿಗಲಿಲ್ಲ. 2018 ಮತ್ತು 2023ರಲ್ಲೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಟಿಕೆಟ್ ದೊರೆಯಲಿಲ್ಲ. ಸದ್ಯ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

    ಮಕ್ಕಳಿಗೆ ಜೈ ಎಂದ ಇತರ ಕ್ಷೇತ್ರಗಳು

    ಚಾಮರಾಜ ಕ್ಷೇತ್ರದ ಮತದಾರರು ತಮ್ಮ ಮಾಜಿ ಶಾಸಕರ ಮಕ್ಕಳನ್ನು ಕೈ ಬಿಟ್ಟಿದ್ದರೂ ಮೈಸೂರು ಜಿಲ್ಲೆಯ ಇತರ ಕ್ಷೇತ್ರಗಳ ಮತದಾರರು ಮಾತ್ರ ತಮ್ಮ ಕ್ಷೇತ್ರದ ಮಾಜಿ ಶಾಸಕರ ಮಕ್ಕಳ ಕೈ ಹಿಡಿದು ಗೆಲುವಿನ ದಡ ಸೇರಿಸಿದ್ದಾರೆ.
    ಮಾಜಿ ಶಾಸಕ ದಿವಂಗತ ಚಿಕ್ಕಮಾದು ಪುತ್ರ, ಅನಿಲ್ ಚಿಕ್ಕಮಾದು 2ನೇ ಬಾರಿಗೆ ಎಚ್.ಡಿ.ಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರನ್ನು ಕ್ಷೇತ್ರದ ಜನ ಮತ್ತೆ ಕೈ ಹಿಡಿದ್ದಾರೆ. ಅವರ ತಂದೆ ಚಿಕ್ಕಮಾದು 2013ರಲ್ಲಿ ಎಚ್.ಡಿ.ಕೋಟೆಯ ಶಾಸಕರಾಗಿದ್ದರು. ಅದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್ ಅವರನ್ನು ಮತದಾರರು ಕೈ ಬಿಟ್ಟಿದ್ದಾರೆ. ಚಿಕ್ಕಣ್ಣ 2008ರಲ್ಲಿ ಎಚ್.ಡಿ.ಕೋಟೆ ಶಾಸಕರಾಗಿದ್ದರು.

    ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್‌ಗೌಡ ಅವರನ್ನು ಮತದಾರರ ಕೈ ಹಿಡಿದಿದ್ದರೆ, ಜಿ.ಟಿ.ದೇವೇಗೌಡ ಅವರು ಎರಡು ಬಾರಿ ಹುಣಸೂರು ಕ್ಷೇತ್ರದ ಶಾಸಕರಾಗಿದ್ದರು. ಅಜೀಜ್ ಸೇಠ್‌ಪುತ್ರ, ಶಾಸಕ ತನ್ವೀರ್ ಸೇಠ್ ಅವರನ್ನು ಮತ್ತೆ ಎನ್.ಆರ್.ಕ್ಷೇತ್ರದ ಮತದಾರರು ವಿಧಾನಸೌಧಕ್ಕೆ ಕಳುಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts