More

    ವೈರುಧ್ಯಮಯ ಕ್ಷೇತ್ರ ಚಾಮರಾಜ

    ಮೈಸೂರಿನ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ, ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಚಾಮರಾಜ ವೈರುಧ್ಯಮಯ ಕ್ಷೇತ್ರವಾಗಿದೆ. ಪ್ರತಿಷ್ಠಿತ ಬಡಾವಣೆಗಳ ಜತೆಗೆ ಇಂದಿಗೂ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವಂತಹ ಹಲವು ಬಡಾವಣೆಗಳೂ ಈ ಕ್ಷೇತ್ರದ ವ್ಯಾಪ್ತಿಗೆ ಸೇರಿರುವುದು ವಿಶೇಷ.


    ಯಾದವಗಿರಿ, ವಿಜಯನಗರ 1 ಮತ್ತು 2ನೇ ಹಂತ, ಜಯಲಕ್ಷ್ಮೀಪುರಂ, ಸರಸ್ವತಿಪುರಂ, ಗೋಕುಲಂ, ಹೆಬ್ಬಾಳು, ಲಕ್ಷ್ಮೀಕಾಂತನಗರ, ವಿವಿ ಮೊಹಲ್ಲಾ, ಕೆ.ಡಿ.ರಸ್ತೆ, ಅರಸು ರಸ್ತೆ, ಚಾಮರಾಜ ಮೊಹಲ್ಲಾ, ಬೃಂದಾವನ ಬಡಾವಣೆ ಸೇರಿದಂತೆ ಅನೇಕ ಪ್ರತಿಷ್ಠಿತ ಬಡಾವಣೆಗಳನ್ನು ಹೊಂದಿರುವ ಈ ಕ್ಷೇತ್ರ ಇಂದಿಗೂ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಹಳೆಯ ಹೆಂಚಿನ ಮನೆಗಳು, ಒಕ್ಕಲುತನದ ಪ್ರತೀಕವಾದ ಹೈನುಗಾರಿಕೆ, ನ್ಯಾಯ ಪಂಚಾಯಿತಿ, ಹಬ್ಬ ಹರಿದಿನಗಳನ್ನು ಕಾಣಬಹುದಾದ ಅನೇಕ ಬಡಾವಣೆಗಳನ್ನು ಹೊಂದಿದೆ. ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ ಪ್ರತಿಷ್ಠಿತರ ವೈಭೋಗದ ಜತೆಗೆ ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
    ನಗರ ಎಷ್ಟೇ ಅಭಿವೃದ್ಧಿ ಹೊಂದಿದರೂ ಕುಂಬಾರಕೊಪ್ಪಲು, ಮಂಚ್ಚೇಗೌಡನಕೊಪ್ಪಲು, ಮೇಟಗಳ್ಳಿ, ಒಂಟಿಕೊಪ್ಪಲು, ಪಡುವಾರಳ್ಳಿ, ಕುಕ್ಕರಹಳ್ಳಿ, ಕೆ.ಜಿ.ಕೊಪ್ಪಲು, ಸೊಪ್ಪಿನಕೇರಿ, ಚಿಕ್ಕ ಒಕ್ಕಲಗೇರಿ, ದೊಡ್ಡ ಒಕ್ಕಲಗೇರಿ, ಬೆಳ್ಳಿಕಟ್ಟೆ ಮಿಷನ್, ಮಂಜುನಾಥಪುರ, ಬಂಬೂಬಜಾರ್, ಮಂಡಿ ಮೊಹಲ್ಲಾ ಅಂತಹ ಬಡಾವಣೆಗಳಲ್ಲಿ ಗ್ರಾಮೀಣ ಸೊಗಡು ಇನ್ನೂ ಜೀವಂತವಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆಲ್ಲ ಆರೋಗ್ಯ ಸೇವೆ ನೀಡುತ್ತಿರುವ ಪ್ರತಿಷ್ಠಿತ ಕೆ.ಆರ್.ಆಸ್ಪತ್ರೆ, ಜಯದೇವ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಮೈಸೂರು ವಿಶ್ವವಿದ್ಯಾಲಯ, ಮುಕ್ತ ವಿವಿ, ವಿದ್ಯಾಕಾಶಿ ಮಾನಸಗಂಗೋತ್ರಿ, ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಮಹಾರಾಣಿ ಕಾಲೇಜು, ದೇವರಾಜ ಮಾರುಕಟ್ಟೆ, ಜಗನ್ಮೋಹನ ಅರಮನೆ, ಲ್ಯಾನ್ಸ್‌ಡೌನ್ ಬಿಲ್ಡಿಂಗ್ ಕೂಡ ಈ ಕ್ಷೇತ್ರದಲ್ಲೇ ಇರುವುದು ಮತ್ತೊಂದು ವಿಶೇಷ.

    9 ಶಾಸಕರನ್ನು ಕಂಡ ಕ್ಷೇತ್ರ

    ಕ್ಷೇತ್ರದಲ್ಲಿ 1978ರಿಂದ ಇಲ್ಲಿಯವರೆಗೆ ಎರಡು ಉಪ ಚುನಾವಣೆ ಸೇರಿದಂತೆ ಒಟ್ಟು 12 ಚುನಾವಣೆ ನಡೆದಿದ್ದು, 9 ಶಾಸಕರನ್ನು ಕಂಡಿದೆ. ಈ ಪೈಕಿ ಎಚ್.ಎಸ್. ಶಂಕರಲಿಂಗೇಗೌಡರೇ ಸತತ 4 ಬಾರಿ ಆಯ್ಕೆಯಾಗಿರುವುದು ದಾಖಲೆಯಾಗಿದೆ.
    1978ರಲ್ಲಿ ಚಾಮರಾಜ ಕ್ಷೇತ್ರ ರಚನೆಯಾದಾಗ ಮೊದಲ ಬಾರಿಗೆ ಜನತಾಪಕ್ಷದ ಕೆ.ಪುಟ್ಟಸ್ವಾಮಿ ಶಾಸಕರಾಗಿ ಆರಿಸಿ ಬಂದರು. ಕೆ.ಪುಟಸ್ವಾಮಿ ಅವರು ಕೆಲವೇ ದಿನಗಳಲ್ಲಿ ನಿಧನರಾಗಿದ್ದರಿಂದ ಅದೇ ವರ್ಷ ಉಪ ಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಬಿ.ಎನ್.ಕೆಂಗೇಗೌಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದರು. 1983ರ ಚುನಾವಣೆಯಲ್ಲಿ ಜನತಾ ಪಕ್ಷದ ಎಚ್.ಕೆಂಪೇಗೌಡ ಆರಿಸಿ ಬಂದರು. ನಂತರ 1985ರ ಚುನಾವಣೆಯಲ್ಲಿ ಜನತಾಪಕ್ಷದಿಂದ ಕೆ.ಕೆಂಪೀರೇಗೌಡ ಆಯ್ಕೆಯಾದರು. ಕೆ.ಕೆಂಪೀರೇಗೌಡರ ನಿಧನದಿಂದ 1986ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನತಾಪಕ್ಷದ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಆಯ್ಕೆಯಾದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಹರ್ಷಕುಮಾರ್‌ಗೌಡ ಶಾಸಕರಾಗಿ ಆಯ್ಕೆಯಾಗಿದ್ದರು.
    ಶಂಕರಲಿಂಗೇಗೌಡರಿಂದ ದಾಖಲೆ ಜಯ:
    ದಿವಂಗತ ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಕ್ಷೇತ್ರದಲ್ಲಿ ಆರು ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಜಯ ಸಾಧಿಸಿದ್ದಾರೆ. ಆ ವರೆಗೂ ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆದ್ದಿಲ್ಲ ಎನ್ನುವುದೇ ವಿಶೇಷವಾಗಿತ್ತು. 1989ರಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಬಳಿಕ 1994, 1999, 2004 ಮತ್ತು 2008ರ ಚುನಾವಣೆಗಳಲ್ಲಿ ಎಚ್.ಎಸ್. ಶಂಕರಲಿಂಗೇಗೌಡ ಬಿಜೆಪಿಯಿಂದ ಸ್ಪರ್ಧಿಸಿ ಸತತ ಶಾಸಕರಾಗಿ ಆಯ್ಕೆಯಾಗಿ ದಾಖಲೆ ಬರೆದರು. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದ ಅವರು 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
    2013ರ ಚುನಾವಣೆಯಲ್ಲಿ ಮಾಜಿ ಶಾಸಕ ವಾಸು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಸಾಧಿಸಿದರು. 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್.ನಾಗೇಂದ್ರ ಜಯಗಳಿಸಿ ಶಾಸಕರಾಗಿದ್ದಾರೆ. ಈ ಪೈಕಿ ವಾಸು ನಾಲ್ಕು ಬಾರಿ ಸ್ಪರ್ಧಿಸಿ ಒಂದು ಬಾರಿ ಜಯಗಳಿಸಿದ್ದಾರೆ. ಹಾಲಿ ಶಾಸಕ ಎಲ್.ನಾಗೇಂದ್ರ ಕೂಡ ಎರಡು ಬಾರಿ ಸ್ಪರ್ಧಿಸಿ ಒಮ್ಮೆ ಜಯಗಳಿಸಿದ್ದಾರೆ.

    ‘ಗೌಡ್ರು ಗದ್ಲ’ಕ್ಕೆ ಹೆಸರುವಾಸಿ


    ಚಾಮರಾಜ ಕ್ಷೇತ್ರ ಅೋಷಿತ ‘ಒಕ್ಕಲಿಗರ ಕ್ಷೇತ್ರ’ ಎಂದೇ ಖ್ಯಾತಿ ಪಡೆದಿದೆ. ಇಲ್ಲಿ ಒಕ್ಕಲಿಗ ಸಮುದಾಯದ ಮತದಾರರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಜತೆಗೆ, ಕ್ಷೇತ್ರ ರಚನೆಯಾದಾಗಿನಿಂದ ಇಲ್ಲಿಯವರೆಗೂ ಗೆದ್ದಿರುವ ಎಲ್ಲ ಶಾಸಕರೂ ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ. ಜತೆಗೆ ಇಲ್ಲಿ ಸ್ಪರ್ಧಿಸಿರುವ ಹಾಗೂ ಸ್ಪರ್ಧಿಸಲು ಮುಂದಾಗಿರುವ ಬಹುತೇಕ ಅಭ್ಯರ್ಥಿಗಳು ಇದೇ ಸಮುದಾಯದವರು.
    ಮಹಿಳಾ ಮತದಾರರು ಹೆಚ್ಚಿರುವುದು ಈ ಕ್ಷೇತ್ರದ ಮತ್ತೊಂದು ವಿಶೇಷ. ಕ್ಷೇತ್ರದಲ್ಲಿ 2,42,760 ಮತದಾರರಿದ್ದಾರೆ. ಈ ಪೈಕಿ 1,23,030 ಮಹಿಳಾ ಮತದಾರರು ಹಾಗೂ 1,19,701 ಪುರುಷ ಮತದಾರರು. 29 ಇತರ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಒಟ್ಟು 244 ಮತಗಟ್ಟೆ ತೆರೆಯಲು ತೀರ್ಮಾನಿಸಲಾಗಿದೆ.

    ಟಿಕೆಟ್‌ಗಾಗಿ ತೀವ್ರ ಪೈಪೋಟಿ


    ಪ್ರಮುಖ ಮೂರು ಪಕ್ಷಗಳಿಂದಲೂ ಕ್ಷೇತ್ರದ ಟಿಕೆಟ್‌ಗಾಗಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಶುರುವಾಗಿದೆ.
    ಬಿಜೆಪಿಯಲ್ಲಿ ಎಷ್ಟೇ ಆಕಾಂಕ್ಷಿಗಳಿದ್ದರೂ ಶಾಸಕ ಎಲ್. ನಾಗೇಂದ್ರ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತ ಎನ್ನುವುದು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪೈಕಿ ಎಲ್. ನಾಗೇಂದ್ರ ಮುಂದಿರುವುದಂತೂ ಸತ್ಯ. ಅವರಿಗೇ ಟಿಕೆಟ್ ಎನ್ನಲಾಗಿದೆ. ನಾಗೇಂದ್ರ ಅವರ ಜತೆಗೆ, ಬಿಜೆಪಿ ಮಾಜಿ ನಗರಾಧ್ಯಕ್ಷ ಡಾ.ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ನಂದೀಶ್ ಪ್ರೀತಂ, ಮುಖಂಡ ಜಯಪ್ರಕಾಶ್ ಕೂಡ ಆಕಾಂಕ್ಷಿಗಳಾಗಿದ್ದಾರೆ.
    ಜೆಡಿಎಸ್‌ನಿಂದ ನಗರ ಪಾಲಿಕೆ ಸದಸ್ಯ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ. ಶ್ರೀಧರ್, ಪಾಲಿಕೆ ಸದಸ್ಯರಾದ ಎಸ್.ಬಿ.ಎಂ. ಮಂಜು, ಭಾಗ್ಯಾ ಮಹದೇಶ್, ಪ್ರೇಮಾ ಶಂಕರೇಗೌಡ, ಮಾಜಿ ಮೇಯರ್ ರವಿಕುಮಾರ್, ಮಾಜಿ ಸದಸ್ಯ ಸಿ.ಮಹದೇಶ್ ಹಾಗೂ ಮಾಜಿ ಶಾಸಕ ಎಚ್.ಕೆಂಪೇಗೌಡರ ಪುತ್ರ ಎಚ್.ಕೆ.ರಮೇಶ್ ಆಕಾಂಕ್ಷಿಗಳಾಗಿದ್ದಾರೆ.
    ಇನ್ನು ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆಯ ವಿಷಯ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಮಾಜಿ ಶಾಸಕ ವಾಸು ಹಾಗೂ ಕೆ. ಹರೀಶ್‌ಗೌಡ ನಡುವೆ ಹೆಚ್ಚು ಪೈಪೋಟಿ ಏರ್ಪಟ್ಟಿದ್ದು, ವರಿಷ್ಠರಿಗೆ ತಲೆಬಿಸಿಯಾಗಿ ಪರಿಣಮಿಸಿದೆ. ಎರಡನೇ ಪಟ್ಟಿಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯ ೋಷಣೆಯಾಗದಿರುವುದು ಆಕಾಂಕ್ಷಿಗಳ ಎದೆ ಬಡಿತ ಹೆಚ್ಚಿಸಿದೆ.

    (ವರದಿ: ಅವಿನಾಶ್ ಜೈನಹಳ್ಳಿ ಮೈಸೂರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts