More

    ದೇಶದ ಜನರು ಧರ್ಮವನ್ನು ಪಾಲಿಸಿದರೆ ರಾಷ್ಟ್ರ ಸುಭಿಕ್ಷ: ರಾಜಕಾರಣದ ಭವಿಷ್ಯ ನುಡಿದ ರಾಜಗುರು ದ್ವಾರಕಾನಾಥ ಗುರೂಜಿ

    ಹಿಂದಿನ ಹಸನ್ಮುಖಿ ಮೋದಿ ಈಗಿಲ್ಲ | ಇಂಡಿ ಒಕ್ಕೂಟ ಅಧಿಕಾರಕ್ಕೆ ಬರುತ್ತದೆ ಎನ್ನಲು ನನ್ನ ಬಳಿ ಆಧಾರವಿಲ್ಲ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ರಾಜ್ಯ ಹಾಗೂ ರಾಷ್ಟ್ರ ರಾಜಕಾರಣ ಆಳ-ಅಗಲ ಅಂತರಾಳ ಬಲ್ಲಂತಹ ರಾಜಗುರು ಬಿ.ಎಸ್. ದ್ವಾರಕಾನಾಥ ಗುರೂಜಿ ರಾಜಕಾರಣದ ಭವಿಷ್ಯದ ಬೆಳವಣಿಗೆಗಳನ್ನು ವಿಜಯವಾಣಿ ಸಂದರ್ಶನದಲ್ಲಿ ಸೂಚ್ಯವಾಗಿ ವಿವರಿಸಿದ್ದು, ಸಂಪೂರ್ಣ ವಿವರ ಇಲ್ಲಿದೆ.

    . ಹೇಗಿದೆ ದೇಶದ ಸ್ಥಿತಿಗತಿ?
    ದೇವರ ಕೃಪೆಯಿಂದ ಚೆನ್ನಾಗಿ ಸಾಗಿದೆ. ಧರ್ಮನಾಶ ಮಾಡಿದರೆ ನಮ್ಮ ನಾಶವೇ ಆಗುತ್ತದೆ ಎಂದು ಶ್ರೀರಾಮನೇ ಹೇಳಿದ್ದಾನೆ. ರಾಷ್ಟ್ರ ಸುಖವಾಗಿರಬೇಕು, ಜನ ಧರ್ಮ ಪಾಲಿಸಿದರೆ ದೇಶ ಸುಭಿಕ್ಷವಾಗಿರುತ್ತದೆ. ರಾಷ್ಟ್ರ ಆಳುವವರಿಗೂ ಅದೇ ಬುದ್ಧಿ ಬರಬೇಕು. ಧರ್ಮ ಬಿಟ್ಟು ಹೋದರೆ ಬಾಲರಾಮ ಖಂಡಿತಾ ಆಶೀರ್ವಾದ ಮಾಡುವುದಿಲ್ಲ.

    . ಇಂದಿರಾ ಗಾಂಧಿ ಕಾಲದಿಂದ, ದೇವರಾಜ ಅರಸು, ಡಿಕೆಶಿವರೆಗೆ ರಾಜಕೀಯ ಮುಖಂಡರೊಂದಿಗೆ ನಿಮ್ಮ ನಿಕಟತೆ ಇದೆ. ಬಹುತೇಕ ರಾಜಕಾರಣಿಗಳ ಜಾತಕ ನಿಮ್ಮ ಕೈಯಲ್ಲಿದೆ. ಪ್ರಸ್ತುತ ಲೋಕಸಭೆ ಚುನಾವಣೆಯನ್ನು ಯಾವ ರೀತಿ ನೋಡುತ್ತಿದ್ದೀರಿ?
    ಸಾರ್ವತ್ರಿಕ ಚುನಾವಣೆ ಒಂದು ಹಬ್ಬ. ಈ ವರ್ಷ ಕ್ರೋಧಿ ನಾಮ ಸಂವತ್ಸರ. ಕ್ರೋಧ ಎಂದರೆ ಮನಸ್ಸು ವಿಭಿನ್ನವಾಗಿರುವುದು, ಕೋಪ ತಾಂಡವ ಆಡುವುದು, ಮುಗ್ಧತೆ ಕಳೆದುಕೊಳ್ಳುವುದು, ಬಿರುಸು ಮಾತು, ಮುಖದಲ್ಲಿ ಶಾಂತಿ ಇಲ್ಲದಿರುವುದು, ಕೋಪ ಆರ್ಭಟದ, ಸತ್ಯ ಮುಚ್ಚಿಟ್ಟು ನಡೆಯುವ ಸಂವತ್ಸರ. ರಾಷ್ಟ್ರದಲ್ಲೇ ಕ್ರೋಧ ಇದೆ. ಪ್ರಜೆಗಳಿಗೆ ಕಷ್ಟ ಆಗುತ್ತದೆ, ಶಾಂತಿ ನೆಲೆಸಲ್ಲ.

    . ಎನ್​ಡಿಎ ಮೈತ್ರಿಕೂಟವನ್ನು ಮೋದಿ, ಇಂಡಿ ಮೈತ್ರಿ ಒಕ್ಕೂಟವನ್ನು ರಾಹುಲ್ ಮುನ್ನೆಡೆಸುತ್ತಿದ್ದಾರೆ. ಇವರ ಪ್ರಭಾವ ಎಷ್ಟಿದೆ, ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ?
    2014ರಲ್ಲಿ ಬಿಜೆಪಿಯವರು ಬಹುಮತದೊಂದಿಗೆ ಮೋದಿ ಅವರನ್ನು ತಂದು ಹತ್ತು ವರ್ಷ ರಾಷ್ಟ್ರ ಆಳಿದ್ದಾರೆ. ಅಂದಿದ್ದ ಹಸನ್ಮುಖಿ ಮೋದಿ ನೋಡುವುದು ಕಷ್ಟವಾಗಿದೆ. ಶಾಂತಿಯೂ ಇಲ್ಲ. ಅವರ ಗುರಿ ಚುನಾವಣೆ ಗೆಲ್ಲುವುದಷ್ಟೇ ಆಗಿದೆ. ಮನುಷ್ಯನಿಗೆ ರಾಷ್ಟ್ರ ತೆಗೆದುಕೊಂಡು ಹೋಗಬೇಕಾದರೆ ಬ್ರಹ್ಮ ಕಳೆಯೇ ಬರಬೇಕು. ಹತ್ತು ವರ್ಷದ ಹಿಂದಿನ ಶಾಂತಿ, ಸಮಾಧಾನ, ಸಂತೋಷ ಈಗಿಲ್ಲ. ಸಂವತ್ಸರ ಯಾವುದಿದೆಯೋ ಅದಕ್ಕೆ ತಕ್ಕಂತೆ ಮುಖಭಾವ ಇದೆ.

    . ನಿಮ್ಮ ಪ್ರಕಾರ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲವೇ?
    ಮನುಷ್ಯರು ಕೋಪ, ದ್ವೇಷದಿಂದ ಉನ್ಮತ್ತರಾಗಬಾರದು. ಚುನಾವಣೆ ಬರುತ್ತವೆ ಹೋಗುತ್ತವೆ. ಅದು ರಾಷ್ಟ್ರದ ಪ್ರಕ್ರಿಯೆ ಅಷ್ಟೇ. ಮೋದಿ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದು ಹೇಳಲ್ಲ. ಹಾಗೆಂದು ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದು ಕೂರುತ್ತೆ ಎಂದೂ ಹೇಳಲು ಗ್ರಹಗಳ ಸ್ಥಾನಗಳು ಅಷ್ಟು ಸೂಕ್ತ ವಾಗಿ ಕಾಣಿಸು ತ್ತಿಲ್ಲ. ಇಷ್ಟು ಮಾತ್ರ ಹೇಳಬಲ್ಲೆ. ಹತ್ತು ವರ್ಷದಿಂದ ಗಂಟೆ, ಜಾಗಟೆ, ತಾಳಮದ್ದಲೆ ಏನು ಮಾಡಿದರೂ ಎಲ್ಲ ಭಾರತೀಯರು ಒಗ್ಗಟ್ಟಾಗಿ ಮೋದಿ ಬೆನ್ನಿಗೆ ನಿಂತಿದ್ದರು. ಈಗ ಜಾಗಟೆ, ಗಂಟೆ ಯಾವುದೂ ಕೆಲಸ ಮಾಡುತ್ತಿಲ್ಲ, ಕೊರತೆಗಳಿವೆ. ಕಳೆದ ಚುನಾವಣೆಯಲ್ಲಿ ಏಕಾಂಗಿಯಾಗಿ ಗೆದ್ದಂತೆ ಈ ಬಾರಿ ಗೆಲ್ಲುವುದು ಅಸಾಧ್ಯ.

    . ಎನ್​ಡಿಎ ಮೈತ್ರಿ ಕೂಟದವರು 200 ಸ್ಥಾನ ಗೆಲ್ಲಲ್ಲ ಎಂದು ಇಂಡಿ ಒಕ್ಕೂಟ ಹೇಳುತ್ತಿದ್ದರೆ, ಆಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಎನ್​ಡಿಎದವರು ಹೇಳುತ್ತಿದ್ದಾರೆ. ಹಾಗಿದ್ದರೆ ಎನ್​ಡಿಎ ಕೂಟಕ್ಕೆ ಅಧಿಕಾರ ಕಷ್ಟವೇ?
    ಗ್ರಹಗಳು ಆ ರೀತಿ ಇಲ್ಲ ಎನ್ನಲು ಬೇಕಾದಷ್ಟು ನಿದರ್ಶನ ಇದೆ. ಅಯೋಧ್ಯೆ ರಾಮ ಮಂದಿರ ಪೂರ್ಣವಾಗಿಲ್ಲ, ಯಾರು ಯಾತಕ್ಕಾಗಿ ಕೂರಿಸಿದರೋ? ರಾಮನ ಆಸೆಯೇ ಇತ್ತೋ ಚರ್ಚೆ ಬೇಡ. ಆದರೆ, ಬಾಲರಾಮನೇ ಎದ್ದು ಬಂದರೂ ಈಗ ಆಳುತ್ತಿರುವ ಪಕ್ಷದವರು 400 ಸ್ಥಾನ ಪಡೆಯುವುದು ದೂರದ ಮಾತು.

    . ಒಂದಲ್ಲ ಒಂದು ದಿನ ರಾಜ್ಯದ ಸಿಎಂ ಆಗುತ್ತೇನೆಂದು ಡಿ.ಕೆ.ಶಿವಕುಮಾರ್ ಕನಸಿಟ್ಟುಕೊಂಡವರು. ಈ ಸರ್ಕಾರದ ಅವಧಿಯಲ್ಲಿ ಯೋಗ ಇದೆಯೇ?
    ಶಿವಕುಮಾರ್ ನನ್ನ ಬಳಿ ಬಂದಾಗ ಆತ ಏನೂ ಆಗಿರಲಿಲ್ಲ. ನಾನು ಹೇಳಿದಾಗ ಆತನ ಕನಸಲ್ಲೂ ಇರಲಿಲ್ಲ. ಅಯ್ಯಾ ನೀನು ಧರ್ಮ ಶ್ರದ್ಧೆ, ದೈವ ಶ್ರದ್ಧೆ ಇಟ್ಟುಕೊಂಡರೆ ಖಂಡಿತವಾಗಿ ಸಿಎಂ ಆಗುತ್ತೀಯಾ ಎಂದಿದ್ದೆ. ಭಾರತ ರಾಷ್ಟ್ರ ರಾಜಕಾರಣದಲ್ಲೂ ಸದ್ದು ಮಾಡಬಹುದು ಎಂದಿದ್ದೆ. ಸಿಎಂ ಆಗಲು ಕಾಲ ಕೂಡಿ ಬರಬೇಕು. ಮುಂದಿನ ಒಂದು ವರ್ಷದ ಭವಿಷ್ಯ ಈಗಲೇ ಏಕೆ ಹೇಳಬೇಕು. ಸಿಎಂ ಆಗಿಯೇ ಆಗುತ್ತಾರೆ.

    . ಸಿದ್ದರಾಮಯ್ಯ ಜಾತಕ, ಶಾಸ್ತ್ರ ನಂಬಲ್ಲ. ನಿಮ್ಮ ಪ್ರಕಾರ ಅವರ ಭವಿಷ್ಯ ಹೇಗಿದೆ? ಮುಂದಿನ ನಾಲ್ಕು ವರ್ಷ ಅವರೇ ಸಿಎಂ ಆಗಿರುತ್ತಾರಾ?
    ಸಿದ್ದರಾಮಯ್ಯ ಹಾಗೆಂದು ನಾನು ಒಪ್ಪಲ್ಲ. ಅವರನ್ನು ಹತ್ತಿರದಿಂದ ನೋಡಿದ್ದೇನೆ. ನೀವು ಸಿಎಂ ಆಗುತ್ತೀರೆಂದು 2006ರಲ್ಲಿ ಹೇಳಿದ್ದೆ. ಅವರಿಗೆ ಜನರ ಒಲವು ಇದೆ, ಸಹಾಯ ಮಾಡುವವರೂ ಇದ್ದಾರೆ. ಅವರ ಬೆನ್ನ ಹಿಂದೆ ಧರ್ಮಪತ್ನಿ ಪುಣ್ಯ ಪುನಸ್ಕಾರ ಇದೆ. ಸಿಎಂ ಹುದ್ದೆ ಶಾಶ್ವತ ಅಲ್ಲ, ಈ ರಾಜ್ಯದಲ್ಲಿ ಆರೋಗ್ಯದ ವಿಚಾರವಾಗಿ ವೀರೇಂದ್ರ ಪಾಟೀಲರನ್ನು ಹೊರತುಪಡಿಸಿ ಬೇರೆ ಯಾರನ್ನೂ ಕೆಳಗೆ ಇಳಿಸಿಲ್ಲ. ಇನ್ನೂ ಒಂದೂವರೆ ವರ್ಷ ಮುಂದುವರಿಯಬೇಕೆಂದರೆ ಆರೋಗ್ಯದ ಕಡೆ ಗಮನ ಕೊಡಲೇ ಬೇಕು.

    . ಬಿ.ವೈ. ವಿಜಯೇಂದ್ರ ರಾಜಕೀಯ ಭವಿಷ್ಯ ಏನು?
    ರಾಜಕೀಯ ಭವಿಷ್ಯ ಇಲ್ಲ ಎನ್ನಲ್ಲ. ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುವುದು. ರಾಷ್ಟ್ರದಲ್ಲಿ ಸಂಘರ್ಷ ನಡೆಯುತ್ತಿದೆ, ಈ ಸಮಯದಲ್ಲಿ ನೇತೃತ್ವ ತೆಗೆದುಕೊಂಡಿದ್ದಾರೆ. ಅವರ ಪಕ್ಷದಲ್ಲೇ ವಿರೋಧ ಇದೆ.

    . ರಾಹುಲ್ ಎಷ್ಟು ಬಾರಿ ರೀ ಲಾಂಚ್ ಮಾಡುತ್ತೀರಿ ಎಂದು ಬಿಜೆಪಿ ಗೇಲಿ ಮಾಡುತ್ತಿದೆ. ರಾಹುಲ್ ಗ್ರಹಗತಿ ಹೇಗಿದೆ?
    ಆ ರೀತಿ ಗೇಲಿ ಮಾಡುವುದು ತಪ್ಪಾಗುತ್ತದೆ. ಬಿಜೆಪಿ ಜನರಿಗೆ ನೀಡಿದ ಭರವಸೆ ಎಲ್ಲವನ್ನೂ ಈಡೇರಿಸಿದೆಯಾ? ಯಾರಾದರೂ ನೂರು ಜನರನ್ನು ಕರೆದು ಕೇಳಲಿ ಗೊತ್ತಾಗುತ್ತದೆ. ಬೆಲೆ ಏರಿಕೆಯಾಗುತ್ತಿದೆ, ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಮಳೆ ಇಲ್ಲ, ಬೆಳೆ ಇಲ್ಲ ಅನಾಹುತವೇ ಹೆಚ್ಚು. ಭಾರತ ಸರ್ಕಾರ ತನ್ನ ವೈಫಲ್ಯ ಒಪ್ಪಿಕೊಳ್ಳಬೇಕು. ಕಾಂಗ್ರೆಸ್ ಎಂದರೆ ಭಾರತ, ಭಾರತ ಎಂದರೆ ಕಾಂಗ್ರೆಸ್ ಎಂಬಂತಿತ್ತು. ನಂತರ ಬಿಜೆಪಿ ಅಧಿಕಾರಕ್ಕೆ ಬಂದಿತು. ಈಗ ಇಂಡಿ ಒಕ್ಕೂಟದವರು ಅಧಿಕಾರಕ್ಕೆ ಬರುತ್ತಾರೆ ಎಂದು ಹೇಳಲು ನನ್ನ ಬಳಿ ಆಧಾರವಿಲ್ಲ, ಗ್ರಹಗತಿಗಳು ಸೂಕ್ತ ರೀತಿಯಲ್ಲಿಲ್ಲ. ಆದರೆ, ಆಡಳಿತ ನಡೆಸುವವರಿಗೆ ಜನ ಬ್ರೇಕ್ ಹಾಕುತ್ತಾರೆ.

    . ರಾಜ್ಯದಲ್ಲಿ ಈ ಸರ್ಕಾರ ಬಂದ ನಂತರ ಬರಗಾಲ ಸೇರಿ ನಕಾರಾತ್ಮಕ ಬೆಳವಣಿಗೆ ಕಾಣಿಸುತ್ತಿದೆ. ಸರ್ಕಾರವನ್ನು ಸರಿಯಾಗಿ ನಡೆಸುತ್ತಿದ್ದಾರೆಯೇ?
    ಕ್ರೋಧಿ ನಾಮ ಸಂವತ್ಸರಕ್ಕೆ ಅಂಗಾರಕ ಅಧಿಪತಿ. ಎರಡೂ ಪಕ್ಷಗಳು ಕ್ರೋಧದಲ್ಲೇ ತೊಡಗಿವೆ. ಇನ್ನು ಇವರ ಕಾಲದಲ್ಲಿ ಮಳೆ ಬರಲಿಲ್ಲ ಎಂದು ಹೇಳುತ್ತಿದ್ದೀರಿ, ನಾನು ಕಂಡಂತೆ ಮಳೆ ಕೈಕೊಟ್ಟಾಗ ಸರ್ಕಾರದ ಪ್ರತಿನಿಧಿ, ಮುಜರಾಯಿ ಸಚಿವರು ಋಷ್ಯಶೃಂಗನಿಗೆ ಪ್ರಾರ್ಥನೆ ಮಾಡುವುದು ಸಂಪ್ರದಾಯ. ಯುಗಾದಿಗೆ ಮುನ್ನ ಶೃಂಗೇರಿ ಶ್ರೀಗಳ ಮೂಲಕ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿಗೆ ಅಭಿಷೇಕ ನಡೆಯುತ್ತಿತ್ತು. ಈಗ ನಡೆದಿಲ್ಲ. ಈಗಲಾದರೂ ಆ ಕೆಲಸ ಆಗಬೇಕು.

    ಬೆಂಗಳೂರಿನಲ್ಲಿ ಲಾಂಗ್‌ನಿಂದ ಹೊಡೆದು ರೌಡಿಶೀಟರ್ ಬರ್ಬರ ಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts