More

    ಸಿಇಟಿ ಔಟ್ ಆಫ್ ಸಿಲಬಸ್!; ಪಠ್ಯಕ್ರಮದಲ್ಲಿಲ್ಲದ 21 ಪ್ರಶ್ನೆಗಳ ಘಾಟು

    ಬೆಂಗಳೂರು: ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ಗುರುವಾರ ನಡೆದ ಮೊದಲ ದಿನದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವಿವಾದಕ್ಕೆ ಕಾರಣವಾಗಿದೆ. ಬೆಳಗಿನ ಅವಧಿಯಲ್ಲಿ ನಡೆದ ಜೀವಶಾಸ್ತ್ರ ಪರೀಕ್ಷೆಯಲ್ಲಿ ಕನಿಷ್ಠ 10 ಹಾಗೂ ಗಣಿತ ಪರೀಕ್ಷೆಯಲ್ಲಿ 11 ಪ್ರಶ್ನೆಗಳನ್ನು ಪಠ್ಯಕ್ರಮದ ಹೊರತಾಗಿ ಕೇಳಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಶುಕ್ರವಾರ ನಡೆಯಲಿರುವ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳಲ್ಲಿಯೂ ಇದೇ ಎಡವಟ್ಟು ಮುಂದುವರಿದರೆ ಏನು ಕತೆ ಎಂದು ಚಿಂತೆಗೀಡಾಗಿದ್ದಾರೆ.

    ಏನಿದು ಗೊಂದಲ?: ವಿದ್ಯಾರ್ಥಿಗಳ ಪ್ರಕಾರ, 2021-22 ಮತ್ತು 2022-23ನೇ ಸಾಲಿನಲ್ಲಿ ಬೋಧನೆ ಮಾಡಿರುವ ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಲಾಗಿದೆ. ಸಿಇಟಿಗೆ ಎನ್​ಸಿಇಆರ್​ಟಿ ಪಠ್ಯಕ್ರಮದಲ್ಲಿನ ಪ್ರಶ್ನೆ ಕೇಳಲಾಗುತ್ತದೆ. ಆದರೆ, ಕೋವಿಡ್ ಸಮಯದಲ್ಲಿ ಕೆಲ ಪಠ್ಯಗಳನ್ನು ಕೈಬಿಡಲಾಗಿತ್ತು. ನಂತರ ಅಂದರೆ 2021-22 ಹಾಗೂ 2022-23ನೇ ಸಾಲಿಗೆ ಎನ್​ಸಿಇಆರ್​ಟಿ ಹೊಸ ಪಠ್ಯ ಪ್ರಕಟಿಸಿತ್ತು. ಕೈಬಿಟ್ಟಿರುವ ಪಠ್ಯಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿತ್ತು. ಜತೆಗೆ, ಅವುಗಳನ್ನು ಬೋಧಿಸದಂತೆ ಮತ್ತು ಪರೀಕ್ಷೆಗೆ ಆ ಪಠ್ಯದಿಂದ ಪ್ರಶ್ನೆಗಳನ್ನು ಕೇಳದಂತೆ ಎನ್​ಸಿಇಆರ್​ಟಿ ಸೂಚನೆ ನೀಡಿತ್ತು.

    ಸಿಇಟಿಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಬೋಧಿಸಿರುವ ಪಠ್ಯದ ಆಧಾರದಲ್ಲಿ ಪ್ರಶ್ನೆ ಕೇಳಲಾಗುತ್ತದೆ ಎಂದು ಕೆಇಎ ಅಧಿಸೂಚನೆಯಲ್ಲಿ ತಿಳಿಸಿತ್ತು. ಆದರೆ, ಕೈ ಬಿಟ್ಟಿರುವ ಪಠ್ಯಗಳ ಪ್ರಶ್ನೆ ಕೇಳಿರುವುದೇ ಸಮಸ್ಯೆಗೆ ಮೂಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಗ್ರಾಮೀಣರಿಗೆ ಅನ್ಯಾಯ: ಕೆಇಎ ಅಧಿಸೂಚನೆ ಪ್ರಕಾರ ಪ್ರಶ್ನೆಗಳನ್ನು ಕೇಳದಿರುವುದು ಮೂಲ ಸಮಸ್ಯೆಯಾಗಿದೆ. ನಗರ ಪ್ರದೇಶದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕೋಚಿಂಗ್ ಪಡೆಯುತ್ತಾರೆ. ಮುಂಜಾಗ್ರತಾ ಕ್ರಮದಿಂದ ಎಲ್ಲ ಪ್ರಶ್ನೆಗಳಿಗೂ ಸಿದ್ಧತೆ ಮಾಡಿಸಿರುತ್ತಾರೆ. ಆದರೆ, ಗ್ರಾಮೀಣ ಮತ್ತು ಸರ್ಕಾರಿ ಕಾಲೇಜು ಮಕ್ಕಳಿಗೆ ಹೆಚ್ಚಿನ ಕೋಚಿಂಗ್ ಇಲ್ಲದಿರುವ ಕಾರಣ ಅನ್ಯಾಯವಾಗಲಿದೆ ಎಂದು ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ (ಕುಪ್ಮಾ) ಕಾರ್ಯದರ್ಶಿ ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

    ಶೇ.80 ವಿದ್ಯಾರ್ಥಿಗಳು ಹಾಜರು: ರಾಜ್ಯದ 737 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅಕ್ರಮಕ್ಕೆ ಆಸ್ಪದವಾಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಒಟ್ಟು 3,49,637 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ಶೇ.80 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಕೆಇಎ ತಿಳಿಸಿದೆ. ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ. ನಗರದ ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಸರ್ಕಾರಿ ಪಿಯು ಕಾಲೇಜಿಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆಯನ್ನು ವೀಕ್ಷಿಸಿದರು.

    ತಜ್ಞರ ಸಮಿತಿ ರಚನೆ ಭರವಸೆ: ಜೀವಶಾಸ್ತ್ರ ಮತ್ತು ಗಣಿತ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯ ವ್ಯಾಪ್ತಿಯ ಹೊರಗಿನ ಪ್ರಶ್ನೆಗಳಿವೆ ಎಂಬ ಅನುಮಾನಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು. ಇದನ್ನು ವಿಷಯ ತಜ್ಞರ ತಂಡ ಪರಿಶೀಲಿಸಿ ಸೂಕ್ತ ಸಲಹೆ ನೀಡಲಿದೆ. ಆ ನಂತರ ಕೆಇಎ ತೀರ್ವನಿಸಲಿದೆ ಎಂದು ರಮ್ಯಾ ತಿಳಿಸಿದ್ದಾರೆ. ನಿಯಮಗಳ ಪ್ರಕಾರವೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿದೆ. ಇದರ ಹೊರತಾಗಿಯೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುವ ಕಾರಣ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಶನಿವಾರದ ನಂತರ ಕೆಇಎ ವೆಬ್​ಸೈಟ್​ನಲ್ಲಿಯೇ ಆಕ್ಷೇಪಣೆ ಸಲ್ಲಿಸಲು ಲಿಂಕ್ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. 

    ಒಂದೇ ನೋಂದಣಿ ಸಂಖ್ಯೆ ಇಬ್ಬರು ವಿದ್ಯಾರ್ಥಿಗಳು!: ಕಲಬುರಗಿಯ ಮುಕ್ತಾಂಬಿಕಾ ಸ್ವತಂತ್ರ ಬಾಲಕಿಯರ ವಿಜ್ಞಾನ ಕಾಲೇಜು ಕೇಂದ್ರದಲ್ಲಿ ಒಂದೇ ನೋಂದಣಿ ಸಂಖ್ಯೆಯ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಂದೇ ನೋಂದಣಿ ಸಂಖ್ಯೆ ನೀಡಲು ಸಾಧ್ಯವಿಲ್ಲದಿದ್ದರೂ ಹೇಗೆ ಬಂತು ಎಂಬುದು ಅನುಮಾನ ಮೂಡಿಸಿದೆ. ಕೊನೆಗೆ ಇಬ್ಬರಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

    ಕೃಪಾಂಕ ನೀಡಿಕೆ ಪರಿಹಾರವಲ್ಲ!: ಪಠ್ಯಕ್ರಮ ಹೊರತಾದ ಪ್ರಶ್ನೆಗಳಿಗೆ ಕೃಪಾಂಕ ನೀಡುವುದರಿಂದ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಕೃಪಾಂಕ ನೀಡುವ ಬದಲಾಗಿ ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ಕೈಬಿಟ್ಟು, ಉಳಿದ ಪ್ರಶ್ನೆಗಳನ್ನು ಮಾತ್ರ ಪರಿಗಣಿಸಬೇಕು. ಉದಾಹರಣೆಗೆ ಜೀವಶಾಸ್ತ್ರ, ಗಣಿತದಲ್ಲಿ ತಲಾ 60 ಅಂಕಗಳಂತೆ 120 ಅಂಕಗಳನ್ನು ಪರಿಗಣಿಸಲಾಗುತ್ತದೆ. ಈಗ 11 ಪಠ್ಯಕ್ರಮ ಹೊರತಾದ ಪ್ರಶ್ನೆಗಳಿರುವ ಕಾರಣ 99 ಪ್ರಶ್ನೆಗಳನ್ನು ಮಾತ್ರ ಪರಿಗಣಿಸಿ ರ್ಯಾಂಕ್ ಪಟ್ಟಿ ಪ್ರಕಟಿಸುವುದರಿಂದ ಎಲ್ಲ ವಿದ್ಯಾರ್ಥಿಗಳಿಗೂ ನ್ಯಾಯ ಸಿಗಲಿದೆ ಎಂದು ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ (ಕುಪ್ಮಾ) ಅಧ್ಯಕ್ಷ ಮೋಹನ್ ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಏನೆಲ್ಲ ಎಡವಟ್ಟುಗಳು?

    • ಜೀವಶಾಸ್ತ್ರ, ಗಣಿತ ಪರೀಕ್ಷೆಗಳು ಕಗ್ಗಂಟು
    • ಪಠ್ಯಕ್ರಮ ಹೊರತಾದ ಪ್ರಶ್ನೆಗಳ ರಾಶಿ
    • ಜೀವಶಾಸ್ತ್ರದಲ್ಲಿ ಕಾಡಿದವು 10 ಪ್ರಶ್ನೆಗಳು
    • ಗಣಿತದಲ್ಲಿ ವಿದ್ಯಾರ್ಥಿಗಳಿಗೆ 11 ಪ್ರಶ್ನೆ ಬರೆ

    ಯಾರಿಗೆ ಹೆಚ್ಚು ಸಮಸ್ಯೆ?

    • ಕೋಚಿಂಗ್ ಪಡೆದವರಿಗೆ ಸಮಸ್ಯೆ ಇಲ್ಲ
    • ಎಲ್ಲ ಪ್ರಶ್ನೆಗಳಿಗೂ ಅವರು ಸಿದ್ಧರಿರುತ್ತಾರೆ
    • ಹಳ್ಳಿ, ಸರ್ಕಾರಿ ಕಾಲೇಜು ಮಕ್ಕಳು ತತ್ತರ

    ಸಮಸ್ಯೆಗೆ ಪರಿಹಾರವೇನು?

    • ಮರು ಪರೀಕ್ಷೆ ಮಾಡುವುದು
    • ಕೃಪಾಂಕವನ್ನು ನೀಡುವುದು
    • ಪಠ್ಯಕ್ರಮ ಹೊರತಾದ ಪ್ರಶ್ನೆ ಕೈಬಿಟ್ಟು
    • ಉಳಿದ ಪ್ರಶ್ನೆಗಳನ್ನು ಮಾತ್ರ ಪರಿಗಣಿಸುವುದು

    ಗಣಿತ, ಜೀವಶಾಸ್ತ್ರದ ಪರೀಕ್ಷೆಯಲ್ಲಿ ಪಠ್ಯ ಹೊರತಾದ 10ಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗಿದೆ. ಇದನ್ನು ಮಂಡಳಿ ಯಾವ ರೀತಿಯಲ್ಲಿ ಪರಿಗಣಿಸಲಿದೆ ಎಂಬ ಆತಂಕವಿದೆ. ಕೋಚಿಂಗ್ ಪಡೆಯದೆ ಓದಿಕೊಂಡಿರುವ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ.

    – ಹೆಸರೇಳದ ವಿದ್ಯಾರ್ಥಿ

    ಕೃಪಾಂಕ ನೀಡಿಕೆಯಷ್ಟೇ ಸಮಸ್ಯೆಗೆ ಪರಿಹಾರವಲ್ಲ, ಇದರ ಬದಲಾಗಿ ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ಕೈಬಿಟ್ಟು, ಉಳಿದ ಪ್ರಶ್ನೆಗಳನ್ನು ಮಾತ್ರ ಪರಿಗಣಿಸಬೇಕು

    | ಮೋಹನ್ ಆಳ್ವ ಕುಪ್ಮಾ ಅಧ್ಯಕ್ಷ

    ನಗರದಲ್ಲಿ ಹೆಚ್ಚಿನ ಮಕ್ಕಳು ಕೋಚಿಂಗ್ ಪಡೆದಿರುತ್ತಾರೆ. ಆದರೆ ಕೋಚಿಂಗ್ ಪಡೆಯದ ಗ್ರಾಮೀಣ, ಸರ್ಕಾರಿ ಕಾಲೇಜು ಮಕ್ಕಳಿಗೆ ಹೆಚ್ಚು ಅನ್ಯಾಯವಾಗುತ್ತದೆ.

    | ನರೇಂದ್ರ ಎಲ್. ನಾಯಕ್ ಕುಪ್ಮಾ ಕಾರ್ಯದರ್ಶಿ

    ಪಠ್ಯವ್ಯಾಪ್ತಿ ಹೊರಗಿನ ಪ್ರಶ್ನೆಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು. ವಿಷಯ ತಜ್ಞರ ತಂಡ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಿದೆ. ಆತಂಕ ಬೇಡ.

    | ಎಸ್.ರಮ್ಯಾ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts