More

    ಕೇಂದ್ರ ಸರ್ಕಾರ VS ಪಶ್ಚಿಮ ಬಂಗಾಳ ಸರ್ಕಾರ; ಕರೊನಾ ಭೀಕರತೆ ಸೃಷ್ಟಿಸಿದ್ದರೂ ದೀದಿ ನೀಡುತ್ತಿಲ್ಲ ಸಹಕಾರ…

    ನವದೆಹಲಿ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಮತ್ತೊಂದು ವರ್ಡ್​ ವಾರ್ ಶುರುವಾಗಿದೆ.

    ಪಶ್ಚಿಮಬಂಗಾದಲ್ಲಿ ಲಾಕ್​ಡೌನ್ ಪರಿಸ್ಥಿತಿ ಹೇಗಿದೆ..ಎಷ್ಟು ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿದೆ ಎಂದು ಮೌಲ್ಯಮಾಪನ ಮಾಡಲು ರಾಜ್ಯಕ್ಕೆ ಭೇಟಿ ನೀಡಿರುವ ಅಂತರ್​ ಸಚಿವಾಲಯದ ಕೇಂದ್ರ ತಂಡ (IMCTs) ಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಕ್ತ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಪಶ್ಚಿಮ ಬಂಗಾಳದಲ್ಲಿ ಲಾಕ್​ಡೌನ್​ ಪರಿಸ್ಥಿತಿ ಹೇಗಿದೆ, ಕೊರೊನಾ ಟೆಸ್ಟಿಂಗ್​ ಹೇಗೆ ನಡೆಯುತ್ತಿದೆ ಎಂಬುದನ್ನು ಅರಿಯುವ ಕೇಂದ್ರ ತಂಡದ ಪ್ರಯತ್ನಕ್ಕೆ ದೀದಿ ಸರ್ಕಾರ ಅಡ್ಡಿಮಾಡುತ್ತಿದೆ. ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಂವಾದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

    ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್​​ ಭಲ್ಲಾ ಅವರು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜೀವ್​ ಸಿನ್ಹಾ ಅವರಿಗೆ ಈ ವಿಚಾರವಾಗಿ ಪತ್ರವನ್ನೂ ಬರೆದಿದ್ದಾರೆ. ನಿಮ್ಮ ರಾಜ್ಯದಲ್ಲಿ ಸಹಕಾರ ಸಿಗುತ್ತಿಲ್ಲ. ಜಿಲ್ಲಾಡಳಿತಗಳೂ ನಮ್ಮ ಪ್ರಶ್ನೆಗೆ ಸರಿಯಾಗಿ ಉತ್ತರಿಸುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
    ಕೋಲ್ಕತ್ತ ಮತ್ತು ಜಲ್ಪೈಗುರಿಗಳಲ್ಲಿ ಅಂತರ್​ ಸಚಿವಾಲಯದ ಕೇಂದ್ರ ತಂಡವನ್ನು ತಡೆಯಲಾಗಿದೆ. ಯಾವುದೇ ಪ್ರದೇಶಗಳಿಗೆ ಭೇಟಿ ನೀಡಲು ಅವಕಾಶ ಕೊಟ್ಟಿಲ್ಲ. ಆ ಟೀಂಗೆ ಮೌಲ್ಯಮಾಪನ ಮಾಡಲು ಅವಕಾಶ ಕೊಡಿ ಎಂದು ಅಜಯ್​​ ಭಲ್ಲಾ ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ.

    ಕೇಂದ್ರ ಗೃಹ ಸಚಿವಾಲಯದ ಆರೋಪಕ್ಕೆ ಪ್ರತಿಯಾಗಿ ಟಿಎಂಸಿ ಸಂಸದ ಡೆರೆಕ್​ ಒ ಬ್ರಾಯನ್​ ಅವರು ಪ್ರತ್ಯಾರೋಪ ಮಾಡಿದ್ದಾರೆ. ಈ ಕೇಂದ್ರ ತಂಡ ಪಶ್ಚಿಮ ಬಂಗಾಳಕ್ಕೆ ಆಗಮಿಸಿ ಮೂರು ತಾಸುಗಳ ನಂತರ ಮುಖ್ಯಮಂತ್ರಿಗೆ ವಿಷಯ ತಿಳಿಸಿದ್ದಾರೆ ಎಂದಿದ್ದಾರೆ.

    ಅಲ್ಲದೆ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶಗಳಿಗೆ ಯಾಕೆ ಈ ತಂಡ ಹೋಗಿಲ್ಲ. ಆ ರಾಜ್ಯಗಳಲ್ಲೂ ಕೂಡ ಅನೇಕ ಹಾಟ್​ಸ್ಫಾಟ್​ಗಳಿವೆ. ಕರೊನಾ ಮಿತಿಮೀರುತ್ತಿದೆ. ಅಂಥದ್ದರಲ್ಲಿ ಕೇವಲ ಪಶ್ಚಿಮಬಂಗಾಳಕ್ಕೆ ಮಾತ್ರ ಯಾಕೆ ಬಂದು ಪರಿಶೀಲನೆ ನಡೆಸುತ್ತಿದೆ ಎಂದು ಕೊಂಕು ಪ್ರಶ್ನೆ ಮಾಡಿದ್ದಾರೆ.

    ಸದ್ಯ ಭಾರತದಲ್ಲಿ ಮುಂಬೈ, ಪುಣೆ, ಜೈಪುರ, ಕೋಲ್ಕತ್ತ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಕರೊನಾ ಭೀಕರತೆ ಹೆಚ್ಚಾಗಿದೆ. ಅಂಥ ಕಡೆ ಲಾಕ್​ಡೌನ್​ ನಿಯಮ ಉಲ್ಲಂಘನೆಯಾಗುತ್ತಿದೆ. ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಹಾಗಾಗಿ ಆಯ್ದ ಪ್ರದೇಶಗಳಿಗೆ ಕೇಂದ್ರದಿಂದ ತಂಡವನ್ನು ಕಳಿಸಲಾಗುತ್ತಿದೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

    ಅದರಲ್ಲೂ ಪಶ್ಚಿಮಬಂಗಾಳದ ಕೆಲವು ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತು, ಶಂಕಿತರು ಹಾಗೂ ಸಾಮಾನ್ಯ ರೋಗಿಗಳನ್ನು ಪ್ರತ್ಯೇಕಿಸದೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ ಎಂದು ಅಲ್ಲಿನ ವೈದ್ಯರ ಸಂಘ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬರೆದ ಪತ್ರದಲ್ಲಿ ಉಲ್ಲೇಖವಾಗಿದೆ.
    ಆದರೆ ಮಮತಾ ಬ್ಯಾನರ್ಜಿ ಇದ್ಯಾವುದನ್ನೂ ಒಪ್ಪುತ್ತಿಲ್ಲ. ಕೇಂದ್ರದಿಂದ ತಂಡವನ್ನು ಕಳಿಸುವ ಉದ್ದೇಶವಾದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ. (ಏಜೆನ್ಸೀಸ್​)

    ದೀದಿ ನಾಡಲ್ಲಿ ಆತಂಕದ ಛಾಯೆ: ಕರೊನಾ ಪ್ರಕರಣ ಕುರಿತ ಅಂಕಿ-ಅಂಶ ಮುಚ್ಚಿಡುತ್ತಿರುವ ಆರೋಪ

    ಇಮ್ರಾನ್ ಖಾನ್​ ಸರ್ಕಾರದ ಮತ್ತೊಂದು ಕೆಟ್ಟ ಕೆಲಸ; ನಿಷೇಧಿತರ ಪಟ್ಟಿಯಿಂದ ಸದ್ದಿಲ್ಲದೆ ನಾಪತ್ತೆಯಾಗುತ್ತಿವೆ ಉಗ್ರರ ಹೆಸರುಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts