More

    ಜನಗಣತಿ ಪೂರ್ವ ತಯಾರಿ ನಿಧಾನ

    ಭರತ್ ಶೆಟ್ಟಿಗಾರ್ ಮಂಗಳೂರು
    2021ರ ಏ.1ರಿಂದ ಸೆ.30ರವರೆಗೆ ನಡೆಯಬೇಕಿದ್ದ ಮೊದಲ ಹಂತದ ಜನಗಣತಿ ಕಾರ್ಯ ಕರೊನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟಿದೆ. ಮುಂದಿನ ದಿನಾಂಕ ಇನ್ನೂ ಘೋಷಣೆಯಾಗದ ಹಿನ್ನೆಲೆಯಲ್ಲಿ ಜನಗಣತಿ ಪೂರ್ವತಯಾರಿ ಕಾರ್ಯಚಟುವಟಿಕೆಗಳು ನಿಧಾನವಾಗಿವೆ.

    ಮಾರ್ಚ್‌ವರೆಗೆ ಎಲ್ಲ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿತ್ತು. ಮೇಲ್ಮಟ್ಟದ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಲಾಗಿದೆ. ಮೇಲ್ವಿಚಾರಕರು ಮತ್ತು ಗಣತಿದಾರರಿಗೆ ತರಬೇತಿ ನೀಡಬೇಕು ಎನ್ನುವಷ್ಟರಲ್ಲಿ ಕೋವಿಡ್-19 ಲಾಕ್‌ಡೌನ್ ಆರಂಭವಾಗಿದೆ. ಇದೇ ವೇಳೆ ಜನಗಣತಿ ಮುಂದೂಡಲಾಗಿದೆ ಎನ್ನುವ ಸುತ್ತೋಲೆಯೂ ಸಾಂಖ್ಯಿಕ ಇಲಾಖೆಗೆ ಬಂದಿದೆ. ಆದ್ದರಿಂದ ಪ್ರಕ್ರಿಯೆಗಳು ನಿಧಾನಗೊಂಡಿವೆ. ಪ್ರಸ್ತುತ ತರಬೇತಿ ಪಡೆದ ಅಧಿಕಾರಿಗಳೂ ಕರೊನಾ ಕರ್ತವ್ಯ ಸೇರಿದಂತೆ ಇತರ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಎಲ್ಲರಿಗೂ ಮತ್ತೊಮ್ಮೆ ತರಬೇತಿ ನೀಡಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಸರ್ಕಾರದ ಮುಂದಿನ ಆದೇಶಕ್ಕಾಗಿ ಜಿಲ್ಲಾಡಳಿತ ನಿರೀಕ್ಷೆಯಲ್ಲಿದೆ.

    ಎಷ್ಟು ಮಂದಿಗೆ ತರಬೇತಿ?: ಅಧಿಕಾರಿ ಹಾಗೂ ಸಿಬ್ಬಂದಿಗೆ ದ.ಕ. ಜಿಲ್ಲೆಯಲ್ಲಿ ಈಗಾಗಲೇ ಒಂದು ಹಂತದ ತರಬೇತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಇಬ್ಬರು ಮಾಸ್ಟರ್ ಟ್ರೈನರ್ಸ್‌ ಬೆಂಗಳೂರಿನಲ್ಲಿ ತರಬೇತಿ ಪಡೆದು ಬಂದಿದ್ದಾರೆ. ತಹಸೀಲ್ದಾರ್ ಮಟ್ಟದ ಅಧಿಕಾರಿಗಳು ಜನಗಣತಿಯಲ್ಲಿ ಚಾರ್ಜ್ ಆಫೀಸರ್‌ಗಳಾಗಿ ಕರ್ತವ್ಯ ನಿರ್ವಹಿಸಲಿದ್ದು, ಜಿಲ್ಲೆಯಲ್ಲಿ 35 ಮಂದಿ ಇಂತಹ ಅಧಿಕಾರಿಗಳು ಮಾಸ್ಟರ್ ಟ್ರೈನರ್ಸ್‌ಗಳಿಂದ ತರಬೇತಿ ಪಡೆದಿದ್ದಾರೆ. 114 ಮಂದಿ ಫೀಲ್ಡ್ ಟ್ರೈನರ್ಸ್‌ಗಳಿಗೆ ತರಬೇತಿಯಾಗಿದೆ. ಈ ಫೀಲ್ಡ್ ಟ್ರೈನರ್ಸ್ ಮೇಲ್ವಿಚಾರಕರು ಮತ್ತು ಗಣತಿದಾರರಿಗೆ ತರಬೇತಿ ನೀಡಲಿದ್ದಾರೆ. ಈ ಬಾರಿ ಆ್ಯಪ್ ಮೂಲಕ ಗಣತಿ ನಡೆಯುವುದರಿಂದ ಆ್ಯಪ್‌ನಲ್ಲಿ ದಾಖಲಾದ ಮಾಹಿತಿಯನ್ನು ಸಂಗ್ರಹಿಸಲು 64 ಮಂದಿ ಕಂಪ್ಯೂಟರ್ ನಿರ್ವಾಹಕರನ್ನು ನೇಮಕ ಮಾಡಲಾಗಿದ್ದು, ಅವರಿಗೂ ತರಬೇತಿ ನೀಡಲಾಗಿದೆ.

    ಹೊಸ ತಾಲೂಕು ಸಮಗ್ರ ಮಾಹಿತಿ: ಹೊಸ ತಾಲೂಕುಗಳಿಗೆ ಸಂಬಂಧಿಸಿದ ಗಡಿ ಗುರುತುಗಳನ್ನು ನಿಖರವಾಗಿ ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಸರ್ಕಾರದಿಂದ ಸೂಚನೆ ಬಂದಿದೆ. ಇದರಿಂದ ಹೊಸದಾಗಿ ರಚನೆಯಾಗಿರುವ ತಾಲೂಕುಗಳಲ್ಲಿ ಜನಸಂಖ್ಯೆ, ಸೇರಿದಂತೆ ಸಮಗ್ರ ಮಾಹಿತಿ ಲಭಿಸಲಿದೆ. ಇದು ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಸಹಕಾರಿಯಾಗಲಿದೆ.  

    ಫೆಬ್ರವರಿಯಲ್ಲಿ ಇಬ್ಬರು ಮಾಸ್ಟರ್ ಟ್ರೈನರ್‌ಗಳು ಸೇರಿದಂತೆ 100ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಲಾಗಿತ್ತು. ನಂತರ ಕೋವಿಡ್ ಹಿನ್ನೆಲೆಯಲ್ಲಿ ಜನಗಣತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಸರ್ಕಾರದಿಂದ ಹೊಸ ಮಾರ್ಗಸೂಚಿ ಅಥವಾ ಅಧಿಸೂಚನೆ ಪ್ರಕಟವಾದ ತಕ್ಷಣ ಪುನಃ ಸಿದ್ಧತೆ ಪ್ರಾರಂಭಿಸಲಾಗುವುದು.
    -ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    2021ರ ಜನಗಣತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಂದು ಹಂತದಲ್ಲಿ ತರಬೇತಿ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿದೆ. ಆದರೆ ಜನಗಣತಿ ಮುಂದೂಡಿಕೆ ಆಗಿರುವುರಿಂದ ದಿನಾಂಕ ನಿಗದಿಯಾದ ಬಳಿಕ ಮತ್ತೊಮ್ಮೆ ತರಬೇತಿ ನೀಡಬೇಕಾಗುತ್ತದೆ. ಸರ್ಕಾರದ ಮುಂದಿನ ಆದೇಶದ ನಿರೀಕ್ಷೆಯಲ್ಲಿದ್ದೇವೆ.
    -ಸುಷ್ಮಾ ಕೆ.ಎಸ್. ದ.ಕ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts