More

    ಪೆನ್​ಡ್ರೖೆವ್ ಪ್ರಕರಣ, ಬಿಜೆಪಿಗೂ ಇಕ್ಕಟ್ಟು

    | ರಾಘವ ಶರ್ಮ ನಿಡ್ಲೆ, ನವದೆಹಲಿ

    ರಾಷ್ಟ್ರಾದ್ಯಂತ ಸದ್ದು ಮಾಡಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣರದ್ದು ಎಂದು ಹೇಳಲಾದ ಅಶ್ಲೀಲ ವಿಡಿಯೋ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣ ಈಗ ಬಿಜೆಪಿಯನ್ನೂ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಹತ್ತಾರು ಹೆಣ್ಣುಮಕ್ಕಳನ್ನು ತಮ್ಮ ಲೈಂಗಿಕ ತೃಷೆಗಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಹಲವು ದೂರುಗಳು ಕೇಂದ್ರ ಬಿಜೆಪಿ ವರಿಷ್ಠರಿಗೆ ಮೊದಲೇ ನೀಡಿದ್ದರೂ, ಹಾಸನದಿಂದ ಪ್ರಜ್ವಲ್​ಗೆ ಟಿಕೆಟ್ ನೀಡಿದ್ದೇಕೆ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ. ನಾರಿಶಕ್ತಿ ಬಗ್ಗೆ ಸಾಕಷ್ಟು ಮಾತನಾಡುವ ಬಿಜೆಪಿ ನಾಯಕರು, ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಮೌನವಾಗಿರುವುದು ವಿಪಕ್ಷಗಳಿಗೆ ಹೊಸ ಚುನಾವಣಾ ಅಸ್ತ್ರ ನೀಡಿದಂತಾಗಿದೆ. ರಾಜ್ಯದಲ್ಲಿ ಎರಡನೇ ಹಂತದ ಮತದಾನ ಇನ್ನೂ ಬಾಕಿ ಇದೆ. ಹಾಗಾಗಿ, ಈ ವಿಷಯವನ್ನೇ ಬಳಸಿಕೊಂಡು ಬಿಜೆಪಿಯನ್ನು ಗುರಿ ಮಾಡಲು ಕಾಂಗ್ರೆಸ್ ಉದ್ದೇಶಿಸಿದೆ. ಈಗಾಗಲೇ ಹಲವು ಪ್ರತಿಭಟನೆಗಳನ್ನೂ ನಡೆಸಿ, ಬಿಜೆಪಿ ನಡೆಯನ್ನು ಟೀಕಿಸಲಾಗುತ್ತಿದೆ. ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲೂ ಸದ್ದು ಮಾಡುತ್ತಿರುವುದರಿಂದ ಕೇಂದ್ರ ಬಿಜೆಪಿ ನಾಯಕರೂ ಸಹಜವಾಗಿಯೇ ಚಿಂತೆಗೀಡಾಗಿದ್ದಾರೆ.

    ಪ್ರಜ್ವಲ್ ರೇವಣ್ಣ ಮೇಲೆ ಹಲವು ಆರೋಪಗಳನ್ನು ಮಾಡಿ ಜಿ. ದೇವರಾಜೇಗೌಡ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಕಳೆದ ಡಿಸೆಂಬರ್​ನಲ್ಲಿ ಬರೆದಿದ್ದ ಪತ್ರವೊಂದನ್ನು ಉಲ್ಲೇಖಿಸಿ ಕಾಂಗ್ರೆಸ್​ನ ರಾಷ್ಟ್ರೀಯ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹಲವು ಪ್ರಶ್ನೆಗಳನ್ನು ಕೇಂದ್ರ ಬಿಜೆಪಿ ಮುಂದಿಟ್ಟಿದ್ದಾರೆ. ಪ್ರಜ್ವಲ್ ಮೇಲಿನ ಆರೋಪಗಳ ಅರಿವಿದ್ದರೂ ಆತನಿಗೆ ಟಿಕೆಟ್ ನೀಡಿದ್ದೇಕೆ? ಮೈಸೂರಿನಲ್ಲಿ ಪ್ರಧಾನಿ ಮೋದಿ ವೇದಿಕೆ ಹಂಚಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಸದ್ಯ ಪ್ರಜ್ವಲ್ ವಿದೇಶದಲ್ಲಿರುವುದರಿಂದ ವಿಶೇಷ ತನಿಖಾ ದಳ ಅವರನ್ನು ತನಿಖೆಗೆಂದು ಭಾರತಕ್ಕೆ ಕರೆತರುವ ಪ್ರಕ್ರಿಯೆಗೆ ಕೇಂದ್ರ ವಿದೇಶಾಂಗ ಇಲಾಖೆಯ ಸಹಕಾರದ ಅಗತ್ಯವಿರುತ್ತದೆ. ಹೀಗಾಗಿ, ಪ್ರಜ್ವಲ್ ವಿಷಯದಲ್ಲಿ ಕೇಂದ್ರ ಸರ್ಕಾರದ ಮುಂದಿನ ನಡೆ ಕುತೂಹಲ ಕೆರಳಿಸಿದೆ.

    ಎಚ್​ಡಿಕೆಯಿಂದ ಎಚ್ಚರಿಕೆ: ಚುನಾವಣೆ ವೇಳೆ ಪೆನ್​ಡ್ರೖೆವ್ ವಿವಾದ ಸೃಷ್ಟಿಸಲಿದೆ ಎನ್ನುವುದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೂ ತಿಳಿದಿತ್ತು ಎಂದು ಬಿಜೆಪಿ ಮೂಲಗಳು ಹೇಳಿವೆ. ಹೀಗಾಗಿಯೇ, ಕುಮಾರಸ್ವಾಮಿ ಕೂಡ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಬೇಡ ಎಂದು ತಂದೆ ದೇವೇಗೌಡ, ಸೋದರ ರೇವಣ್ಣರಲ್ಲಿ ವಿನಂತಿಸಿಕೊಂಡಿದ್ದರು. ಆದರೆ, ತಮ್ಮ ಪುತ್ರನಿಗೆ ಟಿಕೆಟ್ ನೀಡಲೇಬೇಕು ಎಂದು ಎಚ್.ಡಿ. ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಹಠ ಹಿಡಿದರು ಮತ್ತು ದೇವೇಗೌಡರ ಮೇಲೂ ಒತ್ತಡ ಹಾಕಿ, ಟಿಕೆಟ್ ಸಿಗುವಂತೆ ನೋಡಿಕೊಂಡರು. ಲೋಕಸಭೆ ಚುನಾವಣೆಗೆ ಮೈತ್ರಿ ಮುಖ್ಯವಾಗಿದ್ದರಿಂದ ದೇವೇಗೌಡರ ಮಾತನ್ನು ಬಿಜೆಪಿ ಒಪ್ಪಬೇಕಾಯಿತು ಎಂದು ಪಕ್ಷದ ಉನ್ನತ ಮುಖಂಡರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

    ಮೊದಲೇ ಗೊತ್ತಿತ್ತು?: ಅಶ್ಲೀಲ ವಿಡಿಯೋಗಳ ಬಗ್ಗೆ ಕಳೆದೊಂದು ವರ್ಷದಿಂದ ಬಿಜೆಪಿ, ಜೆಡಿಎಸ್ ನಾಯಕರ ಮಧ್ಯೆ ಚರ್ಚೆಗಳು ಕೇಳುತ್ತಲೇ ಇದ್ದವು. ಬಿಜೆಪಿ ಮತ್ತು ಕಾಂಗ್ರೆಸ್​ನ ಕೆಲ ಸಂಸದರಿಗೆ ಹಾಗೂ ಪ್ರಮುಖ ನಾಯಕರಿಗೆ ಕೆಲ ವ್ಯಕ್ತಿಗಳು ಈ ವಿಡಿಯೋಗಳನ್ನು ಪೆನ್​ಡ್ರೖೆವ್​ನಲ್ಲಿ ತಂದು ನೀಡಿದ್ದರು. ಆದರೆ, ಈ ವಿಷಯ ನಮಗ್ಯಾಕೆ ಎಂದು ಅವರೆಲ್ಲರೂ ಸುಮ್ಮನಾಗಿದ್ದರು. ಸಂತ್ರಸ್ತರು ಎನ್ನಲಾದ ಮಹಿಳೆಯರು ಕೂಡ ಭಯದಿಂದಾಗಿ ಬಹಿರಂಗವಾಗಿ ಮಾತನಾಡಿರಲಿಲ್ಲ. ಆದರೆ, ವಿಡಿಯೋಗಳು ಒಂದೊಂದಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಬಳಿಕ ಸಂತ್ರಸ್ತ ಮಹಿಳೆಯರು ಈಗ ಪೊಲೀಸರ ಬಳಿ ಬಂದು ದೂರು ನೀಡುವ ಧೈರ್ಯ ಮಾಡಿದ್ದಾರೆಂದು ಹೇಳಲಾಗಿದೆ.

    ಟಿಕೆಟ್ ಬೇಡವೆಂದಿದ್ದ ಷಾ: ಹಾಸನ ಟಿಕೆಟ್ ಹಂಚಿಕೆಗೂ ಮುನ್ನ ಪ್ರಜ್ವಲ್ ರೇವಣ್ಣ ಕುರಿತು ಸ್ಥಳೀಯ ಬಿಜೆಪಿ ಘಟಕ ಹಾಗೂ ರಾಜ್ಯ ಬಿಜೆಪಿ ನಾಯಕರೂ ಹೈಕಮಾಂಡ್​ಗೆ ದೂರು ನೀಡಿದ್ದರು ಮತ್ತು ಪೆನ್​ಡ್ರೖೆವ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈ ವಿಷಯ ಮನಗಂಡಿದ್ದ ಗೃಹ ಸಚಿವ ಅಮಿತ್ ಷಾ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಬದಲಿಗೆ ಯಾರಾದರೂ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಎಂದೂ ಸಲಹೆ ನೀಡಿದ್ದರು. ಚುನಾವಣೆ ಸಂದರ್ಭದಲ್ಲಿ ಮೈತ್ರಿಗೆ ಮುಜುಗರದ ಸನ್ನಿವೇಶ ಉಂಟಾಗಬಾರದು ಎಂಬ ಕಾರಣಕ್ಕೇ ಈ ಸಲಹೆಯನ್ನು ಜೆಡಿಎಸ್ ಮುಖಂಡರಿಗೆ ನೀಡಿದ್ದರು. ಮಂಡ್ಯದಲ್ಲಿ ಯಾರು ಅಭ್ಯರ್ಥಿ ಎನ್ನುವುದನ್ನು ನೀವು ತೀರ್ಮಾನ ಮಾಡಿ. ಆದರೆ ಹಾಸನದ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಿ ಎಂದಿದ್ದರು. ಆದರೆ, ಜೆಡಿಎಸ್ ವರಿಷ್ಠರು ಈ ಸಲಹೆಗೆ ಒಪ್ಪಲಿಲ್ಲ. ಈ ಬೆಳವಣಿಗೆ ಅಮಿತ್ ಷಾಗೆ ಒಳಗಿಂದೊಳಗೆ ಅಸಮಾಧಾನ ತಂದಿತ್ತು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

    ಎಚ್.ಡಿ.ರೇವಣ್ಣ, ಪ್ರಜ್ವಲ್ ಬಂಧನಕ್ಕೆ ಆಗ್ರಹ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ. ರೇವಣ್ಣ ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ, ಶಿಕ್ಷೆಗೊಳಪಡಿಸಬೇಕು ಹಾಗೂ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದಿಂದ ಸೋಮವಾರ ಹಾಸನದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಪ್ರಜ್ವಲ್ ಪ್ರಕರಣದ ತನಿಖೆ ಚುರುಕು

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ವಿಶೇಷ ತನಿಖಾ ತಂಡ (ಎಸ್​ಐಟಿ), ಸೋಮವಾರ ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಕಡತಗಳನ್ನು ಈಗಾಗಲೆ ಎಸ್​ಐಟಿಗೆ ಹಸ್ತಾಂತರವಾಗಿದ್ದು, ಈ ಬೆನ್ನಲ್ಲೇ ಸೋಮವಾರವೇ ದೂರುದಾರೇ ಸೇರಿ ಇಬ್ಬರು ಸಂತ್ರಸ್ತೆಯರನ್ನು ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಕರೆಸಿಕೊಂಡು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತೆಯರನ್ನು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ವಿಚಾರಣೆ ನಡೆಸಿದ್ದಾರೆ.

    ಅಶ್ಲೀಲ ವಿಡಿಯೋ ಸಂಬಂಧ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಇಬ್ಬರು ಮಹಿಳಾ ಐಪಿಎಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪ್ರಭಾವತಿ ಸೇರಿ ಮೂವರು ಮಹಿಳಾ ಡಿವೈಎಸ್ಪಿ, ಮೂವರು ಇನ್​ಸ್ಪೆಕ್ಟರ್, ನಾಲ್ವರು ಪಿಎಸ್​ಐ, ಸಿಐಡಿ ಸೈಬರ್ ತಂಡ ಸೇರಿ 25ಕ್ಕೂ ಹೆಚ್ಚು ಅಧಿಕಾರಿ-ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್ ಆಗಿವೆ. ಅವುಗಳ ಸತ್ಯಾಸತ್ಯತೆ ತಿಳಿಯಲು ಸೈಬರ್ ತಂಡದ ಅಧಿಕಾರಿಗಳನ್ನು ಪಡೆಯಲಾಗಿದೆ. ಅದರಲ್ಲಿ ಆರೋಪಿ ಪ್ರಜ್ವಲ್ ರೇವಣ್ಣನ ಮುಖ ಚಹರೆ ಪತ್ತೆಯಾಗಿಲ್ಲ. ಆತನ ಧ್ವನಿ ಆಧರಿಸಿ ಆತನೇ ವಿಡಿಯೋ ದಲ್ಲಿರುವ ವ್ಯಕ್ತಿ ಎಂದು ಖಚಿತ ಪಡಿಸಿಕೊಳ್ಳಬೇಕಿದೆ. ಹೀಗಾಗಿ ತಜ್ಞರನ್ನು ನೇಮಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಸದ್ಯದಲ್ಲಿಯೇ ನೋಟಿಸ್: ಪ್ರಕರಣದ 2ನೇ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಸದ್ಯ ಜರ್ಮನಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಹೇಳಿಕೆ ಪಡೆಯಲೇಬೇಕಿರುವುದರಿಂದ ಮನೆಯ ವರ ಮೂಲಕ ಸಂರ್ಪಸಿ ಮೌಖಿಕ ಮತ್ತು ವಾಟ್ಸ್​ಆಪ್ ನೋಟಿಸ್ ನೀಡಲಾಗುತ್ತದೆ.

    ಕೆಲ ದಿನಗಳಿಂದ ಹಾಸನ ಸಂಸದ ಪ್ರಜ್ವಲ ರೇವಣ್ಣ ಅವರ ಅಶ್ಲೀಲ ವಿಡಿಯೋ ಹರಿದಾಡುತ್ತಿವೆ. ಇದು ರಾಜ್ಯ, ದೇಶ ತಲೆತಗ್ಗಿಸುವ ಕೆಲಸವಾಗಿದೆ. ಪ್ರಜ್ವಲ್ ರೇವಣ್ಣ ಅವರ ಕರ್ಮಕಾಂಡಕ್ಕೆ ನೂರಾರು ಅಮಾಯಕ ಮಹಿಳೆಯರು ಬಲಿಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ನಿಲುವು ಏನು ಎಂಬುದನ್ನು ತಿಳಿಸಬೇಕು.

    | ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆ

    ಪೆನ್​ಡ್ರೖೆವ್ ಪ್ರಕರಣ ಕುರಿತು ರಾಜ್ಯ ಸರ್ಕಾರ ಈಗಾಗಲೆ ಎಸ್​ಐಟಿ ರಚಿಸಿದೆ. ಸಂಪೂರ್ಣ ತನಿಖೆ ಆಗಲಿ, ಆಗ ಸತ್ಯ ಹೊರಗೆ ಬರುತ್ತದೆ.

    | ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

    ಲೋಕಸಭೆ ಚುನಾವಣೆ: ಸಿಎ ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ನಿರಾಕರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts