More

    ಕಾಂಗ್ರೆಸ್​ಗೆ ಪ್ರಧಾನಿ ಮೋದಿ ಖಡಕ್ ಸವಾಲು

    ನವದೆಹಲಿ: ತಮ್ಮ ನೇತೃತ್ವದ ಕೇಂದ್ರ ಸರ್ಕಾರ ರದ್ದುಪಡಿಸಿರುವ ಸಂವಿಧಾನದ 370ನೇ ವಿಧಿಯನ್ನು ಮರುಸ್ಥಾಪಿಸುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸವಾಲೆಸೆದಿದ್ದಾರೆ.

    ಕಾಂಗ್ರೆಸ್​ಗೆ ಧೈರ್ಯವಿದ್ದರೆ 370ನೇ ವಿಧಿಯನ್ನು ಮರುಸ್ಥಾಪನೆ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಿ ಎಂದು ಮೋದಿ ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ, ‘ಅವರು (ಕಾಂಗ್ರೆಸ್) ಸಂವಿಧಾನದ ಬಗ್ಗೆ ದೊಡ್ಡ ದೊಡ್ಡ ಮಾತನ್ನಾಡುತ್ತಾರೆ. ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಮಾತಾಡುತ್ತಾರೆ. ಅವರು ನಮ್ಮನ್ನು ಬಹಳಷ್ಟು ನಿಂದಿಸುತ್ತಾರೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್​ರ ಸಂವಿಧಾನವನ್ನು ಕಾಂಗ್ರೆಸ್ ಇಡೀ ದೇಶಕ್ಕೆ ಅನ್ವಯ ಮಾಡಿರಲಿಲ್ಲ’ ಎಂದು ಮೋದಿ ಹೇಳಿದರು. ಕಳೆದ 70 ವರ್ಷಗಳಲ್ಲಿ ಭಾರತದ ಸಂವಿಧಾನ ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗಿರಲಿಲ್ಲ. 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಅಲ್ಲಿ ಇದೇ ಮೊದಲ ಬಾರಿಗೆ ದಲಿತರಿಗೆ ಮೀಸಲಾತಿ ಸಿಗುತ್ತಿದೆ. ವಾಲ್ಮೀಕಿ ಸಮುದಾಯಕ್ಕೆ ಮೊದಲ ಸಲ ಮೀಸಲಾತಿ ದೊರಕುತ್ತಿದೆ ಎಂದು ಹೇಳಿದ ಮೋದಿ, ಕಾಂಗ್ರೆಸ್​ನವರು ಯಾವುದರ ಬಗ್ಗೆ ಮಾತನಾಡುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು. ಸುದ್ದಿಗೋಷ್ಠಿಯೊಂದನ್ನು ನಡೆಸಿ, ‘ನಾವು 370ನೇ ವಿಧಿಯನ್ನು ವಾಪಸ್ ತರುತ್ತೇವೆ’ ಎಂದು ಹೇಳುವ ಧೈರ್ಯ ಕಾಂಗ್ರೆಸ್​ಗೆ ಇದೆಯೇ ಎಂದು ಸವಾಲು ಹಾಕಿದರು.

    ಸುಪ್ರೀಂ ಕೋರ್ಟ್ ತೀರ್ಪಿಗೆ ಶ್ಲಾಘನೆ: 370ನೇ ವಿಧಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಒಂದು ಕಾನೂನಾತ್ಮಕ ತೀರ್ಪಷ್ಟೇ ಅಲ್ಲ, ಅದೊಂದು ಆಶಾಕಿರಣ ವಾಗಿದೆ ಎಂದು ಮೋದಿ ಕಳೆದ ವರ್ಷ ಡಿಸೆಂಬರ್​ನಲ್ಲಿ ಹೇಳಿದ್ದರು.

    2019ರಲ್ಲಿ ರದ್ದು: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ರದ್ದು ಪಡಿಸಿತ್ತು. ಇದರಿಂದಾಗಿ ಅದು ಹೊಂದಿದ್ದ ವಿಶೇಷ ಸಂವಿಧಾನ, ಧ್ವಜ ಮತ್ತು ರಕ್ಷಣೆ, ಸಂವಹನ ಹಾಗೂ ವಿದೇಶಾಂಗ ವ್ಯವಹಾರ ಹೊರತುಪಡಿಸಿ ಇತರ ಆಂತರಿಕ ವಿಚಾರಗಳಲ್ಲಿ ಸ್ವಾಯತ್ತೆ ಮುಂತಾದ ವಿಶೇಷ ಸೌಲಭ್ಯಗಳನ್ನು ಜಮ್ಮು ಮತ್ತು ಕಾಶ್ಮೀರ ಕಳೆದು ಕೊಂಡಿತ್ತು. ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ (ಯುಟಿ) ಪುನರ್​ಸಂಘಟಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ -ಇವೇ ಹೊಸ ಯುಟಿಗಳಾಗಿವೆ.

    ನಾನು ಬದುಕಿರುವವರೆಗೆ ಸಂವಿಧಾನ ಬದಲಾಗಲ್ಲ: ಸಾತಾರಾ: ‘ನಾನು ಜೀವಂತ ಇರುವವರೆಗೂ ಸಂವಿಧಾನ ಬದಲಾವಣೆ ಹಾಗೂ ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ಕಲ್ಪಿಸುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಸಾತಾರಾದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿ, ಕಾಂಗ್ರೆಸ್​ನ ವೋಟ್​ಬ್ಯಾಂಕ್ ರಾಜಕಾರಣದಿಂದಾಗಿ ಕಾಶ್ಮೀರದಲ್ಲಿ ದಲಿತರು ಮೀಸಲಾತಿ ಕೋಟಾದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

    ಪೊಲೀಸರಿಗೆ ಮಾಹಿತಿ ನೀಡಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಎದುರಿಸಲು ಸಾಧ್ಯವಾಗದ ವಿರೋಧ ಪಕ್ಷಗಳು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ವಿಡಿಯೋಗಳನ್ನು ಸೃಷ್ಟಿಸುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಎಐ ಬಳಸಿ ಮಾಡಲಾದ ನಕಲಿ ದೃಶ್ಯಗಳು ನಿಮ್ಮ (ಜನರು) ಗಮನಕ್ಕೆ ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮೋದಿ ಮನವಿ ಮಾಡಿದರು. ಮುಂಬರುವ ದಿನಗಳಲ್ಲಿ ವಿರೋಧಿಗಳು ದೊಡ್ಡ ಮಟ್ಟದಲ್ಲಿ ನಕಲಿ ದೃಶ್ಯಗಳನ್ನು ಸೃಷ್ಟಿಸಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಾರೆ. ಇಂತಹ ದುರ್ಘಟನೆಗಳಿಂದ ಸಮಾಜವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

    ರಾಜನಾಥ ಸಿಂಗ್ ನಾಮಪತ್ರ ಸಲ್ಲಿಕೆ: ಲಖನೌ: ಲೋಕಸಭೆ ಚುನಾವಣೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಉತ್ತರ ಪ್ರದೇಶದ ಲಖನೌ ಕ್ಷೇತ್ರದಿಂದ ಸತತ 3ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಲಖನೌ ಜಿಲ್ಲಾ ಚುನಾವಣಾಧಿಕಾರಿ ಸೂರ್ಯಪಾಲ್ ಗಂಗ್ವಾರ್ ಅವರ ಸಮ್ಮುಖದಲ್ಲಿ ಸೋಮವಾರ ಉಮೇದುವಾರಿಕೆ ಸಲ್ಲಿಸಿದ ಸಚಿವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ದಕ್ಷಿಣಮುಖಿ ಹನುಮಾನ್ ದೇವಸ್ಥಾನ ಮತ್ತು ಹನುಮಾನ್ ಸೇತು ದೇವಾಲಯದಲ್ಲಿ ರಾಜನಾಥ ಸಿಂಗ್ ಪ್ರಾರ್ಥನೆ ಸಲ್ಲಿಸಿದರು. 5ನೇ ಹಂತದ ಚುನಾವಣೆಯಲ್ಲಿ ಮೇ 20ರಂದು ಈ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.

    ವಾಜಪೇಯಿ ಕ್ಷೇತ್ರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 5 ಬಾರಿ ಲಖನೌ ಕ್ಷೇತ್ರವನ್ನು ಪ್ರತಿನಿಧಿ ಸಿದ್ದರು. 2019ರ ಲೋಕಸಭಾ ಚುನಾವಣೆ ಯಲ್ಲಿ ಸಮಾಜವಾದಿ ಪಕ್ಷದ (ಎಸ್​ಪಿ) ಸಿನ್ಹಾ ವಿರುದ್ಧ ಸ್ಪರ್ಧೆ ಮಾಡಿದ್ದ ರಾಜನಾಥ ಸಿಂಗ್ ಗೆಲುವು ಸಾಧಿಸಿದ್ದರು. ಈ ಬಾರಿ ಎಸ್​ಪಿ ಅಭ್ಯರ್ಥಿ ರವಿದಾಸ್ ಮೆಹ್ಹೋತ್ರಾ ಅವರೊಂದಿಗೆ ಪೈಪೋಟಿ ನಡೆಸಲಿದ್ದಾರೆ.

    ಶ್ರೀನಿವಾಸ ಪ್ರಸಾದ್ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ಅಗಲಿದ ನಾಯಕನಿಗೆ ಕಂಬನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts