ಗೋಕಾಕ: ನಗರದ ಅಂಬೇಡ್ಕರ್ ಕಾಲನಿ ಪಕ್ಕದಲ್ಲಿರುವ ಕ್ರೈಸ್ತ ಹಾಗೂ ಚಲುವಾದಿ ಸಮುದಾಯದ ಜನರಿಗೆ ಸೇರಿದ ಸ್ಮಶಾನ ಭೂಮಿಯನ್ನು ತೆರವು ಮಾಡಿಸಬೇಕು ಎಂದು ಆಗ್ರಹಿಸಿ ಡಾ. ಬಿ.ಆರ್. ಅಂಬೇಡ್ಕರ್ ಹಿಂದುಳಿದ ವರ್ಗಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಡಾ. ಅಂಬೇಡ್ಕರ್ ಕಾಲನಿ ನಿವಾಸಿಗಳು 20 ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಕಾಲನಿ ಪಕ್ಕದಲ್ಲಿ ಕ್ರೈಸ್ತ ಹಾಗೂ ಚಲುವಾದಿ ಸಮುದಾಯದವರು ಸ್ಮಶಾನ ಭೂಮಿಗೆ ಕಾಂಪೌಂಡ್ ನಿರ್ಮಿಸಲು ಆರಂಭಿಸಿದ್ದಾರೆ. ಆ ಪ್ರದೇಶ ಸ್ಮಶಾನಕ್ಕೆ ಯೋಗ್ಯವಲ್ಲ. ಮನೆಗಳ ಹತ್ತಿರ ಶವಗಳನ್ನು ಸುಡುವುದರಿಂದ ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಅಧಿಕಾರಿಗಳಿಗೆ ಸ್ಮಶಾನವನ್ನು ರದ್ದುಪಡಿಸಲು ತಾವು ಸೂಚಿಸಬೇಕು ಎಂದು ಸಚಿವರಲ್ಲಿ ಕೋರಿದರು. ರಾಜೇಶ ಹಿರೇಅಂಬಿಗೇರ, ಲಕ್ಷ್ಮಣ ಮುಡ್ಡೆಪ್ಪಗೋಳ, ಚಿನ್ನಪ್ಪ ಮಲ್ಲಾಡದವರ, ಶಂಕರ ಶಿರಸಂಗಿ, ನಾಗಪ್ಪ ಅಂಬಿ, ಕುಶಾಲ ಭಾಗಣ್ಣ ವರ, ಲಕ್ಷ್ಮಣ ಮಲ್ಲಾಡದವರ ಇದ್ದರು.
ಜನರಿಗಾಗದು ತೊಂದರೆ
ಗೋಕಾಕ: ನಗರದಲ್ಲಿರುವ ಕ್ರೈಸ್ತ ಸ್ಮಶಾನ ಭೂಮಿಯನ್ನು ಈಗಿರುವ ಸ್ಥಳದಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿ ಸಮುದಾಯ ಟ್ರಸ್ಟ್ ನವರು ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಆದೇಶದಂತೆ ತಹಸೀಲ್ದಾರ್ ಹಾಗೂ ಪೌರಾಯುಕ್ತರು ಕ್ರೈಸ್ತ ಸಮುದಾಯಕ್ಕೆ ಸದ್ಯದ ಸ್ಮಶಾನ ಭೂಮಿಯನ್ನು ಕಬ್ಜಾ ನೀಡಿದ್ದಾರೆ. ನಗರಸಭೆ ದಾಖಲೆಯಲ್ಲಿ ಕ್ರೈಸ್ತ ಧರ್ಮದ ಸಾರ್ವಜನಿಕ ಸ್ಮಶಾನ ಭೂಮಿ ಎಂದು ದಾಖಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆಯೇ ತಂತಿ ಬೇಲಿ ಹಾಕಿ ಸಸಿಗಳನ್ನು ಬೆಳೆಸಲಾಗಿದೆ. ನಮ್ಮ ಧರ್ಮದ ಪ್ರಕಾರ ಮೃತ ದೇಹಗಳನ್ನು ಹೂಳುವ ಪದ್ಧತಿ ಇದ್ದು, ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಕ್ರೈಸ್ತ ಸಮುದಾಯದ ಸ್ಮಶಾನ ಭೂಮಿಯ ರಕ್ಷಣೆಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಟ್ರಸ್ಟ್‌ನ ಗೌರಾವಾಧ್ಯಕ್ಷ ಫಾದರ್ ಎಬಿನೇಜರ್ ಕರಬಣ್ಣವರ, ಅಧ್ಯಕ್ಷ ಫಾದರ್ ಪ್ರವೀಣ ದಾವನೆ, ಪದಾಧಿಕಾರಿಗಳಾದ ಆನಂದ ಬೆಟಗೇರಿ, ಸಂಜು ಚಿಂಚಲಿ, ಪಿ.ಕೆ. ತಳವಾರ, ಸಂಜಯ ಎಸ್.ಎನ್., ಶೇಖರ ಡಿ, ಇತರರು ಇದ್ದರು.