More

    ಭಾರತ್​ ಬಂದ್​​ಗೆ ಜನರ ಬೆಂಬಲ ಸಿಕ್ಕಿಲ್ಲ; ರಾಜಕೀಯ ಲಾಭದ ಉದ್ದೇಶ ವಿಫಲವಾಗಿದೆ: ಕಾಂಗ್ರೆಸ್​ಗೆ ಟಾಂಗ್​ ಕೊಟ್ಟ ಸಿ.ಟಿ.ರವಿ

    ಬೆಂಗಳೂರು: ರೈತ ಸಂಘಟನೆ ಹೆಸರಿನಲ್ಲಿ 19ಕ್ಕೂ ಹೆಚ್ಚಿನ ರಾಜಕೀಯ ಪಕ್ಷಗಳು, ಸಂಘಟನೆಗಳು ಭಾರತ್​ ಬಂದ್​ ನಡೆಸಲು ಮುಂದಾಗಿದ್ದರು. ಆದರೆ ಅದು ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ಸಿಗದೆ ವಿಫಲಗೊಂಡಿದೆ. ಮೋದಿಯವರ ಕೃಷಿ ಮೇಲಿನ ಹಂಬಲವನ್ನು ಜನತೆ ಬೆಂಬಲಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ, 100 ಕ್ಕೂ ಹೆಚ್ಚಿನ ಸಂಘಟನೆಗಳು ಬಂದ್​​ಗೆ ಕರೆ ನೀಡಿದ್ದು ನನಗೂ ಆತಂಕ ಇತ್ತು, ಆದರೆ ಇದಕ್ಕೆ ಜನತೆ ಬೆಂಬಲ ನೀಡಿಲ್ಲ. ಹೀಗಾಗಿ ರಾಜಕೀಯ ಅರಾಜಕತೆ ಸೃಷ್ಟಿಸಿ ಲಾಭ ಪಡೆಯುವವರ ಉದ್ದೇಶ ವಿಫಲವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್​ ವಿರುದ್ಧ ರವಿ ವಾಗ್ದಾಳಿ ನಡೆಸಿದರು.

    ಕೃಷಿ ಕಾಯ್ದೆಯ ಬಗ್ಗೆ ಏನು ಬದಲಾವಣೆ ಮಾಡಬೇಕು ಎಂದು ಹೇಳಿ. ಬದಲಾವಣೆಗೆ ಸಿದ್ಧವಿದ್ದೇವೆ ಎಂದು ಪ್ರಧಾನಿ ಹೇಳಿದ್ರು. ಆದರೆ ರಸ್ತೆಯ ಮೇಲೆ ಎಲ್ಲಾ ಬದಲಾವಣೆಗೆ ಪಟ್ಟು ಹಿಡಿದ್ರು. ಬಿಜೆಪಿಯನ್ನು ರೈತರ ವಿರೋಧಿ ಎಂದು ಬಿಂಬಿಸುವ ಕೆಲಸ ಮಾಡಿದ್ರು, ಈ ಹಿಂದೆ ದಲಿತ ವಿರೋಧಿ ಎಂದು ಬಿಂಬಿಸಲು ಯತ್ನಿಸಿದ್ರು, ಸಿಎಎ ವಿರುದ್ಧ ಷಡ್ಯಂತ್ರ ಹೂಡಿದ್ರು, ಅದೆಲ್ಲ ವಿಫಲವಾಗಿದೆ ಎಂದು ಸಿ.ಟಿ.ರವಿ ಹೇಳಿದರು.

    ಇದನ್ನೂ ಓದಿ: ಹಳ್ಳಿಗಳಲ್ಲಿ ವ್ಯಂಗ್ಯ ಬ್ಯಾನರ್ ಅಳವಡಿಸಿದವರ ಬಂಧಿಸಿ

    ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಬೆಂಬಲ ಬೆಲೆಗೆ 40 ಸಾವಿರ ಕೋಟಿ ಇಟ್ಟಿದ್ರು, ಆದರೆ ನಾವು 1 ಲಕ್ಷ 20 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಆದರೆ, ಮಸಾಲ ದೋಸೆ ಬೆಲೆ ಹೆಚ್ಚಿದೆ ಎಂದು ಹೇಳುವ ಸಿದ್ದರಾಮಯ್ಯನವರಿಗೆ ಬೆಂಬಲ ಬೆಲೆ ಹೆಚ್ಚು ಮಾಡಿರುವ ಬಗ್ಗೆ ಜಾಣಮರೆವು. ಕೇವಲ ಬಿಜೆಪಿ ರೈತ ವಿರೋಧಿ ಎಂದು ಬಿಂಬಿಸುವುದೇ ಅವರ ಉದ್ದೇಶ ಎಂದು ಕಿಡಿಕಾರಿದರು.

    ಸುಧಾರಣೆಯ ಲಾಭ ರೈತನಿಗೆ ಸಿಗಬಾರದ? ಕೃಷಿಕ ತನ್ನ ಆದಾಯ ಎರಡು ಪಟ್ಟು ಮಾಡಿಕೊಳ್ಳುವುದು ತಪ್ಪಾ? ನಮ್ಮ ಸರ್ಕಾರ ಕೃಷಿಕರ ಆದಾಯ ಎರಡು ಪಟ್ಟು ಮಾಡುವುದು, ಕೃಷಿಗೆ ಬಂಡವಾಳ ಹೂಡುವುದು, ಕೃಷಿಕ ಊರು ಬಿಟ್ಟು ಹೋಗುವುದನ್ನು ತಪ್ಪಿಸುವುದು ಮುಂತಾದ ಗುರಿ ಹೊಂದಿದೆ. ಆದರೆ, ಕೃಷಿಕರನ್ನು ಅಭಿವೃದ್ಧಿ ಪಡಿಸುವುದೇ ತಪ್ಪು ಎಂದು ಬಿಂಬಿಸಲು ಹೊರಟಿದ್ದಾರೆ. ಹೆಗ್ಗಣದ ರೀತಿಯಲ್ಲಿ ಕೊಬ್ಬಿದ ದಲ್ಲಾಳಿಗಳಿಗೆ ಇದರಿಂದ ತೊಂದರೆ ಆಗುತ್ತೆ. ರೈತ ಎಲ್ಲಿ ಬೇಕಾದರೂ ತನ್ನ ಬೆಳೆ ಮಾರಾಟ ಮಾಡಬಹುದು. ಇದರಿಂದ ದಲ್ಲಾಳಿಗಳಿಗೆ ತೊಂದರೆ ಆಗುತ್ತೆ. ಕಾಂಗ್ರೆಸ್‌ನವರು ದಲ್ಲಾಳಿಗಳ ಪರ ಹೋರಾಟ ಮಾಡ್ತಿದ್ದಾರೆ ಎಂದು ಆರೋಪಿಸಿದರು.

    ಕೃಷಿ ಕಾರ್ಮಿಕರಿಗೂ ಪಿಂಚಣಿ ವ್ಯವಸ್ಥೆ ತರಬೇಕೆಂಬ ಚಿಂತನೆ ನರೇಂದ್ರ ಮೋದಿಯವರಿಗೆ ಇದೆ. ಅದಾನಿ, ಅಂಬಾನಿ ಪರ ಎಂದು ಹೇಳುತ್ತಾರೆ. ಇವರು ಈಗ ಬಂದವರೇನು? ಹಿಂದೇ ಇವರು ಇರಲಿಲ್ವಾ? ನರೇಂದ್ರ ಮೋದಿಯವರು ರೈತರ ಪರ. ರಸಗೊಬ್ಬರ ಬೆಲೆಗೆ ಸಬ್ಸಿಡಿ ನೀಡ್ತಿದ್ದೇವೆ. ಅದು ಇವರಿಗೆ ನೆನಪಿಲ್ವಾ? ಎಂದು ಪ್ರಶ್ನಿಸಿದ ಸಿ.ಟಿ.ರವಿ, ರೈತರ ಹೆಸರಿನಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯ ಷಡ್ಯಂತ್ರ, ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರ ಎಂದು ಗುಡುಗಿದರು.

    ಇದನ್ನೂ ಓದಿ: ಸ್ಕೂಲ್​​ ಬಸ್​ಗೆ ಟಿಪ್ಪರ್​ ಲಾರಿ ಡಿಕ್ಕಿ: ಡಿವೈಡರ್​ ಮೇಲೆ ತಿರುಗಿ ನಿಂತ ಬಸ್​

    ಕುರುಬೂರು ಶಾಂತಕುಮಾರ್ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ವಾಸ್ತವ ಸ್ಥಿತಿ ಅರ್ಥ ಮಾಡಿಕೊಳ್ಳದಿರುವ ರೈತ ನಾಯಕರು ಎಂದು ಟೀಕಿಸಿದ ರವಿ, ನಕಲಿ ರೈತರು ಈ ಹೋರಾಟ ಮಾಡುತ್ತಿದ್ದಾರೆ, ಇಂದು ಟೌನ್ ಹಾಲ್​​ನಲ್ಲಿ ಎಷ್ಟು ಮಂದಿ ಕೃಷಿ ಮಾಡುವ ರೈತರು ಬಂದಿದ್ರು? ಆದರೆ ಎಲ್ಲರೂ ನಕಲಿ ರೈತರಲ್ಲ, ಕೆಲವರು ಮಿಸ್​​ಗೈಡ್ ಆಗಿದ್ದಾರೆ. ಕೆಲವರು ಬಿಜೆಪಿಯನ್ನು ವಿರೋಧಿಸುವುದಕ್ಕೆ ಹೋರಾಟ ಮಾಡ್ತಿದ್ದಾರೆ ಎಂದರು.

    ಕೊವೀಡ್ ಕಾರಣಕ್ಕೆ ಬೆಲೆ ಏರಿಕೆಯಾಗಿದೆ. ನಾವು ಅಡಿಕೆ ಬೆಳೆಯುತ್ತೇವೆ. ಯಾವ ಕಾಲಕ್ಕೂ ಸಿಗದ‌ ಬೆಲೆ ಇವಾಗ ನಮಗೆ ಅಡಿಕೆಗೆ ಬೆಲೆ ಸಿಕ್ಕಿದೆ. ರೈತರಿಗೆ 6000 ರೂ. ಹಣವನ್ನು ಸಿದ್ದರಾಮಯ್ಯ ಹಾಕಿದ್ರಾ? ಅದನ್ನು ನಮ್‌ ಮೋದಿ ಹಾಕಿರೋದು. 9 ಕೋಟಿ 70 ಲಕ್ಷ ರೈತರಿಗೆ ಹಣ ಹೋಗುತ್ತದೆ. ಬೇರೆ ದೇಶಗಳಿಗೆ ಹೋಲಿಸಿದ್ರೆ ನಮ್ ದೇಶದ ಜಿಡಿಪಿ ಚೆನ್ನಾಗಿದೆ ಎಂದು ಸಿ.ಟಿ.ರವಿ ಸ್ಪಷ್ಟನೆ ನೀಡಿದರು.

    “2030 ರ ವೇಳೆಗೆ ಭಾರತ ಪೆಟ್ರೋಲ್​-ಡೀಸೆಲ್​ ರೀಫೈನಿಂಗ್​ ಸಾಮರ್ಥ್ಯ ಹೆಚ್ಚಿಸಬೇಕು”

    ಪ್ರತಿಭಟನೆ ವೇಳೆ ಎಡವಟ್ಟು: ಡಿಸಿಪಿ ಕಾಲಿನ ಮೇಲೆ ಹರಿದ ಕಾರು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts