More

    ತಂಡಸ್ಪೂರ್ತಿ, ಒಗ್ಗಟ್ಟಿನ ಪ್ರಯತ್ನಕ್ಕೆ ಒಲಿದ ಗೆಲುವು : ರಾರಾ ನಗರ, ಶಿರಾದಲ್ಲಿ ಪಾರಮ್ಯ ಮೆರೆದ ಬಿಜೆಪಿ

    ಭಾಷಣಕ್ಕಿಂತ ತಳಮಟ್ಟದ ಕಾರ್ಯತಂತ್ರ ಫಲಪ್ರದ * ನಾಯಕರ ವರ್ಚಸ್ಸು, ಅಭ್ಯರ್ಥಿಗಳ ನಿಕಟತೆ ಆಧಾರ

    ಮೃತ್ಯುಂಜಯ ಕಪಗಲ್

    ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ನಗರ, ಶಿರಾ ಉಪಸಮರದಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಿ ತನ್ನ ನೆಲೆಯನ್ನು ವಿಸ್ತರಿಸಿದೆ. ಮುನಿರತ್ನ ಗೆಲುವಿನ ಅಂತರ, ಶಿರಾದಲ್ಲಿ ಹಾರಿದ ಕೇಸರಿ ಪತಾಕೆ ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ತಲೆ ಕೆಳಗು ಮಾಡಿದೆ. ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯನ್ನು ವಶಕ್ಕೆ ಪಡೆಯುವಲ್ಲಿ ಕಮಲ ಪಡೆಯ ನಾಯಕರು ಸಫಲರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ, ಕರೊನಾ ನಿರ್ವಹಣೆ, ಆರ್ಥಿಕ ಮುಗ್ಗಟ್ಟಿನ ಮಧ್ಯೆಯೂ ನೊಂದವರಿಗೆ ಮಿಡಿದ ಪರಿ ಜನರಿಗೆ ಹಿಡಿಸಿದೆ. ಎದುರಾಳಿಗಳ ದೌರ್ಬಲ್ಯ ಅರಿತು ರೂಪಿಸಿದ ರಣತಂತ್ರವನ್ನು ಅನುಷ್ಠಾನಕ್ಕೆ ತಂದಿದ್ದರ ಪರಿಣಾಮ ಜಯದಲ್ಲಿ ಬಿಂಬಿತವಾಗುತ್ತಿದೆ.

    ಗೆಲುವಿಗೆ ಸೋಪಾನ

     ಬೇರುಮಟ್ಟದಲ್ಲಿ ಸಂಘಟನಾ ಬಲ ಸಂಪೂರ್ಣ ಬಳಕೆ, ಯುವಶಕ್ತಿಯ ಕಾರ್ಯತತ್ಪರತೆ, ತಂಡ ಸ್ಪೂರ್ತಿ, ತಳಮಟ್ಟದ ಕಾರ್ಯತಂತ್ರ, ಮುಖಂಡರ ಒಗ್ಗಟ್ಟಿನ ಪರಿಶ್ರಮ, ಎಲ್ಲ ಸಮುದಾಯಗಳ ಮೇಲೂ ಪ್ರಭಾವ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡದ್ದು, ಮೋದಿ ಹಾಗೂ ಬಿಎಸ್​ವೈ ವರ್ಚಸ್ಸು, ಪಕ್ಷ ಅಧಿಕಾರದಲ್ಲಿರುವುದು ಐತಿಹಾಸಿಕ ಗೆಲುವಿಗೆ ಸೋಪಾನವಾಗಿವೆ.

    ಮತದಾರರಿಗೆ ಮನವರಿಕೆ: ರಾ.ರಾ.ನಗರದಲ್ಲಿ ಕಾಂಗ್ರೆಸ್​ನಿಂದ 2 ಬಾರಿ ಗೆದ್ದಿದ್ದ ಮುನಿರತ್ನ ಕ್ಷೇತ್ರದ ಜನರಿಗೆ ಚಿರಪರಿಚಿತ. ಮಾನವೀಯ ಸಂವೇದನೆಯುಳ್ಳ ವ್ಯಕ್ತಿ ಎಂದು ಜನಜನಿತ. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ ಎಂದು ಸಾಮಾನ್ಯ ಮತದಾರರಿಗೆ ಮನವರಿಕೆ ಮಾಡಿಕೊಡಬೇಕಿದ್ದರಿಂದ ತುಸು ಹೆಚ್ಚಿನ ಶ್ರಮ ಹಾಕಿದರು. ಅಬ್ಬರದ ಪ್ರಚಾರದ ಜತೆಗೆ ಪ್ರತಿ ಮನೆಯನ್ನು ಮುಟ್ಟುವ, ಪ್ರತಿ ವಾರ್ಡ್ ಉಸ್ತುವಾರಿ ಹೊತ್ತವರು ಅದಕ್ಕೆ ತಕ್ಕಂತೆ ಜವಾಬ್ದಾರಿ ನಿರ್ವಹಿಸಿದರು. ಮತದಾನದ ದಿನ ಬೂತ್​ಗಳಲ್ಲಿ ಕಾರ್ಯಕರ್ತರ ಕೊರತೆ ಉಂಟಾಗದಂತೆ ನೋಡಿಕೊಂಡದ್ದೂ ಗಮನಾರ್ಹ. ಅಭಿವೃದ್ಧಿಯೇ ಮುಖ್ಯ ಕಾರ್ಯಸೂಚಿ, ಮುನಿರತ್ನರನ್ನು ಮಂತ್ರಿ ಮಾಡುವೆ ಎಂಬ ಸಿಎಂ ಭರವಸೆ ಪರಿಣಾಮ ಬೀರಿತು. ಉಸ್ತುವಾರಿ ಹೊಣೆ ಹೊತ್ತ ಸಚಿವ ಆರ್.ಅಶೋಕ್, ಶಾಸಕ ಅರವಿಂದ ಲಿಂಬಾವಳಿ ಜತೆಗೆ ಆಯಾ ವಾರ್ಡ್ ಹೊಣೆ ಹೆಗಲೇರಿಸಿಕೊಂಡ ಸಚಿವ-ಶಾಸಕರು ಅಚ್ಚುಕಟ್ಟಾಗಿ ತಮ್ಮ ಕೆಲಸ ನಿಭಾಯಿಸಿದರೆ, ಪ್ರತಿಪಕ್ಷ ಕಾಂಗ್ರೆಸ್​ನ ನಕಾರಾತ್ಮಕ ಪ್ರಚಾರ ತಂತ್ರವೂ ವರವಾನವಾಯಿತು.

    ತಳಮಟ್ಟದ ಕಾರ್ಯತಂತ್ರಕ್ಕೆ ಮೇಲ್ಪಂಕ್ತಿ: ಜನಾಕರ್ಷಣೆಯ ಅಬ್ಬರ, ಪ್ರಚಾರದ ರ್ಯಾಲಿಗಳ ಜತೆಗೆ ಪ್ರತಿಯೊಬ್ಬ ಮತದಾರನ ಜತೆಗೆ ನಿಕಟ ಸಂಪರ್ಕವು ಶಿರಾದಲ್ಲಿ ಕಮಲ ಅರಳಿಸಿತು. ಕ್ಷೇತ್ರದ ಪರಿಚಿತರಾದರೂ ಪಕ್ಷಕ್ಕೆ ಹೊಸಬರಾದ ಅಭ್ಯರ್ಥಿ ಡಾ.ರಾಜೇಶ್ ಗೌಡರನ್ನು ಬಿಂಬಿಸಿದ ವಿಧಾನವೂ ರಣತಂತ್ರದ ನೈಪುಣ್ಯತೆಗೆ ಕೈಗನ್ನಡಿ. ಪ್ರತಿಪಕ್ಷ ಕಾಂಗ್ರೆಸ್ ಅಭ್ಯರ್ಥಿ, ಹಿರಿಯ ನಾಯಕ ಟಿ.ಬಿ.ಜಯಚಂದ್ರ ಹಾಗೂ ಜೆಡಿಎಸ್​ನ ಅಮ್ಮಾಜಮ್ಮ ಅನುಕಂಪವನ್ನೇ ನೆಚ್ಚಿಕೊಂಡರು. ದುಡಿಯುವ ಕಾರ್ಯಕರ್ತ ಪಡೆಯಿಂದ ಕೆಲಸ ತೆಗೆದುಕೊಳ್ಳಬೇಕಾದ ಮುಖಂಡರು ಪೋಸ್ ಕೊಡುವುದಕ್ಕೆ ಸೀಮಿತವಾದರು.

    ಉಪಚುನಾವಣೆ ಫಲಿತಾಂಶ ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಾನಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಕನಕಪುರ ಬಂಡೆಯನ್ನು ಡೈನಾಮೆಟ್ ಇಟ್ಟು ಉಡಾಯಿಸಿದ್ದೇವೆ. ಸಿದ್ದರಾಮಯ್ಯ ರಾಜಕೀಯ ಭವಿಷ್ಯವೇ ಡೋಲಾಯಮಾನವಾಗಿದೆ. ಜಾತಿ ರಾಜಕಾರಣದ ಆಟ ಬೆಂಗಳೂರಿನಲ್ಲಿ ನಡೆದಿಲ್ಲ.
    | ಆರ್.ಅಶೋಕ್, ಕಂದಾಯ ಸಚಿವ

    ಬಿಜೆಪಿ ನಾಯಕರು ಚುನಾವಣೆ ನಿಗದಿಗೆ ಮುನ್ನವೇ ಪ್ರಭಾರಿ, ರಾಜ್ಯ ಪದಾಧಿಕಾರಿಗಳು ತಂಡವು ಬೂತ್ ಮಟ್ಟದಲ್ಲಿ ಎರಡೆರಡು ಬಾರಿ ಮತದಾರರ ಮನೆಗೆ ಎಡೆತಾಕಿದರೆ, ಉತ್ಸಾಹಿ ಯುವ ಮೋರ್ಚಾ ತಂಡವು ಪ್ರತಿಯೊಬ್ಬರನ್ನು ಭೇಟಿಯಾಗಿ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಭರವಸೆ ಮೂಡಿಸಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ಬೇಡಿಕೆಗಳ ಕುರಿತು ಜನರ ಕೇಳುವ ಮುನ್ನವೇ ಪಕ್ಷದ ಮುಖಂಡರು ಪ್ರಸ್ತಾಪಿಸಿದ್ದು ವಿಶ್ವಾಸಕ್ಕೆ ಇಂಬು ನೀಡಿತು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಬಿ.ಶ್ರೀರಾಮುಲು, ಸಂಸದ ಎ.ನಾರಾಯಣಸ್ವಾಮಿ ಇತ್ಯಾದಿ ನಾಯಕರು ಆಯಾ ಸಮುದಾಯದ ಬಳಿಗೆ ತೆರಳಿ ಪಕ್ಷದ ಪರವಾಗಿ ವಾಲಿಸಿದರು.

    ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಪ್ರೀತಂಗೌಡ, ತಮ್ಮೇಶಗೌಡ, ಎಸ್.ಆರ್.ಗೌಡ ಹಾಗೂ ಮಂಜುನಾಥ್ ಮತ್ತವರ ತಂಡ ಹೆಣೆದ ತಂತ್ರಗಾರಿಕೆಯ ಪ್ರಕಾರವೇ ಇವೆಲ್ಲವೂ ಜಾರಿಗೊಂಡವು ಎನ್ನುವುದನ್ನು ಮರೆಯುವಂತಿಲ್ಲ. ವೈಮನಸ್ಸು ನಿವಾರಣೆ, ಒಮ್ಮತ, ಪ್ರತಿಯೊಂದು ಸಮುದಾಯದ ಪ್ರಭಾವಿಗಳು, ಸ್ವಾಮೀಜಿಗಳ ಜತೆ ಮುಖಾಮುಖಿ ಚರ್ಚೆ, ಆಗಬೇಕಾದ ಕೆಲಸಗಳ ಪಟ್ಟಿ ಮಾಡಿಕೊಂಡು ವಿಚಾರ-ವಿನಿಮಯ ಹಾಗೂ ಉತ್ಸಾಹ, ತಂಡಸ್ಪೂರ್ತಿ ಮತದಾನದ ದಿನದವರೆಗೆ ಕಾಯ್ದುಕೊಳ್ಳಲಾಯಿತು. ಹೀಗಾಗಿ ಕಳೆದ ಚುನಾವಣೆಯಲ್ಲಿ ಶೇ.10 ಮತ ಗಳಿಸಲೂ ಏದುಸಿರು ಬಿಟ್ಟಿದ್ದ ಬಿಜೆಪಿ ಈ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದು, ಮೊದಲ ಸ್ಪರ್ಧೆಯಲ್ಲೇ ಗೆದ್ದ ಡಾ.ರಾಜೇಶಗೌಡ ವಿಧಾನಸಭೆ ಪ್ರವೇಶಿಸಿದ್ದಾರೆ.

    ಉಪಚುನಾವಣೆಯಲ್ಲೂ ಬಿಜೆಪಿ ಜಯಭೇರಿ: ಮಧ್ಯಪ್ರದೇಶದಲ್ಲಿ ಚೌಹಾಣ್ ಸರ್ಕಾರ ಭದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts